ಹಂಡಿಜೋಗಿಗಳ ಪ್ರತಿಭಟನೆ

7

ಹಂಡಿಜೋಗಿಗಳ ಪ್ರತಿಭಟನೆ

Published:
Updated:
ಹಂಡಿಜೋಗಿಗಳ ಪ್ರತಿಭಟನೆ

ಬಳ್ಳಾರಿ: ತಾಲ್ಲೂಕಿನ ಕುರುಗೋಡು ಗ್ರಾಮದಲ್ಲಿ 40 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಹಂಡಿಜೋಗಿ ಜನಾಂಗದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ವಿಶಿಷ್ಟ ರಿತಿಯಲ್ಲಿ ಪ್ರತಿಭಟನೆ ನಡೆಸಿದರು. ಸಿಪಿಎಂ ನೇತೃತ್ವದಲ್ಲಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಪ್ರತಿಭಟನಾ ರ್ಯಾಲಿಯಲ್ಲಿ ಜನಾಂಗದ ಕಲಾವಿದರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಆಗಮಿಸಿ ತಮ್ಮ ಬಹುದಿನದ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು,  ಅಲೆಮಾರಿಗಳನ್ನು ನಿರ್ಲಕ್ಷಿಸುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸಿದರು. ಧರಣಿ ಉದ್ದೇಶಿಸಿ ಮಾತನಾಡಿದ ಹಂಡಿ ಜೋಗಿ ಸಮುದಾಯದ ಮುಖಂಡ ರತ್ತಪ್ಪ ಹಾಗೂ ಹನುಮಪ್ಪ, ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಆಶ್ರಯವಿಲ್ಲದೆ, ಕಳೆದ 40 ವರ್ಷಗಳಿಂದ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರೂ, ಜಿಲ್ಲಾಡಳಿತ ನಿರಾಶ್ರಿತರಿಗೆ ಆಸರೆ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ.ಈ ಹಿಂದೆ ಅನೇಕ ಬಾರಿ ಚಳವಳಿ ಹಮ್ಮಿಕೊಂಡರೂ ಪ್ರಯೋಜನವಾಗಿಲ್ಲ. ಕುರುಗೋಡು ಗ್ರಾಮದಲ್ಲಿ ಖಾಸಗಿಯವರ ಜಾಗೆಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದು, ಸಂಬಂಧಿಸಿದ ವ್ಯಕ್ತಿಗಳು ಗುಡಿಸಲು ಎತ್ತಗಂಡಿ ಮಾಡಿದರೆ ಬೇರೆಡೆ ಜಾಗ ಹುಡುಕಿಕೊಂಡು ಗುಡಿಸಲು ಕಟ್ಟಿಕೊಳ್ಳುವ ಅನಿವಾರ್ಯತೆ ಇದೆ ಎಂದು ಅಲವತ್ತುಕೊಂಡರು. ಮನೆಯಿಲ್ಲದ್ದರಿಂದ ಸೂಕ್ತ ಆಸರೆಯಿಲ್ಲದೆ ಮಳೆ, ಗುಡುಗು, ಸಿಡಿಲು, ಚಳಿ, ಬಿಸಿಲಿಗೆ ಕುಟುಂಬದ ಸದಸ್ಯರು ತತ್ತರಿಸಿದ್ದಾರೆ. ಕಳೆದ ವರ್ಷ ಸಿಡಿಲಿಗೆ ಜಾನುವಾರುಗಳು ಸುತ್ತುಹೋಗಿವೆ. ಚಿಕ್ಕ ಮಕ್ಕಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಉದಾಹರಣೆಗಳೂ ಇವೆ ಎಂದು ಅವರು ಅವಲತ್ತುಕೊಂಡರು.ಇದೀಗ ವಾಸಿಸುತ್ತಿರುವ ಸ್ಥಳದಲ್ಲಿ ಕುಡಿಯುವ ನೀರು ಸೇರಿದಂತೆ ಯಾವುದೇ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ, ಪರದಾಡುವಂತಾಗಿದೆ. ಮಕ್ಕಳಿಗೆ ಶಾಲೆಯೂ ಹತ್ತಿರದಲ್ಲಿಲ್ಲ. ಈ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟವರು ಆಗಮಿಸಿಲ್ಲ ಎಂದು ಅವರು ದೂರಿದರು. ಸಿಪಿಎಂ ಮುಖಂಡರಾದ ವಿ.ಎಸ್. ಶಿವಶಂಕರ್, ಎಚ್.ಎಂ. ವಿಶ್ವನಾಥ ಸ್ವಾಮಿ ಮಾತನಾಡಿ, ಕುರುಗೋಡು ಗ್ರಾಮದ ಈ ಅಲೆಮಾರಿ ಕುಟುಂಬಗಳಿಗೆ ಒಂದೆಡೆ  ಆಶ್ರಯ ಮನೆ ನೀಡಬೇಕು. ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಗುಡಾರನಗರ ಮಾದರಿಯಲ್ಲಿ ಪ್ರತ್ಯೇಕ ಕಾಲೋನಿ ನಿರ್ಮಿಸಿ, ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.ಹನುಮಂತಪ್ಪ, ಸಿದ್ದಪ್ಪ, ಗುರುನಾಥ, ಹಮೀದ್‌ಬೇಗ್, ಯಲ್ಲಮ್ಮ, ತಿಪ್ಪಮ್ಮ, ಸಾವಂತ್ರಮ್ಮ, ಜೋಗಮ್ಮ, ಗಂಗಮಾಳೆಮ್ಮ, ಗಂಗಮ್ಮ, ಜಯಮ್ಮ, ಸುಂಕಮ್ಮ, ಸಿಪಿಎಂನ ಯು.ಬಸವರಾಜ್, ಕೆ.ಗಾದಿಲಿಂಗಪ್ಪ ಉಪಸ್ಥಿತರಿದ್ದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಸರಕಾರ ಜಾಗ ಗುರುತಿಸಿ ಶೀಘ್ರವೇ ಅಲೆಮಾರಿ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡಲಿದೆ ಎಂಬ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry