ಸ್ವಾಮಿ ಅರ್ಜಿ ವಜಾ ಚಿದಂಬರಂ ನಿರಾಳ

7

ಸ್ವಾಮಿ ಅರ್ಜಿ ವಜಾ ಚಿದಂಬರಂ ನಿರಾಳ

Published:
Updated:
ಸ್ವಾಮಿ ಅರ್ಜಿ ವಜಾ ಚಿದಂಬರಂ ನಿರಾಳ

ನವದೆಹಲಿ: `2ಜಿ ಹಗರಣ~ದಲ್ಲಿ ಪಿ. ಚಿದಂಬರಂ `ತಲೆದಂಡ~ ಕೇಳಿದ್ದ ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯನ್ನು ದೆಹಲಿ ವಿಶೇಷ ಸಿಬಿಐ ನ್ಯಾಯಾಲಯ ಶನಿವಾರ ವಜಾ ಮಾಡುವುದರೊಂದಿಗೆ ಮನಮೋಹನ್‌ಸಿಂಗ್ ಸರ್ಕಾರ ನಿರಾತಂಕಗೊಂಡಿತು. `ತೂಗು ಕತ್ತಿ~ಯಿಂದ ಪಾರಾದ ಕೇಂದ್ರ ಗೃಹ ಸಚಿವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಯುಪಿಎ ಸರ್ಕಾರ-1ರ ಹಣಕಾಸು ಸಚಿವ ಚಿದಂಬರಂ ಅವರನ್ನು 2ಜಿ ಹಗರಣದಲ್ಲಿ `ಸಹ ಆರೋಪಿ~ ಆಗಿ ಪರಿಗಣಿಸಬೇಕೆಂದು ಕೋರಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ, `ಚಿದಂಬರಂ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿಲ್ಲ. ಮಾಜಿ ದೂರ ಸಂಪರ್ಕ ಸಚಿವ ರಾಜಾ ಜತೆಗೂಡಿ ತರಂಗಾಂತರ ದರ ನಿಗದಿ ಮಾಡಿರುವುದರಿಂದ ವೈಯಕ್ತಿಕವಾಗಿಯಾವುದೇ ಲಾಭ ಪಡೆದಿಲ್ಲ~ ಎಂದು ತೀರ್ಪು ನೀಡಿದ್ದಾರೆ.ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪಿಗೆ ಅಚ್ಚರಿ ವ್ಯಕ್ತಪಡಿಸಿರುವ ಸುಬ್ರಮಣಿಯನ್ ಸ್ವಾಮಿ, ದೆಹಲಿ ಹೈಕೋರ್ಟ್ ಅಥವಾ ನೇರವಾಗಿ ಸುಪ್ರೀಂಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.`ರೇಡಿಯೊ ತರಂಗಾಂತರದ ಮಂಜೂರಾತಿಗೆ ಸಂಬಂಧಿಸಿದಂತೆ ಚಿದಂಬರಂ ಎರಡು ತೀರ್ಮಾನಗಳಲ್ಲಿ ಭಾಗಿಯಾಗಿದ್ದಾರೆ. ಒಂದು- ತರಂಗಾಂತರ ದರವನ್ನು 2001ರ ಮಟ್ಟಕ್ಕೆ ಸೀಮಿತ ಮಾಡಿದ್ದು. ಮತ್ತೊಂದು- ಸ್ವಾನ್ ಟೆಲಿಕಾಂ (ಪಿ) ಹಾಗೂ ಯುನಿಟೆಕ್    ವೈರ್‌ಲೆಸ್ (ತಮಿಳುನಾಡು) ಎರಡು ಕಂಪೆನಿಗಳು ಸೇವೆ ಆರಂಭಿಸುವ ಮೊದಲೇ ಷೇರು ಮಾರಾಟಕ್ಕೆ ಅವಕಾಶ ನೀಡಿದ್ದು. ಇವೆರಡು ಕ್ರಿಮಿನಲ್ ಅಪರಾಧಗಳಲ್ಲ~ ಎಂದು ನ್ಯಾಯಾಧೀಶರು ತಮ್ಮ ಸುದೀರ್ಘವಾದ ತೀರ್ಪಿನಲ್ಲಿ ಹೇಳಿದ್ದಾರೆ.`ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಆರೋಪಗಳು, ಒದಗಿಸಿರುವ ಸಾಕ್ಷ್ಯಗಳ ಆಧಾರದ ಮೇಲೆ 2007-08ರಲ್ಲಿ ನೀಡಲಾದ ಯುಎಎಸ್ ಲೈಸೆನ್ಸ್, ತರಂಗಾಂತರ ಮಂಜೂರಾತಿ ಕುರಿತ ಪ್ರಕ್ರಿಯೆಯಲ್ಲಿ ಹಿಂದಿನ ಹಣಕಾಸು ಸಚಿವರ ಪಾತ್ರವಿದೆ ಎಂದು ಹೇಳಲು ಸಾಧ್ಯವಿಲ್ಲ. ಚಿದಂಬರಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಲಾಭ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ ಎಂದು ರುಜುವಾತುಪಡಿಸಲು ಯಾವುದೇ ದಾಖಲೆ ಇಲ್ಲ~ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.`ಮಾಜಿ ದೂರ ಸಂಪರ್ಕ ಸಚಿವ ರಾಜಾ ಮತ್ತು ಅವರ ಇಲಾಖೆ ಅಧಿಕಾರಿಗಳು ತಮಗೆ ಬೇಕಾದ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಅಂತಿಮ ಗಡುವನ್ನು ಕಡಿತಗೊಳಿಸುವ ಏಕಪಕ್ಷೀಯ ತೀರ್ಮಾನ ಮಾಡಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಿ ಅನುಭವ ಹೊಂದಿರದ ಅನರ್ಹ ಸಂಸ್ಥೆಗಳಿಗೆ ಯುಎಎಸ್ ಲೈಸೆನ್ಸ್ ಮತ್ತು ತರಂಗಾಂತರ ಹಂಚಿಕೆ ಮಾಡಿದ್ದಾರೆ~ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

2ಜಿ ಪರವಾನಗಿ ಪ್ರವೇಶ ಶುಲ್ಕ ಅಥವಾ ತರಂಗಾಂತರ ದರ ಪರಿಷ್ಕರಣೆ ಮಾಡದಿರುವ ರಾಜಾ ಅವರ ತೀರ್ಮಾನಕ್ಕೆ ಚಿದಂಬರಂ ಒಪ್ಪಿಗೆ ನೀಡಿರಬಹುದು.ಆದರೆ, ಈ ಒಪ್ಪಿಗೆ ಕ್ರಿಮಿನಲ್ ಅಪರಾಧವಾಗುವುದಿಲ್ಲ. ಹಿಂದಿನ ಹಣಕಾಸು ಸಚಿವರು ತರಂಗಾಂತರ ದರವನ್ನು 2001ರ ಮಟ್ಟಕ್ಕೆ ಮಿತಿಗೊಳಿಸುವ ರಾಜಾ ಅವರ ತೀರ್ಮಾನವನ್ನು ಒಪ್ಪಿದ್ದಾರೆ. ಎರಡು ಕಂಪೆನಿಗಳ ಷೇರು ವಿಭಜನೆಗೆ ಸಮ್ಮತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿದಂಬರಂ ವಿಚಾರಣೆಗೆ ಅನುಮತಿ ನೀಡಬೇಕು ಎಂಬ ಅರ್ಜಿದಾರರ ವಾದವನ್ನು ನ್ಯಾಯಾಧೀಶರು ತಳ್ಳಿಹಾಕಿದ್ದಾರೆ.ಕೇಂದ್ರ ಸಚಿವ ಸಂಪುಟ 2003ರ ಅ.31ರಂದು ತರಂಗಾಂತರ ದರವನ್ನು ಹಣಕಾಸು ಸಚಿವರು ಮತ್ತು ದೂರ ಸಂಪರ್ಕ ಸಚಿವರು ಜತೆಗೂಡಿ ನಿರ್ಧರಿಸಬೇಕು ಎಂಬ ಸೂಚನೆ ನೀಡಿತ್ತು. ಅದೇ ವರ್ಷ ಜ.30, ಮೇ 29, ಜೂನ್ 12 ಮತ್ತು ಜುಲೈ 4ರಂದು ಚಿದಂಬರಂ ಮತ್ತು ರಾಜಾ ಭೇಟಿ ಮಾಡಿ ತರಂಗಾಂತರ ದರ ಕುರಿತು ಸಮಾಲೋಚಿಸಿ ತೀರ್ಮಾನ ಮಾಡಿದ್ದರು. ಈ ತೀರ್ಮಾನವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಗಮನಕ್ಕೂ ತಂದಿದ್ದರು. ಚಿದಂಬರಂ ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರು ಕೇಳಿದ್ದರು.ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ `ಎಟಿಸಲಾಟ್~ ಮತ್ತು ಟೆಲಿನಾರ್ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ ಅದನ್ನು ಚಿದಂಬರಂ ಬಹಿರಂಗ ಮಾಡದೆ `ವಿಶ್ವಾಸ ದ್ರೋಹ~ ಎಸಗಿದ್ದಾರೆ. ಈ ಕಂಪೆನಿಗಳು ಷೇರು ಮಾರಾಟ ಮಾಡಲು ಅವಕಾಶ ನೀಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಆದರೆ, ನ್ಯಾಯಾಧೀಶರು ಈ ವಾದವನ್ನು ಮಾನ್ಯ ಮಾಡಿಲ್ಲ.ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯೊಬ್ಬರು ಕೈಗೊಳ್ಳುವ ನಿರ್ಧಾರದಿಂದ ಬೇರೆಯವರಿಗೆ ಲಾಭವಾದರೆ ಅಥವಾ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೆ, ಅದೇ ಕಾರಣಕ್ಕೆ ಅವರು ಕೈಗೊಂಡ ತೀರ್ಮಾನವನ್ನು ಕ್ರಿಮಿನಲ್ ಅಪರಾಧ ಎನ್ನಲಾಗದು. ಸಭೆಗಳಲ್ಲಿ ಭಾಗವಹಿಸುವುದು ಅಥವಾ ತೀರ್ಮಾನದಲ್ಲಿ ಭಾಗಿಯಾಗುವುದನ್ನು ತಪ್ಪು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸೈನಿ ವಿಶ್ಲೇಷಿಸಿದ್ದಾರೆ.ತೀರ್ಮಾನದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ. ಅಮಾಯಕವಾಗಿ ಮಾಡುವ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪ್ರಬಲವಾದ ಸಾಕ್ಷ್ಯಾಧಾರಗಳಿಲ್ಲದೆ ತಪ್ಪಿತಸ್ಥರು ಎಂದು ಹೇಳಲು ಆಗುವುದಿಲ್ಲ. ಸ್ವಾಮಿ ಅವರ ಪ್ರಕರಣದಲ್ಲಿ ಇಂಥ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ನ್ಯಾಯಾಲಯ ಹೇಳಿದೆ.ಸಿಬಿಐ ನ್ಯಾಯಾಲಯದ ತೀರ್ಪಿನಿಂದ ಯುಪಿಎ ಸರ್ಕಾರ ನಿರಾಳವಾಗಿದೆ. ಸಿಬಿಐ ನ್ಯಾಯಾಲಯದ ತೀರ್ಪಿಗಾಗಿ ತುದಿಗಾಲಲ್ಲಿ ನಿಂತಿದ್ದ ಚಿದಂಬರಂ ಕೂಡಾ ಹರ್ಷಚಿತ್ತರಾಗಿ ಮದುರೆ ಹಾದಿ ಹಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry