ಬುಧವಾರ, ಏಪ್ರಿಲ್ 21, 2021
30 °C

ಸ್ವಿಸ್ ಬ್ಯಾಂಕ್ ಹಣ ವಾಪಸ್‌ಗೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಅಕ್ರಮವಾಗಿ ಸಂಪಾದಿಸಿ ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಭಾರತೀಯರ ಹಣವನ್ನು ಮರಳಿ ದೇಶಕ್ಕೆ ತರುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಪಟ್ಟಣದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.ಭಾರತ ಸ್ವಾಭಿಮಾನ ಮತ್ತು ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ನೂರಾರು ಕಾರ್ಯಕರ್ತರು ಪಟ್ಟಣದ ಕನ್ನಡಾಂಬೆ (ಎಪಿಎಂಸಿ) ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಅಭಿಯಾನ ನಡೆಸಿದರು. ದಾರಿ ಉದ್ದಕ್ಕೂ ಯುವಕರು ಸ್ವಯಂಪ್ರೇರಿತರಾಗಿ ಬಂದು ತಮ್ಮ ರಕ್ತದಿಂದ ಸಹಿ ಮಾಡಿದರು.ನಂತರ ಬಸವೇಶ್ವರ ವೃತ್ತದ ಬಳಿ ಭಾರತ ಸ್ವಾಭಿಮಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಗಣಪತರಾವ ಖೂಬಾ ಮಾತನಾಡಿ, ಭಾರತದ ಸುಮಾರು 300 ಲಕ್ಷ ಕೋಟಿ ರೂಪಾಯಿ ಸ್ವಿಸ್ ಬ್ಯಾಂಕ್‌ನಲ್ಲಿ ಇದೆ ಎಂದು ಹೇಳಿದರು. ದೇಶದ ಕೆಲ ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ದೇಶದ ಸಂಪತ್ತು ಲೂಟಿ ಹೊಡೆದು ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟದ್ದಾರೆ. ಈ ರೀತಿ ಅಕ್ರಮ ಹಣ ಸಂಪಾದನೆಯಿಂದ ದೇಶದಲ್ಲಿ ಬಡತನ, ನಿರುದ್ಯೋಗ ಮತ್ತಿತರೆ ಗಂಭೀರ ಸಮಸ್ಯೆಗಳು ತಾಂಡವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿದೇಶಗಳಲ್ಲಿರುವ ಭಾರತದ ಕಪ್ಪು ಹಣ ವಾಪಸ್ ತರುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ದೇಶಾದ್ಯಂತ ದೊಡ್ಡ ಆಂದೋಲನ ನಡೆಯಲಿದೆ ಎಂದು ಡಾ. ವೈಜಿನಾಥ ಬುಟ್ಟೆ, ಸತ್ಯವಾನ ಪಾಟೀಲ, ಹಾವಗಿರಾವ ವಟಗೆ ಹೇಳಿದರು.ಕಪ್ಪು ಹಣ ವಾಪಸ್ ತರುವಂತೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು, ವಿಚಾರವಾದಿಗಳು. ಶಿಕ್ಷಕರು, ಯುವಕರು ಸೇರಿದಂತೆ 51 ಸಾವಿರ ಜನರು ಸಹಿ ಮಾಡಿದ ಮನವಿ ಪತ್ರದೊಂದಿಗೆ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಲಾಯಿತು. ಬಸವರಾಜ ಹಳ್ಳೆ, ಗುರುನಾಥ ವಟಗೆ, ಶ್ರೀಮಂತ ಬಿರಾದಾರ, ಮಲ್ಲಿಕಾರ್ಜುನ ರಾಗಾ, ರಮೇಶ ಹೂಗಾರ, ವೈಜಿನಾಥ ಸಜ್ಜನಶೆಟ್ಟಿ, ಚಂದ್ರಕಾಂತ ಶಿವಪೂಜೆ ಸೇರಿದಂತೆ ಹಲವರು ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.