ಸ್ವಾವಲಂಬಿ ಜೀವನ: ಮಹಿಳೆಯರಿಗೆ ಸಲಹೆ

7

ಸ್ವಾವಲಂಬಿ ಜೀವನ: ಮಹಿಳೆಯರಿಗೆ ಸಲಹೆ

Published:
Updated:

ಬಳ್ಳಾರಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಸ್ವಾವಲಂಬಿಯಾಗಿ ಜೀವನ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆ ಸ್ವಯಂ ಉದ್ಯೋಗದತ್ತ ಆಸಕ್ತಿ ತಾಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸಲಹೆ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಗುರುವಾರ ನಗರದ ಬಸವ ಭವನದಲ್ಲಿ ಏರ್ಪಡಿಸಲಾಗಿದ್ದ 2001 ಸ್ವ–ಸಹಾಯ ಸಂಘಗಳ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಿಳೆಯು ಸ್ವ–ಸಹಾಯ ಸಂಘಗಳಲ್ಲಿ ಶ್ರಮಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರನಿಸುತ್ತಿದ್ದು, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ ಎಂದು ಅವರು ಶ್ಲಾಘಿಸಿದರು.ಕೇವಲ ಐಟಿ– ಬಿಟಿ ಅಭಿವೃದ್ಧಿಗೆ ಮಹತ್ವ ನೀಡುತ್ತಿರುವ ರಾಜ್ಯ ಸರ್ಕಾರ, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಗಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ಮಹಿಳೆಯರಲ್ಲಿ ಸ್ವಾವಲಂಬನೆ ರೂಢಿಸಿಕೊಳ್ಳಲು ಯೋಜನೆ ಅಡಿ ರೂಪಿಸಲಾಗಿರುವ ಸ್ವಸಹಾಯ ಸಂಘಗಳು ಸಹಕಾರಿಯಾಗಿವೆ ಎಂದು ಶಾಸಕ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಿದರು.

ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಇದೇ ಸಂದರ್ಭ ಸಹಾಯಧನ, ಸ್ಮಾರ್ಟ್‌ ಕಾರ್ಡ್, ಕೃಷಿ ಉಪಕರಣ ವಿತರಿಸಲಾಯಿತು.

ಸಂಸದೆ ಜೆ.ಶಾಂತಾ, ಶಾಸಕ ಮೃತ್ಯುಂಜಯ ಜಿನಗಾ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಎಂ.ಜಿ. ಭಟ್‌, ಜಿ.ಪಂ. ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ, ಸಿಇಒ ಮಂಜುನಾಥ ನಾಯ್ಕ, ಪೌರಾಯುಕ್ತ ಚಿಕ್ಕಣ್ಣ, ಉದ್ಯಮಿ ಸುರೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ನಗರದ ಪ್ರಮುಖ ರಸ್ತೆಗಳ ಗುಂಟ ಮೆರವಣಿಗೆಯಲ್ಲಿ ಕರೆತರಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry