ಶನಿವಾರ, ಜನವರಿ 28, 2023
20 °C

ಸ್ವಾಗತ ಕಮಾನು ನಿರ್ಮಾಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಗತ ಕಮಾನು ನಿರ್ಮಾಣಕ್ಕೆ ವಿರೋಧ

ಕೆಜಿಎಫ್: ಊರಿಗಾಂನ ರೈಲ್ವೆ ಕೋಚ್ ನಿರ್ಮಾಣ ಘಟಕದ ಬಳಿ    ಬೆಮೆಲ್ ಕಾರ್ಖಾನೆ ನಿರ್ಮಿಸುತ್ತಿದ್ದ ಸ್ವಾಗತ ಕಮಾನು ಕಾಮಗಾರಿಯನ್ನು ಬಿಜಿಎಂಎಲ್ ನೌಕರರ ಪ್ರತಿಭಟನೆಯಿಂದ ಬೆಮಲ್ ಅಧಿಕಾರಿಗಳು ಕೈಬಿಟ್ಟ ಘಟನೆ ಮಂಗಳವಾರ ನಡೆದಿದೆ.ಊರಿಗಾಂ ವೃತ್ತದಿಂದ ಇನ್‌ಫ್ಯಾಂಟ್ ಚರ್ಚ್ ರಸ್ತೆ ಮೂಲಕ ಕೋಚ್ ನಿರ್ಮಾಣ ಘಟಕಕ್ಕೆ ಹೋಗುವ ರಸ್ತೆಯ ಪ್ರಾರಂಭದಲ್ಲಿ ಸ್ವಾಗತ ಕಮಾನನ್ನು ನಿರ್ಮಿಸಲು ಬೆಮೆಲ್ ಅಧಿಕಾರಿಗಳು ಬೆಳಿಗ್ಗೆ ಕಾಮಗಾರಿ ಶುರು ಮಾಡಿದರು. ಇದನ್ನು ಕಂಡ ಗಣಿ ಕಾರ್ಮಿಕರ ಗುಂಪು, ಕಮಾನು ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿತು. ಆದರೆ ಬೆಮೆಲ್ ಅಧಿಕಾರಿಗಳು ತಮಗೆ ಬಿಜಿಎಂಎಲ್‌ನಿಂದ ಅನುಮತಿ ಪತ್ರ ದೊರೆತಿದೆ ಎಂದು ತಿಳಿಸಿ, ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ಮುಂದುವರೆಸಿದರು.ನಂತರ ಕಾರ್ಮಿಕರ ಗುಂಪು ಬಿಜಿಎಂಎಲ್ ಆಡಳಿತ ಕಚೇರಿ ಸ್ವರ್ಣಭವನಕ್ಕೆ ತೆರಳಿ ಅನುಮತಿ ಪತ್ರದ ಬಗ್ಗೆ ವಿವರಣೆ ಪಡೆದರು. ಬೆಮೆಲ್ ವಶದಲ್ಲಿನ ರೈಲ್ವೆ ಕೋಚ್ ಘಟಕದ ಬಳಿ ಸ್ವಾಗತ ಕಮಾನು ಹಾಕಲು ಅನುಮತಿಯನ್ನು ಪಡೆದು, ರಸ್ತೆಯ ಪ್ರಾರಂಭದಲ್ಲಿಯೇ ಕಮಾನನ್ನು ನಿರ್ಮಿಸಲು ಮುಂದಾದ ಬೆಮೆಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ಕಾಮಗಾರಿಗಳನ್ನು ನಿಲ್ಲಿಸಲಾಯಿತು. ಕಳೆದ ವರ್ಷ ಸಹ ಇದೇ ರೀತಿ ಕಾಮಗಾರಿ ನಡೆಸಲು ಉದ್ದೇಶಿಸಿದ್ದ ಬೆಮೆಲ್ ನಂತರ ಪ್ರತಿಭಟನೆ ಹಿನ್ನಲೆಯಲ್ಲಿ ಕಾಮಗಾರಿ ನಿಲ್ಲಿಸಿತ್ತು.

ಮೊದಲು ಸ್ವಾಗತ ಕಮಾನು ನಿರ್ಮಾಣ ಮಾಡಿ ನಂತರ ಇಡೀ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಬೆಮಲ್ ಆಡಳಿತ ವರ್ಗ ಯತ್ನಿಸುತ್ತಿದೆ. ಬೆಮೆಲ್‌ಗೆ ನೀಡಲಾಗಿದ್ದ ಅವಧಿಯಲ್ಲಿ ಈಗಾಗಲೇ ಆರೂವರೆ ವರ್ಷ ಮುಗಿದಿದೆ. ಉಳಿದ ಮೂರು ವರ್ಷದ ಗುತ್ತಿಗೆ ಅವಧಿಯಲ್ಲಿ ಇಂತಹ ಕಾಮಗಾರಿಯನ್ನು ನಡೆಸುವ ಅವಶ್ಯಕತೆ ಏನಿತ್ತು ಎಂದು ಕಾರ್ಮಿಕರು ಪ್ರತಿರೋಧ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.