ಗುರುವಾರ , ಜನವರಿ 23, 2020
18 °C

ಸ್ವಾಮಿ ವಿವೇಕಾನಂದ ಯುವಕರಿಗೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಯುವಕರಿಗೆ ಸ್ವಾಮಿ ವಿವೇಕಾನಂದರು ಮಾದರಿ. ಈ ವೀರ ಸನ್ಯಾಸಿಯ ತತ್ವಗಳನ್ನು, ನಾವು ಆಚರಿಸಿದಾಗ ಜಯಂತ್ಯುತ್ಸವ ಆಚರಣೆ ಸಾರ್ಥಕವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಅಭಿಪ್ರಾಯಪಟ್ಟರು.ನಗರದ ಕನ್ನಡ ಭವನದಲ್ಲಿ ಗುರುವಾರ `ಸ್ವಾಮಿ ವಿವೇಕಾನಂದ ಜಾಗೃತಿ ಸಂಘ~ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬ್ರಾಹ್ಮಣರ ಜ್ಞಾನ, ಕ್ಷತ್ರಿಯರ ಸಂಸ್ಕೃತಿ, ವೈಶ್ಯರ ದಕ್ಷತೆ, ಶೂದ್ರರ ಸಮಾನತೆಯ ಗುಣಗಳನ್ನು ಅಳವಡಿಸಿಕೊಂಡು ಸರ್ಕಾರ ನಡೆಸಬೇಕು ಎನ್ನುವ ವಿವೇಕಾನಂದರ ಮಾತು ಅರ್ಥಪೂರ್ಣವಾದದ್ದು. ಜಗತ್ತಿನಲ್ಲಿ ಧರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪಿಸಿ ಅವರು ವಿಶ್ವ ಸಂಚಾರ ಮಾಡಿದ್ದಾರೆ ಎಂದು  ವಿವರಿಸಿದರು.ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಿವಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅದ್ದೂರಿಯಾಗಿ ಗಣ್ಯರ ಜಯಂತ್ಯುತ್ಸವ ಆಚರಿಸುವ ಇಂದಿನ ಸಂದರ್ಭದಲ್ಲಿ ಈ ಸಂಘ ಸಾಧಕರನ್ನು ಸನ್ಮಾನಿಸಿರುವುದು ವಿಶೇಷ. ಸನ್ಮಾನಿತರು ಸಮಾಜದಲ್ಲಿ ಮತ್ತಷ್ಟು ಉತ್ಸಾಹದಿಂದ ಕೆಲಸ ನಿರ್ವಹಿಸಲಿ ಎಂದು ಆಶಿಸಿದರು.

 

ವಿದ್ಯಾಸಾಗರ ಕುಲಕರ್ಣಿ ಮಾತನಾಡಿ, ಸ್ವಾಮಿ ವಿವೇಕಾನಂದರು  ಸಹೋದರ- ಸಹೋದರಿ ಎಂಬ ಶಬ್ದದ ಬಳಕೆ ಮೂಲಕ ಪಾಶ್ಚಾತ್ಯರಿಗೆ ಹಿಂದೂ ಸಮಾಜದ ಔದಾರ್ಯವನ್ನು ತಿಳಿಸಿದ ರಾಯಭಾರಿಯಾಗಿದ್ದಾರೆ. ಹಿಂದೂ ಧರ್ಮದಲ್ಲಿದ್ದ ಸಾಮಾಜಿಕ ಮೌಢ್ಯವನ್ನು ಹೊಡೆದೋಡಿಸಲು ಶ್ರಮಿಸಿದ ವ್ಯಕ್ತಿ ಎಂದರು.ಸನ್ಮಾನಿತ ಶರಣಪ್ಪ ತಳವಾರ ಮಾತನಾಡಿ ಯುವಕರು ನಿರ್ಭಯದಿಂದ ಭ್ರಷ್ಟಾಚಾರ ಹೋಗಲಾಡಿಸಬೇಕು. ಜಾತಿಯ ವಿಷ ಬೀಜವನ್ನು ಕಿತ್ತೊಗೆಯಲು ಶ್ರಮಿಸಬೇಕು ಎಂದು ಕರೆನೀಡಿದರು.ಉದ್ಯಮಿ ಬಿ.ಜಿ. ಪಾಟೀಲ, ಎಂ.ಎಸ್.ಐ.ಎಲ್. ಅಧ್ಯಕ್ಷ ವಿಕ್ರಮ ಪಾಟೀಲ, ಪತ್ರಕರ್ತ ಕಾಂತಾಚಾರ್ಯ ಮಣೂರ, ಸಾಹಿತಿ ವೀರಣ್ಣ ದಂಡೆ ಮುಂತಾದವರು ಮಾತನಾಡಿದರು.ಪತ್ರಕರ್ತ ಕಾಂತಾಚಾರ್ಯ ಮಣೂರ, ರಾಯಚೂರಿನ ರವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಎ. ಪಾಪರೆಡ್ಡಿ, ಉದ್ಯಮಿ ಬಿ.ಜಿ. ಪಾಟೀಲ, ಶರಣಪ್ಪ ತಳವಾರ ಚಿಂಚೋಳಿ, ಸಾಹಿತಿ ವೀರಣ್ಣ ದಂಡೆ, ಪತ್ರಕರ್ತ ಡಿ. ಶಿವಲಿಂಗಪ್ಪ, ಸಮಾಜ ಸೇವಕ  ಬಸವಂತರಾವ ಸೋನೆಗಾರ ಮಾಸ್ತರ, ಛಾಯಾಚಿತ್ರಗ್ರಾಹಕ ಭವಾನಿ ಸಿಂಗ್ ಠಾಕೂರ, ಮಾಧ್ಯಮದ ರಾಜೇಶ್ವರಿ, ಕಲಾವಿದೆ ಲಕ್ಷ್ಮಿ ಎಂ. ಕುಲಕರ್ಣಿ, ಸಂಗೀತಗಾರ್ತಿ ಗೀತಾ ಗಾಯತ್ರಿ ಎಸ್. ಚಕ್ರವರ್ತಿ ಅವರನ್ನು ವಿವೇಕಾನಂದ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಸಂಘದ ಅಧ್ಯಕ್ಷೆ ಶಕುಂತಲಾ ಕೆ. ಆಚಾರ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎ.ರೆಡ್ಡಿ, ರಮೇಶ ಆರ್. ಹೊಸಮನಿ, ಉಪಾಧ್ಯಕ್ಷ ಗಜಾನನ ಎ. ದೇಶಪಾಂಡೆ, ನಾಗೆಂದ್ರ ಎಸ್. ಬೊಮ್ಮನಳ್ಳಿ ಮತ್ತಿತರರು ಇದ್ದರು.   

 

ಪ್ರತಿಕ್ರಿಯಿಸಿ (+)