ಮಂಗಳವಾರ, ಮೇ 11, 2021
20 °C
ಒಡಿಶಾಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯ- ದೆಹಲಿ ಚಲೋ

ಸ್ವಾಭಿಮಾನ ರ್‍ಯಾಲಿ: ಕೇಂದ್ರದ ವಿರುದ್ಧ ಪಟ್ನಾಯಕ್ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಭಿಮಾನ ರ್‍ಯಾಲಿ: ಕೇಂದ್ರದ ವಿರುದ್ಧ ಪಟ್ನಾಯಕ್ ಗುಡುಗು

ನವದೆಹಲಿ (ಪಿಟಿಐ): ಒಡಿಶಾಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ಹಿಂದೇಟು ಹಾಕುತ್ತಿರುವ ಕೇಂದ್ರದ ಯುಪಿಎ ಸರ್ಕಾರ ರಾಜಕೀಯ ಕಾರಣದಿಂದ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಿಡಿ ಕಾರಿದ್ದಾರೆ.ರಾಜ್ಯದ ಜನರ ಬಹುವರ್ಷಗಳ ಬೇಡಿಕೆಯಂತೆ ಒಡಿಶಾಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ `ದೆಹಲಿ ಚಲೋ' ಹಾಗೂ ಅದರ ಅಂಗವಾಗಿ ಬುಧವಾರ ರಾಜಧಾನಿಯಲ್ಲಿ ನಡೆದ ಬೃಹತ್ `ಸ್ವಾಭಿಮಾನ ರ್‍ಯಾಯಾಲಿ' ಉದ್ದೇಶಿಸಿ ಅವರು ಮಾತನಾಡಿದರು. `ಈ ಹೋರಾಟದಲ್ಲಿ ನಾಲ್ಕು ಕೊಟಿ ಒಡಿಶಾ ನಾಗರಿಕರ ಘನತೆ ಅಡಗಿದ್ದು, ವಿಶೆಷ ಸ್ಥಾನಮಾನ ದೊರೆಯುವವರೆಗೂ ಹೋರಾಟ ಮುಂದುವರಿಯುತ್ತದೆ' ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.`ವಿಶೇಷ ಸ್ಥಾನಮಾನ ಪಡೆಯುವ ಎಲ್ಲ ಅರ್ಹತೆ ಹೊಂದಿದ್ದರೂ ಒಡಿಶಾದಲ್ಲಿ ಕಾಂಗ್ರೆಸ್ ಆಡಳಿತ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಈ ಸೌಲಭ್ಯದಿಂದ ನಾವು ವಂಚಿತವಾಗಿದ್ದೇವೆ. ತನ್ನ ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಕೇಂದ್ರ ರಾಜ್ಯಗಳಿಗೆ ನೆರವಿನ ಪ್ರಮಾಣ ನಿರ್ಧರಿಸುತ್ತದೆ. ರಾಷ್ಟ್ರದ ಪ್ರಜೆಗಳ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಕೇಂದ್ರ ತನ್ನ ಕೀಳು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ' ಎಂದು ಪಟ್ನಾಯಕ್ ವಾಗ್ದಾಳಿ ನಡೆಸಿದರು.ಮಾತೃಭಾಷೆಯಲ್ಲಿ ಭಾಷಣ: ನವೀನ್ ಪಟ್ನಾಯಕ್ ಅವರಿಗೆ ಒರಿಯಾ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಆಗದು ಎಂಬ ಆರೋಪವನ್ನು ಸುಳ್ಳು ಮಾಡುವ ಉದ್ದೇಶದಿಂದ ಒಡಿಶಾದಿಂದ ಬಂದ ಸಾವಿರಾರು ಜನರನ್ನು ಉದ್ದೇಶಿಸಿ ಮಾತೃಭಾಷೆಯಲ್ಲಿಯೇ ಅವರು ಮಾತನಾಡಿದರು.

`ಒರಿಯಾ ಕಲಿರಿ, ಇಲ್ಲ ಒಡಿಶಾ ತೊರೆಯಿರಿ'

ಈ ನಡುವೆ ಭುವನೇಶ್ವರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ನಿರಂಜನ್ ಪಟ್ನಾಯಕ್ ಅವರು ಸ್ವಾಭಿಮಾನ ರ್‍ಯಾಯಾಲಿ ಬಗ್ಗೆ ಲೇವಡಿ ಮಾಡಿದ್ದಾರೆ. ನವೀನ್ ಪಟ್ನಾಯಕ್ ಮೊದಲು ಒರಿಯಾ ಭಾಷೆಯಲ್ಲಿ ಮಾತನಾಡಲು ಕಲಿಯಲಿ ಎಂದು ಅವರು ಸವಾಲು ಹಾಕಿದ್ದಾರೆ.`ಒರಿಯಾ ಕಲಿಯಿರಿ ಇಲ್ಲವೇ ಒಡಿಶಾ ತೊರೆಯಿರಿ' ಎಂದು ಸವಾಲೆಸೆದ ಅವರು, ಭಾರತದ ಇತಿಹಾಸದಲ್ಲಿ ರಾಜ್ಯದ ಆಡಳಿತ  ಭಾಷೆಯನ್ನು ಓದಲು, ಬರೆಯಲು ಇಲ್ಲವೇ ಮಾತನಾಡಲು ಬಾರದ ಏಕೈಕ ಮುಖ್ಯಮಂತ್ರಿ ಎಂದರೆ ನವೀನ್ ಪಟ್ನಾಯಕ್ ಮಾತ್ರ' ಎಂದು ವ್ಯಂಗ್ಯವಾಡಿದ್ದಾರೆ.14 ವರ್ಷ ಅಧಿಕಾರದಲ್ಲಿದ್ದರೂ ರಾಜ್ಯದ ಆಡಳಿತ ಮತ್ತು ಮಾತೃಭಾಷೆಯಾದ ಒರಿಯಾದಲ್ಲಿ ಮಾತನಾಡಲು ಆಗದ ವ್ಯಕ್ತಿ ದೆಹಲಿಗೆ ತೆರಳಿ ಸ್ವಾಭಿಮಾನ ಜಾಥಾ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಸ್ವಾಭಿಮಾನ ಎಂದರೆ ಆರ್ಥಿಕ ಅಭಿವೃದ್ಧಿ, ರಾಜ್ಯದ ನೆಲ, ಜಲ, ಭಾಷೆ ಮತ್ತು ಭಾಷೆಯನ್ನು ಕಾಪಾಡುವುದು ಎಂದರ್ಥ. ದೆಹಲಿಯಲ್ಲಿ ನಡೆಯುತ್ತಿರುವ ಸ್ವಾಭಿಮಾನ ರ್‍ಯಾಯಾಲಿ ಒಂದು ರಾಜಕೀಯ ಗಿಮಿಕ್ ಎಂದು ದೂರಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.