ಭಾನುವಾರ, ಜೂನ್ 13, 2021
25 °C

ಹಂಪಿ ಬೀದಿಯಲ್ಲಿ ದೇಶೀ ಹೋಳಿಗೆ ವಿದೇಶೀ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿ ಬೀದಿಯಲ್ಲಿ ದೇಶೀ ಹೋಳಿಗೆ ವಿದೇಶೀ ರಂಗು

ಹಂಪಿ (ಹೊಸಪೇಟೆ): ಐತಿಹಾಸಿಕ ಹಂಪಿಯಲ್ಲಿ ಅಕ್ರಮ ತೆರವು ಕಾರ್ಯಾಚರಣೆಯಿಂದ ಮನಸ್ಸಿನ ನೆಮ್ಮದಿ ಕಳೆದುಕೊಂಡಿದ್ದ ಹಂಪಿ ನಿವಾಸಿಗಳಲ್ಲಿ ಮೊದಲ ಬಾರಿ ಹರ್ಷದ ಹೊನಲು ಕಂಡಿದ್ದು ಹೋಳಿ ಸಂಭ್ರಮಾಚರಣೆಯ ಶುಭ ಶುಕ್ರವಾರ.ಹೌದು! ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಿವಾಸಿಗಳು ನೂರಾರು ವರ್ಷದಿಂದ ಹಂಪಿಯಲ್ಲಿ ವಾಸವಾಗಿದ್ದು ಇಂದು ಬೀದಿ ಪಾಲಾಗಿದ್ದೇವೆ ಎಂದು ಕೋರ್ಟ್ ಮೆಟ್ಟಿಲೇರಿದ್ದರೂ ಪ್ರಯೋಜನ ಆಗುತ್ತಿಲ್ಲ ಎಂದು ನೋವಿನಲ್ಲಿ ಮುಳುಗಿದ್ದರು. ಕೆಲ ಕ್ಷಣವಾದರೂ ಕುಣಿದು, ಕುಪ್ಪಳಿಸಿ ಪರಸ್ಪರ ಬಣ್ಣ ಹಾಕುತ್ತಾ ನೃತ್ಯಗಾಯನದಲ್ಲಿ ತೊಡಗುವ ಮೂಲಕ ಹೋಳಿ ಸಂಭ್ರಮಾಚರಣೆಯ ಹರ್ಷದಲ್ಲಿ ತೇಲಿದರು.ಹಂಪಿಯ ತೇರು ಬಜಾರ ಬಣ್ಣದ ಮಳೆ ಬಂದು ನಿಂತಿದೆ ಏನೋ ಎನ್ನುವಂತೆ ಕಾಣತೊಡಗಿತ್ತು. ಹೋಳಿ ಹಬ್ಬದ ಮೂಲ ಹಂಪಿ ಎಂದು ಸ್ಕಂದ ಪುರಾಣ ಸಾರಿದಂತೆ ಇಂದಿನ ಹೋಳಿ ಸಂಭ್ರಮಾಚರಣೆ ಸಂಬಂಧವನ್ನು ಸಾಕ್ಷೀಕರಿಸಿತು.ಜಿಲ್ಲೆಯಾದ್ಯಂತ ಹೋಳಿ ಸಂಭ್ರಮಾಚರಣೆ ಗೊಂದಲದಲ್ಲಿದ್ದರೂ ಹಂಪಿಯಲ್ಲಿ ಶುಕ್ರವಾರ ಎಲ್ಲರೂ ಒಗ್ಗಟ್ಟಿನಿಂದ ಆಚರಣೆ ಮಾಡಿ ದೇಶ ವಿದೇಶಗಳ ಪ್ರವಾಸಿಗರೊಂದಿಗೆ ತಮ್ಮ ಸಂಭ್ರಮ ಹಂಚಿಕೊಂಡರು. ಇಂಗ್ಲೆಂಡ್, ಫ್ರಾನ್ಸ್, ಚೀನಾ, ಆಸ್ಟ್ರೇಲಿಯಾ, ಆಫಿಕಾ ದೇಶಗಳ ಅನೇಕ ಪ್ರವಾಸಿಗರು ಹೋಳಿ ಹಬ್ಬದ ಆಚರಣೆಗಾಗಿಯೇ ಬಂದಿರುವುದಾಗಿ ಇಲ್ಲಿ ದೊರೆತ ಆನಂದಕ್ಕೆ ಪಾರವೇ ಇಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.ಮೂಲತಃ ಛಾಯಾಗ್ರಾಹಕನಾಗಿರುವ ಇಂಗ್ಲೆಂಡ್ ಪ್ರವಾಸಿಗ ರಾಬರ್ಟ್ ಮಾತನಾಡಿ “ನಮ್ಮ ದೇಶದಲ್ಲಿ ಏನೆಲ್ಲಾ ದೊರೆಯುತ್ತದೆ. ಆದರೆ ಇಂತಹ ಸಂಭ್ರಮಾಚರಣೆ, ನೆಮ್ಮದಿ, ಸಂಸ್ಕೃತಿ ದೊರೆಯದು. ಈ ಕಾರಣದಿಂದಲೇ ನಮ್ಮ ಕುಟುಂಬದವರು ಪ್ರತಿವರ್ಷ ಹೋಳಿ ಸಂಭ್ರಮಾಚರಣೆಗೆ ಭಾರತಕ್ಕೆ ಬರಲು ಅನುಮತಿ ನೀಡುತ್ತಾರೆ.ಅವರುಗಳಿಗೆ ಅತಿಮಧುರ ಕ್ಷಣಗಳನ್ನು ಸೆರೆ ಹಿಡಿದು ಕೊಂಡೊಯ್ಯುತ್ತಿದ್ದೇನೆ.” ಎಂದು ಭಾರತೀಯರ ಹೋಳಿ ಸಂಭ್ರಮಾಚರಣೆಗೆ ತನ್ನ ಹರ್ಷ ವ್ಯಕ್ತಪಡಿಸುತ್ತಾ ತನ್ನ ಚಿತ್ರ ತೆಗೆಯುವ ಕಾರ್ಯದಲ್ಲಿ ಮಗ್ನನಾಗಿದ್ದ.

ಹಂಪಿ ತೇರು ಬಜಾರಿನಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳು ಯುವಕರು ವಿಶೇಷವಾಗಿ ಮಹಿಳೆಯರು ಪರಸ್ಪರ ಬಣ್ಣ ಹಾಕುತ್ತಾ ಶುಭಾಶಯ ಕೋರುವ ದೃಶ್ಯ ಸಾಮಾನ್ಯವಾಗಿತ್ತು.ಸಂಭ್ರಮಾಚರಣೆ ಯಾರ ಭಾವನೆಗಳಿಗೂ ನೋವಾಗದಿರಲಿ ಎಂದು ಹಂಪಿ ಪೊಲೀಸರು ವಿಶೇಷ ಭದ್ರತೆಯನ್ನು ನೀಡುವ ಮೂಲಕ ದೇಶ ವಿದೇಶಗಳ ಪ್ರವಾಸಿಗರು ಸಂಭ್ರಮ ಅನುಭವಿಸುವಂತೆ ಮಾಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.