ಗುರುವಾರ , ಮೇ 6, 2021
23 °C

ಹಂತಗಳ ಚರ್ಚೆಯಲ್ಲಿ ಮರೆತ ಸತ್ಯಗಳು

ಮತ್ತೀಹಳ್ಳಿ ಮದನಮೋಹನ Updated:

ಅಕ್ಷರ ಗಾತ್ರ : | |

ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರ ಹಿಂದೆಯೇ ಪಂಚಾಯತ್ ರಾಜ್ ಸಂಸ್ಥೆಗಳ ಸ್ವರೂಪದ ಕುರಿತಂತೆ ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದೆ. ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಲ್ಲಿ ಬದಲಾವಣೆ ಮಾಡುವುದು ಅಷ್ಟು ಸುಲಭದ ಸಂಗತಿಯಲ್ಲ. ಹೀಗಾಗಿ ತಾಲ್ಲೂಕು ಪಂಚಾಯಿತಿಗಳನ್ನು ಕೈಬಿಟ್ಟು ಎರಡೇ ಹಂತದ ಹಳೆಯ ವ್ಯವಸ್ಥೆಗೆ ಮರಳಬೇಕೆಂಬ ಅಭಿಪ್ರಾಯ ಸದ್ಯಕ್ಕೆ ಅಪ್ರಸ್ತುತ.ಮುಖ್ಯಮಂತ್ರಿ ಇದನ್ನು ಒಂದು ವೈಯಕ್ತಿಕ ನೆಲೆಯ ಅಭಿಪ್ರಾಯವಾಗಿಯಷ್ಟೇ ಹೇಳಿದ್ದಾರೆ ಎಂಬ ಸ್ಪಷ್ಟೀಕರಣ ಈಗಾಗಲೇ ಬಂದಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ಕುರಿತಂತೆ ಯಾವ ಚರ್ಚೆಗಳೂ ಆರಂಭವಾಗಿಲ್ಲ. ಕರ್ನಾಟಕವೂ ಸೇರಿದಂತೆ ಯಾವ ರಾಜ್ಯ ಸರ್ಕಾರವೂ ಈ ಕುರಿತ ಸಾಂವಿಧಾನಿಕ ತಿದ್ದುಪಡಿಗಾಗಿ ಈ ತನಕ ಕೇಂದ್ರಕ್ಕೆ ಮನವಿ ಮಾಡಿಲ್ಲ. ಆದ್ದರಿಂದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದ್ಯಕ್ಕೆ ಯಾರೂ ಬದಲಾಯಿಸುವಂತೆ ಕಾಣಿಸುತ್ತಿಲ್ಲ.ರಾಜಕೀಯ ಪ್ರಬುದ್ಧತೆಯುಳ್ಳ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಇಂಥದ್ದೊಂದು ಮಾತನ್ನು ಹೇಳುವ ಅಗತ್ಯ ಏಕೆ ಬಂತು ಎಂಬುದನ್ನು ನಾವು ಅರಿಯಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಂಚಾಯತ್ ರಾಜ್ ಖಾತೆಯ ಮಂತ್ರಿ ಎಚ್.ಕೆ.ಪಾಟೀಲ್ ಅವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಗಳ ಮಾತಿನ ಸಾರಾಂಶ ತಾಲ್ಲೂಕು ಪಂಚಾಯಿತಿ­ಗಳ ಕಾರ್ಯವೈಖರಿ ಸಮರ್ಪಕವಾಗಿಲ್ಲ ಎಂಬುದು. ಈ ವಿಷಯದ ಕುರಿತಂತೆ ನಾವೆ­ಲ್ಲರೂ ಆಲೋಚಿಸಬೇಕಾಗಿದೆ. ಇದು ಕೇವಲ ತಾಲ್ಲೂಕು ಪಂಚಾಯಿತಿಗಷ್ಟೇ ಸೀಮಿತವಾಗಿ ಉಳಿಯಬೇಕಾದ ಚರ್ಚೆಯಲ್ಲ.ಪಂಚಾಯತ್ ರಾಜ್ ವ್ಯವಸ್ಥೆಯ ಮೂರು ಹಂತಗಳಿಗೆ ವಹಿಸಿಕೊಟ್ಟಿರುವ ಜವಾಬ್ದಾರಿ ಅದನ್ನು ಅವರು ನಿರ್ವಹಿಸುತ್ತಿರುವ ಪರಿ, ಮೂರು ಹಂತಗಳ ಸಂಸ್ಥೆಗಳ ಮಧ್ಯೆ ಇರುವ ಮತ್ತು ಇರಬೇಕಾಗಿದ್ದ ಸಂಬಂಧದ ಪುನರ್ ವಿಮರ್ಶೆಗೆ ಮುಖ್ಯಮಂತ್ರಿ­ಗಳ ಮಾತು ಚಾಲನೆ ನೀಡಿದೆ. ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಎರಡು ದಶಕಗಳು ತುಂಬಿರುವ ಈ ಹೊತ್ತಿನಲ್ಲಿ ಒಟ್ಟಾರೆ ಸಾಂಸ್ಥಿಕ ಸ್ವರೂಪದಲ್ಲಿ ತರಬೇಕಾಗಿರುವ ಗುಣಾತ್ಮಕ ಬದಲಾವಣೆಯ ವಿಶ್ಲೇಷಣೆ ನಡೆಯಬೇಕಾಗಿದೆ. ಇದರ ಬಗ್ಗೆ ವಿಧಾನಸಭೆಯ ಒಳಗೆ ಅಥವಾ ಹೊರಗೆ ಯಾವ ಗಂಭೀರ ಚರ್ಚೆಯೂ ಆಗದಿರುವುದು ಗಮನಾರ್ಹ. ಈ ಚರ್ಚೆಗೆ ಇನ್ನು ಮುಂದಾ­ದರೂ ಸಚಿವರು ಮತ್ತು ಶಾಸಕರು ಮುಂದಾಗ­ಬೇಕು. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯವೇನೂ ಇಲ್ಲ.ಸಂವಿಧಾನದ 73ನೇ  ತಿದ್ದುಪಡಿಯ ಮೂಲಕ ಹನ್ನೊಂದನೆಯ ಪರಿಚ್ಛೇದವನ್ನು ಸೇರಿಸಿ ಕೇಂದ್ರ, ರಾಜ್ಯ ಮತ್ತು ಅವರಿಬ್ಬರ ಸಮವಾದ ಕಾರ್ಯವ್ಯಾಪ್ತಿಯ ಜೊತೆಗೆ ಪಂಚಾಯತ್ ಪಟ್ಟಿಯೊಂದನ್ನು ಸೇರಿಸಲಾಗಿದೆ. ಪಂಚಾಯತ್ ರಾಜ್  ಸಂಸ್ಥೆಗಳಿಗೆ 29 ಕಾರ್ಯಗಳನ್ನು ವಹಿಸಲಾಗಿದೆ. ಇದರನ್ವಯ ಕಾರ್ಯಚಟುವಟಿಕೆ ನಕ್ಷೆಯನ್ನು ತಯಾರಿಸಿ  ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಕಾರ್ಯ­ವ್ಯಾಪ್ತಿಯನ್ನು ನಿರ್ಧರಿಸಲಾಗಿದೆ. ಹಣ ಹಂಚಿಕೆಗೆ ಆಧಾರವಾಗಿರುವುದೂ ಈ ಕಾರ್ಯ­ಚಟುವಟಿಕೆ ನಕ್ಷೆಯೇ. ಈ ನಕ್ಷೆಯನ್ನು ರೂಪಿಸಿರುವುದು ಕೇಂದ್ರ ಸರ್ಕಾರ. ಅದೇ ಮಾದರಿಯನ್ನು ಈಗಲೂ ಬಳಸಲಾಗುತ್ತಿದೆ.ಅಧಿಕಾರ ವಿಕೇಂದ್ರಿಕರಣದ ಬಗೆಗೆ ಕರ್ನಾಟಕ ಸರ್ಕಾರ ರಚಿಸಿದ್ದ  ಅಧಿಕಾರಿಗಳ ಕಾರ್ಯಪಡೆಯೊಂದು  2002ರಲ್ಲಿ ವರದಿ­ಯೊಂದನ್ನು ನೀಡಿತ್ತು. ಅದರ ಪ್ರಕಾರ ಚಟುವಟಿಕೆಯ ನಕ್ಷೆಯಲ್ಲಿ ಕೆಲ ಬದಲಾವಣೆ­ಗಳ ಅಗತ್ಯವಿದೆ. ಈ ಶಿಫಾರಸುಗಳಂತೆ ತಾಲ್ಲೂಕು ಪಂಚಾಯಿತಿಯ ಮುಖ್ಯ ಕೆಲಸ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾ­ಯಿತಿಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದು. ಅಂದರೆ  ಜಿಲ್ಲಾ ಪಂಚಾ­ಯಿತಿಯ ಕೆಲಸಕ್ಕೆ ಸಹಾಯ ಮಾಡುವುದರ ಜೊತೆಗೆ ಗ್ರಾಮ ಪಂಚಾಯಿತಿಗಳ ಕಾರ್ಯ­ನಿರ್ವಹಣೆಯ ಉಸ್ತುವಾರಿಯನ್ನು ನೋಡಿ­ಕೊಳ್ಳುವುದು.ಅಭಿವೃದ್ಧಿ ಕಾರ್ಯಗಳಲ್ಲಿ ಸಣ್ಣ ನೀರಾವರಿ ಯೊಜನೆಗಳನ್ನು ಕಾರ್ಯರೂಪಕ್ಕೆ ತರುವುದರ ಹೊರತಾಗಿ ಇನ್ನಾವ ಹೆಚ್ಚಿನ ಜವಾಬ್ದಾರಿಯನ್ನೂ ತಾಲ್ಲೂಕು ಪಂಚಾ­ಯಿತಿಗಳಿಗೆ ಕೊಟ್ಟಿಲ್ಲ. ಈ ವರದಿ ಹೇಳುವಂತೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರವಿರುವದು ಗ್ರಾಮ ಪಂಚಾಯಿತಿಗಳಿಗೆ ಮಾತ್ರ. ತಾಲ್ಲೂಕು ಮತ್ತು ಜಿಲ್ಲಾ ಪಂಚಾ­ಯಿತಿಗಳ ಪಾತ್ರವೇನಿದ್ದರೂ ಗ್ರಾಮ ಪಂಚಾ­ಯಿತಿಗಳು ಪರಿಣಾಮಕಾರಿಯಾಗಿ ಕಾರ್ಯ­ನಿರ್ವಹಿಸುವುದಕ್ಕೆ ಬೇಕಿರುವ ಸಹಾಯ ಮಾಡುವುದು ಮಾತ್ರ. ಅಂದರೆ ಗ್ರಾಮ ಮಟ್ಟ­ದಲ್ಲಷ್ಟೇ ಕೈಗೊಳ್ಳಲು ಸಾಧ್ಯವಿಲ್ಲದ ಯೋಜನೆ­ಗಳನ್ನು ಕಾರ್ಯರೂಪಕ್ಕೆ ತರುವುದು ಇತ್ಯಾದಿ­ಗಳು ಇವುಗಳ ವ್ಯಾಪ್ತಿಯಲ್ಲಿರಬೇಕು ಎಂದರ್ಥ.ಕಾರ್ಯಪಡೆಯ ಶಿಫಾರಸುಗಳು ಕಾರ್ಯ­ರೂಪಕ್ಕೆ ಬಂದವೇ? ಇದರ ಪರಿಣಾಮ­ವೇನಾಗಿದೆ ಎಂಬುದರ ಕುರಿತ ಮಾಹಿತಿ ಎಲ್ಲಿಯೂ ಸಿಗುವುದಿಲ್ಲ. ಪಂಚಾಯತ್ ರಾಜ್ ಸಂಸ್ಥೆಗಳ ಮಟ್ಟಿಗೆ ಚಟುವಟಿಕೆ ನಕ್ಷೆ ಎಂಬುದು ಭಗವದ್ಗೀತೆಯಿದ್ದಂತೆ. ಅದರಲ್ಲಿ ಬದಲಾವಣೆ­ಯಾದರಷ್ಟೇ ಒಟ್ಟು ಕಾರ್ಯನಿರ್ವಹಣೆಯ ಸ್ವರೂಪದಲ್ಲಿ ಬದಲಾವಣೆಯಾಗುತ್ತದೆ. ಈ ತನಕದ ಬೆಳವಣಿಗೆಗಳನ್ನು ಗಮನಿಸಿದರೆ ಇಂಥ ಯಾವ ಬದಲಾವಣೆಗಳ್ಯಾವೂ ಆಗಿಲ್ಲ.ಪಂಚಾಯತ್ ರಾಜ್ ಸಂಸ್ಥೆಗಳು ಗ್ರಾಮೀಣ ಜನರ ಆಶೋತ್ತರಗಳನ್ನು ಈಡೇರಿಸುತ್ತಿಲ್ಲ ಮತ್ತು ಅವರಲ್ಲಿ ಹೊಸ ವ್ಯವಸ್ಥೆಯ ಬಗೆಗೆ ನಂಬಿಕೆ ಹುಟ್ಟಿಸಿಲ್ಲವೆಂದಾದರೆ ಕಾರ್ಯ ಚಟುವಟಿಕೆ ನಕ್ಷೆಯಲ್ಲಿಯೇ ಏನೋ ಸಮಸ್ಯೆ ಇದೆ ಎಂದೇ ಭಾವಿಸಬೇಕಾಗುತ್ತದೆ. ನಕ್ಷೆ ವಾಸ್ತವಕ್ಕೆ ಸ್ಪಂದಿಸುತ್ತಿಲ್ಲ ಅಥವಾ ಅದರ ಅನುಷ್ಠಾನದಲ್ಲಿ ಲೋಪದೋಷಗಳಿವೆ ಎಂಬ ಎರಡರಲ್ಲಿ ಒಂದಂತೂ ನಿಜ. ಇದರಲ್ಲಿ ಯಾವುದು ನಿಜವಾಗಿದ್ದರೂ ಚಟುವಟಿತೆಯ ನಕ್ಷೆಯ ಮೇಲೆ ಮತ್ತೊಮ್ಮೆ ಗಮನಹರಿಸ­ಬೇಕಾದುದು ಈ ಹೊತ್ತಿನ ಅಗತ್ಯ.ರಾಜ್ಯ ಬಜೆಟ್‌ನ ಪಂಚಾಯತ್ ವಿಂಡೋ ಗಮನಿಸಿದಾಗ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯವ್ಯಾಪ್ತಿ ಮತ್ತು ಜವಾಬ್ದಾರಿಗಳ ಬಗೆಗೆ ಸಿಗುವ ಚಿತ್ರಣ ಬೇರೆ. ಇಲ್ಲಿರುವುದು ಒಂದು ತರಹದ ಕೇಂದ್ರೀಕೃತ ವ್ಯವಸ್ಥೆ. ಎಲ್ಲ ಅಧಿಕಾರವೂ ಜಿಲ್ಲಾ ಪಂಚಾಯಿತಿಯಲ್ಲಿ ಕೇಂದ್ರೀಕೃತವಾದಂತಿದೆ.  ಸುಮಾರು ಅರ್ಧ­ದಷ್ಟು ಹಣವನ್ನು ಜಿಲ್ಲಾ ಪಂಚಾಯಿತಿಗಳಿಗೆ ಕೊಡಲಾಗಿದೆ. ಅಳಿದ ಅರ್ಧದಲ್ಲಿ, ಸಿಂಹ ಪಾಲು ತಾಲ್ಲೂಕು ಪಂಚಾಯಿತಿಗಳಿಗೆ ಹೋಗಿ  ಗ್ರಾಮ ಪಂಚಾಯಿತಿಗಳಿಗೆ ಕೇವಲ ಶೇ ೧೮ರಷ್ಟ ಹಣ ದೊರೆಯುತ್ತದೆ. ಗ್ರಾಮ ಪಂಚಾಯಿತಿ­ಗಳೇ ನಿರ್ವಹಿಸಬೇಕಾದ ಗ್ರಾಮೀಣ ಉದ್ಯೋಗ ಭರವಸೆಯ ಎಲ್ಲಾ ಹಣವನ್ನೂ ಜಿಲ್ಲಾ ಪಂಚಾಯಿತಿಗಳಿಗೆ ಕೊಡಲಾಗಿದೆ. ಅಂದರೆ ಇಡೀ ವ್ಯವಸ್ಥೆಯ ಕೇಂದ್ರವಾಗಿರಬೇಕಾಗಿದ್ದ ಗ್ರಾಮ ಪಂಚಾಯಿತಿ ಅಂಚಿನಲ್ಲಿದೆ.ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸರ್ಕಾರ 40 ವಲಯಗಳಲ್ಲಿ ಹಣ ಮಂಜೂರು ಮಾಡುತ್ತಿದೆ. ಜಿಲ್ಲಾ ಪಂಚಾಯಿತಿಗೆ 35 ವಲಯಗಳಿಗೆ ಹಣ ದೊರೆಯುತ್ತದೆ. ಇದರಲ್ಲಿ 21 ವಲಯಗಳು ಜಿಲ್ಲಾ ಪಂಚಾಯಿತಿಗೇ ಮೀಸಲಾಗಿವೆ. ತಾಲ್ಲೂಕು ಪಂಚಾಯಿತಿಗಳಿಗೆ 16 ವಲಯಗಳಲ್ಲಿ ಹಣ ದೊರೆಯುತ್ತದೆ. ಇದರಲ್ಲಿ ತಾಲ್ಲೂಕು ಪಂಚಾಯಿತಿಗೇ ಮೀಸ­ಲಾಗಿರುವ ವಲಯಗಳು ಮೂರು. ಗ್ರಾಮ ಪಂಚಾಯಿತಿಗಳಿಗೆ ಹತ್ತು ವಲಯಗಳಲ್ಲಿ ಹಣ ದೊರೆಯುತ್ತದೆ. ಇದರಲ್ಲಿ ಗ್ರಾಮ ಪಂಚಾ­ಯಿತಿಗೇ ಮೀಸಲಾಗಿರುವ ವಲಯಗಳು ಮೂರು ಮಾತ್ರ. ಅಂದರೆ ಪಂಚಾಯತ್ ರಾಜ್ ಸಂಸ್ಥೆಗಳೆಲ್ಲವೂ ಸಮಾನ ಎಂಬ ಮೂಲ ತತ್ವವೇ ಕಾಣೆಯಾಗಿದೆ.ಎಲ್ಲವೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ  ನಿರ್ಧಾರ­ವಾಗಿ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರಬೇಕು. ಪರಿಸ್ಥಿತಿ ಹೀಗಾದಾಗ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಕೆಲಸವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಾಮಗಾರಿಗಳು ಮತ್ತು ಯೋಜನೆಗಳ ಅನುಷ್ಠಾನದ ಹೊಣೆ­ಯನ್ನು ಜಿಲ್ಲಾ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹೊತ್ತಿರುವಾಗ ಅದರ ಮೇಲ್ವಿ­ಚಾರಣೆ ನಡೆಸುವುದಕ್ಕೆ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಾಧ್ಯವೇ?ತಾವು ಸದಸ್ಯರಾಗಿರುವ ಸಂಸ್ಥೆಯ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳಿಗೆ ನಿಯಂತ್ರಣವಿಲ್ಲ­ದಿರುವ ಸ್ಥಿತಿಯಲ್ಲಿ ಜಿಲ್ಲಾ ಪಂಚಾಯಿತಿಯ ಅಡಿಯಲ್ಲಿ ಕೆಲಸ ಮಾಡುವವರನ್ನು ನಿಯಂತ್ರಿ­ಸುವುದು ಸಾಧ್ಯವೇ? ನಿರ್ಧಾರ ಮತ್ತು ನಿಯಂತ್ರಣದ ಅಧಿಕಾರವಿಲ್ಲದೇ ಇರುವ ಉಸ್ತುವಾರಿ ಸಾಧ್ಯವಾಗುವುದಿಲ್ಲ. ಆಗ ಜನರು ನೇರವಾಗಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಸಂಪರ್ಕಿಸುತ್ತಾರೆ ಅಥವಾ ಶಾಸಕರ ಬಳಿಗೆ ಓಡುತ್ತಾರೆಯೇ ಹೊರತು ಗ್ರಾಮ ಪಂಚಾಯಿತಿ ಸದಸ್ಯರನ್ನು ನೆಚ್ಚಿಕೊಳ್ಳುವುದಿಲ್ಲ. ಗ್ರಾಮ ಪಂಚಾಯಿತಿಗಳಿಗೆ ತಮ್ಮೂರಿನ ಶಾಲೆಯನ್ನು ಉಸ್ತುವಾರಿ, ತಮ್ಮದೇ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉಸ್ತು­ವಾರಿಯೂ ಸಾಧ್ಯವಿಲ್ಲದಿರುವಾಗ ಜನರು ಅವುಗಳನ್ನೇಕೆ ನಂಬುತ್ತಾರೆ?ಗ್ರಾಮ ಸಭೆಗಳ ಮೂಲಕ ಫಲಾನುಭವಿ­ಗಳನ್ನು ಆರಿಸ ಬೇಕಾದ ಪ್ರಕ್ರಿಯೆಯಲ್ಲಿಯೂ ಶಾಸಕರು ಮೂಗು ತೂರಿಸುತ್ತಿರುವುದು ಹಳೆಯ ವಿಚಾರ. ಒಟ್ಟಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಹಂತ ಎಷ್ಟಿದೆ ಎಂಬುದನ್ನು ಚರ್ಚಿಸುವ ಮೊದಲು ಇರುವ ಹಂತಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳ­ಲಾಗುತ್ತಿದೆ ಎಂಬುದರ ಚರ್ಚೆಯನ್ನು ಆರಂಭಿಸ­ಬೇಕಾದ ಅಗತ್ಯವಿದೆ. ಈಗಿರುವ ವ್ಯವಸ್ಥೆ ಸರಿಯಾಗಿಲ್ಲದೇ ಇರುವುದಕ್ಕೆ ಈ ಸಂಸ್ಥೆಗಳ ಸದಸ್ಯರಷ್ಟೇ ಕಾರಣರಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ.ಶಾಸಕರಿಂದ ಆರಂಭಿಸಿ ಜಿಲ್ಲಾ ಪಂಚಾಯಿತಿಯ ಸದಸ್ಯರ ತನಕ ತಮ್ಮ ಮಟ್ಟದವರೆಗೆ ವಿಕೇಂದ್ರೀಕರಣ­ವಿದ್ದರೆ ಸಾಕು ಎಂದು ಭಾವಿಸುತ್ತಾರೆಯೇ ಹೊರತು ಅದು ತಮಗಿಂತ ಕೆಳಗಿನ ಮಟ್ಟಕ್ಕೂ ಇಳಿಯಬೇಕು ಎಂದು ಭಾವಿಸುವುದಿಲ್ಲ. ಈ ಮನಃಸ್ಥಿತಿ ಬದಲಾಗುವ ತನಕ ಯಾವ ಬದಲಾವಣೆಯೂ ಸಾಧ್ಯವಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.