ಶನಿವಾರ, ಮೇ 15, 2021
25 °C

ಹಂಪಿ ದೇಗುಲ ಸುತ್ತ ಕಟ್ಟಡ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯ ದೇವಾಲಯಗಳ ಸುತ್ತಮುತ್ತಲಿನ ಸುರಕ್ಷತಾ ವಲಯದಲ್ಲಿ ಯಾವುದೇ ವಸತಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸದಂತೆ ಹೈಕೋರ್ಟ್ ಮಂಗಳವಾರ ಸರ್ಕಾರ ಹಾಗೂ ಹಂಪಿ  ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.`ನಮಗೆ ಯಾವುದೇ ಒಂದು ಸ್ಮಾರಕವಷ್ಟೇ ಮುಖ್ಯವಲ್ಲ. ಸಂಪೂರ್ಣ ಪಾರಂಪರಿಕ ತಾಣವೂ ಮುಖ್ಯ. ಈ ತಾಣದ 100 ಮೀಟರ್ ಸುತ್ತಳತೆಯೊಳಗೆ ಯಾವುದೇ ಒತ್ತುವರಿಯನ್ನು ನಾವು ಸಹಿಸುವುದಿಲ್ಲ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್‌ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಎಚ್ಚರಿಸಿತು.ಇಲ್ಲಿರುವ ಹಲವು ದೇವಸ್ಥಾನಗಳ ಸುತ್ತ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ ಜಾಗ ತೆರವು ಮಾಡುವಂತೆ ಪ್ರಾಧಿಕಾರ ಕಳೆದ ನವೆಂಬರ್ 11ರಂದು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಹಲವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.`ದೇವಾಲಯದ ಸುತ್ತಲೂ ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಾಣ ಮಾಡಿ ಪೂಜಾ ಸಾಮಗ್ರಿ, ಕರಕುಶಲ ವಸ್ತು ಇತ್ಯಾದಿಗಳನ್ನು ಮಾರಾಟ ಮಾಡುತ್ತಿರುವವರಿಗೆ ಪ್ರಾಧಿಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಸಂಬಂಧಿತರು ಅದರ ಮುಂದೆ ಮನವಿ ಸಲ್ಲಿಸಿ ಮಳಿಗೆಗೆ ಸ್ಥಳಾವಕಾಶ ಕಲ್ಪಿಸಿಕೊಳ್ಳಿ. ಆದರೆ ವಾಣಿಜ್ಯ ಉದ್ದೇಶಕ್ಕೆಂದು ಈ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವವರ ಕುರಿತು ಈಗಲೇ ಯಾವುದೇ ಆದೇಶ ಹೊರಡಿಸುವುದಿಲ್ಲ.ಆ ಬಗ್ಗೆ ಮುಂದಿನ ವಿಚಾರಣೆ ವೇಳೆ ತಿಳಿಸಲಾಗುವುದು~ ಎಂದು ನ್ಯಾಯಮೂರ್ತಿಗಳು ಹೇಳಿದರು. ಕಡ್ಡಿರಾಮಪುರದ ಬಳಿ 314 ಕುಟುಂಬಗಳಿಗೆ ಈಗಾಗಲೇ ಪುನರ್ವಸತಿ ಕಲ್ಪಿಸುವ ಸಂಬಂಧ ಜಾಗ ಗುರುತಿಸಲಾಗಿದೆ ಎಂದು ಪ್ರಾಧಿಕಾರದ ಪರ ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಈ ರೀತಿಯಾಗಿ ಹೇಳಿದರು.ಅರ್ಜಿದಾರರಿಗೆ ಎಚ್ಚರಿಕೆ: `ಅರ್ಜಿದಾರರು ಮಂಟಪದ ಹೊರಭಾಗದಲ್ಲಿ ಮಳಿಗೆ ಇಟ್ಟುಕೊಂಡಿದ್ದಾರೆಯೇ ವಿನಾ ಹೊರಭಾಗದಲ್ಲಿ ಅಲ್ಲ. ವಾಣಿಜ್ಯ ಮಳಿಗೆ ನಡೆಸುತ್ತಿರುವವರು ಸ್ಥಳದ ಒತ್ತುವರಿ ಮಾಡಿಕೊಂಡಿಲ್ಲ~ ಇತ್ಯಾದಿಯಾಗಿ ಅರ್ಜಿದಾರರ ಪರ ವಕೀಲರು ವಾದಿಸಿದರು. ಅದಕ್ಕೆ ನ್ಯಾ.ಸೇನ್, `ಇಲ್ಲಿಯವರೆಗಿನ ವಿಚಾರಣೆ ವೇಳೆ ಅರ್ಜಿದಾರರ ಹಿತವನ್ನು ಕಾಪಾಡಬೇಕೆಂದು ನಾವು  ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ಸೂಕ್ತ ರೀತಿಯಲ್ಲಿ ಅವರು ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ `ಕಾನೂನಿನ ಅಡಿ ಸೂಕ್ತ ಕ್ರಮ ತೆಗೆದುಕೊಳ್ಳಿ~ ಎಂದು ಅಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ. ಆಗ ನೋಡಿ ರಾತ್ರೋ ರಾತ್ರಿ ಎತ್ತಂಗಡಿ ಮಾಡುತ್ತಾರೆ~ ಎಂದು ಎಚ್ಚರಿಕೆ ನೀಡಿದರು.ವಸ್ತ್ರ ನೋಡಲು ಬರಬೇಕೆ?: ಅಕ್ರಮವಾಗಿ ವಸತಿ ನಿರ್ಮಾಣ ಮಾಡಿಕೊಂಡಿರುವವರು ತಮ್ಮ ಬಟ್ಟೆ ಬರೆಗಳನ್ನು ಒಣಹಾಕಿರುವುದನ್ನು ಛಾಯಾಚಿತ್ರದಲ್ಲಿ ನ್ಯಾಯಮೂರ್ತಿಗಳು ಗಮನಿಸಿದರು. ಅದಕ್ಕೆ ಅವರು, ಇದು ಪ್ರೇಕ್ಷಣೀಯ ಸ್ಥಳ. ಸ್ಥಳಕ್ಕೆ ಭೇಟಿ ನೀಡುವವರು ಒತ್ತುವರಿದಾರರ ವಸ್ತ್ರಗಳನ್ನು ನೋಡಲು ಬರಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒತ್ತುವರಿ ತೆರವಿಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು  ಮೂರು ವಾರಗಳಲ್ಲಿ ಮಾಹಿತಿ ನೀಡುವಂತೆ ಸರ್ಕಾರ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.