ಶನಿವಾರ, ಫೆಬ್ರವರಿ 27, 2021
31 °C
₹7 ಲಕ್ಷ ಸಾಲದಲ್ಲಿ ಮರುಪಾವತಿಯಾಗಿದ್ದು ₹ 2 ಲಕ್ಷ ಮಾತ್ರ

ಸ್ವಾಮೀಜಿಗೆ ಸಾಲ ಕೊಟ್ಟವ ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಮೀಜಿಗೆ ಸಾಲ ಕೊಟ್ಟವ ಆತ್ಮಹತ್ಯೆಗೆ ಯತ್ನ

ಹರಿಹರ: ಪಂಚಮಸಾಲಿ ಮಠದ ಉಚ್ಚಾಟಿತ ಜಗದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ ಅವರಿಗೆ ನೀಡಿದ ಸಾಲದ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ನೊಂದ ವ್ಯಕ್ತಿಯೊಬ್ಬರು ನಗರದ ಹೊರವಲಯದ ಮಠದ ಆವರಣದಲ್ಲಿ ಸ್ವಾಮೀಜಿ ಎದುರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ನಿವಾಸಿ ಜಗದೀಶಗೌಡ ಪಾಟೀಲ್ (58) ಆತ್ಮಹತ್ಯೆಗೆ ಯತ್ನಿಸಿದವರು. ಜಗದೀಶಗೌಡ ಅವರು ಸ್ವಾಮೀಜಿಗೆ ₹ 7 ಲಕ್ಷ ಸಾಲ ನೀಡಿದ್ದರು. ಅಲ್ಲದೇ, ₹ 52 ಲಕ್ಷ ಗಣಿ ವ್ಯವಹಾರದಲ್ಲಿ ಸ್ವಾಮೀಜಿ ಮಧ್ಯಸ್ಥಿಕೆ ವಹಿಸಿದ್ದರು.ಅವರ ವೈಯಕ್ತಿಕ ಸಾಲ ₹7 ಲಕ್ಷದಲ್ಲಿ ₹ 2 ಲಕ್ಷ ಮರುಪಾವತಿಯಾಗಿದ್ದು, ಉಳಿದ ₹ 5 ಲಕ್ಷ ಹಾಗೂ ಮಧ್ಯಸ್ಥಿಕೆಯ ಹಣ ₹ 52 ಲಕ್ಷ ಹಿಂಪಡೆಯುವ ವಿಷಯದಲ್ಲಿ ಮೂರು ವರ್ಷ ಅವಧಿಯಲ್ಲಿ ಹಲವು ಬಾರಿ ಮಠಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಮಠಕ್ಕೆ ಆಗಮಿಸಿದ ಜಗದೀಶ್, ಸ್ವಾಮೀಜಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸ್ವಾಮೀಜಿ ಜನವರಿ ೩೦ರವರೆಗೆ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಒತ್ತಡ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಕಾರಣ ತಕ್ಷಣ ಹಣ ನೀಡುವಂತೆ ಜಗದೀಶ್ ಆಗ್ರಹಿಸಿದ್ದಾರೆ.ಒತ್ತಡಕ್ಕೆ ಸ್ವಾಮೀಜಿ ಸ್ಪಂದಿಸದ ಹಿನ್ನೆಲೆಯಲ್ಲಿ ಜಗದೀಶ್‌ ಗೌಡ ಸ್ವಾಮೀಜಿ ಎದುರೇ ವಿಷ ಸೇವ4ನೆ ಮಾಡಿದ್ದಾರೆ. ಅಲ್ಲಿದ್ದ ಅವರ ಸ್ನೇಹಿತರು ವಿಷದ ಬಾಟಲಿ ಕಸಿದುಕೊಂಡು, ಅಂಬುಲೆನ್ಸ್ ಮೂಲಕ ಕೂಡಲೇ, ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಸರ್ಕಾರಿ ಆಸ್ಪತೆಗೆ ವರ್ಗಾವಣೆ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಸೇವಿಸಿ ವ್ಯಕ್ತಿ ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂಬ ಮಾಹಿತಿ ಮೇಲೆ ಆಸ್ಪತ್ರೆಗೆ ಬಂದಾಗ, ಪಂಚಮಸಾಲಿ ಮಠದಲ್ಲಿ ನಡೆದ ಘಟನೆ ಎಂಬುದು ಗೊತ್ತಾಯಿತು. ವಿಷಸೇವನೆ ಮಾಡಿದ ವ್ಯಕ್ತಿಯ ಹೇಳಿಕೆ ಹಾಗೂ ತನಿಖೆಯ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.