ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಪೂರ್ವದಲ್ಲಿಯೇ ಗಾಂಧಿ ಜಯಂತಿ !

Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗಾಂಧಿ ಜಯಂತಿ ಆಚರಣೆ ಯಾವಾಗ ಆರಂಭವಾಯಿತು? ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರದಲ್ಲಿ ರಾಷ್ಟ್ರಪಿತರ ಸ್ಮರಣೆಯ ಕಾರ್ಯ ಶುರುವಾಗಿರಬಹುದು ಎನ್ನುವುದು ಸಾಮಾನ್ಯ ಅನಿಸಿಕೆ! ಸೋಜಿಗದ ವಿಷಯ ಎಂದರೆ ಇದಕ್ಕೆ ಮುನ್ನವೇ  ಜಯಂತಿಯನ್ನು ಸಪ್ತಾಹವಾಗಿ ಆಚರಿಸಿದ ಉದಾಹರಣೆಗಳು ಇವೆ. ಅದರ ಚಾರಿತ್ರಿಕ ಮಾಹಿತಿ ಇಲ್ಲಿದೆ.

ಗಾಂಧಿ ಜಯಂತಿ ಆಚರಿಸಲು ನಾವು ಮತ್ತೆ ಸಜ್ಜಾಗಿದ್ದೇವೆ. ಗಾಂಧಿ ಜಯಂತಿ ರಾಷ್ಟ್ರೀಯ ಆಚರಣೆಯಾಗಿ  ಎಂದು ಆರಂಭವಾಯ್ತು?– ಈ  ಪ್ರಶ್ನೆಗೆ ೧೯೪೭, ೧೯೪೮ ಅಥವಾ ೧೯೫೦... ಎಂದು ಬಹುತೇಕ ಜನರು ಉತ್ತರಿಸುತ್ತಾರೆ. ಮಹಾತ್ಮ ಗಾಂಧಿ ಚಿತ್ರಕ್ಕೆ  ಹಾರ ಹಾಕಿ ಮಾಡುವ ಭಾಷಣಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಆಡಿದ ಮಾತುಗಳನ್ನು ಮತ್ತೆ ಉಚ್ಚರಿಸಲಾಗುತ್ತದೆ. ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಸ್ಮರಿಸುವುದು ಅತ್ಯಗತ್ಯವೆಂದು ಎಲ್ಲರೂ ಹೇಳುತ್ತಾರೆ. ಸೋಜಿಗದ ಸಂಗತಿಯೆಂದರೆ ಸ್ವಾತಂತ್ರ್ಯ ದೊರೆಯುವುದಕ್ಕೆ  ಮುನ್ನವೇ ಗಾಂಧಿ ಜಯಂತಿ ಆಚರಣೆ ನಮ್ಮ ದೇಶದಲ್ಲಿ ನಡೆದಿದೆ!

೧೯೩೦–-೩೩ರ ಸಮಯದಲ್ಲಿ ಉತ್ತರ ಕನ್ನಡದ ಶಿರಸಿ–-ಸಿದ್ದಾಪುರಗಳಿಂದ ಪ್ರಕಟವಾಗುತ್ತಿದ್ದ ‘ಸತ್ಯಾಗ್ರಹ’ ಕರಪತ್ರ ಪತ್ರಿಕೆಯಲ್ಲಿ ಗಾಂಧಿ ಜಯಂತಿಯ ಸಾಕಷ್ಟು ವಿವರಗಳಿವೆ. ೧೯೩೧ರಲ್ಲಿ ಪ್ರಕಟವಾದ ಒಂದು ಸಂಚಿಕೆಯಲ್ಲಂತೂ ಗಾಂಧಿ ಜಯಂತಿ ಸಪ್ತಾಹ ದೇಶಾದ್ಯಂತ ಆಚರಿಸಲು ‘ರಾಷ್ಟ್ರಪತಿ’ ಸರ್ದಾರ್ ವಲ್ಲಭಭಾಯಿ ಪಟೇಲರ ಅಪ್ಪಣೆಯ ಪ್ರಸ್ತಾಪವಿದೆ!

ಖಾದಿಯ ಮೂಲಕ ಸ್ವದೇಶಿ ಸತ್ಯಾಗ್ರಹಕ್ಕೆ ಅಂಕಿತ ಹಾಕಿದವರು ಮಹಾತ್ಮಗಾಂಧಿ.  ರೈತರು ಬೆಳೆದ ಹತ್ತಿಯಿಂದ ತೆಗೆದ ನೂಲು ಬಳಸಿ ನೇಕಾರರು ಬಟ್ಟೆ ಮಾಡುತ್ತಿದ್ದರು. ಇದರಿಂದ ಕೃಷಿಕರಿಗೆ, ನೇಕಾರರಿಗೆ ಎರಡು ಹೊತ್ತು ಊಟ ಮಾಡಲು ಸಾಧ್ಯವಾಯಿತು. ಆದರೆ ಖಾದಿ ಖರೀದಿ ಉತ್ಸಾಹ ಕ್ರಮೇಣ ಜನರಲ್ಲಿ ಕಡಿಮೆಯಾಯಿತು. ಸುಮಾರು 15 ಲಕ್ಷ ಮೌಲ್ಯದ ಬಟ್ಟೆ ಮತ್ತು 15 ಲಕ್ಷ ಮೌಲ್ಯದ ನೂಲುಗಳು ದಾಸ್ತಾನಿನಲ್ಲಿದ್ದವು. ಜನ ಖರೀದಿಸಿದರೆ ಮಾತ್ರ ಹತ್ತಿ ಉತ್ಪಾದಕರಿಗೆ, ನೇಕಾರರಿಗೆ ಅನುಕೂಲ. ಬಡ ನೇಕಾರರ ಬದುಕಿಗೆ ನೆರವಾಗಲು ಖಾದಿ ಮಾರಾಟಕ್ಕೆ ಯೋಗ್ಯ ಪ್ರಚಾರ ನೀಡಬೇಕಿತ್ತು. ಇದಕ್ಕಾಗಿ ಗಾಂಧಿ ಜಯಂತಿಯ ಸಪ್ತಾಹವನ್ನು ರೂಪಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರ ಕೈಕಾಲು ಮತ್ತು ಮಾತು ಎಲ್ಲಿ ನಡೆಯುತ್ತದೋ ಅಲ್ಲಲ್ಲಿ ಪವಿತ್ರ ಖಾದಿಯ ಸಂದೇಶ ಮುಟ್ಟಿಸಬೇಕು ಎಂಬ ವಲ್ಲಭಭಾಯಿ ಪಟೇಲರ  ಆದೇಶ ಇದಕ್ಕೆ ಕೈಗನ್ನಡಿಯಾಗಿದೆ.

ನಮ್ಮ ದೇಶಕ್ಕೆ ಒಬ್ಬ ರಾಷ್ಟ್ರಪತಿ ಇರತಕ್ಕದ್ದು ಎಂದು ನಮ್ಮ ಸಂವಿಧಾನದ ೫೨ನೇ ಅನುಚ್ಛೇದ ಹೇಳುತ್ತದೆ. ೧೯೫೦ರಲ್ಲಿ ಗಣರಾಜ್ಯವಾಗಿ ಹೊಸ ಸಂವಿಧಾನ ಅಂಗೀಕರಿಸಿ ಬಾಬು ರಾಜೇಂದ್ರಪ್ರಸಾದ್ ಪ್ರಥಮ ರಾಷ್ಟ್ರಪತಿಯಾದದ್ದು ತಿಳಿದಿದೆ. ಗಾಂಧಿ ಜಯಂತಿ ಸಪ್ತಾಹವನ್ನು ಆಚರಿಸಲು  ೧೯೩೧ರ ಸೆಪ್ಟೆಂಬರ್ ೧೪ರಂದು ಅಹಮದಾಬಾದ್‌ನಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಹೊರಡಿಸಿದ ಆದೇಶ ‘ರಾಷ್ಟ್ರಪತಿ ಆದೇಶ’ ಎಂದು ಪ್ರಕಟವಾಗಿದೆ. ಇದು  ರಾಷ್ಟ್ರಪತಿ ಪದ ಬಳಕೆಯ ಚಾರಿತ್ರಿಕ ಮಹತ್ವ ಹೇಳುತ್ತದೆ. ಆಗ ಅವರು ಹಿಂದಿ ರಾಷ್ಟ್ರೀಯ ಮಹಾ ಸಭಾದ ಅಧ್ಯಕ್ಷರಾಗಿದ್ದರು.

ಕರ್ನಾಟಕದ ಹೆಮ್ಮೆಯ ಹೋರಾಟಗಾರ ಗಂಗಾಧರ ದೇಶಪಾಂಡೆ  ಸರ್ದಾರ್ ವಲ್ಲಭಭಾಯಿ ಪಟೇಲರ ಆದೇಶಕ್ಕೆ ಅಡಿಟಿಪ್ಪಣಿ ಬರೆದಿದ್ದಾರೆ.

‘ಮಹಾತ್ಮರಿಗೆ ಕರ್ನಾಟಕದ ಅಭಿಮಾನ ಬಹಳ, ಕರ್ನಾಟಕವು ಗಾಂಧೀ ಪ್ರಾಂತ್ಯ ಎಂದು ಹೆಸರು ಪಡೆದಿದೆ. ಈ ಹೆಸರನ್ನು ಕಾಯುವುದು ಕರ್ನಾಟಕಸ್ಥರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ಈ ಪ್ರಸಂಗದಲ್ಲಿ ನನ್ನ ಕರ್ನಾಟಕ ಬಾಂಧವರು ಹಿಂಜರಿಯಲಿಕ್ಕಿಲ್ಲವೆಂದು ನನ್ನ ಬಲವಾದ ನಂಬಿಕೆಯಿದೆ’ ಎಂದಿದ್ದಾರೆ.

ಎರಡನೇ ದುಂಡು ಮೇಜಿನ ಪರಿಷತ್ ಸಭೆಯಲ್ಲಿ ಭಾಗವಹಿಸಲು ಮಹಾತ್ಮಗಾಂಧಿ ಇಂಗ್ಲೆಂಡಿಗೆ ಹೋದ ಸಂದರ್ಭದಲ್ಲಿ ಸಪ್ತಾಹ ಆಚರಣೆಗೆ ಆದೇಶಿಸಲಾಗಿದೆ.

ವಿಶೇಷವೆಂದರೆ ಗಾಂಧಿ ಜಯಂತಿ ಆಚರಣೆ ಇದಕ್ಕಿಂತ ಪೂರ್ವದಲ್ಲೂ  ಇತ್ತೆಂಬುದಕ್ಕೆ ಇಲ್ಲಿ ಸುಳಿವುಗಳಿವೆ.  ಕಳೆದ ವರ್ಷ ಜಯಂತಿ ಆಚರಿಸುವಾಗ ಮಹಾತ್ಮ ಗಾಂಧಿ ಜೈಲಿನಲ್ಲಿದ್ದರು ಎಂದು  ವಲ್ಲಭಭಾಯಿ ಪಟೇಲ್‌ರ  ೧೯೩೧ರ ಸೂಚನೆ ಹೇಳುತ್ತದೆ.
ಭೂಗತ ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಶಿಕ್ಷೆಗೆ ಒಳಗಾದವರ ವಿವರ ಪ್ರಕಟಿಸಬಾರದೆಂದು ಪತ್ರಿಕೆಗಳಿಗೆ ಬ್ರಿಟಿಷರು ಆಜ್ಞೆ ಮಾಡಿದ್ದರು. ಉತ್ತರ ಕನ್ನಡದ ಕುಮಟಾದಿಂದ ಪ್ರಕಟವಾಗುತ್ತಿದ್ದ ‘ಕಾನಡಾ ವೃತ್ತ ಪತ್ರಿಕೆ’ ಕಾನೂನು, ದಬ್ಬಾಳಿಕೆಯಿಂದ ಸ್ಥಗಿತವಾಯಿತು. ಸ್ವಾತಂತ್ರ್ಯ ಸಂದೇಶ ಬಿತ್ತರಿಸಲು ಭೂಗತ ಪತ್ರಿಕೋದ್ಯಮ ಉದಯವಾಯಿತು. ಮಸಿ ಕಾಗದ ಬಳಸಿ ಸೈಕ್ಲೋಸ್ಟೈಲ್ ಯಂತ್ರದ ಮೂಲಕ ಗುಹೆ, ಕಾಡು, ಗುಪ್ತಸ್ಥಳಗಳಲ್ಲಿ ಮುದ್ರಿಸಲಾಗುತ್ತಿತ್ತು. ಜೈಲಿನ ಕತೆ, ಹೋರಾಟಗಾರರು ಜೈಲಿನಿಂದ ಬರೆದ ಪತ್ರ, ಸ್ವಾತಂತ್ರ್ಯ ಹೋರಾಟದ ಹಾಡು, ಜಪ್ತಿ ವಾರ್ತೆ, ಹೋರಾಟಗಾರರ ಸಂದರ್ಶನ, ಬ್ರಿಟಿಷರ ಅನ್ಯಾಯ, ಸ್ವದೇಶ ಪ್ರೇಮದ ಸಂದೇಶಗಳು ಪ್ರಕಟವಾಗುತ್ತಿದ್ದವು. ಇದರಲ್ಲಿ ಗಾಂಧೀಜಿಯವರ ಉಪವಾಸ, ಸತ್ಯಾಗ್ರಹದ ವಿವರಗಳಿವೆ.

೧೯೩೨ರ ಸೆಪ್ಟೆಂಬರ್ ೨೫ರ ‘ಸತ್ಯಾಗ್ರಹ’ ಪತ್ರಿಕೆಯಲ್ಲಿ ಗಾಂಧಿ ಸಪ್ತಾಹದಲ್ಲಿ ಏನು ಮಾಡಬಹುದು? ಎಂಬ ವಿವರ ಉಳ್ಳ ಲೇಖನವಿದೆ.
‘ಗಾಂಧಿ ಮಹಾತ್ಮರು ದರಿದ್ರ ನಾರಾಯಣನ ಭಕ್ತರಲ್ಲಿ ಅಗ್ರಗಣ್ಯರು. ಜೀವನವನ್ನು ದರಿದ್ರರ ಸೇವೆಗೆ ಸವೆಸಿರುವರು. ಸಪ್ತಾಹದಲ್ಲಿ ಗಾಂಧಿಯವರ ಉಪದೇಶಗಳನ್ನು ಆಚರಿಸಬೇಕು. ಖಾದಿಯನ್ನು ಖರೀದಿಸಬೇಕು. ಜನರಿಗೆ ಭಿಕ್ಷೆ ಕೊಡುವುದಕ್ಕಿಂತ ಉದ್ಯೋಗ ಮಾಡುವವನಿಗೆ ಪ್ರೋತ್ಸಾಹ ನೀಡಬೇಕು. ಖಾದಿಯನ್ನು ಖರೀದಿಸಿದರೆ ದೇಶದ ಸಾವಿರಾರು ಹತ್ತಿ ಕೃಷಿಕರು, ನೂಲುವವರು, ನೇಯುವವರು, ಬಣ್ಣಹಾಕುವವರಿಗೆ ಜೀವನ ಕಲ್ಪಿಸಿದಂತಾಗುತ್ತದೆ. ಇದಕ್ಕಾಗಿ ಚರಕಾ ಯಜ್ಞ ಮಾಡಬೇಕು. ದೇವಸ್ಥಾನಗಳಲ್ಲಿ ಗಾಂಧಿ ಆತ್ಮಕತೆಯ ಪಾರಾಯಣ ಮಾಡಿಸಿ ಅರ್ಚನೆ ಮಾಡಿ ಗಾಂಧಿಯವರ ಶ್ರೇಯಸ್ಸಿಗೆ ಪ್ರಾರ್ಥಿಸಬೇಕು. ಸಪ್ತಾಹ ಸಮಯದಲ್ಲಿ ಒಂದು ಹೊತ್ತು ಉಪವಾಸ ಮಾಡಿ ಉಳಿದ ಊಟದ ಹಣದಲ್ಲಿಯಾದರೂ ಖಾದಿ ಖರೀದಿಸಬೇಕು’ ಎಂಬ ವಿನಂತಿಗಳಿವೆ!

೧೯೩೨ರ ಸೆಪ್ಟೆಂಬರ್ ೨೮ರ ಪತ್ರಿಕೆಯ ಮುಖಪುಟದ ಬಾಕ್ಸ್ ಐಟಂ  ಮಹಾತ್ಮರ ವರ್ಧಂತಿ ಆಚರಿಸಿರಿ! ಎಂಬ ಕೋರಿಕೆಯನ್ನು ಒಳಗೊಂಡಿತ್ತು. ಗಾಂಧಿ ಜಯಂತಿ ಆಚರಣೆಯ ವಿವಿಧ ಕಾರ್ಯಕ್ರಮಗಳ ವಿವರ ಇದರಲ್ಲಿದೆ.

ಇದಕ್ಕೆ ಪೂರಕವಾಗಿ ಗಾಂಧಿ ಜಯಂತಿ ಆಚರಣೆಯ ಬಗ್ಗೆ ಬ್ರಿಟಿಷರು ಹೊಂದಿದ್ದ ನಿಲುವು ಒಳಗೊಂಡ ವರದಿ ೧೯೪೩ರ ಅಕ್ಟೋಬರ್ ೭ರ ‘ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮದ್ರಾಸಿನ ಪೊಲೀಸ್ ಕಮಿಷನರ್ ಗಾಂಧಿ ಜಯಂತಿ ನಿಷೇಧಿಸಿ ಆಜ್ಞೆ ಹೊರಡಿಸಿದ್ದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯ ಪರಿಣಾಮ ಇದಾಗಿದೆ! ಗಾಂಧಿ ಜಯಂತಿಯ ಮೂಲಕ ದೇಶ ಸಂಘಟಿತವಾಗುತ್ತಿರುವುದನ್ನು ಗಮನಿಸಿ ಬ್ರಿಟಿಷರು ನಿಷೇಧದ ತಂತ್ರ ಹೂಡಿದ್ದರು.

‘ಸತ್ಯಾಗ್ರಹ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ ಕರೆಯ ಆಯ್ದ ಭಾಗಗಳನ್ನು ಅಂದು ಪ್ರಕಟವಾದ ರೀತಿಯಲ್ಲಿಯೇ ಇಲ್ಲಿ ಕೊಡಲಾಗಿದೆ.

ಗಾಂಧೀ ಜಯಂತೀ ಸಪ್ತಾಹವು (ಅಕ್ಟೋಬರ್ ೨ರಿಂದ ಅಕ್ಟೋಬರ್ ೮ರವರೆಗೆ) ಹೇಗೆ ಪಾಲಿಸಬೇಕೆಂಬ ಬಗ್ಗೆ ರಾಷ್ಟ್ರಪತಿ ಸರದಾರ ವಲ್ಲಭಭಾಯಿ ಯವರ ಅಪ್ಪಣೆ.

ಇದೇ ಅಕ್ಟೋಬರ್ ೨ನೇ ತಾರೀಕಿನ ದಿವಸ ಇಡೀ ರಾಷ್ಟ್ರವು ಮಹಾತ್ಮ ಗಾಂಧಿಯವರ ೬೩ನೇ ಜಯಂತಿ ದಿನವನ್ನು ಉತ್ಸವ ಪೂರ್ವಕವಾಗಿ ಪಾಲಿಸುವುದು. ಮಹಾತ್ಮ ಗಾಂಧಿಯವರ ಈ ವರ್ಷದ ಜಯಂತಿ ಉತ್ಸವಕ್ಕೆ ವಿಶೇಷ ಮಹತ್ವವಿದೆ. ಕಳೆದ ವರ್ಷ ನಾವು ಅವರ ಜಯಂತಿ ದಿವಸವನ್ನು ಪಾಲಿಸುವಾಗ ಅವರು ಸ್ವಾತಂತ್ರ್ಯ ಯುದ್ಧದಲ್ಲಿ ಸೆರೆಯಾಗಿ ಬಂಧೀವಾಸದಲ್ಲಿದ್ದರು. ಈ ವರ್ಷ ಅವರು ನಮ್ಮ ರಾಷ್ಟ್ರದ ಏಕಮೇವ ದ್ವಿತೀಯ ಪ್ರತಿನಿಧಿಯಾಗಿ ಏಳು ಸಾವಿರ ಮೈಲಿಯಾಚೆ ದೇಶಾಂತರಕ್ಕೆ ನಮ್ಮ ಸಂಧಾನ ದೂತರೆಂದು ಹೋಗಿರುವಾಗ ಅವರ ಜಯಂತಿ ದಿನವನ್ನು ಪಾಲಿಸುವ ಪ್ರಸಂಗವು ಬಂದೊದಗಿದೆ. ಇಂಥ ಅಪೂರ್ವ ಪ್ರಸಂಗಕ್ಕೆ ಸರ್ವರೀತಿ ಶೋಭಿಸುವಂತೆ ಈ ವರ್ಷದ ಜಯಂತಿಯನ್ನು ಸಾರ್ಥಕಗೊಳಿಸುವುದು ನಮ್ಮ ಕರ್ತವ್ಯವಾಗಿದೆ.

ಜಯಂತಿಯನ್ನು ಪಾಲಿಸಲು ಅನೇಕ ರೀತಿಗಳಿದ್ದರೂ ಆ ಮಹಾತ್ಮರ ಅಂತಃಕರಣಕ್ಕೆ ಪ್ರಿಯವಾದ ಕಾರ್ಯಕ್ಕೆ ಅರ್ಥಾತ್  ಆ ಮಹಾತ್ಮರ, ದಾರಿದ್ರ್ಯ ಪೀಡಿತ ಕೋಟ್ಯಾವದೀ  ದೇಶ ಬಾಂಧವರಿಗೆ ಶಾಶ್ವತ ಹಿತ ಸಾಧನೆಗೆ ಈ ಜಯಂತಿ ಸಪ್ತಾಹವನ್ನು ಅರ್ಪಿಸುವುದು ಈ ಜಯಂತಿಯನ್ನು ಪಾಲಿಸುವ ಸರ್ವೋತ್ಕೃಷ್ಟ ರೀತಿಯಾಗಿದೆ...

ಕಳೆದ ವರ್ಷ ಖಾದಿಗೆ ಗಿರಾಕಿಗಳ ಮಾಗಣಿಯು ಒಮ್ಮೆಲೆ ಹೆಚ್ಚಾಗಿ ಖಾದಿಯನ್ನು ಸಾಕಷ್ಟು ಪೂರೈಸುವುದು ಕಠಿಣವಾಗಿ ಬಂದ ಗಿರಾಕಿಗಳಲ್ಲಿ ಖಾದಿಯನ್ನು ಅಳೆದು ಹಂಚುವ ಪ್ರಸಂಗ ಬಂದಿತ್ತು. ಈ ವರ್ಷ ಅದಕ್ಕೆ ಕೇವಲ ವಿಪರೀತ ಸ್ಥಿತಿಯೇ ಪ್ರಾಪ್ತವಾಗಿ  ಪ್ರತಿಯೊಂದು ಖಾದಿ ಕೇಂದ್ರದಲ್ಲಿ ಖಾದಿಗೆ ಸಾಕಷ್ಟು ಗಿರಾಕಿಗಳ ಮಾಗಣಿ ಇಲ್ಲದೆ ಖಾದಿಯು ವಿಪರೀತ ಶಿಲ್ಕುಬಿದ್ದು ಹೋಗಿದೆಯೆಂದು ಹೇಳಿದರೆ ಜನರಿಗೆ ಆಶ್ಚರ್ಯವೆನಿಸಬಹುದು. ಆದರೆ ನಿಜವಾಗಿಯೂ ಪ್ರತಿಯೊಂದು ಖಾದಿ ಉತ್ಪತ್ತಿ ಕೇಂದ್ರದಲ್ಲಿ ಖಾದಿಯು ಬಹುಪ್ರಮಾಣದಿಂದ ಶಿಲ್ಕು ಬಿದ್ದಿದೆ. ದೇಶದಲ್ಲುಂಟಾದ ಸಾಂಪತ್ತಿಕ ಕುಗ್ಗೇ ಇದಕ್ಕೆ ಕಾರಣವು. ಕಳೆದ ವರ್ಷ ಒಮ್ಮೆಲೇ ಗಿರಾಕಿಗಳ ಮಾಗಣಿಯು ಬೆಳೆದಿದ್ದರಿಂದ ನಾವು ಸಾವಿರಗಟ್ಲೆ ನೂಲುವವರನ್ನು,ನೇಕಾರರನ್ನು ಹೊಸದಾಗಿ ಕೆಲಸಕ್ಕೆ ತೊಡಗಿಸಿಕೊಂಡೆವು. 

ಅರೆಹೊಟ್ಟೆಯಿಂದ ಕಾಲತೆಗೆಯುತ್ತಿದ್ದ ಈ ಬಾಂಧವರಿಗೆ ಇದರಿಂದ ಎರಡು ಹೊತ್ತು ಹೆಚ್ಚು ಅನ್ನ ಸಿಗಲು ದಾರಿಯಾಯಿತು. ಆದರೆ ಈ ವರ್ಷ ಹದಿನೈದು ಲಕ್ಷ ರೂಪಾಯಿಯ ಖಾದಿಯ ಶಿಲ್ಕು ಬಿದ್ದಿದೆ. ಇಷ್ಟೇ ಅಲ್ಲ ಇದರ ಹೊರ್ತು ಮತ್ತೊಂದು ಹದಿನೈದು ಲಕ್ಷ ರೂಪಾಯಿಯ ಕೈನೂಲು ಸಹ ಶಿಲ್ಕು ಬಿದ್ದಿದೆ. ಈಗ ಈ ಖಾದಿಯು ಮಾರದಿದ್ದರೆ ಈ ಬಡ ನೂಲುವ ಹೆಂಗಸರು, ನೇಕಾರರೂ ಪುನಃ ಉಪವಾಸ ಬೀಳಬಹುದೇ ಹೊರ್ತು ಬೇರೆಗತಿ ಇಲ್ಲ. ಇಂಥ ಪ್ರಸಂಗದಲ್ಲಿ ಈ ಸಹಸ್ರಾರು ಬಂಧು ಭಗಿನಿಯರ ಮುಂದೆ ಉಪವಾಸ ಮಾರಿಯು ಕಣ್ಣು ಮುಂದೆ ಬಂದು ನಿಂತಿರುವುದು. .. ...ನಾನು ಬಯಸುವದೇನೆಂದರೆಃ- ಅಕ್ಟೋಬರ್ ೨ ನೇದರಿಂದ ವಿಕ್ರಮ ಶಕೆಗನುಸಾರವಾಗಿ ಅಕ್ಟೋಬರ್ ೮ನೇ ತಾರೀಕಿಗೆ ಬರುವ ಅವರ ಜನ್ಮ ದಿವಸದ ಪರ್ಯಂತ  ೭ ದಿವಸಗಳನ್ನು ಗಾಂಧೀ ಸಪ್ತಾಹವೆಂದು ಪಾಲಿಸಲಿಕ್ಕೇ ಬೇಕು. ಮತ್ತು ಈ ಸಪ್ತಾಹದಲ್ಲಿ ಭರತಖಂಡದ ಪ್ರತಿಯೊಂದು ಶಹರದಲ್ಲಿ ಮಾತ್ರವಲ್ಲ, ಪ್ರತಿಯೊಂದು ಸಣ್ಣ ಪುಟ್ಟ ಹಳ್ಳಿ, ಊರಲ್ಲಿ ಸಹ, ಅರ್ಥಾತ್ ಈ ರಾಷ್ಟ್ರದ ಪ್ರತಿ ಕೊನೆ ಮೂಲೆಯಲ್ಲೂ ಒತ್ತಡದಿಂದ ಖಾದಿ ಪ್ರಚಾರ ಮಾಡಬೇಕು. ಈಗ ಶಿಲ್ಕುಬಿದ್ದ ಹದಿನೈದು ಲಕ್ಷ ರೂಪಾಯಿಯ ಖಾದಿಯು ಈ ವಾರದಲ್ಲಿ ಮಾರಿಹೋಗುವಷ್ಟು  ಒತ್ತಡದಿಂದ ಈ ಕಾರ್ಯವು ನಡೆಯಲಿಕ್ಕೆ ಬೇಕು. ಎಲ್ಲ ಕೊಂಗ್ರೇಸ್ ಕಮೀಟಿಗಳೂ, ಎಲ್ಲ ಕೊಂಗ್ರೇಸ್ ಅಭಿಮಾನಿಗಳೂ, ಈ ವಾರದಿಂದ ಖಾದಿ ಮಾರಾಟದಲ್ಲಿ  ತಮ್ಮ ಸಂಪೂರ್ಣ ಶಕ್ತಿ ಸಾಹಸವನ್ನು ವೆಚ್ಚ ಮಾಡಬೇಕೆಂದು ನಾನು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇನೆ. ಪ್ರತಿಯೊಬ್ಬ ಕಾಂಗ್ರೇಸ್ ಕಾರ್ಯಕರ್ತರಿಗೆ ಹೇಳಿಕೊಳ್ಳುವುದೇನೆಂದರೆ ಅವರು ಈ ಸಪ್ತಾಹದ ಪ್ರತಿಯೊಂದು ದಿವಸ ಈ ಕಾರ್ಯದಲ್ಲಿ ತಮ್ಮ ಕಾರ್ಯಭಾರವನ್ನು ಮಾಡಲಿಕ್ಕೆ ಬೇಕು. ಮತ್ತು ತನ್ನ ಕೈಕಾಲು ಮತ್ತೂ ಮಾತು ಎಲ್ಲೆಲ್ಲಿ ನಡೆಯುತ್ತದೋ ಅಲ್ಲಲ್ಲಿ ಪವಿತ್ರ ಖಾದಿಯ ಸಂದೇಶವನ್ನು ಮುಟ್ಟಿಸಲಿಕ್ಕೆ ಬೇಕು.

 ಅಹಮದಾಬಾದ                                                                                                  ವಲ್ಲಭಭಾಯಿ ಪಟೇಲ
೧೪ ಸಪ್ಟೆಂಬರ್ ೧೯೩೧                                                                            ಹಿಂದೀ ರಾಷ್ಟ್ರೀಯ ಮಹಾಸಭಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT