ಹಂಡೆವಜೀರ: ರಾಜ ಪರಂಪರೆ ಹೊಂದಿದ ಜನಾಂಗ

7

ಹಂಡೆವಜೀರ: ರಾಜ ಪರಂಪರೆ ಹೊಂದಿದ ಜನಾಂಗ

Published:
Updated:

ಡಾ.ಲಿಂಗದಳ್ಳಿ ಹಾಲಪ್ಪನವರ `ಕನ್ನಡ ಪಿತಾಮಹರು ಮತ್ತು ಹಂಡೆವಜೀರರು~ (ಸೆ. 27)ರ ಸಂಗತ ಲೇಖನಕ್ಕೆ ಒಂದು ಪ್ರತಿಕ್ರಿಯೆ.ಕುಷ್ಟಗಿಯಲ್ಲಿ ನಡೆದ ವೀರಶೈವ ಹಂಡೆವಜೀರ ಸಮಾಜದ ಸಮಾವೇಶದಲ್ಲಿ ನಾನು ಈ ಸಮಾಜದ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನೆಂದು ಆರೋಪ ಮಾಡಿದ್ದಾರೆ. ಈ ಆರೋಪ ಪೂರ್ವಗ್ರಹಪೀಡಿತವಾಗಿದೆ.ಒಂದು ಮೂಲದ ಪ್ರಕಾರ, ಹಂಡೆ ಅರಸರ ಮೂಲವು ಹತ್ತನೆಯ ಶತಮಾನಕ್ಕೆ ಹೋಗುತ್ತದೆ. ಪಾಂಡೆ ಅರಸರು 15-16ನೆಯ ಶತಮಾನದ ಸಂದರ್ಭದಲ್ಲಿ ಹಂಡೆರಸರೆಂದು ಕರೆಯಿಸಿಕೊಂಡಿದ್ದಾರೆ. ಇದಕ್ಕೆ ಕಾರಣ `ಪ~ ಮತ್ತು `ಹ~ ಅಕ್ಷರದಲ್ಲಾದ ಬದಲಾವಣೆ ಪಕಾರ ಹಕಾರವಾಗಿ ಪಾಂಡೆ ಹೋಗಿ ಹಂಡೆ ಶಬ್ದ ಬಂದಿದೆ. ಉದಾ: 10ನೇ ಶತಮಾನದ ಪಂಪ 15ನೇ ಶತಮಾನದ ಹೊತ್ತಿಗೆ ಹಂಪನಾಗಿರುವುದು ಹಾಗೆಯೆ ಪಂಪಾ ವಿರೂಪಾಕ್ಷೇಶ್ವರ ಹಂಪೆಯ ವಿರೂಪಾಕ್ಷೇಶ್ವರ ಆಗಿರುವುದನ್ನು ಕಾಣುತ್ತೇವೆ.ಹಂಡೆವಂಶದವರ ಇತಿಹಾಸವು ನಮಗೆ ಕ್ರಿ.ಶ. 1517ರಿಂದ ಅಧಿಕೃತವಾಗಿ ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠದ ದಾಖಲೆಗಳಿಂದ ತಿಳಿದು ಬರುತ್ತದೆ. (ಜಗದ್ಗುರು ಕೊಟ್ಟೂರು ಸ್ವಾಮಿ ಗುರು ಪರಂಪರೆ 1983) ಹಂಡೆವಂಶದ ಬಾಲದ ಹನುಮಪ್ಪ ನಾಯಕ ಮೂಲತಃ ವಿಜಾಪುರ ಪ್ರದೇಶದ ಮುತ್ತಗಿಯವನು. ವಿಜಾಪುರದ ಸುಲ್ತಾನ ಅಲಿ ಆದಿಲಶಾಹಿ ಇವನಿಗೆ  ವಜೀರ ಎಂಬ ಬಿರುದನ್ನು ನೀಡುತ್ತಾನೆ. ಅಂದಿನಿಂದ ಇವರಿಗೆ ಹಂಡೆವಜೀರ ಎಂದೂ ಕರೆಯಲಾರಂಭಿಸಿದರು. ವಜೀರ ಎನ್ನುವ ಹೆಸರು ವಿಜಾಪುರದ ಆದಿಲಶಾಹಿಗಳಿಂದ ಬಂದ ಹೆಸರಾಗಿದೆ. ಆದರೆ (ಶಂಬಾ ಅವರ ಉಲ್ಲೇಖ) ಕ್ರಿ.ಶ. 2ನೇ ಶತಮಾನಕ್ಕಿಂತ ಪೂರ್ವದಿಂದ ವಜೀರರು ಎಂದು ಕರೆದುಕೊಳ್ಳುತ್ತಾರೆ ಎಂಬುದು ಸರಿಯಾದುದಲ್ಲ. ವಜೀರ ಎನ್ನುವ ಶಬ್ದ ಮೂಲತಃ ಮುಸ್ಲಿಮ್ ಅರಸರ ಕಾಲದಿಂದ ಬೆಳಕಿಗೆ ಬಂದಿರುವಂತದ್ದು.ಬಳ್ಳಾರಿ ಜಿಲ್ಲೆಯ ಗೆಜೆಟಿಯರ್‌ನಲ್ಲಿ 1916ರ ಉಲ್ಲೇಖವನ್ನು ಡಾ. ಹಾಲಪ್ಪನವರು ನೀಡುತ್ತಾರೆ. ಇದಕ್ಕಿಂತಲೂ ಪೂರ್ವದ ದಾಖಲೆಗಳು ಬೇಕಾದಷ್ಟಿವೆ. ಉದಾ: ಕ್ರಿ.ಶ. 1630ರ ನಿಡುಮಾಮಿಡಿ ಮಠದ ದಾಖಲೆ ಪತ್ರಗಳಲ್ಲಿ ಹಂಡೆವಜೀರ ಹನುಮಂತ ಭೂಪಾಲನ ಉಲ್ಲೇಖವಿದೆ. ಕ್ರಿ.ಶ. 1603ರ ಅರಳಿ ಹಳ್ಳಿ ಹಂಡೆಅರಸರ ಶಾಸನದಲ್ಲಿ ಶಿವಾರ್ಪಣ ಶೈವಾಚಾರ ಸಂಪನ್ನನಾದ ಹಂಡೆಮಲಕಪ್ಪ ನಾಯಕನನ್ನು ಹೊಗಳಿದ ಶಾಸನವನ್ನು ನೋಡಬಹುದು. ಈ ಅರಸರು ಜಗದ್ಗುರು ಕೊಟ್ಟೂರು ಸ್ವಾಮಿಗಳ ಮಠಗಳಿಗೆ, ಶಾಖಾ ಮಠಗಳಿಗೆ ಶಾಲಿವಾಹನ ಶಕೆ 1439 ರಲ್ಲಿ ನಾಲ್ಕು ಸಲ 1441 ರಲ್ಲಿ ಎರಡು ಸಲ, 1443 ರಲ್ಲಿ ಮತ್ತು 1647-48ರಲ್ಲಿ ಎರಡು ತಾಮ್ರಪತ್ರ 1655, 1669, 1670 ಹೀಗೆ ನೂರಾರು ಎಕರೆ ಜಮೀನುಗಳನ್ನು ದಾನ ಪತ್ರದ ಮೂಲಕ ನೀಡಿದ್ದು ಎಲ್ಲಾ ದಾಖಲೆಗಳು ಮಠದಲ್ಲಿ ಸದ್ಯ ನೋಡಲು ಸಿಗುತ್ತವೆ ಮತ್ತು ಎರಡು ಗ್ರಂಥಗಳಲ್ಲಿ ಇವು ಪ್ರಕಟವಾಗಿವೆ.ಅಲ್ಲದೆ ಕ್ರಿ.ಶ. 1533ರ ಸಿರಿಗೆರೆ ಸಿರುಗುಪ್ಪಾ ತಾಲೂಕಿನ ಶಾಸನ, ಕ್ರಿ.ಶ. 1597ರ ಎಸ್. ಮಣೂರ ಶಾಸನ, ಕ್ರಿ.ಶ. 1599ರ ಮುದ್ದಾಪುರ ಶಾಸನ, ಕ್ರಿ.ಶ. 1603ರ ಅರಳಿಹಳ್ಳಿ ಶಾಸನ, ಕ್ರಿ.ಶ. 1600 ಮತ್ತು 1662 ಸಿರಗುಪ್ಪಾ ಶಾಸನ ತೆಲುಗಿನಲ್ಲಿ ಇರುವ ಕ್ರಿ.ಶ. 1509ರ ಮದುಕಾಪುರಂ (ಅನಂತಪುರಂ ಜಿಲ್ಲೆ), 1584ರ ಕರ್ನೂಲಿನ ಶಾಸನ, 1592ರ ದಕ್ಷಿಣ ಆರ್ಕಾಟ್ ಜಿಲ್ಲೆಯ ಶಾಸನ, 1643ರ ಕೆವೆಲ ಕುಂಟಲ (ಕರ್ನೂಲ) ಶಾಸನಗಳಲ್ಲಿ ಈ ಅರಸರ ಕುರಿತಾದ ಅಧಿಕೃತ ದಾಖಲೆಗಳಿವೆ. ನಿಡುಮಾಮಿಡಿ ಪೀಠಕ್ಕೆ ಹಲವಾರು ದಾನ, ದತ್ತಿಗಳನ್ನು ಅನೇಕ ಊರುಗಳನ್ನು ಉಂಬಳಿಯಾಗಿ ಕೊಟ್ಟಿದ್ದಾರೆ. ಇವುಗಳಲ್ಲದೇ ಹೆಳವರ ದಾಖಲೆಗಳು ಮತ್ತು ಸಾಹಿತ್ಯದಲ್ಲಿ ಹಂಡೆಅರಸರ ಆಸ್ಥಾನ ಕವಿ ಬರೆದ ರಸಿಕಮನೋರಂಜನ ವಿಲಾಸ ಕೊರಟಿ ಶ್ರೀನಿವಾಸ ರಾಯರು ಬರೆದ ನಿಡುಮಾಮಿಡಿ ಮಠದ ಪಾಳೆಗಾರರ ಚರಿತ್ರೆ. ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಜಗದ್ಗುರು ಕೊಟ್ಟೂರುಸ್ವಾಮಿ ಗುರುಪರಂಪರೆ ಮುಂತಾದ ಗ್ರಂಥಗಳಲ್ಲಿ ಹಂಡವಜೀರ ಜನಾಂಗದ ಮತಾಚರಣೆಗಳ ಕುರಿತು ವಿವರಗಳಿವೆ.`ಇವರು ಜಾತಿಯೊಳಗೆ ಶಿವಭಕ್ತರು ಲಿಂಗವಂತರು ಇವರಿಗೆ ಕುಲದೈವ ಇಷ್ಟದೈವವು ವಿಜಾಪುರದ ಸೀಮಿಯೊಳಗೆ ಇದ್ದ ಸೋಲ್ಲಾಪುರ ಸಿದ್ರಾಮೇಶ್ವರನಾಗಲಿ, ಇತರ ದೇವತೆಗಳನ್ನು ಶಿವಪೂಜೆ ಮಾಡದೆ ಗಂಗಾಪಾನ ಸಹ ಮಾಡುವುದ್ಲ್ಲಿಲ. ಮಧುರ ಆಹಾರಗಳೇ ಹೊರತು ಮದ್ಯ ಮಾಂಸಾದಿಗಳ ಭಕ್ಷಣೆ ಮಾಡಲಾರರು. ಒಂಬತ್ತು ವರ್ಷದೊಳಗಾಗಿ ಹೆಣ್ಣುಗಳು ಇದ್ದರೆ ಪ್ರಸ್ತ ಮಾಡಿಕೊಳ್ಳುವುದು, ಕಾಲ ಪ್ರಮಾಣದಿಂದ ಗಂಡ ಸತ್ತರೆ ತಾಳಿ ಕೂಡಾವಳಿ ಮಾಡುವ ಸಂಪ್ರದಾಯವಿಲ್ಲ. ಸತ್ತರೆ ಸಮಾಧಿ ವಿನಾ ದಹನ ಮಾಡಲಾರರು. ಈ ಪ್ರಕಾರ ಇವರ ಆಚರಣೆಗಳಿವೆ. ವಿವರಗಳಿಗೆ ಮೈಸೂರು ಓರಿಯಂಟಲ್ ಲೈಬ್ರರಿಯ ಹಸ್ತಪ್ರತಿ ಕೆ.ಎ. 127 ಗದ್ದೆ. ಶಾಲಿವಾಹನ ಶಕ 1733. ಬುಕ್ಕರಾಯ ಚರಿತೆ ಹಂಡೆ ಅನಂತಪುರ ಕೈಫಿಯುತ ಶ್ರೀಶೈಲ ಪೀಠ ದರ್ಶನ ಸಿರಿಪಿ ಆಮಜನೇಯಲು ಬರೆದ ಕರಿಬಸವ ಸ್ವಾಮಿ ಕಾವ್ಯ. ಪುಲ್ಲ ಕವಿ ವಿರಚಿತ ಶ್ರೀಶೈಲ ಪಂಡಿತಾರಾಧ್ಯ ಚರಿತೆ, ನಾಗಸಂದ್ರ ವಾಸುದೇವ ರಾವ ಬರೆದ ಅನಂತಪುರ ಮಂಡಲ ಚರಿತ್ರೆ ಕಥಲು, ಹಂಡೆ ಅನಂತಪುರ ಚರಿತ್ರೆ. ಸಿ.ಪಿ. ಬ್ರೌನ್ ಅವರ ದಿ ವಾರ್ಸ್‌ ಆಫ್ ದಿ ರಾಜಾಸ್, ಟಿ. ಎಚ್.ಎಂ. ಸದಾಶಿವಯ್ಯನವರ ಕರ್ನಾಟಕದ ಗಡಿಗೆರೆಗಳು ಗ್ರಂಥಗಳಲ್ಲಿ ಮೇಲಿನ ಮತಾಚರಣೆಗಳು ಇರುವುದನ್ನು ಗಮನಿಸಬಹುದಾಗಿದೆ.ಇದಲ್ಲದೆ ಈ ಹಂಡೆವಜೀರ ಜನಾಂಗದ ಅರಸರಿಗೆ ಬಳ್ಳಾರಿ ಪ್ರದೇಶದಲ್ಲಿ ಕೊಟ್ಟೂರು ಸಂಸ್ಥಾನ ಮಠದ ಶ್ರೀ ಜಗದ್ಗುರುಗಳು ಅನಂತಪುರ ಪ್ರದೇಶದಲ್ಲಿ ನಿಡುಮಾಮಿಡಿ ಪೀಠದ ಶ್ರೀಶೈಲ ಜಗದ್ಗುರುಗಳು ಕುರುಗೋಡು, ಬಂಕಾಪುರ, ಧಾರವಾಡ ಪ್ರದೇಶದಲ್ಲಿ ತೋಂಟದ ಜಗದ್ಗುರುಗಳು ರಾಜ ಗುರುಗಳಾಗಿದ್ದಾರೆ. ಈ ರಾಜರ ಅನೇಕ ಸಮಾಧಿಗಳು ಜಗದ್ಗುರುಗಳ ಸಮಾಧಿಯೊಂದಿಗೆ ಮಾಡಿರುವುದು ಕಂಡುಬಂದಿದೆ. ಉದಾ: ನಿಡುಮಾಮಿಡಿ, ಕೋತ್ತೆ ಚರಪು ಇತ್ಯಾದಿ. ಈಗಲೂ ಈ ಹಂಡೆವಜೀರ ಜನಾಂಗದವರು ಈ ಮೇಲಿನ ಮಠಗಳ ಪರಂಪರೆಯಲ್ಲಿ ಬೆಳೆದು ಬಂದಿದ್ದಾರೆ ಮತ್ತು ಈಗಲೂ ಈ ಮಠಗಳ ಭಕ್ತರಾಗಿದ್ದಾರೆ.ಹಂಡೆಅರಸರ/ಪಾಳೆಗಾರರ ಆಡಳಿತದಲ್ಲಿ ಮುಸ್ಲಿಮರು, ಬ್ರಾಹ್ಮಣರು, ಜೋಯಿಸರು, ಕೊರವರು, ಕುರುಬರು, ತಳವಾರರು, ಹಡಪದರು ಮುಂತಾದವರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದುದು ಅವರನ್ನು ಹಂಡೆಮುಸ್ಲಿಮರು, ಹಂಡೆಜೋಯಿಸರು, ಹಂಡೆಕೊರವರು, ಹಂಡೆತಳವಾರರು, ಹಂಡೆಮೈಕಸುಬಿನವರು, ಹಂಡೆಬಟಾಂಗಿಯರು, ಹಂಡೆಕುರುಬರು, ಹಂಡೆಒಟ್ಟುಗಳು, ಹಂಡೆರಾವುತರು ಇತ್ಯಾದಿಯಾಗಿ ಕರೆಯಿಸಿಕೊಂಡ ಹೆಸರುಗಳು ರಾಜ್ಯದುದ್ದಕ್ಕೂ ಇವೆ. ಹೀಗಾಗಿ ವೀರಶೈವ ಹಂಡೆವಜೀರ ಜನಾಂಗವು ವೀರ ರಾಜಪರಂಪರೆಯನ್ನು ಹೊಂದಿದ ವಿಶಿಷ್ಟವಾದ ಜನಾಂಗವಾಗಿದೆ. ಹಂಡೆವಜೀರ ಜನಾಂಗಕ್ಕೂ ಮತ್ತು ಇನ್ನುಳಿದ ಈ ಮೇಲಿನ ಯಾವುದೇ ಜನಾಂಗಕ್ಕೂ ಸಂಬಂಧವಿರುವುದಿಲ್ಲ. ಅವುಗಳಿಗೆ ಅವುಗಳದೇ ಆದ ಮತಾಚರಣೆಗಳಿವೆ.

ಡಾ. ಹಾಲಪ್ಪನವರು ಹಂಡೆವಜೀರ ಜನಾಂಗದ ಇತಿಹಾಸದ ಬಗ್ಗೆ ಸರಿಯಾದ ಅಧ್ಯಯನವಿಲ್ಲದೆ ಬರೆದಿರುವುದು ಸ್ಪಷ್ಟ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry