ಶನಿವಾರ, ಏಪ್ರಿಲ್ 17, 2021
27 °C

ಸ್ವಾತಂತ್ರ್ಯಕ್ಕೆ ಮುನ್ನ ಭವನ-ಉದ್ಯಾನಕ್ಕೆ ಪುನಶ್ಚೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅತಿಕ್ರಮಣಕ್ಕೆ ಒಳಗಾದ ಮೆಹಬೂಬ ಗುಲ್‌ಶನ್ ಉದ್ಯಾನದ ಅಭಿವೃದ್ಧಿಗೆ ಗುಲ್ಬರ್ಗ ಮಹಾನಗರ ಪಾಲಿಕೆಯು ಮುಂದಾಗಿದೆ. ನಿಜಾಮರ ಕಾಲದ ಈ ಉದ್ಯಾನ ಹಾಗೂ ಇಂದಿರಾ ಸ್ಮಾರಕ ಭವನಕ್ಕೆ `ಸ್ವಾತಂತ್ರ್ಯ ಆಚರಣೆ~ಗೆ (ಆಗಸ್ಟ್ 15) ಮೊದಲು ಸ್ಫುರರೂಪ ನೀಡಲು ಬದ್ಧವಾಗಿದೆ.ಗುಲ್ಬರ್ಗ ಮಹಾನಗರ ಪಾಲಿಕೆಯ 46 ಎಕರೆ 19 ಗುಂಟೆ ಮೀಸಲು ಪ್ರದೇಶದಲ್ಲಿ ಉದ್ಯಾನವಿದೆ. ಅಲ್ಲಿ ಏಳನೇ ನಿಜಾಮನ ಹೆಸರಿನಲ್ಲಿ ಶತಮಾನದ ಹಿಂದೆಯೇ ಹೂವಿನ ತೋಟ ನಿರ್ಮಿಸಲಾಗಿತ್ತು. ಆದರೆ ಈಗ ಪರಭಾರೆ, ಲೀಸ್, ಗುತ್ತಿಗೆ ಮತ್ತಿತರ ಕಾರಣದಿಂದ ಸ್ವಲ್ಪ ಪ್ರದೇಶ ಮಾತ್ರ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಈ ಉಳಿದ ಪ್ರದೇಶದಲ್ಲಿ ಉದ್ಯಾನ ಅಭಿವೃದ್ದಿ ಪಡಿಸಿ ಸಾರ್ವಜನಿಕರ ಆಹಾರ-ವಿಹಾರ, ಆರೋಗ್ಯ, ಯೋಗ, ಉಲ್ಲಾಸ, ಮಕ್ಕಳ ಆಟದ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಗುರುವಾರ ಪಾಲಿಕೆ ಆಡಳಿತವು ಸ್ಥಳ ಪರಿಶೀಲನೆ ನಡೆಸಿತು.ಮೇಯರ್ ಸೋಮಶೇಖರ್ ಮೇಲಿನ ಮನಿ ನೇತೃತ್ವದಲ್ಲಿ ಉಪಮೇಯರ್ ಸಯೀದಾ ಬೇಗಂ, ಆಯುಕ್ತ ಸಿ. ನಾಗಯ್ಯ, ಕರ ಮತ್ತು ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ, ಯೋಜನಾ ಮತ್ತು ನಗರ ಅಭಿವೃದ್ಧಿ ಸೈಯ್ಯದ್ ಅಹ್ಮದ್, ಪಾಲಿಕೆ ಸದಸ್ಯ ಶಿವಾನಂದ ಅಷ್ಟಗಿ, ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು.`ಕ್ಯಾಂಟೀನ್ ದುರಸ್ತಿ, ಕಾಲುದಾರಿ ನಿರ್ಮಾಣ, ಹುಲ್ಲುಹಾಸು, ಗಿಡಗಳನ್ನು ಬೆಳೆಸುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕಾರಂಜಿ, ಮಕ್ಕಳ ಆಟಿಕೆ ಸಾಮಾನುಗಳ ರಿಪೇರಿ, ಕತೆ ಕಟ್ಟೆ, ಯೋಗ ಕಟ್ಟೆ, ಇಂಪಾದ ಸಂಗೀತಕ್ಕೆ ವ್ಯವಸ್ಥೆ, ಹೈಮಾಸ್ಟ್ ದೀಪ, ಕಾಲುದಾರಿಯಲ್ಲಿ ಬೆಳಕಿನ ವ್ಯವಸ್ಥೆಗಳ ಜೊತೆಗೆ ಸೂಕ್ತ ಚರಂಡಿ, ಕಸವಿಲೇವಾರಿ, ಭದ್ರತೆ, ಸ್ವಚ್ಛತೆ ಕಾಪಾಡಲು ವ್ಯವಸ್ಥೆ ಕೈಗೊಳ್ಳುವ ಕುರಿತು ಚರ್ಚಿಸಿ, ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು~ ಎಂದು ಭೀಮರೆಡ್ಡಿ ಮತ್ತು ಸೈಯ್ಯದ್ ಅಹ್ಮದ್ ತಿಳಿಸಿದರು.  `ಇಂದಿರಾ ಸ್ಮಾರಕ ಭವನವನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಆಧುನಿಕ ಮಾದರಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ಸಭಾಂಗಣವನ್ನಾಗಿ ರೂಪಿಸಲಾಗುವುದು~ ಎಂದರು.`ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (ಬಿಆರ್‌ಜಿಎಫ್) ಹಾಗೂ ಪಾಲಿಕೆಯ ಹಣ, ರಾಜ್ಯ ಹಣಕಾಸು ನಿಧಿ (ಎಸ್‌ಎಫ್‌ಸಿ) ಹಾಗೂ ಇನ್ನಿತರ ಮೂಲಗಳಿಂದ ಹಣ ಹೊಂದಿಸಲಾಗುವುದು. ಇದರ ಜೊತೆಗೆ ಒತ್ತುವರಿ ಜಾಗಗಳ ಬಗ್ಗೆ ವಿಚಾರಣೆ ನಡೆಯಲಿದೆ~ ಎಂದು ಭೀಮರೆಡ್ಡಿ ತಿಳಿಸಿದರು.`ಸಾರ್ವಜನಿಕರಿಗೆ ಉಚಿತವಾಗಿ ನೀಡದ ಯಾವುದೇ ಕಟ್ಟಡ, ಕಲ್ಯಾಣ ಮಂಟಪ ಅಥವಾ ಯಾವುದೇ ನಿರ್ಮಾಣಕ್ಕೆ ವಾಣಿಜ್ಯ ಉದ್ದೇಶದ ತೆರಿಗೆ ವಿಧಿಸಲಾಗುವುದು~ ಎಂದು ಭೀಮರೆಡ್ಡಿ ತಿಳಿಸಿದರು. `ಯಾತ್ರಿ ನಿವಾಸ ಮುಂಭಾಗದ ರಸ್ತೆ ದುರಸ್ತಿ, ಒಳಚರಂಡಿ ದುರಸ್ತಿ ಮತ್ತಿತರ ಕಾಮಗಾರಿ ಕೈಗೆತ್ತಿಕೊಂಡು ಪರಿಸರದ ಸ್ವಚ್ಛತೆ ಕಾಪಾಡಲಾಗುವುದು. ಮುಂದಿನ ದಿನದಲ್ಲಿ ಖಾಸಗಿ ಜೊತೆಗೂಡಿ ಉದ್ಯಾನದಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಲಾಗುವುದು. ಈ ಕಾಮಗಾರಿಗಳನ್ನು ಆ.15 ಮೊದಲು ಪೂರೈಸುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ~ ಎಂದು ಸೈಯ್ಯದ್ ಅಹ್ಮದ್ ಹೇಳಿದರು. ಶತಮಾನದ ಹಿಂದಿನ ಉದ್ಯಾನವು ಪರಭಾರೆ ಆಗಿರುವ ಕುರಿತು `ಪ್ರಜಾವಾಣಿ~ಯಲ್ಲಿ ಈ ಹಿಂದೆ ವರದಿ ಪ್ರಕಟವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.