ಬುಧವಾರ, ಜೂನ್ 16, 2021
22 °C

ಸ್ವಾಗತಾರ್ಹ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಗಣಿಗಾರಿಕೆ ನಿಷೇಧಿಸುವಂತೆ ಕೇಂದ್ರ ಸರ್ಕಾರದ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂಕೋರ್ಟಿಗೆ ಶಿಫಾರಸು ಮಾಡಿದೆ.

 

ಈ ಮೂರೂ ಜಿಲ್ಲೆಗಳಲ್ಲಿ ಗಣಿಗಾರಿಕೆ ನಡೆಸಲು 49 ಕಂಪೆನಿಗಳಿಗೆ ನೀಡಿದ್ದ ಲೈಸನ್ಸ್ ರದ್ದು ಪಡಿಸುವಂತೆ ಸಿಇಸಿ ಕಳೆದ ತಿಂಗಳು  ಶಿಫಾರಸು ಮಾಡಿತ್ತು. ಅಕ್ರಮ ಗಣಿಗಾರಿಕೆಯಿಂದ ಪರಿಸರ ಹಾಗೂ ಸುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಈ ಶಿಫಾರಸು ಮಹತ್ವದ್ದು.ಈ ಜಿಲ್ಲೆಗಳಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡುವಂತೆ ರಾಜ್ಯ ಸರ್ಕಾರ ಸುಪ್ರೀಕೋರ್ಟಿಗೆ ಮನವಿ ಮಾಡಿಕೊಂಡಿದೆ. ಗಣಿ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಲಿಖಿತ ಭರವಸೆಯನ್ನೂ ನೀಡಿದೆ.

 

ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಎಡಿಯೂರಪ್ಪ ಗಣಿ ಅಕ್ರಮಗಳಿಗೆ ಪರೋಕ್ಷ ಕುಮ್ಮಕ್ಕು ನೀಡಿದ್ದರು. ಅವರ ಸರ್ಕಾರದಲ್ಲಿದ್ದ  ಕೆಲವು ಮಂತ್ರಿಗಳು, ಪ್ರಮುಖ ರಾಜಕೀಯ ಪಕ್ಷಗಳ ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು.

 

ಎಲ್ಲರೂ ಸೇರಿಕೊಂಡು ಕೋಟ್ಯಂತರ ರೂಪಾಯಿ ಬೆಲೆಯ ಅದಿರನ್ನು ಕೊಳ್ಳೆ ಹೊಡೆದು ಪರಿಸರವನ್ನು ಹಾಳುಗೆಡವಿದ್ದನ್ನು ಮರೆಯಲಾಗದು. ಅದೇನೇ ಇರಲಿ ಸಿಇಸಿ ಈಗ ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡಿದೆ.ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಅಗತ್ಯವಿರುವಷ್ಟು ಅದಿರನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಮೂಲಕ ಪೂರೈಸಲು ಸಾಧ್ಯವಿದೆ. ಗಣಿಗಾರಿಕೆ ನಿಷೇಧಿಸುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಪ್ರಕಟಿಸಿದರೆ ಸಾಲದು, ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟಗಳನ್ನು ತುಂಬಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಖಚಿತ ನಿರ್ದೇಶನವನ್ನೂ ನೀಡಬೇಕು.ಅಕ್ರಮ ಗಣಿಗಾರಿಕೆಯಿಂದ ಮೂರು ಜಿಲ್ಲೆಗಳ ಪರಿಸರ ಹಾಳಾಗಿದೆ. ಗಣಿಗಳ ಸುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮಗಳು ಒಂದೆರಡಲ್ಲ. ಕೃಷಿ, ತೋಟಗಾರಿಕೆ ಹಾಳಾಗಿದೆ. ನೂರಾರು ಎಕರೆ ಅರಣ್ಯ ನಾಶವಾಗಿದೆ.ಅಂತರ್ಜಲ ಮಟ್ಟ ಕುಸಿದಿದೆ. ನೂರಾರು ಎಕರೆ ಸಾಗುವಳಿ ಭೂಮಿಯಲ್ಲಿ ಅದಿರು ದಾಸ್ತಾನು ಮಾಡಲಾಗಿದೆ. ಮೇಲ್ಪದರದಲ್ಲಿದ್ದ ಅದಿರು ತೆಗೆದಿದ್ದರಿಂದ ಸಾವಿರಾರು ಎಕರೆ ಭೂಮಿ ಸಾಗುವಳಿಗೆ ಅನರ್ಹವಾಗಿದೆ. ಇದನ್ನೆಲ್ಲ ಸರಿಪಡಿಸಬೇಕು.ಸರ್ಕಾರ ವಶಪಡಿಸಿಕೊಂಡಿರುವ ಅದಿರನ್ನು ಹರಾಜು ಮಾಡಿ ಬರುವ ಹಣವನ್ನು ಪುನರ್ವಸತಿ ಕಾರ್ಯಗಳಿಗೆ ಬಳಸುವ ಸಲಹೆ ಸ್ವಾಗತಾರ್ಹ. ರಾಜಕೀಯ ಗುಂಪುಗಾರಿಕೆಯಲ್ಲಿ ತೊಡಗಿರುವ ರಾಜ್ಯ ಸರ್ಕಾರಕ್ಕೆ ಪುನರ್ವಸತಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಆಸಕ್ತಿ ಇಲ್ಲ.

 

ಕಾಲಮಿತಿಯ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಕೆಲಸ ಕೇಂದ್ರ ಸರ್ಕಾರದ ನೇತೃತ್ವದಲ್ಲೇ ನಡೆಯಬೇಕು. ಗಣಿ ಧೂಳಿನಿಂದ ಕ್ಷಯ, ಆಸ್ತಮಾ ಮತ್ತಿತರ ತೊಂದರೆಗಳಿಂದ ಬಳಲುತ್ತಿರುವ ಗ್ರಾಮೀಣ ಜನರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ವಿಳಂಬ ಸಲ್ಲದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.