ಹಂಡೆ ವಜೀರರು ಮತ್ತು ಹಂಡೆ ಕುರುಬರು

7

ಹಂಡೆ ವಜೀರರು ಮತ್ತು ಹಂಡೆ ಕುರುಬರು

Published:
Updated:

ಹಂಡೆ ವಜೀರರು ಕುರುಬ ಮೂಲದವರೆ ಎಂಬ ಕುರಿತು (ಪ್ರ.ವಾ. ಸೆ. 27 ಮತ್ತು ಅ. 4) ನಡೆಯುತ್ತಿರುವ ಚರ್ಚೆ ಕುರಿತಂತೆ ಒಂದು ಪ್ರತಿಕ್ರಿಯೆ. ಜನಾಂಗಗಳ ಹುಟ್ಟು ಮತ್ತು ಬೆಳವಣಿಗೆ ಸದಾ ಹರಿಯುವ ನದಿಯಂತೆ.

ಅಲೆಮಾರಿಯಾಗಿದ್ದ ಆದಿಮಾನವನು ಒಂದೆಡೆ ನೆಲೆ ನಿಂತು ನಾಗರಿಕತೆಯತ್ತ ಮುಖಮಾಡಿ, ಕೈಗೊಂಡ ವೃತ್ತಿಯನ್ನು ಪಶುಪಾಲನೆಯೆಂದೂ, ಆ ಕಾಲಘಟ್ಟವನ್ನು ಹಟ್ಟಿಕಾರ - ಪಟ್ಟಿಕಾರರ ಕಾಲಘಟ್ಟವೆಂದು ಗುರುತಿಸಲಾಗಿದೆ.`ಹಾಲು ಎಂಬ ಮೂಲ ಉತ್ಪನ್ನದಿಂದ ಮುಂದೆ ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ ಮುಂತಾದ ಉಪಉತ್ಪನ್ನಗಳ ಉತ್ಪತ್ತಿಯಾದಂತೆ ಹಾಲುಮತದಿಂದ ಅನೇಕ ಜಾತಿಗಳ ಉದಯವಾಯಿತು~ ಎಂಬ ಶಂ.ಬಾ. ಜೋಶಿಯವರ ಮಾತನ್ನು ಇಲ್ಲಿ ಗಮನಿಸಬಹುದು. `ಕುರುಬ ಹುಟ್ಟುವ ಮುನ್ನ ಕುಲವಿಲ್ಲ, ಜಾತಿಯಿಲ್ಲ, ಕುರುಬನೇ ಆದಿ ಈ ಜಗಕೆ~  ಎಂಬ ಅಲ್ಲಮ ಪ್ರಭುಗಳ ವಚನವು  ಕುರುಬ(ಹಾಲುಮತ) ಜನಾಂಗದ ಪ್ರಾಚೀನತೆಯನ್ನು ಸೂಚಿಸುತ್ತದೆ.ಜನಾಂಗೀಯ ಇತಿಹಾಸದಲ್ಲಿ `ಹಾಲುಮತ ಸಮುದಾಯದ ಒಂದು ಪಂಗಡಕ್ಕೆ ಪ್ರಾಚೀನ ಕಾಲದಲ್ಲಿ `ಹ(ಅ)ಂಡೆ~  ಮತ್ತು `ಅಂಡರ್  ಎಂಬ ಹೆಸರಿತ್ತು ಹಾಗೂ ಕ್ರಿ.ಶ. ಐದನೆಯ ಶತಮಾನದಲ್ಲಿ ಅಂಡಿ ಕುರುಬರು ಮಹಾರಾಷ್ಟ್ರದಲ್ಲಿ ಹಾಲಿನ ವ್ಯಾಪಾರಿಗಳಾಗಿದ್ದರು  ಎಂದು ದಾಖಲಾಗಿದೆ(ಬುಡಕಟ್ಟು ಜನಾಂಗದ ಕುರುಬರು, ಚಾರಿತ್ರಿಕ ವಿಶ್ಲೇಷಣೆ : ಬಿ.ಎಸ್. ರಾಮಭಟ್ಟ, ಕಸ್ತೂರಿ ಮಾಸಿಕ, ಸೆಪ್ಟೆಂಬರ್ 2003, ಪುಟ 34-35).

ಇದಲ್ಲದೇ, `ಕುರುಬರಲ್ಲಿ ಅಂಡೆ(ಹಂಡೆ)ಯವರೆಂಬ ಒಂದು ಪಂಗಡವಿದೆ. ಕ್ರಿ.ಶ. ಎರಡನೆಯ ಶತಮಾನದ ಟಾಲಮಿಯು ಸೂಚಿಸಿದ `ಅಂಡರ  ಜನಾಂಗ ಹಾಗೂ ತಮಿಳು ಪ್ರಾಚೀನ ಕಾವ್ಯ `ಶಿಲಪ್ಪದಿಗಾರಂ~ ದಲ್ಲಿ ಕಾಣಬರುವ ಜನಾಂಗೀಯ ಪದಗಳಾದ ಇಡೈಯರ್,ಅಂಡರ್, ಕುರುಂಬರ್, ವಡುಗರ್ ಎಂಬವು ಒಂದೇ ಕನ್ನಡ ಹಟ್ಟಿಕಾರರ ಜನಾಂಗವಾಗಿದೆ ಎಂದೂ ಮತ್ತು ಪಾಲಿ ಗ್ರಂಥದಲ್ಲಿ ಬರುವ ಅಂಧ, ಅಂಧಕರೂ ಇವರೇ ಆಗಿದ್ದಾರೆ ಎಂದೂ ವಿದ್ವಾಂಸರಾದ ಕೃಷ್ಣಸ್ವಾಮಿ ಅಯ್ಯಂಗಾರರು ಸಿದ್ಧಮಾಡಿ ತೋರಿಸಿದ್ದಾರೆ (The Satwats, Proceedings of the second oriental conference, Calcutta, 1922, P 360, ).

ಈ ಕುರುಬ(ವಜೀರ) ವೀರರು ಹೊಯ್ಸಳ ದೊರೆಗಳ ಕಾಲದಲ್ಲೂ ದಳವಾಯಿಕೆಗೆ ಮತ್ತು ಸಾಹಸಕ್ಕೆ ಹೆಸರಾಗಿದ್ದುದನ್ನು ಕ್ರಿ.ಶ. 1194ರ ಒಂದು ತಾಮ್ರದ ನಿರೂಪವು ಹೇಳುತ್ತದೆ. ಅದು `ಹಂಡೆ ಮನೆತನದ ಮುಮ್ಮಡಿ ದಳವಾಯಿ ರಂಗರಾವುತ ಎಂಬುವವನು ಹೊಯ್ಸಳ ದೊರೆಗಳ ಪರವಾಗಿ ಬಾರಕನೂರು (ಇಂದಿನ ಉಡುಪಿಯ ಹತ್ತಿರದ ಬಾರಕೂರು)ಪ್ರದೇಶದ ಮೇಲೆ ಸೈನ್ಯ ತೆಗೆದುಕೊಂಡು ಹೋಗಿ ಜಯ ಸಾಧಿಸಿದ್ದಕ್ಕೆ ದೊರೆಗಳು ಶ್ವೇತಛತ್ರಿ, ಹಗಲುದೀವಟಿಗೆ, ಮಕರತೋರಣ, ಗಂಟೆ ಸರಪಣಿ, ಒಂಟಿ ಜಂಗು, ನೆಲ್ಲುಹುಲ್ಲುಬಾರಿ ಬಿರುದು ಮುಂತಾದ ಮನ್ನಣೆಗಳನ್ನು ನೀಡಿದ್ದಾಗಿ~ ದಾಖಲಿಸಿದೆ.

ಇಲ್ಲಿ ಗಮನಿಸಬೇಕಾದ ವಿಶೇಷ ಅಂಶವೆಂದರೆ ಈ ಕಾಲದಲ್ಲಿ ಕರ್ನಾಟಕದಲ್ಲಿ ಜೈನಧರ್ಮದ ಪ್ರಭಾವ ಹೆಚ್ಚಿದ್ದು, ಲಿಂಗಾಯತವು ಅದೇ ಆಗ ಉದಿಸುತ್ತಿತ್ತು. ಇಲ್ಲಿ ನಮೂದಿಸಿದ ಬಿರುದುಗಳು ಕುರುಬರ ಕುಲದೈವವಾದ ಬೀರಪ್ಪನ ಭಾವನ್ನಾರು(52) ಬಿರುದುಗಳಲ್ಲಿ ಹಲವಾಗಿದ್ದು, ಅವು ಈ ಪರಂಪರೆಯಲ್ಲಿ ಇಂದಿಗೂ ಕಂಡುಬರುತ್ತವೆ.ಕ್ರಿ. ಶ. 16ನೆಯ ಶತಮಾನದಲ್ಲಿದ್ದ ಹಂಡೆ ಕುರುಬ ಅರಸು ಮನೆತನದ ದೊರೆ ಬಾಲದ ಹನುಮಪ್ಪ ನಾಯಕನು ಶೈವ(ಹಾಲುಮತದವರು ಮೂಲ ಶೈವರು) ಸಂಪ್ರದಾಯವನ್ನು ಅನುಸರಿಸುತ್ತ ಲಿಂಗಾಯತದಲ್ಲಿ ಶ್ರದ್ಧೆಯನ್ನಿಟ್ಟುಕೊಂಡಿದ್ದರೂ, ತಾನು `ಕುರುಬ ಕುಲ ಸಂಜಾತ~ನೆಂದು ಹೇಳಿಕೊಂಡಿದ್ದಾನೆ.

ವಿದ್ವಾಂಸರಾದ ಡಾ. ಬಿ. ರಾಜಶೇಖರಪ್ಪ ಅವರು ಶೋಧಿಸಿದ ಕ್ರಿ. ಶ. ಸುಮಾರು 1558ರಲ್ಲಿ ರಚಿಸಿದ ಮೂರು ತಾಮ್ರ ಶಾಸನಗಳಲ್ಲಿ ಬಾಲದ ಹನುಮಪ್ಪ ನಾಯಕನ ವಂಶಜನಾದ ಹಂಡೆ ತಿಮ್ಮರಾವುತನ ಸಾಹಸಗಳನ್ನು ಹೇಳಲಾಗಿದೆ.

ನಿಯಮಿತ ಅಳತೆಯ ಪ್ರಕಾರ ನಿರ್ಮಿಸಿದ ಕಂದಕದಲ್ಲಿ ಹುಲಿ ಮತ್ತು ಸರ್ಪಗಳೊಡನೆ ಸೆಣಸಿ ಗೆದ್ದು ಬಂದ ತಿಮ್ಮರಾವುತನು ವಿಜಯನಗರ ಸಾಮ್ರೋಟರಲ್ಲಿ `ಸ್ವಾಮಿ, ನಮ್ಮ ಹಂಡೆ ದನುಗರು(ಕುರುಬ) ಜನಾಂಗದಲ್ಲಿ ಹೆಣ್ಣಿಗೆ 101 ವರಹ(ತೆರ) ಕನ್ಯಾಶುಲ್ಕ ಕೊಡಬೇಕು; ಮದುವೆ ಸುಂಕ ಎಂದು ಸರ್ಕಾರಕ್ಕೆ 7 ವರಹ ಕೊಡಬೇಕು. ಹೀಗೆ 108 ವರಹ ಕೊಡುವಷ್ಟು ಶಕ್ತಿ ಇಲ್ಲದ ಅನೇಕ ಕುಟುಂಬಗಳಲ್ಲಿ ಯುವಕರು ಮದುವೆಯಾಗದೇ ಉಳಿದಿದ್ದಾರೆ.ಸರ್ಕಾರಕ್ಕೆ ಪಾವತಿಸಬೇಕಾದ ಸುಂಕವನ್ನು ಮಾಪು ಮಾಡಬೇಕೆಂದು~  ವರವನ್ನು ಕೇಳುತ್ತಾನೆ. ಈ ತಾಮ್ರಶಾಸನದಲ್ಲಿ ಈ ಹಂಡೆರಾವುತರ ಜಾತಿ ದಾಖಲಾಗಿರುವುದನ್ನು ಗಮನಿಸಬಹುದು. ಹೀಗೆ ಪ್ರಾಚೀನಪೂರ್ವ ಕಾಲದಿಂದಲೂ ಹಾಲುಮತ ಸಮುದಾಯದಲ್ಲಿ ಒಂದಾಗಿ ಬಂದ ಅಂಡೆ ಕುರುಬ(ವಜೀರ)ರನ್ನು ಕುರಿತು ಕ್ರಿ.ಶ. 1901ರ ಮೈಸೂರುರಾಜ್ಯದ ಜನಗಣತಿಯಲ್ಲಿ  (The kuruba or Shephard caste is mainly consists of three divisions Hatti kankana(cotton thread), Unne Kankana(woolen thread) and Hande kuruba. Later Hande kurubas are so called because they use to strain the milk of their sheep into a bamboo, cylinder styled Ande or Hande. This practice has now died out(The Mysore tribes and castes, Vol IV, by H.V. Nanjundaih and Rao Bahadur L.K. AnanthaKrishna Iyyar) ಎಂದು ನಮೂದಿಸಲಾಗಿದೆ.ಹೀಗೆ ಇತಿಹಾಸದುದ್ದಕ್ಕೂ ಕುರುಬ ಸಮುದಾಯದಿಂದ ಬೇರ್ಪಡಿಸಲಾಗದ (nseperable part) ಪಂಗಡವಾಗಿ ಉಳಿದ ಹಂಡೇ ಕುರುಬ (ವಜೀರ) ಜನಾಂಗವು ಹಾಲುಮತದ ಮೂಲದಿಂದ ಬಂದ ಸಮಾಜವಾಗಿದೆ. ಇದಕ್ಕೆ ಹಾಲುಮತ ಅಧ್ಯಯನ ಪೀಠ ಸಂಪಾದಿಸಿದ ಹಲವು ಹತ್ತಾರು ದಾಖಲೆಗಳನ್ನು ಅವಲೋಕಿಸಬಹುದು.ಆದರೆ ಇತ್ತೀಚೆಗೆ ಕೆಲವೇ ಕೆಲವು ಮನೆತನಗಳು `ವೀರಶೈವ ಹಂಡೆ ವಜೀರ~  ಎಂಬ ನಾಮಕರಣದೊಂದಿಗೆ ಹೊಸಜಾತಿ ಸೃಷ್ಟಿಸಿ, ಕುರುಬವನ್ನು ತ್ಯಜಿಸಿ ಹೊಸ ಜಾತಿಗೆ ಮತಾಂತರವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.

ಇಷ್ಟೇ ಆದರೆ ಅಡ್ಡಿಯಿಲ್ಲ, ಮೂಲ ಇತಿಹಾಸವನ್ನು ತಿರುಚಿ, ವಿರೂಪಗೊಳಿಸಿ ಮುಂಬರುವ ಸಮಾಜಕ್ಕೆ ಅಪಚಾರ ಮಾಡುತ್ತ ಡಾ. ಲಿಂಗದಹಳ್ಳಿ ಹಾಲಪ್ಪನವರು ತಿಳಿಸಿದಂತೆ ಹೋಳಿಗೆ ತುಪ್ಪದ ಸ್ವಾದವನ್ನು ಸವಿಯುತ್ತಿರುವುದು ಅಕ್ಷಮ್ಯ ಅಪರಾಧವೂ ಹೌದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry