ಸ್ವಾವಲಂಬಿ ಬದುಕಿನ ಹೆಜ್ಜೆಗಳು

ಶುಕ್ರವಾರ, ಮಾರ್ಚ್ 22, 2019
21 °C

ಸ್ವಾವಲಂಬಿ ಬದುಕಿನ ಹೆಜ್ಜೆಗಳು

Published:
Updated:

ಅವಲಹಳ್ಳಿಯಲ್ಲಿರುವ ಅಬೀದಾ ಉನ್ನೀಸಾ ತುಂಬಾ ಕಷ್ಟದಲ್ಲಿದ್ದವರು. ಒಂಬತ್ತು ವರ್ಷದ ಹಿಂದೆ ಸಣ್ಣ ವ್ಯಾಪಾರ ಶುರು ಮಾಡಿದರು. ಆದರೆ ಬಡತನ ಯಾವುದನ್ನೂ ಮುಂದುವರಿಯಲು ಬಿಡಲಿಲ್ಲ. ಸಾಲ ತೆಗೆದುಕೊಳ್ಳಲು ಯಾವುದೇ ದಾಖಲೆಗಳಿರಲಿಲ್ಲ. ಆಗ ಅವರಿಗೆ ನೆರವಾಗಿದ್ದು ಸಣ್ಣ ಆರ್ಥಿಕ ಸಾಲ ನೀಡುವ ಸಂಸ್ಥೆ. ಒಂಬತ್ತು ವರ್ಷದಿಂದ ಸಣ್ಣ ಮಟ್ಟದ ಸಾಲ ತೆಗೆದುಕೊಂಡು ಇದೀಗ ಹಣ್ಣು, ತರಕಾರಿ ಮಳಿಗೆ ಇಟ್ಟುಕೊಂಡಿದ್ದಾರೆ.

ಸುಧಾ ಅವರದ್ದೂ ಇಂಥದ್ದೇ ಕಥೆ. ಅಂಜನಾಪುರದಲ್ಲಿರುವ ಸುಧಾ ಪತಿ ಆಟೊ ಓಡಿಸುತ್ತಿದ್ದರು. ದಿನಕ್ಕೆ ಸಂಪಾದಿಸುತ್ತಿದ್ದ ನೂರು ರೂಪಾಯಿ ಎಲ್ಲಿಗೂ ಸಾಲುತ್ತಿರಲಿಲ್ಲ. ಆಗ 20 ಜನರಿದ್ದ ಸಂಘದ ಮೂಲಕ ಆರ್ಥಿಕ ನೆರವು ನೀಡುವ ಸಂಸ್ಥೆಯೊಂದು ಸಾಲ ನೀಡಿತು. ಈಗ ಅವರು ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತಿದ್ದಾರೆ. ಎರಡು ಲಾರಿ ಖರೀದಿಸುವುದರೊಂದಿಗೆ ಹೊಲಿಗೆ ಯಂತ್ರ ಕೊಂಡುಕೊಂಡು ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ನೆಲೆಯನ್ನೂ ಕಂಡುಕೊಂಡಿದ್ದಾರೆ.ಇಂಥದ್ದೇ ಹಲವು ಉದಾಹರಣೆಗಳು ಕಂಡುಬಂದಿದ್ದು ‘ಗ್ರಾಮೀಣ ಕೂಟ’ದಲ್ಲಿ. ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವ ಉದ್ದೇಶದಿಂದ ಹುಟ್ಟಿಕೊಂಡ ಗ್ರಾಮೀಣ ಕೂಟದಲ್ಲಿ ಮಹಿಳೆಯರ ಸ್ವಾವಲಂಬನೆ ಬದುಕಿನ ತುಡಿತವೂ ಎದ್ದು ಕಾಣುತ್ತದೆ. ಹೆಚ್ಚು ಶಿಕ್ಷಣ ಪಡೆಯದ, ಕಡು ಬಡತನದಲ್ಲಿರುವ, ಕಡಿಮೆ ಆದಾಯದ ಕುಟುಂಬಗಳಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಸ್ವಾವಲಂಬಿಗಳಾಗುವ ಕನಸು ಕಟ್ಟಿಕೊಂಡಿರುವ ಮಹಿಳೆಯರಿಗೆ ನೆರವಾಗಿ ಅವರ ಜೀವನಮಟ್ಟವನ್ನು ಸುಧಾರಿಸಲು ಬೆಂಗಳೂರಿನ ಜೆ.ಪಿ ನಗರದಲ್ಲಿ 1999ರಲ್ಲಿ ಹುಟ್ಟಿಕೊಂಡಿದ್ದು ಈ ಗ್ರಾಮೀಣ ಫೈನಾನ್ಶಿಯಲ್ ಸರ್ವೀಸ್‌‌ ಸಂಸ್ಥೆ.ಬಾಂಗ್ಲಾದೇಶದ ಹಳ್ಳಿಯೊಂದರಲ್ಲಿ ಸಣ್ಣ ಪ್ರಮಾಣದ ಸಾಲ ಹಳ್ಳಿಗರ ಜೀವನವನ್ನೇ ಬದಲಾಯಿಸಿದ ರೀತಿಯನ್ನು ತೋರಿಸಿಕೊಟ್ಟ ‘ಗೀವ್ ಅಸ್ ಎ ಕ್ರೆಡಿಟ್’ ಪುಸ್ತಕದಿಂದ ಪ್ರೇರೇಪಿತರಾಗಿ ವಿನತಾ ಎಂ. ರೆಡ್ಡಿ ಅವರು ಈ ಸಂಸ್ಥೆ ಆರಂಭಿಸಿದ್ದು. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದ 49 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಪರಿಸ್ಥಿತಿಗಳಿಗೆ ತಲ್ಲಣಿಸದೆ, ತಮಗೆ ತೋಚಿದ ಉದ್ಯಮ ಆರಂಭಿಸಿ ತಮ್ಮ ಬದುಕನ್ನು, ಜೊತೆಗೆ ಕುಟುಂಬವನ್ನೂ ಮುನ್ನಡೆಸಿದ ಅದೆಷ್ಟೋ ಮಹಿಳೆಯರ ಕಥೆ ಇಲ್ಲಿದೆ. ಊದು ಬತ್ತಿ ಹೊಸೆಯು ವುದು, ಟೈಲರಿಂಗ್, ಚಿಲ್ಲರೆ ಅಂಗಡಿ, ತರಕಾರಿ ಮಾರಾಟ, ಕೃಷಿ ಚಟುವಟಿಕೆಗಳು, ರೇಷ್ಮೆ ಕೃಷಿ ಹೀಗೆ ಇನ್ನಿತರ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಂಡು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ ಮಹಿಳೆಯರ ಯಶಸ್ಸೂ ಇಲ್ಲಿ ಕಾಣುತ್ತದೆ. ಸ್ವಸಹಾಯ ಗುಂಪುಗಳನ್ನು ಕಟ್ಟಿಕೊಂಡು ಆ ಮೂಲಕ ತಮ್ಮನ್ನು ತಾವು ಆರ್ಥಿಕವಾಗಿ ಸದೃಢಗೊಳಿಸಿಕೊಳ್ಳುವ ಅವರ ಗಟ್ಟಿ ನಿಲುವೂ ಅಚ್ಚರಿ ಮೂಡಿಸುತ್ತದೆ. ಹದಿನೈದು ವರ್ಷಗಳಿಂದ ಆರೂವರೆ ಲಕ್ಷಕ್ಕೂ ಹೆಚ್ಚಿನ ಮಂದಿ ಇದರಿಂದ ಅನುಕೂಲ ಪಡೆದುಕೊಂಡಿದ್ದಾರೆ.ಮಹಿಳೆಯರಿಗಷ್ಟೇ ಸಾಲ

‘ಮಹಿಳೆಯರಿಗಷ್ಟೇ ಇಲ್ಲಿ ಸಾಲ ಲಭ್ಯ. ಏಕೆಂದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬದ್ಧತೆ ಹೆಚ್ಚು. ಬೇಜವಾಬ್ದಾರಿತನದಿಂದ ನಡೆದುಕೊಳ್ಳುವುದಿಲ್ಲ. ಆದ್ದರಿಂದ ಮಹಿಳೆಯರಿಗೆ ಮಾತ್ರ ಹಣ ನೀಡಲಾಗುತ್ತದೆ. ಇದರಿಂದ ಇಡೀ ಕುಟುಂಬವನ್ನೂ ಅವರು ನಿರ್ವಹಿಸುತ್ತಾರೆ ಎಂಬ ನಂಬಿಕೆ ನಮ್ಮದು. ರಿಸರ್ವ್‌ ಬ್ಯಾಂಕ್‌ ನಿಯಮದ ಪ್ರಕಾರ ಬಡ್ಡಿ ಇರುತ್ತದೆ. ಕೊಟ್ಟ ಹಣ, ಶ್ರಮ ಎರಡರ ಬೆಲೆ ತಿಳಿಯಬೇಕಾದರೆ ಬಡ್ಡಿ ಇರಬೇಕು. ಸುಮ್ಮನೆ ಸಿಕ್ಕರೆ ಮೌಲ್ಯ ತಿಳಿಯುವುದಿಲ್ಲ’ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕೆ ಕೃಷ್ಣ. ಐದು ಸಾವಿರದಿಂದ ಆರಂಭಿಸಿ 35 ಸಾವಿರದವರೆಗೂ ಸಾಲ ಲಭ್ಯ. 12 ರಿಂದ 36 ತಿಂಗಳುಗಳ ಕಾಲಾವಕಾಶವಿರುತ್ತದೆ. ಗ್ರಾಮ ಮುನ್ನಡೆಸಲು ‘ಜಾಗೃತಿ’

ಆರ್ಥಿಕವಾಗಿ ಅಭಿವೃದ್ಧಿಯಾದರೆ ಸಾಲದು, ಅವರ ಜೀನವ ಶೈಲಿಯೂ ಬದಲಾಗಬೇಕು ಎಂಬ ಉದ್ದೇಶದೊಂದಿಗೆ ಮಹಿಳೆಯರಿಗೆ ಆರೋಗ್ಯ, ಶಿಕ್ಷಣದ ಮಹತ್ವ, ಮೂಲ ಸೌಕರ್ಯಗಳ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯವೂ ನಡೆಯುತ್ತಿದೆ. ತಿಂಗಳಿಗೊಮ್ಮೆ ಸದಸ್ಯರನ್ನು ಸಭೆ ಸೇರಿಸಿ ಚರ್ಚಿಸಲಾಗುತ್ತದೆ. ಮಹಿಳೆಯರಿಗೆಂದೇ ಕೌಶಲ ಅಭಿವೃದ್ಧಿ ತರಬೇತಿ, ವ್ಯಾಪಾರೋದ್ಯಮದ ಒಳ ಹೊರಗು, ಕಾನೂನು ಹಾಗೂ ಆರ್ಥಿಕ ಶಿಕ್ಷಣ, ಕುಟುಂಬ ಯೋಜನೆ, ಸಾಮಾನ್ಯ ಆರೋಗ್ಯ ಜ್ಞಾನ, ಪೌಷ್ಟಿಕಾಂಶದ ಪ್ರಾಮುಖ್ಯ, ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಔಷಧೀಯ ಸೇವೆ, ಮಹಿಳೆಯರಲ್ಲಿ ನಾಯಕತ್ವ, ಮಹಿಳೆಯರ ಹಕ್ಕು ಹೀಗೆ ಹಲವು ವಿಷಯಗಳ ಕುರಿತು ‘ಜಾಗೃತಿ’ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.ಇದಕ್ಕೆ ಕೈ ಜೋಡಿಸಿರುವ ನವ್ಯಾ ದಿಶಾ ಸಂಸ್ಥೆ ಸದಸ್ಯರು ‘ಸುಗ್ರಾಮ’ ಎಂಬ ಯೋಜನೆಯಡಿಯಲ್ಲಿ ಗ್ರಾಮ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಪರಿಸರಸ್ನೇಹಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಕುರಿತೂ ಇಲ್ಲಿ ಮಾಹಿತಿ ನೀಡಲಾಗುತ್ತಿದೆ.

ವಿಷಯ ಪರಿಣತರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಕಾರ್ಪೊರೇಟ್ ಸಂಸ್ಥೆ ಸದಸ್ಯರು, ಎನ್‌ಜಿಒ, ಆಸ್ಪತ್ರೆ, ಪೊಲೀಸ್, ಕಾನೂನು ಪರಿಣಿತರನ್ನು ಕರೆಸಿ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಇದುವರೆಗೂ ಸುಮಾರು 700 ಕಾರ್ಯಾಗಾರಗಳನ್ನು ನಡೆಸಿಕೊಡಲಾಗಿದೆ. ಅವರ ಭವಿಷ್ಯಕ್ಕಾಗಿ ಭವಿಷ್ಯ ನಿಧಿಯನ್ನು ಅವರ ಆದಾಯಕ್ಕನುಸಾರ ಕೂಡಿಡಲಾಗುತ್ತಿದೆ.ಇಷ್ಟೇ ಅಲ್ಲದೆ, ಶಿಕ್ಷಣ, ಆರೋಗ್ಯ, ಮನೆ ಕಟ್ಟುವುದು, ತುರ್ತು ಪರಿಸ್ಥಿತಿ, ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ದಾಖಲೆ ಇಲ್ಲದೆ ಪ್ರತ್ಯೇಕ ಸಾಲವನ್ನೂ ನೀಡಲಾಗುತ್ತಿದೆ. ಇತರ ಸಂಸ್ಥೆಗಳೊಂದಿಗೆ ಗ್ರಾಹಕರಿಗೆ ಸಂಪರ್ಕ ಕಲ್ಪಿಸಿ, ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವು ನೀಡುತ್ತಿದೆ.ಬಝ್ ಬಸ್

ಇತ್ತೀಚೆಗೆ ಬಝ್ ಇಂಡಿಯಾ ಜೊತೆಗೂಡಿ, ಮಹಿಳೆಯರು ಹೇಗೆ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಕುರಿತೂ ಜಾಗೃತಿ ಕಾರ್ಯಕ್ರಮಗಳನ್ನು ಊರೂರಿಗೆ ಹೋಗಿ ನಿಯೋಜಿಸಲಾಗಿದೆ. ಬಝ್ ಬಸ್‌ ಎಂಬ ಮಿನಿ ಬಸ್‌ ಮೂಲಕ ವ್ಯಾಪಾರಾಭಿವೃದ್ಧಿಯ ಹಲವು ಅಂಶಗಳನ್ನು ಮಹಿಳೆಯರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ: 91 80 28436237

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry