ಶನಿವಾರ, ಫೆಬ್ರವರಿ 27, 2021
28 °C
ಅನೇಕಲ್‌: ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸಲಹೆ

ಆನೇಕಲ್: ಪರಿಸರವನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮನೆಗೊಂದು ಸಸಿ ನೆಡುವ ಮೂಲಕ ಸ್ವಾಸ್ಥ್ಯ ಸಮಾಜ ಮತ್ತು ಪರಿಸರವನ್ನು ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.ಅವರು ಪಟ್ಟಣದ ಎಎಸ್‌ಬಿ ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದ ಬಗೆಗಿನ ಸಮರ್ಪಕ ತಿಳುವಳಿಕೆ, ಶಿಕ್ಷಣವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಗಿಡ ನೆಡುವುದರಿಂದ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಲು, ಮಾಲಿನ್ಯದಿಂದ ಮುಕ್ತಿ ಪಡೆಯಲು ಸಹಾಯಕವಾಗುತ್ತದೆ.ಯುವಕರು ಸಾಲು ಮರದ ತಿಮ್ಮಕ್ಕ ಅವರನ್ನು ಆದರ್ಶವಾಗಿಟ್ಟುಕೊಂಡು ಗಿಡ ನೆಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದರು.ಸ್ವಾಮಿ ವಿವೇಕಾನಂದರ ಶ್ರದ್ದೆ–ಏಕಾಗ್ರತೆ, ಆದರ್ಶ, ತತ್ವ ಸಿದ್ದಾಂತಗಳನ್ನು ಯುವಕರು ರೂಢಿಸಿಕೊಳ್ಳಬೇಕು. ಆಗ ಮಾತ್ರ ತಮ್ಮ ಜೀವನದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಆನೇಕಲ್‌ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ, ಗಿಡ ನೆಡುವುದು ನಿರಂತವಾಗಿರಬೇಕು. ವಿದ್ಯಾರ್ಥಿಗಳು, ಸ್ವಯಂಸೇವಾ ಸಂಘಗಳು ಗ್ರಾಮಗಳ ಸ್ವಚ್ಛತೆಗೆ ಕೈಜೋಡಿಸಬೇಕು.ಸರ್ಕಾರಿ ಜಮೀನುಗಳಲ್ಲಿ ಮುಂದಿನ ದಿನಗಳಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯಕ್ರಮ ರೂಪಿಸಲಾಗುವುದು. ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳ ಜೊತೆಗೂಡಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.ಸ್ವಾಮಿ ವಿವೇಕಾನಂದ ಜಯಂತಿಯನ್ನು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳ ಮೂಲಕ ಜನವರಿ ೧೯ ರ ವರೆಗೂ ಯುವ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಆನೇಕಲ್ ಪುರಸಭಾ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ವಿವೇಕಾನಂದರ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು. ಪುರಸಭಾ ಅಧ್ಯಕ್ಷ ಎನ್.ಎಸ್.ಅಶ್ವಥ್‌ನಾರಾಯಣ ಮಾತನಾಡಿ ಆನೇಕಲ್‌ನಲ್ಲಿ ಕಸ ವಿಲೇವಾರಿ ಘಟಕಕ್ಕಾಗಿ ಬಗ್ಗನದೊಡ್ಡಿ ಬಳಿಯ 9 ಎಕರೆ ಜಾಗವನ್ನು ಹಸ್ತಾಂತರ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ವಿವೇಕಾನಂದ ಜಯಂತಿಯನ್ನು ಗಿಡ ನೆಡುವ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ. ಗಿಡಗಳನ್ನು ಬೆಳೆಸುವುದರಿಂದ ಆರೋಗ್ಯಕರ ವಾತಾವರಣವನ್ನು ನಿರ್ಮಾಣವಾಗುತ್ತದೆ. ಪರಿಸರ ರಕ್ಷಣೆಗಾಗಿ ಈಗಾಗಲೇ ಪಟ್ಟಣದಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಪರಿಸರವನ್ನು ಸ್ವಚ್ಛ ಸುಂದರವನ್ನಾಗಿಟ್ಟುಕೊಳ್ಳಲಾಗುವುದು ಎಂದರು.ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅನ್ನೀಸ್‌ಕನ್ನಮಣಿಜಾಯ್‌, ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜು, ತಹಶೀಲ್ದಾರ್ ಅನಿಲ್‌ಕುಮಾರ್, ಜಾರಿದಳದ ನಾಗರಾಜರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನೋಮೇಶ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ಪುರಸಭಾ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಮೋಹನ್, ಜಿ.ಗೋಪಾಲ್, ಮುನಾವರ್, ಚಂದ್ರಿಕಾ, ಜಯಲಕ್ಷ್ಮೀ, ಮುನಿರತ್ನ ಹಾಜರಿದ್ದರು.ಭೂಮಿ ಒತ್ತುವರಿದಾರರ ವಿರುದ್ದ ಕ್ರಮ: ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ದ ಯಾವುದೇ ಮುಲಾಜೀಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು. ಅವರು ಪಟ್ಟಣದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದರು.ಸಾರಕ್ಕಿ, ಪುಟ್ಟೇನಹಳ್ಳಿ ಹಾಗೂ ಜರಗೇನಹಳ್ಳಿ ಕೆರೆಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದವರ ಮನೆಗಳನ್ನು ತೆರವುಗೊಳಿಸಲು ಹೈಕೋರ್ಟ್‌ ಸ್ಪಷ್ಠ ನಿರ್ದೇಶನ ನೀಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ. ಬಿಡಿಎ ಗ್ರಾಹಕರಿಗೆ ನಿಗದಿತ ಅಳತೆಯಲ್ಲಿ ನಿವೇಶನ ನೀಡಿದರೆ ಕೆರೆ ಪಕ್ಕದಲ್ಲಿರುವ ಕೆಲವರು ಕೆರೆ ಒತ್ತುವರಿ ಮಾಡಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.ಶಾಸಕ ಕೋಳಿವಾಡರವರು ಸಹ ಕೆರೆ ಒತ್ತುವರಿ ವಿಚಾರವಾಗಿ ವರದಿ ಸಿದ್ದಪಡಿಸಿದ್ದು ಸರ್ಕಾರ ಈ ಬಗ್ಗೆ ತೆರವುಗೊಳಿಸಲು ಆದೇಶ ನೀಡಿದರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆನೇಕಲ್ ತಾಲ್ಲೂಕಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಫಿಲ್ಟರ್‌ ಮರಳು ಅಡ್ಡೆಗಳ ವಿರುದ್ದ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.