ಬುಧವಾರ, ಮಾರ್ಚ್ 3, 2021
22 °C
ಜಿಲ್ಲೆಯ ವಿವಿಧೆಡೆ 70ನೇ ಸ್ವಾತಂತ್ರ್ಯೋತ್ಸವ: ಶಾಲಾ ಮಕ್ಕಳಿಂದ ನೃತ್ಯ, ಕುಣಿತ

ಸ್ವಾತಂತ್ರ್ಯ ಸಂಭ್ರಮದಲ್ಲಿ ದೇಶಭಕ್ತಿ ಪುಳಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಸಂಭ್ರಮದಲ್ಲಿ ದೇಶಭಕ್ತಿ ಪುಳಕ

ತುಮಕೂರು: ಕಣ್ಣ ಹಾಯಿಸಿದ ಕಡೆಯಲ್ಲೆಲ್ಲ ತಿರಂಗ ಧ್ವಜಗಳ ಹಾರಾಟ, ದೇಶಪ್ರೇಮಿಗಳ ಹೃದಯ ತುಂಬಿಸಿದ ಸ್ವಾತಂತ್ರ್ಯ ಗೀತೆಗಳ ನಿನಾದ, ಕ್ರೀಡಾಂಗಣಕ್ಕೆ ಸಾಗರೋಪಾದಿ ಹರಿದು ಬಂದ ದೇಶಭಕ್ತರ ದಂಡು...ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಏರ್ಪಡಿಸಿದ್ದ 70ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂಡು ಬಂದ ಸಂಭ್ರಮದ ಕ್ಷಣಗಳು.ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಂದ ಧ್ವಜಾರೋಹಣ ನೆರವೇರಿದ ಬಳಿಕ ಸಾಧಕರನ್ನು ಸನ್ಮಾನಿಸಲಾಯಿತು. ಆನಂತರ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗರಿಗೆದರಿತು.  ನಗರದ 5 ಶಾಲೆಗಳಿಂದ 2150 ವಿದ್ಯಾರ್ಥಿಗಳು 30 ನಿಮಿಷಗಳ ಕಾಲ ಸ್ವಾತಂತ್ರ್ಯ ಹೋರಾಟದ ಗೀತೆಗಳಿಗೆ ಹೆಜ್ಜೆ ಹಾಕಿ, ಭಾವಪರವಶಗೊಳಿಸಿದರು.ಬಿಷಪ್‌ ಸಾರ್ಜೆಂಟ್‌ ಶಾಲೆಯ 600 ಮಕ್ಕಳು ‘ನಮ್ಮ ಭಾರತ, ಭವ್ಯ ಭಾರತ’ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಅದೇ ರೀತಿ ಎಂಪ್ರೆಸ್‌ ಬಾಲಕಿಯರ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗದ 900 ವಿದ್ಯಾರ್ಥಿಗಳು), ಆಚಾರ್ಯ ವಿದ್ಯಾಪೀಠ(250), ರೇಣುಕಾ ವಿದ್ಯಾಪೀಠ ಹಾಗೂ ಭಾರತಮಾತಾ ಶಾಲೆ(400)ಯ ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶಿಸಿದರು.ಶಾಲೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಬಂದಿದ್ದ ಕಾರಣ ಆಟಿಕೆ ಸಾಮಗ್ರಿ, ಆಹಾರ ವಸ್ತುಗಳ ಮಾರಾಟ ಹೆಚ್ಚಾಗಿತ್ತು. ಸ್ವಾತಂತ್ರ್ಯ ಆಚರಣೆ ನಿಮಿತ್ತ ಕ್ರೀಡಾಂಗಣದ ಸುತ್ತ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.ಕ್ರೀಡಾಂಗಣ ಪ್ರವೇಶಿಸುವ ಜನರನ್ನು ತೀವ್ರ ತಪಾಸಣೆ ನಡೆಸಿ ಬಿಡಲಾಯಿತು. ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಇದರ ಜತೆಗೆ ವಿವಿಧ ಬಡಾವಣೆಗಳ ರಸ್ತೆ, ಅಂಗಡಿ ಸಂಕೀರ್ಣದ ಬಳಿ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಿ, ಸಿಹಿ ವಿತರಿಸಲಾಯಿತು. ರಾಷ್ಟ್ರ ನಾಯಕರ ಭಾವಚಿತ್ರ ಇಟ್ಟು ಪೂಜಿಸಲಾಯಿತು.ಕಪ್ಪುಪಟ್ಟಿ ಪ್ರದರ್ಶನ: ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ನಡೆಯುವ ಸಂದರ್ಭದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕೇಂದ್ರ ಹಾಗೂ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಹಣ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು. 12ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.ಮನವಿ ಸಲ್ಲಿಕೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್‌.ಮೂರ್ತಿ ಸ್ಥಾಪಿತ) ಕಾರ್ಯಕರ್ತರು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಮನವಿ ಸಲ್ಲಿಸಿದರು.ಬಿಜೆಪಿ: ನಗರದ ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ, ನಗರ ಘಟಕದ ಅಧ್ಯಕ್ಷ ಎಂ.ಸಿ.ರಮೇಶ, ಮುಖಂಡರಾದ ಶಿವಪ್ರಸಾದ, ನಂದೀಶ್‌ ಇತರರು ಇದ್ದರು.ಜಾಗೃತಿ ದಿವಸ್‌ ಆಚರಣೆ: ಭಗತ್‌ ಯುವ ಸೇನೆ ಕಾರ್ಯಕರ್ತರು ಭಾನುವಾರ ರಾತ್ರಿ 12ಕ್ಕೆ ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸ್ವಾತಂತ್ರ್ಯ ಜಾಗೃತಿ ದಿವಸ್‌ ಆಚರಿಸಿದರು.ಸೇನೆಯ ಸಂಸ್ಥಾಪಕ ಶ್ರೀಕೃಷ್ಣ ಶಾನುಭೋಗ್‌ ಅವರು ಧ್ವಜಾರೋಹಣ ನರವೇರಿಸಿದರು. ಇಂದಿನ ಯುವ ಪೀಳಿಗೆ ಸಿನಿಮಾ ನಟನಟಿಯರ ಆರಾಧನೆಯಲ್ಲಿ ತೊಡಗಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತಿದೆ ಎಂದು ವಿಷಾದಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಸಗನೇಗೌಡ, ಕರವೇ ಅಧ್ಯಕ್ಷ ಟಿ.ಇ.ರಘುರಾಮ್‌, ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪಿ.ಎನ್‌.ರಾಮಯ್ಯ, ಭಗತ್‌ ಸೇನೆಯ ಕಟ್ಟೆ ಮಂಜುನಾಥ್‌, ಅನಿಲ್‌, ಸುಮನ್‌ ವಿಕ್ಟರ್‌ ಶಿವಕುಮಾರ್‌, ರಮೇಶ್‌ ಇತರರು ಇದ್ದರು.ಭೈರವಿ ಮಹಿಳಾ ಸಂಘ: ಭೈರವಿ ವಿವಿದೋದ್ದೇಶಗಳ ಸಹಕಾರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸುಧಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಿರ್ದೇಶಕರಾದ ಜಯಲಕ್ಷ್ಮಿ, ನರಸಮ್ಮ, ಯಶೋದ, ಹೇಮಾ, ಲಲಿತ, ಪಾರ್ವತಮ್ಮ, ರಾಧ, ಪ್ರೇಮ,ಲಕ್ಷ್ಮಿದೇವಿ, ಅಶ್ವಿನಿ ಇತರರು ಇದ್ದರು.ಸೂಫಿಯಾ ಶಾಲೆ: ನಗರದ ಉಪ್ಪಾರಹಳ್ಳಿಯ ಸೂಫಿಯಾ ಆಂಗ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪಾಲಿಕೆ ಸದಸ್ಯ ಫರ್ಜಾನಾ ಖಾನಂ ಧ್ವಜಾರೋಹಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್‌ ವಾಜೀದ್‌, ನಾಗರತ್ನಮ್ಮ, ಶಾಜಿಯಾ, ಸಲೀಂ ಇದ್ದರು.ಕಾವೇರಿ ಪ್ರೌಢಶಾಲೆ: ನಗರದ ಎ.ಎಸ್‌.ಕೆ. ಪಾಳ್ಯದ ಕಾವೇರಿ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.  ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ದಯಾನಂದಮೂರ್ತಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಸಂಸ್ಥೆಯ ನಿರ್ದೇಶಕ ಎಚ್‌.ಬಿ.ಶಿವಣ್ಣ ಸ್ವಾತಂತ್ರ್ಯ, ಕಾನೂನು ಸಲಹೆಗಾರ ಬೆಟ್ಟಸ್ವಾಮಯ್ಯ, ಆಡಳಿತ ಮಂಡಳಿ ಖಜಾಂಚಿ ವಿಜಯಕುಮಾರ್‌, ನಿರ್ದೇಶಕ ಯೋಗೀಶ್‌, ಮುಖ್ಯ ಶಿಕ್ಷಕ ಬಿ.ಜಿ.ಶಿವಣ್ಣ, ಉದ್ದಪ್ಪ ಉಪಸ್ಥಿತರಿದ್ದರು.ಕಟ್ಟಡ ಕಾರ್ಮಿಕರಿಂದ ಸ್ವಾತಂತ್ರ್ಯೋತ್ಸವ: ಬ್ರಿಟಿಷರೊಂದಿಗೆ ರಾಜೀರಹಿತ ಹೋರಾಟ ನಡೆಸಿದ ಭಗತ್‌ಸಿಂಗ್‌ ಸೇರಿ ಹಲವು ಕ್ರಾಂತಿಕಾರಿಗಳನ್ನು ಯುವಜನರು ಅಧ್ಯಯನ ಮಾಡಬೇಕಿದೆ ಎಂದು ಹಿರಿಯ ವಕೀಲ ಜಿ.ಎಚ್. ರಾಜಶೇಖರಯ್ಯ ಹೇಳಿದರು.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ  ನೆರವೇರಿಸಿ ಮಾತನಾಡಿದರು. ಪಠ್ಯಪುಸ್ತಕಗಳಲ್ಲಿ ಭಗತ್‌ಸಿಂಗ್‌ ಅವರ ಇತಿಹಾಸ ತಿಳಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದರು.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಬಿ. ಉಮೇಶ್‌, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಮಾತನಾಡಿದರು.ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರು ಇತರರು ಇದ್ದರು.ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ: ನಗರದ ಸಿದ್ಧರಾಮನಗರ ಅಮರೇಶ್ವರ ವಿಜಯ ನಾಟಕ ಮಂಡಳಿ ಸಂಘದ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ನಿರ್ದೇಶಕಿ ಬಿ.ಎ. ಶಾಂತಲಾದೇವಿ ಮಾತನಾಡಿ, ಮಹಾತ್ಮರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಜಗತ್ತಿನಲ್ಲೇ ತುಂಬಾ ಬಲಿಷ್ಠ ದೇಶ ನಮ್ಮದು ಎಂದರು.ಕವಿತಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಉಮೇಶ್, ಊರುಕೆರೆ ಗ್ರಾಮ ಪಂಚಾಯಿತಿ ಸದಸ್ಯ ಪಿ.ರಾಜ್‌ಕುಮಾರ್‌, ಗಾಯಕ ದಾನ ನರಸಿಂಹಮೂರ್ತಿ ಭಾಗವಹಿಸಿದ್ದರು.ಹೆಬ್ಬೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ: ತಾಲ್ಲೂಕಿನ ಹೆಬ್ಬೂರಿನಲ್ಲಿ 7ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾ.ಪಂ. ಆವರಣದಲ್ಲಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಧ್ವಜಾರೋಹಣ  ನೆರವೇರಿಸಿದರು. ಉಪತಹಶೀಲ್ದಾರ್‌ ರವೀಶ್‌ ಹಾಜರಿದ್ದರು. ಗಣಪತಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಹೆಬ್ಬೂರಿನ ಪ್ರಮುಖ ಬೀದಿಗಳಲ್ಲಿ ಸ್ವಾತಂತ್ರ್ಯ ಘೋಷಣೆ, ಜೈಕಾರ ಕೂಗಿ ಮೆರವಣಿಗೆ ನಡೆಸಿದರು.ಎಲ್ಲ ಶಾಲೆಗಳ ಶಿಕ್ಷಕರು, ಸ್ಥಳೀಯರು, ಗ್ರಾಮ ಪಂಚಾಯಿತಿ ಸದಸ್ಯರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ಸೆಳೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.