ಮಂಗಳವಾರ, ಸೆಪ್ಟೆಂಬರ್ 17, 2019
24 °C

ಸ್ವಾಭಿಮಾನ ಶೂನ್ಯ ಕನ್ನಡಿಗರು

Published:
Updated:
ಸ್ವಾಭಿಮಾನ ಶೂನ್ಯ ಕನ್ನಡಿಗರು

ಮೈಸೂರು: ಕನ್ನಡಿಗರಿಗೆ ಭಾಷಾಭಿಮಾನ, ಸ್ವಾಭಿಮಾನ ಎರಡೂ ಇಲ್ಲ. ಆದ್ದರಿಂದಲೇ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ದುರ್ಗತಿ ಒದಗಿದೆ ಎಂದು ನಾಡೋಜ ಡಾ.ದೇ.ಜವರೇಗೌಡ ವಿಷಾದಿಸಿದರು.ನಗರದ ಗಾನಭಾರತಿಯಲ್ಲಿ ಭಾನುವಾರ ನಡೆದ ಸಿರಿಗನ್ನಡ ಪ್ರಕಾಶನ ಸಂಸ್ಥೆಯ ದಶಮಾನೋತ್ಸವ ಸಂಭ್ರಮದಲ್ಲಿ `ಕನ್ನಡ ಸ್ವಾಭಿಮಾನ ಸಮಾವೇಶ~ ಉದ್ಘಾಟಿಸಿ ಅವರು ಮಾತನಾಡಿದರು.ತಮ್ಮ ಮಕ್ಕಳನ್ನು ಪೋಷಕರು ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಪ್ರತಿ ಗ್ರಾಮಗಳಲ್ಲೂ ಕಾನ್ವೆಂಟ್‌ಗಳು ತಲೆ ಎತ್ತುತ್ತಿವೆ. ಇಂಗ್ಲಿಷ್ ಭಾಷೆ ಕಲಿಯುವುದು ತಪ್ಪಲ್ಲ, ಆದರೆ ಕಲಿಕಾ ಮಾಧ್ಯಮ ಎಂದೆಂದೂ ಮಾತೃಭಾಷೆಯಲ್ಲೇ ಇರಬೇಕು. ಇಂದು ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ನಾವೆಲ್ಲರೂ ಹೊಣೆಗಾರರಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮೂಲಕ ಕನ್ನಡ ಭಾಷೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಸಾಹಿತಿ, ಲೇಖಕರು, ಕವಿಗಳು, ಕನ್ನಡಾಭಿಮಾನಿಗಳು ಒಕ್ಕೊರಲಿನಿಂದ ಆಗ್ರಹಿಸಬೇಕಿದೆ. ಈ ಮೂಲಕ ಕನ್ನಡ ಭಾಷೆಯನ್ನು ಉಳಿಸುವ-ಬೆಳೆಸುವ ಕೆಲಸ ಆಗಬೇಕಿದೆ. ಕನ್ನಡ ಸ್ವಾಭಿಮಾನ ಇಲ್ಲದ ಸಂಕೇತವೇ ಇಂಗ್ಲಿಷ್ ಎಂದು ವ್ಯಾಖ್ಯಾನಿಸಿದರು. ಪ್ರತಿಭೆ, ಬುದ್ಧಿಶಕ್ತಿಯನ್ನು ಹೊರಹೊಮ್ಮಿಸಲು ಮಾತೃಭಾಷೆ ಅಗತ್ಯ. ಅನೇಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾಗುಣಿತ, ಅಲ್ಪಪ್ರಾಣ-ಮಹಾಪ್ರಾಣ ಸರಿಯಾಗಿ ಗೊತ್ತಿಲ್ಲ. ಆದ್ದರಿಂದ ಕನ್ನಡ ವ್ಯಾಕರಣ, ಭಾಷೆ ಕಲಿಸುವ ಜವಾಬ್ದಾರಿ ಕನ್ನಡ ಶಿಕ್ಷಕರ ಮೇಲಿದೆ ಎಂದು ಸಲಹೆ ನೀಡಿದರು.`ಕುವೆಂಪು~ ಕುರಿತು ವಿಶೇಷ ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ ಡಾ.ಸಿ.ನಾಗಣ್ಣ, ಕನ್ನಡ ಸಣ್ಣ ಝರಿಯಾಗಿ ಹರಿಯುತ್ತಿತ್ತು. ಕುವೆಂಪು ಕಾಲದಲ್ಲಿ ತುಂಬು ಹೊಳೆಯಾಗಿ, ಪ್ರವಾಹವಾಗಿ ಹರಿಯಿತು. ನವೋದಯ ಸಾಹಿತ್ಯಕ್ಕೆ ಕುವೆಂಪು ನೀಡಿದ ಕೊಡುಗೆ ಅನನ್ಯವಾದುದು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿ, ಆಧ್ಯಾತ್ಮಿಕ ಚಿಂತನೆಯ ನಾಡಿನಲ್ಲಿ ಉತ್ತಮ ಅಭಿವ್ಯಕ್ತಿಯ ಸಾಹಿತ್ಯವನ್ನು ಪ್ರಚುರಪಡಿಸಿದ ಸಂತ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಸಿರಿಗನ್ನಡ ಪ್ರತಿಭಾ ಪರೀಕ್ಷೆ ಯನ್ನು ದಶಮಾನೋತ್ಸವ ವರ್ಷದಲ್ಲಿ ಸಂಘಟಿಸಿ ಯಶಸ್ವಿಗೊಳಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.ಸಾಹಿತಿಗಳಾದ ಡಾ.ಅರವಿಂದ ಮಾಲಗತ್ತಿ, ಡಾ.ಧರಣಿದೇವಿ ಮಾಲಗತ್ತಿ, ಡಾ.ಸಿ.ಪಿ.ಕೃಷ್ಣಕುಮಾರ್, ಶ್ರೀಮತಿ ಹರಿಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಡಾ.ಎಸ್.ಡಿ.ಶಶಿಕಲಾ, ಸಿರಿಗನ್ನಡ ಪ್ರಕಾಶನದ ಚಳ್ಳಕೆರೆ ಯರ‌್ರೀಸ್ವಾಮಿ ಇತರರು ಉಪಸ್ಥಿತರಿದ್ದರು.`ದೇವಸ್ಥಾನಕ್ಕೆ ಹೋದರೂ ಜೈಲಿಗೆ ಹೋಗೋದು ತಪ್ಪಲಿಲ್ಲ~


ರಾಜಕಾರಣಿಗಳಲ್ಲಿ ಸಾಹಿತ್ಯಾಭಿಮಾನ, ಭಾಷಾಭಿಮಾನ ಇಲ್ಲ. ಆದ್ದರಿಂದ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಕಾಣಲು ಸಾಧ್ಯವಾಗುತ್ತಿಲ್ಲ. ಮೌಢ್ಯದಿಂದ ಪಾಪ-ಪರಿಹಾರಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಮೋಸ, ವಂಚನೆಯಿಂದ ಗಳಿಸಿದ ಹಣವನ್ನು ದೇವಸ್ಥಾನಗಳಿಗೆ, ಮಠಗಳಿಗೆ ನೀಡುತ್ತಾರೆ. ಇಂತಹ ಹಣವನ್ನು ತಿರಸ್ಕರಿಸುವ ಬದಲು ಮಠಗಳೂ ಸ್ವೀಕರಿಸುತ್ತವೆ. ರಾಜಕಾರಣಿಗಳು ಅನ್ಯಾಯದಿಂದ ಗಳಿಸಿದ ಹಣವನ್ನು ದೇವಸ್ಥಾನ-ಮಠಗಳಿಗೆ ಎಷ್ಟೇ ನೀಡಿದರೂ ಪಾಪವೂ ಪರಿಹಾರವಾಗುವುದಿಲ್ಲ, ಜೈಲಿಗೆ ಹೋಗುವುದನ್ನೂ ತಪ್ಪಿಸಲು ಸಾಧ್ಯವಿಲ್ಲ ಎಂದು ದೇಜಗೌ ಟೀಕಿಸಿದರು.`ಕರ್ನಾಟಕದವರು~ ಎನ್ನಲು ಸಂಕೋಚ

ಉತ್ತರ ಭಾರತದ ರಾಜ್ಯಗಳಿಗೆ  ಉಪನ್ಯಾಸ ನೀಡಲು ಹೋದಾಗ ನಾವು `ಕರ್ನಾಟಕದವರು~ ಎಂದು ತಿಳಿದು ವಿಶೇಷ ಮನ್ನಣೆ, ಗೌರವ ಆತಿಥ್ಯ ನೀಡುತ್ತಿದ್ದರು. ಇಲ್ಲಿನ ಉತ್ತಮ ಆಡಳಿತ, ಸಾಹಿತ್ಯ, ಸಂಸ್ಕೃತಿಯನ್ನು ಕಂಡು ಬೆಲೆ ಕೊಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ `ಭ್ರಷ್ಟಾಚಾರ~ದಿಂದ ಗುರುತಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ `ನಾವು ಕರ್ನಾಟಕದವರು~ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿ ಇರದೆ, ಮುಜುಗರಕ್ಕೆ ಒಳಗಾಗುವ ದುಃಸ್ಥಿತಿ ಒದಗಿದೆ ಎಂದು ಪ್ರಸಾರಾಂಗ ನಿರ್ದೇಶಕ ನಾಗಣ್ಣ ವಿಷಾದಿಸಿದರು.

Post Comments (+)