ಗುರುವಾರ , ಏಪ್ರಿಲ್ 15, 2021
20 °C

ಸ್ವಾತಂತ್ರ್ಯ ಹೋರಾಟದ ನೆನಪಿನ ಬುತ್ತಿ ಬಿಚ್ಚಿದಾಗ..

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಹಾಸನ: ಸಿಮೆಂಟ್ ಶೀಟ್ ಹೊದೆಸಿದ್ದ ಎರಡು ಕೊಠಡಿಗಳ ಸಣ್ಣ ಮನೆಯೊಳಗೆ ಒಂದು ಮೂಲೆಯಲ್ಲಿಟ್ಟಿದ್ದ ಮಂಚದ ಮೇಲೆ ಮಲಗಿದ್ದ `ಕಸ್ತೂರಿ~ ಅವರಿಗೆ ತಮ್ಮನ್ನು ಭೇಟಿಮಾಡಲು ಯಾರೋ ಬಂದಿದ್ದಾರೆ ಎಂದಾಗ ಉಬ್ಬಿ ಹೋದರು. ಎದ್ದು ಕುಳಿತು ಯಾರು? ಎಂದು ಪ್ರಶ್ನಿಸಿದರು. ಪೇಪರ‌್ನೋರು... ಎಂದಾಗ ನನ್ನನ್ನು ಹುಡುಕಿಕೊಂಡು ಬಂದ್ರಲ್ಲ ಎಂದು ಸಂಭ್ರಮ ಮಿಶ್ರಿತ ಅಚ್ಚರಿಯಿಂದ ಬರಮಾಡಿಕೊಂಡರು.ನಾಳೆ ಸ್ವಾತಂತ್ರ್ಯೋತ್ಸವ, ಈ ಹಿನ್ನೆಲೆಯಲ್ಲಿ ನಿಮ್ಮನ್ನು ಮಾತನಾಡಿಸಿಕೊಂಡು ಹೋಗೋಣ ಅಂತ ಬಂದ್ವಿ ಎಂದಾಗ ಎದ್ದು ಕುಳಿತು ತಮ್ಮ ಹೋರಾಟದ ಹಿಂದಿನ ದಿನಗಳನ್ನು ಬಿಡಿಸಿಟ್ಟರು. ಬೈಲಹಳ್ಳಿಯ ಎಚ್.ಎನ್ ವೆಂಕಟಸುಬ್ಬು ಉರುಫ್ ಕಸ್ತೂರಿ.97 ವರ್ಷ ಮುಗಿಯುತ್ತಾ ಬಂದೆದೆ. ಇನ್ನೇನು 98ಕ್ಕೆ ಕಾಲಿಡುತ್ತಿದ್ದೇನೆ ಎಂದವರೇ 1936ರಲ್ಲಿ ಹೋರಾಟಕ್ಕೆ ಇಳಿದ ದಿನದಿಂದಲೇ ಒಂದೊಂದೇ ಘಟನೆಗಳನ್ನು ನೆನಪಿಸಿಕೊಂಡರು.`ನಾನು ಓದಿದ್ದು ಬರಿಯ ನಾಲ್ಕನೇ ಫಾರ್ಮ್, 1936ರ ಆಸುಪಾಸಿನಲ್ಲಿ ಹಾಸನದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಸ್ವಾತಂತ್ರ್ಯ ಚಳವಳಿ ಕಾವು ಪಡೆದ ಕಾಲವದು. ನಮ್ಮ ಪ್ರೆಸ್‌ನಲ್ಲಿ ಕರಪತ್ರಗಳ ಮುದ್ರಣವಾಗುತ್ತಿತ್ತು. ಅವುಗಳೇ ನನ್ನ ಹೋರಾಟಕ್ಕೆ ಪ್ರೇರಣೆ. ಪ್ರೆಸ್‌ನಲ್ಲಿ ಕೆಲಸದ ಜತೆಗೆ ಸಮಯವಿದ್ದಾಗ ಕರಪತ್ರಗಳನ್ನು ಹಂಚುವುದು ಹಾಗೂ ಜೈಕಾರ ಹಾಕುವುದು ನಮ್ಮ ಕೆಲಸವಾಗಿತ್ತು. ನಮ್ಮದು ಯುವಕರದ್ದೇ ಒಂದು ದಂಡು. 36ರಲ್ಲಿ ಅರಣ್ಯ ಸತ್ಯಾಗ್ರಹ ತೀವ್ರಗೊಂಡಾಗ ನಾವು ಚಳುವಳಿಗೆ ಧುಮುಕಿದೆವು. ಸೇಂದಿ ತೆಗೆಯುವ ಮರಗಳನ್ನು ಕಡಿಯುವುದು, ಮಡಿಕೆಗಳನ್ನು ಒಡೆದು ಹಾಕುವುದು~...  ಇವು ನಮ್ಮ ಕೆಲಸವಾಯಿತು.

 `ನನ್ನ ನೇತೃತ್ವದಲ್ಲೇ ಒಂದು ತಂಡ ರಚಿಸಿ ನಮಗೆ ತಿಪಟೂರಿನ ಕರಡಿಯಿಂದ ಜಾವಗಲ್ ವರೆಗಿನ ಉಸ್ತುವಾರಿ ವಹಿಸಿಕೊಟ್ಟರು. ಜನರ ಬೆಂಬಲವಂತೂ ಅಭೂತಪೂರ್ವವಾಗಿತ್ತು. ಶೇಂದಿ ಮಡಕೆಗಳನ್ನು ನಾಶಪಡಿಸುವುದರ ಜತೆಗೆ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮುಂದೆ ಸತ್ಯಾಗ್ರಹ ನಡೆಸುತ್ತಿದ್ದೆವು.ಒಂದೆರಡು ವರ್ಷ ಹೋರಾಟ ನಡೆಯಿತು. ಈ ಸತ್ಯಾಗ್ರಹದ ಹಿನ್ನೆಲೆಯಲ್ಲಿಯೇ 1939ರಲ್ಲಿ ಮೊದಲಬಾರಿ ಬಂಧನಕ್ಕೆ ಒಳಗಾದೆ. ಮೂರು ತಿಂಗಳು ಜೈಲಿನಲ್ಲಿದ್ದೆ. ಅದರಲ್ಲಿ ಹೆಚ್ಚಿನ ಸಮಯ ಹಾಸನ ಜೈಲು, ಮಧ್ಯದಲ್ಲಿ ಒಂದೆರಡು ಬಾರಿ ಬೇರೆ ಜೈಲುಗಳಿಗೂ ಕಳಿಸಿದ್ರು~.`1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಯಿತು. ನಾವೂ ಚಳವಳಿಗೆ ಧುಮುಕಿದೆವು. ಮೊದಲೇ ಚಳವಳಿಗಾರರು ಎಂದು ಗುರುತಿಸಿಕೊಂಡಿದ್ದರಿಂದ ನಮ್ಮ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. 1947ರಲ್ಲಿ ಪುನಃ ಬಂಧಿಸಿ ಎರಡೂವರೆ ತಿಂಗಳ ಕಾಲ ಬೆಂಗಳೂರಿನ ಮಿಲಿಟರಿ ಕ್ಯಾಂಪ್ ಜೈಲಿನಲ್ಲಿಟ್ಟರು~. ಹೀಗೆ ಚಳವಳಿ ದಿನಗಳನ್ನು ಹೇಳುತ್ತ, ನಡುವೆ ಹಿಂದಿನ ಪ್ರಮುಖ ನಾಯಕರ ಕತೆಗಳನ್ನೂ ಹೇಳುತ್ತ ಸಾಗಿದರು.`ಸ್ವಾತಂತ್ರ್ಯಾ ನಂತರ ಸ್ವಲ್ಪ ಕಾಲ ಹಾಸನದ ಪ್ರೆಸ್‌ನಲ್ಲಿ ಮತ್ತೆ ಹಳೆಯ ವೃತ್ತಿ ಮುಂದುವರಿಸಿದೆ. ಸುಮಾರು ಹತ್ತು ಜನ ನೌಕರರು ನನ್ನ ಬಳಿ ಕೆಲಸ ಮಾಡುತ್ತಿದ್ದರು. ಹೋರಾಟದ ಕಾಲದಲ್ಲಿ ಜೈಲಿನಲ್ಲಿ ಹಾಗೂ ಹೊರಗೆ ಕೆಲವು ಮುಖಂಡರ ಜತೆಗೆ ಸಲಿಗೆ ಬೆಳೆದ ಕಾರಣ ಸ್ವಾತಂತ್ರ್ಯಾ ನಂತರ ಸಮಾಜ ಸೇವೆಗೂ ಅವಕಾಶ ಲಭಿಸಿತು. ಹಾಸನ ತಾಲ್ಲೂಕು ಬೋರ್ಡ್‌ನ ಅಧ್ಯಕ್ಷನಾದೆ. ಜನರಿಂದ ಬೆಂಬಲ ಹಾಗೂ ಕೆಂಗಲ್ ಹನುಮಂತಯ್ಯ, ಬಿ.ಡಿ. ಜತ್ತಿ, ನಿಜಲಿಂಗಪ್ಪ ಮುಂತಾದವರ ಪ್ರೋತ್ಸಾಹ ಹಾಗೂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಅನೇಕ ಕೆಲಸ ಮಾಡಿದೆ~.ವರ್ಷಗಳು ಕಳೆದಂತೆ ಸ್ವತಂತ್ರ ಭಾರತದ ಚಿತ್ರಣ ಬದಲಾಗುತ್ತ ಹೋಯಿತು. ನಾವು ಕಂಡ ಕನಸುಗಳು ಛಿದ್ರವಾಗುತ್ತಿವೆಯೇನೋ ಎಂಬ ಭಾವನೆ ಮೂಡಿ ನಿಧಾನಕ್ಕೆ ಹಿಂದೆ ಸರಿದೆವು. ಈಗಿನ ಸ್ಥಿತಿ ಎಲ್ಲರ ಮುಂದಿದೆ. ಇಷ್ಟು ಹಣ ನಮ್ಮ ಕಾಲದಲ್ಲಿ ಇದ್ದಿದ್ದರೆ ರಸ್ತೆಗೆ ಚಿನ್ನದ ಹೊದಿಕೆ ಹಾಕಿಸುತ್ತಿದ್ದೆ. ಇಂದಿನ ರಾಜಕಾರಣ ಮತ್ತು ರಾಜಕಾರಣಿಗಳನ್ನು ನೆನಪಿಸಿಕೊಂಡರೆ ನಖ ಶಿಖಾಂತ ಸಿಟ್ಟು ಬರುತ್ತದೆ, ಆ ಬಗ್ಗೆ ಕೇಳ ಬೇಡಿ... ಎಂದು ಸ್ವಲ್ಪಹೊತ್ತು ಮೌನವಾದರು.`ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಗೌರವ ಧನವನ್ನು ಸ್ವಲ್ಪ ಕಾಲ ಪಡೆದಿರಲಿಲ್ಲ. ಆದರೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಹಣದ ಮುಗ್ಗಟ್ಟು ಬಂದಾಗ ಅದನ್ನು ಸ್ವೀಕರಿಸಬೇಕಾಯಿತು. ಈಗಲೂ ಹಣ ಬರುತ್ತಿದೆ. ಅದೇ ಜೀವನಕ್ಕೆ ಆಸರೆ. ಊರಿನಲ್ಲಿ ಎರಡು ಎಕರೆ ಭೂಮಿ ಕೊಟ್ಟಿದ್ದರು. ಆದರೆ ಅದು ಕಟ್ಟೆ ಭೂಮಿ, ಅಲ್ಲಿ ಕೃಷಿ ಮಾಡಿದರೆ ಕೆರೆಗೆ ನೀರು ಬರಲ್ಲ, ಕುಡಿಯಲು ನೀರೂ ಸಿಗಲ್ಲ  ಎಂದೆಲ್ಲ ಹೇಳಿದ್ದರಿಂದ ವಾಪಸ್ ಪಡೆದರು. ಈಗ ಈ ಮನೆ ಇದೆ. ಬೇರೇನೂ ಇಲ್ಲ ಎಂದರೂ ಬೇಸರದ ಛಾಯೆಯೂ ಕಾಣಿಸಲಿಲ್ಲ. ಎಂದರು.ಒಬ್ಬ ಮಗಳು  ಹಾಗೂ ಮೂವರು ಗಂಡುಮಕ್ಕಳಲ್ಲಿ ಒಬ್ಬ ಮಗನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಿದ್ದಾರೆ. ಪುತ್ರಿ ವಿವಾಹವಾಗಿದೆ. ಒಬ್ಬ ಮಗ ಸರ್ಕಾರಿ ಸೇವೆಯಲ್ಲಿದ್ದಾರೆ. ಅವಿವಾಹಿತ ಪುತ್ರನೊಂದಿಗೆ ಕಸ್ತೂರಿ ಅವರು ಬೈಲಹಳ್ಳಿಯ  ಸಣ್ಣ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.