ಶನಿವಾರ, ಅಕ್ಟೋಬರ್ 19, 2019
27 °C

ಸ್ವ ಉದ್ಯೋಗ: ಮಹಿಳೆಯರಿಗೆ ಸಲಹೆ

Published:
Updated:

ದೇವನಹಳ್ಳಿ: ಸಮುದಾಯ ಮತ್ತು ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ  ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರು ಸ್ವ ಉದ್ಯೋಗವನ್ನು ಕೈಗೊಳ್ಳಬೇಕು ಎಂದು  ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಕೈಗಾರಿಕಾ ವಿಭಾಗ ಉಪನಿರ್ದೇಶಕ ನಾಗರಾಜ್ ಸಲಹೆ ನೀಡಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೈಗಾರಿಕಾ ಇಲಾಖೆ, ಎಂಎಸ್‌ಎಂಇ ಡೆವಲಪ್‌ಮೆಂಟ್  ಸಂಸ್ಥೆ ಮತ್ತು ತಾಲ್ಲೂಕು ಪಂಚಾಯಿತಿ ಬುಧವಾರ ಆಯೋಜಿಸಿದ್ದ ಮಹಿಳೆಯರಿಗೆ ರಾಸಾಯನಿಕ ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಬದುಕಿನ ನಿರ್ವಹಣೆ ಕಠಿಣವಾಗುತ್ತಿದೆ. ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚುತ್ತಿದ್ದು, ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರೂ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಹಿತಾಸಕ್ತಿಗೆ ನೆರವಾಗಬೇಕು ಎಂದರು.ಎಂಎಸ್‌ಎಂಇ ಡೆವಲಪ್‌ಮೆಂಟ್ ಸಂಸ್ಥೆಯ ಶಂಕರ ನಾರಾಯಣ, ಕೃಷಿ , ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದಾರೆ. ರಾಸಾಯನಿಕ ವಸ್ತುಗಳ ಉತ್ಪಾದನೆ ಬಗ್ಗೆಯೂ ಗಮನ ವಹಿಸಬೇಕು. ರಾಸಾಯನಿಕ ಉತ್ಪನ್ನಗಳನ್ನ ಕಡಿಮೆ ವೆಚ್ಚದಲ್ಲಿ ತಯಾರಿಸಿ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ತರಬೇತಿ ಪಡೆದು ಸ್ವ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿರುವ ಮಹಿಳೆಯರು ಹಾಗೂ ಸ್ತ್ರೀ ಶಕ್ತಿ ಗುಂಪುಗಳು ತಾವು ಉತ್ಪಾದಿಸುತ್ತಿರುವ ವಸ್ತುಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಿದ್ದಲ್ಲಿ ಖರೀದಿಸಲು ಶಿಕ್ಷಣ ಇಲಾಖೆ ಸಿದ್ದವಿದೆ ಎಂದರು.ಅಧ್ಯಕ್ಷತೆವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ, ತಾಲ್ಲೂಕಿನಲ್ಲಿ 80 ಸಾವಿರ ಮಧ್ಯಮ ವರ್ಗದ ಕುಟುಂಬಗಳಿವೆ. ಮಹಿಳೆಯರು ತಯಾರಿಸಿದ ರಾಸಾಯನಿಕ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ಕಚ್ಚಾ ವಸ್ತುಗಳಿಗೆ ಅಗತ್ಯ ಬಂಡವಾಳವನ್ನು ನೀಡಲು ಬ್ಯಾಂಕುಗಳು ನೆರವಾಗಬೇಕು ಎಂದರು.ತಾ.ಪಂ.ಉಪಾಧ್ಯಕ್ಷೆ ಕೆ.ಪ್ರಭಾ ಮಾತನಾಡಿದರು. ತಾಲ್ಲೂಕು ಕೈಗಾರಿಕಾ ಇಲಾಖೆ ವಿಸ್ತರಣಾಧಿಕಾರಿ ಗೋಪಾಲಯ್ಯ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಅಂಜನಪ್ಪ ಮತ್ತಿತರರು ಇದ್ದರು. ಶಿಬಿರದಲ್ಲಿ ತರಬೇತಿ ಪಡೆದ 59 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

Post Comments (+)