ಮಂಗಳವಾರ, ಜನವರಿ 28, 2020
24 °C

ಸ್ವಾಮಿಗಳ ಡೋಂಗಿ ಭವಿಷ್ಯ

– ಶಾರದಮ್ಮ ಕೆ.ಬಿ. ಕಡೂರು. Updated:

ಅಕ್ಷರ ಗಾತ್ರ : | |

‘ಹತ್ತು ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಪತನ’ (ಪ್ರ.ವಾ. ಡಿ.೧) ಎಂಬ ಕೋಡಿಹಳ್ಳಿ ಸ್ವಾಮಿಯ ಭವಿಷ್ಯಕ್ಕೆ ಒಂದು ಪ್ರತಿಕ್ರಿಯೆ. ‘ಭವಿಷ್ಯವು ಅಂಗೈಯಲ್ಲಿಲ್ಲ ಮುಂಗೈ ಬಲದಲ್ಲಿದೆ’ ಎಂಬ ನೆಹರೂ ಅವರ ನುಡಿಗೆ ಅರವತ್ತು ವರ್ಷಗಳೇ ಸಂದಿವೆ. ಆದರೂ ಇವರು ಭವಿಷ್ಯ ಸಾರುತ್ತಲೇ ಇದ್ದಾರೆ. ಇವು ಭವಿಷ್ಯಗಳಲ್ಲ, ‘ರಾಜಕೀಯ ಹುನ್ನಾರ’ಗಳು ಎನ್ನದೇ ವಿಧಿಯಿಲ್ಲ.ಇವರು ೧೯೮೧ರಿಂದಲೂ ಕರ್ನಾಟಕ ಹಾಗೂ ಭಾರತದ ರಾಜಕೀಯ ಭವಿಷ್ಯವನ್ನು ಹೇಳುತ್ತಲೇ ಬಂದಿದ್ದಾರೆ. ದೇವೇಗೌಡರನ್ನು ರಾಮಕೃಷ್ಣ ಹೆಗಡೆ ಅವರ ವಿರುದ್ಧ ಎತ್ತಿ ಕಟ್ಟಿ(ಹೊಗಳಿ)ದಾಗಲೂ ಜನ ಮರುಳಾಗಲಿಲ್ಲ.  ಇವರ ಯಾವ ವಾಣಿಯೂ ಸತ್ಯವಾಗಿಲ್ಲ. ಯಡಿಯೂರಪ್ಪನವರ ಸರ್ಕಾರ ಉರುಳಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಯಾಗುತ್ತಾರೆ ಎಂದು ಹೇಳಿದಾಗ, ಮಹಿಳಾ ರಾಜಕಾರಿಣಿಯೊಬ್ಬರು ಅವರ ಮಠಕ್ಕೆ ಅಲೆದದ್ದೇ ಲಾಭವಾಯಿತು.ಆರು ತಿಂಗಳ ಹಿಂದೆ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ್ಲ ಎಂದು ನುಡಿದದ್ದು ಸುಳ್ಳಾಯ್ತು (ಈಗ ಪ್ಲೇಟ್ ಬದಲಾಗಿದೆ, ಆ ಮಾತು ಬೇರೆ). ಎರಡು ತಿಂಗಳ ಮೊದಲು ಸಿದ್ದರಾಮಯ್ಯನವರ ವಿರುದ್ಧ ೨೦ ಜನ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದರು ಎಂಬ ವದಂತಿ ಹಬ್ಬಿದಾಗ, ಮುಂದಿನ ತಿಂಗಳು ಸರ್ಕಾರ ಉರುಳುತ್ತೆ ಎಂದಿದ್ದರು.

ಅದೂ ಹುಸಿಯಾಯಿತು. ಈಗ ಮೈಲಾರ ಕ್ಷೇತ್ರದ ‘ಅಂಬಲಿ ಹಳಸೀತು, ಕಂಬಳಿ ಬೀಸಿತಲೇ...’ ಎಂಬ ಮೈಲಾರಲಿಂಗನ ಕಾರಣೀಕವನ್ನು ಅಪಹರಿಸಿ ತಮ್ಮದಾಗಿ ಮಾಡಿಕೊಂಡು ಡೋಂಗಿ ಬಿಡುತ್ತಿದ್ದಾರೆ. ಸರ್ಕಾರ, ಸಮಾಜ, ರಾಜಕೀಯ ವಲಯಗಳ ಮಾನಸಿಕ ಸ್ಥಿತಿಯ ಮೇಲೆ ಆಟವಾಡುವ ಇಂಥ  ಸ್ವಾಮೀಜಿಗಳ ಭವಿಷ್ಯವಾಣಿಗೆ ಕಿಮ್ಮತ್ತು ಕೊಡಬಾರದು.ನಮ್ಮ ಕಡೆ– ಕಡೂರು, ತರೀಕೆರೆ, ಬೀರೂರು, ಅಜ್ಜಂಪುರ– ಮಕ್ಕಳು ಉಡಾಫೆ ಮಾತಾಡಿದರೆ, ‘ನೋಡೋ ಕೋಡಿ(ಹಳ್ಳಿ)ಸ್ವಾಮಿ ಆಡಿದಂಗ ಆಡಬೇಡ’ ಎಂಬ ನುಡಿ ಜನಜನಿತವಾಗಿದೆ.

– ಶಾರದಮ್ಮ ಕೆ.ಬಿ. ಕಡೂರು.

ಪ್ರತಿಕ್ರಿಯಿಸಿ (+)