ಬುಧವಾರ, ಮೇ 25, 2022
31 °C

ಹಂದಿಕಾಟಕ್ಕೆ ರೋಸಿಹೋದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಪಟ್ಟಣದಲ್ಲಿ ಮಾತ್ರ ಕಂಡುಬರುತ್ತಿದ್ದ ಹಂದಿಗಳು ಈಗ ಗ್ರಾಮೀಣ ಭಾಗಕ್ಕೂ ಲಗ್ಗೆಯಿಟ್ಟಿದ್ದು ಹಂದಿಗಳ ಕಾಟಕ್ಕೆ ಸಾರ್ವಜನಿಕರು ರೋಸಿಹೋಗಿದ್ದಾರೆ.ಪಟ್ಟಣದಲ್ಲಿ ಮೊದಲಿನಿಂದಲೂ ಹಂದಿಗಳು ಓಡಾಡಿಕೊಂಡು ಇರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿಗಳ್ಳಿ, ನಂದಿಕಟ್ಟಾ, ಮಳಗಿ ಸೇರಿದಂತೆ ಹಲವು ಗ್ರಾಮೀಣ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು.ಹಂದಿಗಳ ಕಾಟದಿಂದ ಗ್ರಾಮೀಣ ಭಾಗದಲ್ಲಿ ಚರಂಡಿಯಂಥ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರಿ ಶಾಲೆಗಳ ಅಂಗಳದಲ್ಲಿ ಬಿಸಿಯೂಟದ ವೇಳೆಯಲ್ಲಿ ಇವುಗಳ ಓಡಾಟದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಮನೆಯ ಹಿತ್ತಲಿನಲ್ಲಿ ಓಡಾಡುತ್ತಾ ಒಂದೊಂದು ಸಲ ಮನೆಯ ಒಳಗೆ ಬರಲು ಯತ್ನಿಸುತ್ತಿವೆ.

ಇದರಿಂದ ಮನೆಯ ಸುತ್ತಲಿನ ವಾತಾವರಣ ಹದಗೆಡುತ್ತಿದ್ದು ಹಂದಿಗಳನ್ನು ಗ್ರಾಮೀಣ ಭಾಗದಿಂದ ಓಡಿಸಲು ಕ್ರಮ ಕೈಗೊಂಡು ಹಂದಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕು ಎಂದು ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಹಲವರು ದೂರಿದ್ದರು.ಸಾಂಕ್ರಾಮಿಕ ರೋಗಗಳನ್ನು ಹರಡಲು ಕಾರಣವಾಗುವ ಹಂದಿಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ಹಂದಿಗಳ ಸಾಕಣಿಕೆ ಮಾಡುತ್ತಿರುವ ಮಾಲೀಕರಿಗೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹಂದಿಗಳನ್ನು ಬಿಡದಂತೆ ಎಚ್ಚರಿಕೆ ನೀಡಿ ಅವುಗಳನ್ನು ಹಿಡಿದುಕೊಂಡು ಹೋಗಲು ಸೂಚಿಸಬೇಕು. ಮಾಲೀಕರು ಹಂದಿಗಳನ್ನು ಹಿಡಿದುಕೊಂಡು ಹೋಗದಿದ್ದರೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಪಟ್ಟಣಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ  ಪ.ಪಂ.ಮುಖ್ಯಾಧಿಕಾರಿ ಗಿರೀಶ ಅವರಿಗೆ ಸೂಚಿಸಿದ್ದರು.ಆದರೂ ಪಟ್ಟಣದಲ್ಲಿ ಹಂದಿಗಳ ಓಡಾಟ ನಿರಂತರವಾಗಿ ಮುಂದುವರಿದಿದ್ದು ಸ್ವಚ್ಛತೆ ಕಾಣದಿರುವ ಚರಂಡಿಗಳು ಇವುಗಳಿಗೆ ನೆಚ್ಚಿನ ತಾಣಗಳಾಗಿವೆ. ಗುಂಪು ಗುಂಪಾಗಿ ಕಂಡುಬರುವ ಹಂದಿಗಳು ಮನೆಯ ಸುತ್ತಲೂ ಓಡಾಡುತ್ತಾ ಪರಿಸರವನ್ನು ಹೊಲಸು ಮಾಡುತ್ತಿವೆ ಎಂದು ಸಾರ್ವಜನಿಕರು ದೂರುತ್ತಾರೆ.`ಹಂದಿಗಳ ಹಾವಳಿಯನ್ನು ನಿಯಂತ್ರಿಸಲು ಈಗಾಗಲೇ ಹಂದಿ ಮಾಲಿಕರ ಸಭೆಯನ್ನು ಕರೆಯಲು ತೀರ್ಮಾನಿಸಲಾಗಿದೆ. ಹಂದಿಗಳನ್ನು ಹಿಡಿದುಕೊಂಡು ಹೋಗಲು ಮಾಲಿಕರಿಗೆ ಸೂಚನೆ ನೀಡಲಾಗುವದು. ಒಂದು ವೇಳೆ ಅವರು ನಿಗದಿತ ಸಮಯದಲ್ಲಿ ಹಂದಿಗಳನ್ನು ಹಿಡಿದುಕೊಂಡು ಹೋಗದಿದ್ದರೇ ಹುಬ್ಬಳ್ಳಿ-ಧಾರವಾಡದ ಒಂದು ತಂಡವು ಗುತ್ತಿಗೆ ಆಧಾರದ ಮೇಲೆ ಹಂದಿಗಳನ್ನು ಹಿಡಿಯಲು ಒಪ್ಪಿಗೆ ನೀಡಿದೆ ಅದರಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಪ.ಪಂ.ಮುಖ್ಯಾಧಿಕಾರಿ ಗಿರೀಶ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.