ಶನಿವಾರ, ಜನವರಿ 18, 2020
20 °C

ಹಂಪಿ ಉತ್ಸವದಲ್ಲಿ ಹಿಂದಣ ಸಂಭ್ರಮದ ಮೆಲುಕು!

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ವಿಜಯ­ನಗರ ಸಾಮ್ರಾಜ್ಯದ ವೈಭವವನ್ನು ಸಾರುವ ನಿಟ್ಟಿನಲ್ಲಿ ನಡೆಸುವ ಉತ್ಸವದ ಭರಾಟೆ ಇನ್ನಷ್ಟೇ ಆರಂಭವಾಗಬೇಕಿದ್ದು,  ಕಲೆ, ಸಂಸ್ಕೃತಿಯ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.ಮೈಸೂರು ದಸರಾ ಆಚರಣೆಯನ್ನು ಹೊರ­ತು­ಪಡಿಸಿದರೆ, ರಾಜ್ಯದಲ್ಲಿಯೇ ಇನ್ನೊಂದು ಪ್ರಮುಖ ಜನೋತ್ಸವವಾಗಿ ರೂಪುಗೊಂಡಿರುವ ಹಂಪಿ ಉತ್ಸವ, ಮೊದಲು ಕನಕ– ಪುರಂದರ ಉತ್ಸವದ ಹೆಸರಿನಲ್ಲಿ ನಡೆಯುತ್ತಿದ್ದಾದರೂ ನಂತರದ ದಿನಗಳಲ್ಲಿ ಮೂರು ದಿನಗಳ ಕಾಲ ‘ಹಂಪಿ ಉತ್ಸವ’ವಾಗಿ ರೂಪುಗೊಂಡಿದೆ.ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ್‌ ಅವರ ಕಲ್ಪನೆಯ ಕೂಸಾಗಿ, ಸಾಂಸ್ಕೃತಿಕ ಮುತುವರ್ಜಿಯಿಂದಾಗಿ 1987ರಿಂದ ಹಂಪಿಯಲ್ಲಿ ಆರಂಭವಾಗಿರುವ ಉತ್ಸವದ ಆಚರಣೆಯು, ಕಾಲಕ್ರಮೇಣ ನಾಡಿನ ಕಲಾಸಕ್ತರ ಗಮನ ಸೆಳೆಯುತ್ತಿದ್ದು, ರಾಜಕೀಯ ಮುಖಂಡರಿಗೂ ಉತ್ಸವದ ಸಂಘಟನೆ ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ.2014ರ ಜನವರಿ 10ರಿಂದ ಮೂರು ದಿನಗಳ ಕಾಲ ನಡೆಯಲಿರುವ ಸಂಭ್ರಮಾಚರಣೆಯಲ್ಲಿ ಇದುವರೆಗೆ ನಡೆದಿರುವ ಉತ್ಸವಗಳ ಛಾಯಾಚಿತ್ರ ಹಾಗೂ ವೀಡಿಯೋ ತುಣುಕುಗಳನ್ನು ಪ್ರದರ್ಶಿಸುವ ಮೂಲಕ ಆ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಲು ಅವಕಾಶ ಒದಗಿಸಲಾಗುತ್ತಿದೆ.ಪ್ರಮುಖ ವೇದಿಕೆಯನ್ನು ಸ್ಥಾಪಿಸುವ ಸ್ಥಳದಲ್ಲೇ ಬೃಹದಾಕಾರದ ಶಾಮಿಯಾನ ಹಾಕುವ ಮೂಲಕ, ಇದುವರೆಗೆ ನಡೆದ ಉತ್ಸವಗಳ ಪ್ರಮುಖ ಘಟನಾವಳಿಗಳ ಒಂದು ಸಾವಿರಕ್ಕೂ ಅಧಿಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಅಲ್ಲದೆ, ಉತ್ಸವದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರ ಪ್ರತಿಭಾ ಪ್ರದರ್ಶನ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರ ಭಾಷಣದ ತುಣುಕುಗಳನ್ನು ಬೃಹತ್‌ ಟಿ.ವಿ. ಪರದೆಯ ಮೂಲಕ ಆಸ್ವಾದಿಸಲು ಅನುಕೂಲ ಕಲ್ಪಿಸಲಾಗುತ್ತಿದೆ.1988ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ನಜೀರ್‌ಸಾಬ್‌ ನಿಧನ, 2000ನೇ ಸಾಲಿನಲ್ಲಿ ವರನಟ ಡಾ.ರಾಜ್‌ ಅಪಹರಣ, 2009ರಲ್ಲಿ ಪ್ರವಾಹ ಹಾಗೂ 2012ರಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಉತ್ಸವವು ಇದುವರೆಗೆ 4 ಬಾರಿ ನಡೆದಿಲ್ಲ. ಆದರೆ, ಮಿಕ್ಕೆಲ್ಲ ನಡೆದಿರುವ ಉತ್ಸವದಲ್ಲಿ ಭಾಗಿಯಾಗಿರುವ ಗಾಯಕರು, ನೃತ್ಯಪಟುಗಳು, ರಂಗಭೂಮಿ ಕಲಾವಿದರು, ಜನಪದ ಕಲಾಮೇಳಗಳು ನೀಡಿರುವ ಪ್ರದರ್ಶನದ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಈ ಮೂಲಕ ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಪ್ರಮುಖ ರಾಜಕಾರಣಿಗಳಾದ ಎಂ.ಪಿ. ಪ್ರಕಾಶ್‌, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌, ಎಂ.ವೈ. ಘೋರ್ಪಡೆ, ಎಸ್‌.ಎಂ. ಕೃಷ್ಣ, ಎನ್‌.ಧರ್ಮಸಿಂಗ್‌, ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ, ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ, ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌, ಕೇಂದ್ರ ಸಚಿವ ಪಿ.ಚಿದಂಬರಂ ಮತ್ತಿತರ ಗಣ್ಯರು ಹಂಪಿಗೆ ಆಗಮಿಸಿ, ಉತ್ಸವಕ್ಕೆ ಮೆರುಗು ನೀಡಿರುವ ಘಟನಾವಳಿಗಳು, ಅವರ ಭಾಷಣದ ತುಣುಕುಗಳ ವೀಡಿಯೊ ತುಣುಕುಗಳ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ಹೇಳಿದರು.ಕಲಾವಿದರಾದ ಹೇಮಾಮಾಲಿನಿ, ಪದ್ಮಾ ಸುಬ್ರಹ್ಮಣ್ಯಂ, ರಷೀದ್‌ ಖಾನ್‌, ಸೋನುನಿಗಂ, ಅನೂರಾಧಾ ಪೌಡ್ವಾಲ್‌, ಪಂಡಿತ್‌ ಜಸರಾಜ್‌, ಹರಿಹರನ್‌, ಗಂಗೂಬಾಯಿ ಹಾನಗಲ್‌, ರಾಜೀವ್‌ ತಾರಾನಾಥ, ರಾಜನ್‌ಮಿಶ್ರಾ, ಸಾಜನ್‌ ಮಿಶ್ರಾ, ಪರ್ವೀಬನ್ ಸುಲ್ತಾನಾ, ಮುಕೇಶ್‌ ಜಾಧವ್‌, ಶಿವಮಣಿ, ಸಿ.ಅಶ್ವತ್ಥ್‌, ಹರಿಪ್ರಸಾದ್‌ ಚೌರಾಸಿಯಾ ಸೇರಿದಂತೆ ಹತ್ತು ಹಲವು ಕಲಾವಿದರ ಗಾಯನ, ನೃತ್ಯ, ಕಲಾ ಪ್ರದರ್ಶನವು ಇದುವರೆಗೆ ಹಂಪಿಯಲ್ಲಿ ನಡೆದ ಉತ್ಸವಗಳಿಗೆ ಮೆರುಗು ನೀಡಿವೆ.ಹಂಪಿಯಲ್ಲಿನ ಕಲ್ಲು ಬಂಡೆಗಳ ಹಾಗೂ ಸ್ಮಾರಕಗಳ ವೀಕ್ಷಣೆಯ ಜತೆಗೆ ಉತ್ಸವವನ್ನು ಆಸ್ವಾದಿಸಲು ಬರುವವರಿಗೆ ಉತ್ಸವದ ಇತಿಹಾಸ, ಹಂಪಿಯ ಪರಂಪರೆಯನ್ನು ಪರಿಚಯಿಸುವ ಸದುದ್ದೇಶದೊಂದಿಗೆ ಮೂರು ದಿನಗಳವರೆಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)