ಗುರುವಾರ , ಜೂನ್ 17, 2021
22 °C

ಸ್ವೀಡನ್ ವಿದ್ಯಾರ್ಥಿನಿಯ ಅಧ್ಯಯನ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಭಾರತೀಯ ಸಂಗೀತ, ನೃತ್ಯ, ಇಲ್ಲಿಯ ಸಂಸ್ಕೃತಿ ತುಂಬಾ ಇಷ್ಟ. ಕರಾವಳಿಯ ಗಂಜಿ, ಇಡ್ಲಿ, ಮಸಾಲದೋಸೆ, ಪುಂಡಿಯಂತೂ ಮತ್ತೂ ಇಷ್ಟ....- ಹೀಗೆನ್ನುತ್ತಾರೆ ಸ್ವೀಡನ್‌ನ ಗೋಥೆನ್‌ಬರ್ಗ್ ವಿಶ್ವವಿದ್ಯಾಯದ ಬಿಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿ ಸಿಸಿಲಿಯಾ.ಇಲ್ಲಿನ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕು ತಿಂಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಅವರು ಸ್ವೀಡನ್‌ಗೆ ಹಿಂತಿರುಗುವ ಸಂದರ್ಭ ಪತ್ರಕರ್ತರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅನುಭವಗಳನ್ನು ಬಿಚ್ಚಿಟ್ಟರು.ಅಧ್ಯಯನ ಪ್ರವಾಸದ ಅಂಗವಾಗಿ ಅವರು ಭಾರತಕ್ಕೆ ಬಂದಿದ್ದರು. ಇವರು ತಮ್ಮ 15ನೇ ವರ್ಷದಿಂದ ವಿದೇಶಗಳಿಗೆ ತೆರಳಿ ಅಧ್ಯಯನ ಮಾಡುತ್ತಿದ್ದಾರೆ. ಈಗಾಗಲೇ ಅಮೆರಿಕಾ ಸಂಯುಕ್ತ ಸಂಸ್ಥಾನ, ಕ್ಯೂಬಾ, ಪನಾಮಾ, ಜಮೈಕಾ, ಥಾಯ್ಲೆಂಡ್, ಯುರೋಪ್‌ನ ಕೆಲವು ದೇಶಗಳಿಗೆ ತೆರಳಿದ್ದಾರೆ. ಅಲ್ಲಿನ ಕಲೆ, ಸಂಸ್ಕೃತಿಯ  ಅಧ್ಯಯನ ಮಾಡಿದ್ದಾರೆ. ಶಿಕ್ಷಣ ವೃತ್ತಿ ತುಂಬಾ ಸಂತೋಷ ಕೊಡುತ್ತದೆ ಎನ್ನುತ್ತಾರೆ ಅವರು.ಎರಡು ತಿಂಗಳ ಹಿಂದೆ ಸ್ನೇಹ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಹಾಡೊಂದನ್ನು ಹಾಡಿ ಎಲ್ಲರ ಪ್ರಶಂಸೆಗೂ ಈಕೆ ಪಾತ್ರರಾಗಿದ್ದರು.ಈಕೆಯ ತಂದೆ ಪ್ರೌಢಶಾಲೆ ಶಿಕ್ಷಕರು, ತಾಯಿ ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ. ಇಬ್ಬರು ಸಹೋದರಿ ಹಾಗೂ ಒಬ್ಬ ಸಹೋದರ ಇದ್ದಾನೆ. ಸ್ವೀಡನ್‌ನಲ್ಲಿ ಶಿಕ್ಷಣದ ಗುಣಮಟ್ಟ ಇಲ್ಲಿಗಿಂತ  ಉತ್ತಮವಾಗಿದೆ. ಅಲ್ಲಿ ಸಂವಹನಕ್ಕೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ.ನಾಲ್ಕು ಗೊಡೆಯೊಳಗಿನ ತರಗತಿಗಿಂತ ಹೆಚ್ಚಿನ ಅವಧಿ ಪ್ರಾಯೋಗಿಕ ಶಿಕ್ಷಣಕ್ಕೆ ಮೀಸಲಾಗಿದೆ. ಗುಂಪು ಯೋಜನೆಗಳ ಮೂಲಕ ಕಲಿಕೆಯಿದೆ. ಆದರೆ ಮಾತೃಭಾಷಾ ಶಿಕ್ಷಣ ಮಾತ್ರ ಅಲ್ಲಿ ಕಡ್ಡಾಯ. 12ನೇ ತರಗತಿಯವರೆಗೆ ಸ್ವೀಡಿಶ್ ಭಾಷೆಯೇ ಶಿಕ್ಷಣ ಮಾಧ್ಯಮ.ಆದರೆ ಮೂರನೇ ತರಗತಿಯಿಂದ ಇಂಗ್ಲೀಷನ್ನು ಭಾಷೆಯಾಗಿ ಕಲಿಯುವ ಅವಕಾಶವಿದೆ. ಪದವಿ ತರಗತಿ ಗಳೂ ಮಾತೃಭಾಷಾ ಮಾಧ್ಯಮದಲ್ಲೇ ನಡೆ ಯುತ್ತವೆ. ಆದರೆ ಸ್ನಾತಕೋತ್ತರ ತರಗತಿಗಳು ಮಾತ್ರ ಆಂಗ್ಲ ಮಾಧ್ಯಮದಲ್ಲಿ ಎಂದು ಹೇಳಿದರು.ಅಲ್ಲಿ ಶೇ.33ರಷ್ಟು ತೆರಿಗೆಯನ್ನು ಸರ್ಕಾರ ವಿಧಿಸುತ್ತದೆ. ಹೀಗಾಗಿ ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯ  ಸಂಪೂರ್ಣ ಉಚಿತ. 2500 ಕಿ.ಮೀ. ಉದ್ದದ ಭೂಭಾಗವನ್ನು ಹೊಂದಿರುವ ಸ್ವೀಡನ್ ದೇಶದಲ್ಲಿ ಶೇ.85 ಭಾಗ ಪಟ್ಟಣ ಪ್ರದೇಶಗಳಿದ್ದರೆ, ಉಳಿದ ಶೇ. 15 ಭಾಗ ಗ್ರಾಮೀಣ ಪ್ರದೇಶವಿದೆ ಎಂದು ಹೇಳಿದರು.ಸುಳ್ಯ ಪಟ್ಟಣದಲ್ಲಿ ನಡೆಯುವ ಎಲ್ಲಾ ಸಾಂಸ್ಕತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವನ್ನು ಶಿಕ್ಷಣ ಸಂಸ್ಥೆಯವರು ಮಾಡಿಕೊಟ್ಟಿದ್ದರು. ಕಾರ್ಯಕ್ರಮಗಳು ವೆರಿನೈಸ್, ಕಲರ್‌ಫುಲ್ ಎನ್ನುತ್ತಾರೆ ಸಿಸಿಲಿಯಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.