ಹಂಪಿ ಸುತ್ತಿ ಖುಷಿ ಪಟ್ಟ ವಿದೇಶಿಯರು...!

7
ಫ್ರಾನ್ಸ್ ಜೋಡಿ ಪ್ರಪಂಚ ಪರ್ಯಟನ

ಹಂಪಿ ಸುತ್ತಿ ಖುಷಿ ಪಟ್ಟ ವಿದೇಶಿಯರು...!

Published:
Updated:

ಹೊಸಪೇಟೆ: ಶಾಲಾ ಕಾಲೇಜುಗಳಿಗೆ ಸೈಕಲ್‌ನಲ್ಲಿ ತೆರಳಲು ನಿರಾಕರಿಸುವ ಈ ಕಾಲದಲ್ಲಿ,  ಪ್ರಪಂಚವನ್ನೇ ಸುತ್ತಲು ಹಿಂಜರಿಕೆ ಮಾಡದ  ದಂಪತಿಗಳು ಐತಿಹಾಸಿಕ ಹಂಪಿಯನ್ನು ಪರ್ಯಟನೆಯ ಭಾಗವಾಗಿ ವೀಕ್ಷಿಸಿ ಹೊಸ ಸಾಹಸಕ್ಕೆ ಪ್ರವೃತ್ತಿಗೆ ಅಣಿಯಾದರು. ಹೌದು!  ಸೈಕಲ್ ಸವಾರಿ ಮೂಲಕವೇ ಪ್ರಪಂಚ ನೋಡಬೇಕೆಂದು ಫ್ರಾನ್ಸ್‌ನ ನ್ಯಾನ್ಸಿ ಪಟ್ಟಣದ ಲಿಯೋನೆಲ್ ಹಾಗೂ ಆನ್‌ಜಲಿನ್ ದಂಪತಿ ಪರ್ಯಟನೆ ನಡೆಸಿದ ಸಾಹಸಿಗರಾಗಿದ್ದಾರೆ. ಗುರುವಾರ ಹಂಪಿ ತಲುಪಿ, ಇಡಿ ಹಂಪಿ ಪರಸರವನ್ನು ಭಾನುವಾರದ ವರೆಗೂ ವೀಕ್ಷಿಸಿ ಸಂಜೆ ಮೈಸೂರು ಕಡೆ ಪ್ರಯಾಣ ಬೆಳೆಸಿದರು.  ಜುಲೈ 2011ರಲ್ಲಿ ಫ್ರಾನ್ಸ್ ನ್ಯಾನ್ಸಿ ಪಟ್ಟಣದಿಂದ ಸೈಕಲ್ ಪ್ರವಾಸ ಆರಂಭಿಸಿದ ದಂಪತಿ  30 ದೇಶಗಳನ್ನು  ಸೈಕಲ್ ಮೇಲೆ ವೀಕ್ಷಿಸಲು ತೀರ್ಮಾನಿಸಿ ಕಳೆದ ತಿಂಗಳು ಭಾರತ ತಲುಪಿದ್ದಾರೆ. ವೃತ್ತಿಯಲ್ಲಿ  ರೈಲ್ವೆ ಚಾಲಕನಾದ ಲಿಯೋನೆಲ್ ಈಗಷ್ಟೆ ವಿದ್ಯಾರ್ಥಿ ಜೀವನದಿಂದ ಹೊರಬಂದ ಆನ್‌ಜಲಿನ್‌ಳನ್ನು ತನ್ನ ಬಾಳಸಂಗಾತಿಯನ್ನಾಗಿ ವರಿಸಿಕೊಂಡು ಹೊಸ ಆಲೋಚನೆಯೊಂದಿಗೆ ಪ್ರಪಂಚ ಪರ್ಯಟನೆ ಆರಂಭಿಸಿದ್ದಾರೆ.ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ 38ಸಾವಿರ ಬೆಲೆ ಬಾಳುವ ಈ ಸೈಕಲ್ ಸುಸಜ್ಜಿತವಾಗಿದ್ದು, ಗಟ್ಟಿಮುಟ್ಟಾಗಿದೆ. ಮೋಟರ್ ಬೈಕ್‌ಗೆ ಸರಿಸಮನಾಗಿ ರಸ್ತೆಯಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಓಡಬಲ್ಲದು. ಕುಡಿಯುವ ನೀರು, ರಿಪೇರಿ ಕಿಟ್ಟು, ತಿಂಡಿ, ತಿನಿಸು, ಔಷಧೋಪಚಾರ ಹಾಗೂ ಉಡುಗೆ, ತೊಡಿಗೆ, ಸೇರಿದಂತೆ ಸೈಕಲ್ ಎಲ್ಲ ವಸ್ತುಗಳ ಭಾರವನ್ನು ಹೋರುತ್ತದೆ.ಇಲ್ಲಿಯವರೆಗೆ 29545 ಕಿ.ಮೀ. ಹಾದಿಯನ್ನು ಕ್ರಮಿಸಿದ ಈ ಯುವ ದಂಪತಿ ನ್ಯೂಯಾರ್ಕ್, ಸ್ಪೇನ್,ಯುನೈಟೆಡ್ ಅಮೆರಿಕ, ಮೆಕ್ಸಿಕೋ, ಬ್ರೆಜಿಲ್, ಅರ್ಜೆಂಟೈನಾ, ಜರ್ಮನಿ, ಉಕ್ರೇನ್, ಪೋಲ್ಯಾಂಡ್ ಹಾಗೂ ಭಾರತ ಸೇರಿದಂತೆ 30 ದೇಶಗಳನ್ನು ಸುತ್ತಿದ್ದು ಇನ್ನು ಹತ್ತಾರು ದೇಶ ಸುತ್ತುವ ಇಂಗಿತ ಹೊಂದಿದ್ದಾರೆ.ಭಾರತದಲ್ಲಿಯು ಅನೇಕ ಮಹತ್ವದ ಸ್ಥಳಗಳನ್ನು ನೋಡಿದ ಈ ಜೋಡಿ ಮೈಸೂರು ಕಡೆ ಪ್ರಯಾಣ ಬೆಳೆಸಿದ್ದಾರೆ. ಮೈಸೂರಲ್ಲಿ 5 ದಿನಗಳ ಕಾಲ ತಂಗಿದ್ದು, ನಂತರ ಕೊಚ್ಚಿನ್, ತಿರುವನಂತಪುರ ಹಾಗೂ ಪುದುಚೇರಿ ಮೂಲಕ ಶ್ರೀಲಂಕಾ ಸೇರುವುದಾಗಿ ಹಾಗೂ ಪ್ರವಾಸ ಖುಷಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸೈಕಲ್ ಸವಾರಿ ದೈಹಿಕ ಕ್ಷಮತೆ ವೃದ್ಧಿ ಸೇರಿದಂತೆ ಇಂಧನ ಸಾರಿಗೆ ಪ್ರಯಾಣ ವೆಚ್ಚವನ್ನು ಉಳಿಸಬಹುದು. ಅಲ್ಲದೆ ದಾರಿಯುದ್ದಕ್ಕೂ ನಾನಾ ದೇಶದ ಸಂಸ್ಕೃತಿ, ಪರಿಸರ, ಜನ ಜೀವನವನ್ನು ತಿಳಿಯಲು ಹಾಗೂ ಹೊಸತನವನ್ನು ತಿಳಿಯುವದು ಪ್ರವಾಸದ ಮೂಲ ಉದ್ದೇಶವಾಗಿದೆ ಎನ್ನುತ್ತಾರೆ ಲಿಯೋನೆಲ್.ಭಾರತ ಪ್ರವಾಸವೇ ವಿಶಿಷ್ಟ, ಇಲ್ಲಿಯ ಜನರ ಅಕ್ಕರೆ ಹಾಗೂ ಸಹಕಾರ ಭಾವನೆ ಅವಿಸ್ಮರಣೀಯ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ದಂಪತಿ ಸೈಕಲ್ ಸವಾರರ ಪ್ರಯಾಣ ಸುಖಕಾರವಾಗಲಿ ಎಂದು ಹಾರೈಸಿ, ಇಂತಹ ಪ್ರೇರಣೆ ಇತರರಿಗೂ ಆಗಲಿ ಎನ್ನುತ್ತಾ ಮೈಸೂರು ಪ್ರವಾಸ ಆರಂಭಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry