ಭಾನುವಾರ, ಏಪ್ರಿಲ್ 11, 2021
26 °C

ಸ್ವಾತಂತ್ರ್ಯ ದಿನದಂದು ಅರಳಿತು ಮಕ್ಕಳ ಪ್ರತಿಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದೇಶದ ಸ್ವಾತಂತ್ಯ ದಿನಾಚರಣೆ ನಿಮಿತ್ತ ಗುಲ್ಬರ್ಗದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ಮಾಡುವುದರೊಂದಿಗೆ  ಪ್ರತಿಭೆ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು.

ಅಂಧ ಮಕ್ಕಳು ಕೈಯಲ್ಲಿ ಉದ್ದುದ್ದ ಬಿದಿರು ಕೋಲು ಹಿಡಿದುಕೊಂಡು ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಪ್ರಚುರಪಡಿಸಿದರು. ವಿವಿಧ ಶಾಲೆ ಮಕ್ಕಳು ಹಾಗೂ ಪೊಲೀಸ್ ಸಿಬ್ಬಂದಿ ಸಾಮೂಹಿಕ ಪಥಸಂಚಲನದಲ್ಲಿ ಭಾಗವಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಂದನೆ  ಸಲ್ಲಿಸುವುದರೊಂದಿಗೆ ಅಲ್ಲಿ ನೆರೆದಂತಹ ಜನಸ್ತೋಮದ ಕಣ್ಮನ ಸೆಳೆದರು.

ವಿವಿಧ ಶಾಲೆ ವಿದ್ಯಾರ್ಥಿಗಳು ನೃತ್ಯ ಮಾಡುತ್ತ, ಕಾಡು ಜನಾಂಗದ ವೇಷ ತೊಟ್ಟು ಕಾಡಿನ ಜನರು ನಾಡಿನಲ್ಲಿ ಎನ್ನುವ ಸಂದೇಶದೊಂದಿಗೆ ನಾಡಿನ ಭಾಷಾ ಸೊಗಡು, ಜನಪದ ಶೈಲಿಯಲ್ಲಿ ನೃತ್ಯ ಪ್ರದರ್ಶನ ಮಾಡಿದರು.

ಸ್ವಾತಂತ್ರ್ಯ ದಿನ ಆಚರಣೆ ಅಂಗವಾಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತ ಗೀತೆ ಮೊಳಗಿದವು. ನಂತರ ಗೌರವ ರಕ್ಷೆ ಹಾಗೂ ಪಥ ಸಂಚಲನ ಆರಂಭವಾಯಿತು. ಪರೆಡ್ ಕಮಾಂಡರ್ ಎಂ.ಎ.ಉಪಾಸೆ  ಹಾಗೂ ಸಹಾಯಕ ಪರೇಡ್ ಕಮಾಂಡರ್ ಗುರುರಾಜ ಕುಲಕರ್ಣಿ  ಅವರನ್ನು ಒಳಗೊಂಡ ತಂಡವು ಪಥ ಸಂಚಲನದಲ್ಲಿ ಭಾಗವಹಿಸಿತ್ತು.

ಸ್ವಾತಂತ್ರ್ಯ ಯೋಧ ಕೊಟ್ರಬಸಯ್ಯ, ಎಸ್.ಎಸ್.ಎಲ್.ಸಿ ಹಾಗೂ ಸಿ.ಇ.ಟಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ, ಎನ್.ಸಿ.ಸಿ ಕೆಡೆಟ್ಸ್‌ಗಳಿಗೆ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಹಾಗೂ ಗಣ್ಯರು ಸನ್ಮಾನ ಮಾಡಿದರು.

ಮಿಲೇನಿಯಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು `ರಂಗ್ ದೇ ಬಸಂತಿ~ ದೇಶ ಭಕ್ತಿ ಗೀತೆಗೆ ಹೆಜ್ಜೆ ಹಾಕಿದರೆ, ಎಸ್. ಎನ್.ಮೆಹತಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು `ಇಂಡಿಯನ್ ಕಲ್ಚರ್~ ದೇಶಭಕ್ತಿ ಗೀತೆಗೆ ನೃತ್ಯ ಮಾಡಿದರು. ಸರ್ಕಾರಿ ಕನ್ಯಾ ಪ.ಜಾ, ಪ.ಪಂ ವಸತಿ ಪ್ರೌಢ ಶಾಲೆ ವಿದ್ಯಾರ್ಥಿಗಳು `ಮೇರಾ ಭಾರತ್ ಮಹಾನ್ ಹೈ~ ಗೀತೆಗೆ ಮೋಹಕವಾಗಿ ಕುಣಿದರು.

ಸೇಂಟ್ ಜಾನ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು `ಸಾರೆ ಜಮೀನ್ ಸೇ~ ದೇಶ ಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ಮಹರ್ಷಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು `ಕಂಧೇ ಸೇ ಕಂದಾ ಮಿಲಾವೋ~ ಗೀತೆಗೆ  ಹೆಜ್ಜೆ ಹಾಕಿದರೆ, ಶರಣಬಸವೇಶ್ವರ ವಸತಿ ಪ್ರೌಢ ಶಾಲೆ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿ ನೋಡುಗರ ಮನ ರಂಜಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.