ಶುಕ್ರವಾರ, ಜನವರಿ 17, 2020
22 °C

ಸ್ವಾಗತಾರ್ಹ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಉಪನಗರ ರೈಲು ಯೋಜನೆಗೆ ವರದಿ ಸಿದ್ಧವಾಗಿದೆ. ಸಂಚಾರ ದಟ್ಟಣೆ ನಿವಾರಿಸಲು ಪರಿಣಾಮಕಾರಿ ಆಗಬಹುದಾದ ಈ ಯೋಜನೆಯ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಕಲ್ಪ ಮಾಡಬೇಕಿದೆ.ಮೂರು ಹಂತದ ಈ ಯೋಜನೆಯ ಒಟ್ಟು ವೆಚ್ಚ ರೂ 8,500 ಕೋಟಿ. ಮೊದಲ ಹಂತದಲ್ಲಿ ರೂ850 ಕೋಟಿ ವೆಚ್ಚದಲ್ಲಿ ಬೆಂಗಳೂರು–ಬಂಗಾರ­ಪೇಟೆ, ಬೆಂಗಳೂರು– ಮಂಡ್ಯ, ಬೆಂಗಳೂರು–ತುಮಕೂರು ನಡುವೆ  ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಇದು ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.  ಬಿನ್ನಿ ಮಿಲ್ ಹೊರತಾಗಿ ಇತರ ಕಡೆಗಳಲ್ಲಿ ಭೂಸ್ವಾಧೀನದ ಅಗತ್ಯವಿಲ್ಲದಿರುವುದು ಯೋಜನೆಯ ಶೀಘ್ರ ಅನುಷ್ಠಾನದ ದೃಷ್ಟಿಯಿಂದ ಸಹಕಾರಿ. ಯೋಜನೆಯ  ಶೀಘ್ರ ಅನುಷ್ಠಾನಕ್ಕೆ ಕೇಂದ್ರ ಹಾಗೂ ರೈಲ್ವೆ ಮಂಡಳಿ ಮೇಲೆ ನಮ್ಮ ಜನಪ್ರತಿನಿಧಿಗಳು ಪಕ್ಷ ಭೇದವಿಲ್ಲದೆ ಒತ್ತಡ ಹೇರಬೇಕು. ಇಲ್ಲಿ ಪಕ್ಷ ರಾಜಕೀಯಕ್ಕಿಂತ ರಾಜ್ಯದ ಅಭಿವೃದ್ಧಿ ಮುಖ್ಯ ಎನ್ನುವುದನ್ನು ಮನಗಾಣ­ಬೇಕು.ನಗರಗಳು ಅಭಿವೃದ್ಧಿ ಹೊಂದುತ್ತಾ ಹೋದಂತೆ ನಗರಗಳ ರಸ್ತೆ ಸಾರಿಗೆ ವ್ಯವಸ್ಥೆಯ ಮೇಲಿನ ಒತ್ತಡ ಕೂಡ ಹೆಚ್ಚುತ್ತಲೇ ಹೋಗುತ್ತದೆ.  ಬೆಂಗಳೂರು ನಗರ ಹಾಗೂ ನಗರದ ಸುತ್ತಮುತ್ತ ಉದ್ಯಮ, ವಾಣಿಜ್ಯ ವಹಿವಾಟು, ಕೃಷಿ ಚಟುವಟಿಕೆ ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ರಾಜ್ಯದ ಎಲ್ಲೆಡೆಯಿಂದ ಉದ್ಯೋಗ ಅರಸಿ ಬರುವ ಜನರ ವಲಸೆ ಹೆಚ್ಚುತ್ತಿದೆ. ಇದರಿಂದ ವಾಹನಗಳ ದಟ್ಟಣೆ ಮೇರೆ ಮೀರಿದ್ದು ಪರಿಸರ ಮಾಲಿನ್ಯ ಗಣನೀಯವಾಗಿ ಹೆಚ್ಚಿದೆ.ರಾಷ್ಟ್ರದಲ್ಲಿ ಹೆಚ್ಚು ಶಬ್ದಮಾಲಿನ್ಯ ಇರುವ ನಗರಗಳ ಪೈಕಿ ಬೆಂಗಳೂರಿಗೆ ಏಳನೇ ಸ್ಥಾನ ಇದೆ ಎಂದು ಸಮೀಕ್ಷೆ­ಯೊಂದು ತಿಳಿಸಿದೆ. ನಗರದ ಸದ್ದುಗದ್ದಲದ ವಾತಾವರಣಕ್ಕೆ ವಾಹನಗಳ ಕೊಡುಗೆ ದೊಡ್ಡದು. ಮೂಲಸೌಕರ್ಯ ಕೊರತೆಗೂ ವಾಹನದಟ್ಟಣೆಗೂ   ಪರಿಸರ ಮಾಲಿನ್ಯಕ್ಕೂ ನೇರ ಸಂಬಂಧವಿದೆ. ದ್ವಿಚಕ್ರ ವಾಹನಗಳ ಮೇಲಿನ ಅತಿಯಾದ ಅವಲಂಬನೆಗೆ ಉಪನಗರ ರೈಲು ಯೋಜನೆ ಇಲ್ಲದಿರುವುದೂ ಕಾರಣ.

ಉಪನಗರ ರೈಲಿನಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೇಗ ತಲುಪಲು ಸಾಧ್ಯ. ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ರೂ40 ಲಕ್ಷಕ್ಕೂ ಅಧಿಕ ವಾಹನಗಳ ಜತೆಗೆ ಪ್ರತಿನಿತ್ಯ 1500 ವಾಹನಗಳು ನೋಂದಣಿ­ಯಾಗು­ತ್ತಿವೆ. ಸಾರಿಗೆ ಸೌಲಭ್ಯ ಸುಧಾರಣೆಯಲ್ಲಿ ಎಡವಿದ ಕಾರಣ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.ಇತ್ತೀಚಿನ ದಿನಗಳಲ್ಲಿ ಸಾರಿಗೆ ದರ ಕೂಡ ಗಣನೀಯವಾಗಿ ಹೆಚ್ಚಿದ್ದು ರಾಜ್ಯದಲ್ಲಿ ಪ್ರಯಾಣಿಕರ ಮೇಲಿನ ಹೊರೆ ಏರಿದೆ. ‘ನಮ್ಮ ಮೆಟ್ರೊ’ ನಿರ್ಮಾಣ ವೆಚ್ಚ ಪ್ರತಿ ಕಿ.ಮೀ.ಗೆ ರೂ250 ಕೋಟಿ ಆಗಿದ್ದು, ಇದಕ್ಕೆ ಹೋಲಿಸಿದರೆ ಉಪನಗರ ರೈಲು ಮಾರ್ಗದ ನಿರ್ಮಾಣ ವೆಚ್ಚ ಹಾಗೂ ಪ್ರಯಾಣ ದರ ತೀರಾ ಕಡಿಮೆ. 66 ಕಿ.ಮೀ. ದೂರದ ಪ್ರಯಾಣಕ್ಕೆ ಪ್ರಯಾಣಿಕ ತೆರಬೇಕಾದುದು ಸುಮಾರು ರೂ14 ಮಾತ್ರ. ಈ ಎಲ್ಲ ದೃಷ್ಟಿಯಿಂದ ಉಪನಗರ ರೈಲು ಸೇವೆ ಸ್ವಾಗತಾರ್ಹ.

ಪ್ರತಿಕ್ರಿಯಿಸಿ (+)