ಶುಕ್ರವಾರ, ನವೆಂಬರ್ 22, 2019
23 °C
ರಾಯಚೂರು: ಟಿಕೆಟ್ ಟಿಕೆಟ್... ಕಾಂಗ್ರೆಸ್ ಟಿಕೆಟ್...

ಹಂಚಿಕೆಯಲ್ಲಿ `ಕೈ' ಚಳಕದ ಚಮತ್ಕಾರ

Published:
Updated:

ರಾಯಚೂರು: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ನಡೆಸಿದ `ಕೈ' ಚಳಕದ ಚಮತ್ಕಾರ ಭಾನುವಾರ ಹೊರ ಬಿದ್ದಿದ್ದು, ರಾಜಕೀಯ ವಲಯದಲ್ಲಿ ಬಹು ಚರ್ಚೆಗೆ ಗ್ರಾಸವಾಗಿದೆ.ಭಾನುವಾರ ನಡೆದ ಹಠಾತ್ ಬೆಳವಣಿಗೆಯಲ್ಲಿ ಈಗಾಗಲೇ ಟಿಕೆಟ್ ಪಡೆದವರಿಂದ ಟಿಕೆಟ್ ಕೈ ಜಾರಿದ್ದರೆ, ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬಂತೆ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕದ್ವಯರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕೃಪೆ ಮಾಡಿದೆ!ಜಿಲ್ಲೆಯಲ್ಲಿಯೇ ರಾಜಕೀಯ ಕಾರ್ಖಾನೆ ಎಂದೇ ಪ್ರಸಿದ್ಧಿಯಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಗೋಲ್‌ಮಾಲ್ ಮಾಡಿದೆ. ಇಲ್ಲಿ ಈಗಾಗಲೇ ಪಾಮಯ್ಯ ಮುರಾರಿಗೆ ಪಕ್ಷದ ಟಿಕೆಟ್ ಘೋಷಣೆಯಾಗಿ ಭಾನುವಾರ ಅದು ಕಾಂಗ್ರೆಸ್ ಪಕ್ಷದ ಟಿಕೆಟ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಡಿ.ಎಸ್ ಹೂಲಿಗೇರಿ ಅವರ ಪಾಲಾಗಿದ್ದು, ಕ್ಷೇತ್ರದಲ್ಲಿ ಕೈ ಚಳಕದ್ದೇ ಚರ್ಚೆ ನಡೆದಿದೆ.ಒಬ್ಬರಿಗೆ ಟಿಕೆಟ್ ಘೋಷಣೆ ಕೊನೆ ಘಳಿಗೆಯಲ್ಲಿ ಮತ್ತೊಬ್ಬರಿಗೆ ಟಿಕೆಟ್ ಘೋಷಣೆ ಮಾಡಿರುವ ಹಿಂದೆ ಗೆಲುವಿನ ಲೆಕ್ಕಾಚಾರ, ಝಣ ಝಣ ಕಾಂಚಾನಾದ ತಂತ್ರ ಅಡಗಿದೆ. ಪಕ್ಷ ಜಾತಿ ಲೆಕ್ಕಾಚಾರ ಸಮೀಕರಣ ನಡೆಸಿ ಈ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.ಪಕ್ಷ ಈಗಾಗಲೇ ತಮಗೆ ಟಿಕೆಟ್ ಘೋಷಣೆ ಮಾಡಿದೆ. ಬಿ ಫಾರಂ ತಮಗೆ ದೊರಕುತ್ತದೆ ಎಂದು ಪಾಮಯ್ಯ ಮುರಾರಿ ಆಪ್ತರೆದುರು ಹೇಳಿಕೊಂಡಿದ್ದಾರೆ.ಈ ಹೇಳಿಕೆಯಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಇನ್ನೂ ಏನೇನು ಆಗುತ್ತದೋ ಎಂಬ ಚರ್ಚೆಗೆ ಗ್ರಾಸವಾಗಿದೆ.ಇನ್ನು ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಗುಲ್ಬರ್ಗದ ಇಕ್ಬಾಲ್ ಅಹಮ್ಮದ್ ಸರಡಗಿ ಅವರ ವಿರುದ್ದ ಅಡ್ಡ ಮತದಾನ ಮಾಡಿದ ಆರೋಪ ಹೊತ್ತ ರಾಯಚೂರು ಗ್ರಾಮೀಣ  ಕ್ಷೇತ್ರದ ಶಾಸಕ ರಾಯಪ್ಪ ನಾಯಕ ಹಾಗೂ ಮಾನ್ವಿ ಶಾಸಕ ಹಂಪಯ್ಯ ನಾಯಕಗೆ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಅಂತಿಮ ಪಟ್ಟಿಯಲ್ಲಿ ಟಿಕೆಟ್ ಅಧಿಕೃತ ಘೋಷಣೆ ಮಾಡಿದೆ. ಇದು ಸಂಬಂಧಪಟ್ಟ ಶಾಸಕದ್ವಯರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರತಿಕ್ರಿಯಿಸಿ (+)