ಬುಧವಾರ, ಜನವರಿ 29, 2020
29 °C

ಸ್ವ ಇಚ್ಛೆಯಿಂದಲೇ ರಾಜೀನಾಮೆ: ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮನ್ನು ತುಳಿಯುವ ಪ್ರಯತ್ನ ಪಕ್ಷದವರಿಂದಲೇ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿರುವ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.ಸ್ವಹಸ್ತಾಕ್ಷರದಲ್ಲಿ ಬರೆದಿರುವ ರಾಜೀನಾಮೆ ಪತ್ರದೊಂದಿಗೆ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಕಚೇರಿಗೆ ಸೋಮವಾರ ಅವರು ಆಗಮಿಸಿದ್ದರು. ಆದರೆ ಬೋಪಯ್ಯ ಇರಲಿಲ್ಲ. ಹೀಗಾಗಿ ಕಾರ್ಯದರ್ಶಿ ಓಂಪ್ರಕಾಶ್ ಅವರಿಗೆ ರಾಜೀನಾಮೆ ನೀಡಲು ಮುಂದಾದರು.`ನನಗೆ ರಾಜೀನಾಮೆ ನೀಡಲು ಬರುವುದಿಲ್ಲ. ಖುದ್ದಾಗಿ ಸ್ಪೀಕರ್ ಅವರಿಗೆ ನೀಡಬೇಕು~ ಎಂದು ಕಾರ್ಯದರ್ಶಿಗಳು ಸಲಹೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಫ್ಯಾಕ್ಸ್ ಮೂಲಕ ಸ್ಪೀಕರ್‌ಗೆ ರಾಜೀನಾಮೆ ಪತ್ರ ಕಳುಹಿಸುವುದರ ಜೊತೆಗೆ ಮಂಗಳವಾರ ಬೋಪಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತೇನೆ~ ಎಂದು ತಿಳಿಸಿದರು. `ನಿರಂತರವಾಗಿ ಕಿರುಕುಳ ನೀಡುವ ಮೂಲಕ ನನ್ನನ್ನು ತುಳಿಯಲಾಗುತ್ತಿದೆ. ಪಕ್ಷದಲ್ಲಿ ಯಾರೂ ನನ್ನ ರಕ್ಷಣೆಗೆ ಬರುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದು, ಕೂಡಲೇ ಅಂಗೀಕರಿಸುವಂತೆ ಸ್ಪೀಕರ್‌ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಕೋರಿದ್ದಾರೆ.ಹಿನ್ನೆಲೆ: ಕುಮಾರಸ್ವಾಮಿ ಅವರ ಕಟ್ಟಾ ಬೆಂಬಲಿಗರಾದ ಆಲ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕವೀಶ್ ಅವರನ್ನು ಕೆಲ ದಿನಗಳ ಹಿಂದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ತೆಗೆದು ಹಾಕಲಾಗಿತ್ತು. ಇದನ್ನು ಖಂಡಿಸಿ ರಾಜೀನಾಮೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಪಕ್ಷದ ಸಂಘಟನಾ ಕಾರ್ಯದರ್ಶಿ ಜಿ.ಸಂತೋಷ್ ಅವರು ಕಿರುಕುಳ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಿಲ್ಲ ಎಂದು ಹೆದರಿಸುತ್ತಿದ್ದಾರೆ ಎಂದು ಮುಖಂಡರ ಬಳಿ ಕುಮಾರಸ್ವಾಮಿ ಅಳಲು ತೋಡಿಕೊಂಡಿದ್ದರು. ಇಷ್ಟಾದರೂ ಕರೆದು ಮಾತನಾಡಲಿಲ್ಲ ಎಂದು ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಪ್ರತಿಕ್ರಿಯಿಸಿ (+)