ಸ್ವಾವಲಂಬನಾ ಪಿಂಚಣಿಗೆ ವಿರೋಧ

7

ಸ್ವಾವಲಂಬನಾ ಪಿಂಚಣಿಗೆ ವಿರೋಧ

Published:
Updated:

ಮಂಡ್ಯ: ಅಂಗನವಾಡಿ ನೌಕರರಿಗೆ ಸ್ವಾವಲಂಬನಾ ಪಿಂಚಣಿ ಯೋಜನೆ ಜಾರಿಗೊಳಿಸುವುದನ್ನು ಕೈಬಿಡಬೇಕು ಎಂದು ಆಗ್ರಹಪಡಿಸಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಉದ್ದೇಶಿತ ಯೋಜನೆಯ ವಿವರಗಳ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ಮಾನವ ಸರಪಳಿಯನ್ನು ಆಯೋಜಿಸಿ, ಸರ್ಕಾರದ ಗಮನಸೆಳೆದರು. ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೂ ಮೆರವಣಿಗೆ ತೆರಳಿ ಅಲ್ಲಿ ಧರಣಿ ನಡೆಸಿದರು.ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಪಂ ಸಿಇಒ ಜಯರಾಂ ಅವರು, ಮನವಿಯನ್ನು ಕಳುಹಿಸ ಲಿದ್ದು, ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಉದ್ದೇಶಿತ ಪಿಂಚಣಿಗೆ ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸಿ ಈಗಾಗಲೇ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ಜೊತೆಗೂ ಚರ್ಚಿಸಲಾಗಿದೆ. ಸಭೆ ನಡೆಸಿದ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ. ಆದರೂ, ಯೋಜನೆಗೆ ಒತ್ತಾಯದಿಂದ ಸಹಿ ಪಡೆಯಲಾಗುತ್ತಿದೆ ಎಂದು ದೂರಿದರು.ಈಗ ಇಲಾಖೆಯಿಂದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ಸ್ವಾವಲಂಬನಾ ನ್ಯಾಷನಲ್ ಪೆನ್ಷನ್ ಸಿಸ್ಟಮ್ ಯೋಜನೆಯ ಫಾರಂ ಅನ್ನು ನೀಡಿ ಸಹಿ ಪಡೆಯಲಾಗುತ್ತಿದೆ. ಆದರೆ, ಸಂಘಟನೆಗಳ ಜೊತೆಗೆ ಚರ್ಚಿಸದೇ ಹೀಗೆ ಸಹಿ ಪಡೆಯುವುದಕ್ಕೆ ವಿರೋಧವಿದೆ ಎಂದು ಖಂಡಿಸಿದರು. ಉದ್ದೇಶಿತ ಯೋಜನೆಯಡಿ ನಿಧಿಯು ಷೇರು ಮಾರುಕಟ್ಟೆಯ ಏರಿಳಿತವನ್ನು ಆಧರಿಸಿದೆ. ಹೀಗಾಗಿ, ಆದಾಯ ಹಾಗೂ ಅಸಲು, ಬಡ್ಡಿ ಪ್ರಮಾಣ ಕುರಿತು ಯಾವುದೇ ಭರವಸೆಯೂ ಇಲ್ಲವಾಗಿದೆ ಎಂದರು.ಬಿಜೆಪಿ ಸರ್ಕಾರ ಇಂಥ ಯೋಜನೆಯ ಬದಲಾಗಿದೆ ಪರಿಹಾರ ಮತ್ತು ನಿವೃತ್ತಿ ವೇತನ ಸೌಲಭ್ಯವನ್ನು ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ. ಇದು, ಅಂಗನವಾಡಿ ಕಾರ್ಯಕರ್ತೆಯರಿಗೆ ಪರಿಹಾರ ನೀಡುವುದಿಲ್ಲ ಎಂದು ಒತ್ತಾಯಿಸಿದರು. ಈ ಕೂಡಲೇ ಒತ್ತಾಯ ಪೂರ್ವಕವಾಗಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಬಲವಂತವಾಗಿ ಸಹಿ ಪಡೆಯುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಯೋಜನೆಯನ್ನು ವಿರೋಧಿಸಿ ಮಾರ್ಚ್‌ನಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾರಾಜ್, ತಾಲ್ಲೂಕು ಘಟಕಗಳ ಪದಾಧಿಕಾರಿಗಳಾದ ಜಯಲಕ್ಷ್ಮಿ, ವಿಜಯಲಕ್ಷ್ಮಿ, ತನುಜಾ, ಲತಾ, ಕಮಲಾ ಮತ್ತಿತರರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry