ಸ್ವಾತಂತ್ರ್ಯ ಸೇನಾನಿ ಎಂ.ಆರ್‌. ಪಟ್ಟಣಶೆಟ್ಟಿ

7

ಸ್ವಾತಂತ್ರ್ಯ ಸೇನಾನಿ ಎಂ.ಆರ್‌. ಪಟ್ಟಣಶೆಟ್ಟಿ

Published:
Updated:

ಗುಳೇದಗುಡ್ಡ: ಅದು ನಾಲ್ವತ್ತರ ದಶಕ, ಸ್ವಾತಂತ್ರ್ಯ ಚಳವಳಿಯ ಬಿಸಿ ಗುಳೇದ­ಗುಡ್ಡಕ್ಕೂ ತಲುಪಿತ್ತು. ಗಾಂಧೀಜಿ ನೇತೃತ್ವದಲ್ಲಿ ದೇಶದಾದ್ಯಂತ ಚಳವಳಿ, ಸತ್ಯಾಗ್ರಹಗಳು ಜೋರಾಗಿ ನಡೆಯು­ತ್ತಿದ್ದ ಸಂದರ್ಭದಲ್ಲಿ ಅನೇಕ ಕಡೆ ಚಳವಳಿಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು, ಗುಂಡು ಹಾರಿಸಿದ ಪ್ರಕರಣಗಳು ನಡೆದ ಬಗ್ಗೆ ಆಕಾಶವಾಣಿ ಮತ್ತು ದಿನಪತ್ರಿಕೆ­ಗಳು ತರುತ್ತಿದ್ದ ಮೈ ನವಿರೇಳಿಸುವ ಘಟನೆಗಳು ಗುಳೇದಗುಡ್ಡದಲ್ಲಿ ಕೂಡ ದೇಶಪ್ರೇಮಿ ಯುವಕರ ಬಿಸಿ ರಕ್ತ ಕುದಿಯುವಂತೆ ಮಾಡಿತ್ತು.ಗುಳೇದಗುಡ್ಡದ ಮಡಿವಾಳಪ್ಪ ರುದ್ರಪ್ಪ ಪಟ್ಟಣಶೆಟ್ಟಿ (ಎಂ.ಆರ್‌. ಪಟ್ಟಣಶೆಟ್ಟಿ) ಚಿಕ್ಕ ವಯಸ್ಸಿನಲ್ಲಿಯೇ ‘ದತ್ತಾತ್ರೇಯ’ ಎಂಬ ಹೆಸರಿನಲ್ಲಿ ವ್ಯಾಯಾಮ ಶಾಲೆಯನ್ನು ಸ್ಥಾಪಿಸಿ­ದರು.  ಅವರ ವ್ಯಾಯಾಮ ಶಾಲೆ ಬಾದಾಮಿ ತಾಲ್ಲೂ­ಕಿನ ಸ್ವಾತಂತ್ರ್ಯ ಹೋರಾಟ­ಗಾರರ ಕೇಂದ್ರವಾಗಿ ರೂಪುಗೊಂಡಿತು. ಗಾಂಧೀಜಿಯ ತತ್ವ ಸಿದ್ಧಾಂತವನ್ನು ಈ ಭಾಗದಲ್ಲಿ ಪಸರಿಸತೊಡಗಿತು.1935ರಲ್ಲಿ ಎಂ.ಆರ್. ಪಟ್ಟಣಶೆಟ್ಟಿ ಕಾಂಗ್ರೆಸ್ ದೀಕ್ಷೆ ಪಡೆದು ಸತ್ಯಾಗ್ರಹಿ­ಯಾಗಿ ಜೈಲು ಸೇರಿದರು.  ಚಲೇ­ಜಾವ್ ಚಳವಳಿಯಲ್ಲಿ ಮತ್ತೆ ಜೈಲು ಸೇರಿದರು. ಜೈಲಿನಿಂದ ಮುಕ್ತರಾಗಲು ವರ್ಷವೇ ಕಳೆಯಿತು. ಜೈಲಿನಲ್ಲಿಯ ರಾಷ್ಟ್ರನಾಯಕರ ಒಡನಾಟದಲ್ಲಿ ನಾಯಕಮಣಿ­ಯಾಗಿ ಊರಿನ ಕೀರ್ತಿ ಬೆಳಗಿಸಿದರು.ಗುಳೇದಗುಡ್ಡ ಮತಕ್ಷೇತ್ರದ ಜನತೆ ಮಡಿವಾಳಪ್ಪನವರ ಪ್ರಾಮಾಣಿಕ ಕರ್ತವ್ಯ ಪ್ರಜ್ಞೆ ಕಂಡು 1952ರಲ್ಲಿ ಮುಂಬೈ ವಿಧಾನಸಭೆಗೆ ಶಾಸಕರನ್ನಾಗಿ ಆಯ್ಕೆ ಮಾಡಿದರು.  ಬಳಿಕ ಮೈಸೂರು ವಿಧಾನಸಭೆಗೆ ನಾಲ್ಕೂ ಚುನಾವಣೆ­ಗಳಲ್ಲಿ ಸತತವಾಗಿ ಆಯ್ಕೆಯಾದರು. ಪ್ರಭಾವಿ ರಾಜಕಾರಣಿಯಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

1972ರಲ್ಲಿ ಕಾಂಗ್ರೆಸ್ ಇಬ್ಬಾಗ­ವಾಗಿದ್ದರಿಂದ ಕಾಂಗ್ರೆಸ್ ‘ಒ’ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಲು ವೀರೇಂದ್ರ ಪಾಟೀಲರಿಂದ ಕರೆ ಬಂದರೂ ಮನಸ್ಸು ಮಾಡದೇ ರಾಜಕೀಯದಿಂದ ದೂರ ಸರಿದರು.ಸರಳ ಸಜ್ಜನ, ನಿಷ್ಠಾವಂತ ರಾಜ­ಕಾರಣಿ­ಯಾಗಿ ಸ್ವಾತಂತ್ರ್ಯಯೋಧ ಮಡಿವಾಳಪ್ಪ­ನವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ 75 ವರ್ಷ ತುಂಬಿದಾಗ ಪಟ್ಟಣದ ಜನತೆ 1988ರಲ್ಲಿ ಅಮೃತ ಮಹೋತ್ಸವ­ವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

1990ರಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಅವರು ನಿಧನ ಹೊಂದಿದರು.ರಾಜಕೀಯ ಮುತ್ಸದ್ದಿಗಳಾದ ಎಸ್‌. ನಿಜಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪ, ಅಂಬಲಿ ಚನ್ನಬಸಪ್ಪ, ದೊಡ್ಡಮೇಟಿ ಅಂದಾನೆಪ್ಪ ಅವರ ಸಾಲಿನಲ್ಲಿ ನಿಲ್ಲುವ ಎಂ. ಆರ್‌. ಪಟ್ಟಣಶೆಟ್ಟಿಯವರು ನಿಷ್ಠುರ­­ವಾದಿ­ಯಾಗಿ, ಶುದ್ಧ ಚಾರಿತ್ರ್ಯ, ಶುದ್ಧ ಹಸ್ತರಾಗಿ, ನಿಸ್ವಾ­ರ್ಥ­ಜೀವಿ­ಯಾಗಿ, ಕಾಯಕ­ಯೋಗಿ­ಯಾಗಿ, ಕೃಷಿಕ­ರಾಗಿ, ಸಾರ್ಥಕ ಬದುಕು ಸಾಗಿಸಿದರು.ಗುಳೇದಗುಡ್ಡದ ಜನತೆ ಇದೀಗ ಮಡಿವಾಳಪ್ಪನವರ ಜನ್ಮ ಶತಮಾನೋತ್ಸವ ಆಚರಿಸುತ್ತಿದ್ದು, ನಾಡಿನ ಮಠಾಧೀಶರು, ಜನಪ್ರತಿನಿಧಿ­ಗಳು, ಅಭಿಮಾನಿಗಳು ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸುತ್ತಿ­ರುವುದು ವಿಶೇಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry