ಶನಿವಾರ, ಜೂನ್ 19, 2021
23 °C

ಹಕ್ಕಿ ಗೂಡು ಸಪ್ತ ಪ್ರಶ್ನೆಗಳು

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

1.ಹಕ್ಕಿಗಳು ಗೂಡು ಕಟ್ಟುವುದು ಏಕೆ?

ಹಕ್ಕಿಗೂಡಿನ ಪರಮೋದ್ದೇಶ ಒಂದೇ ಒಂದು: ಸುರಕ್ಷಿತ ಸಂತಾನಾಭಿವೃದ್ಧಿ. ಮೊಟ್ಟೆಗಳನ್ನು ಇಡಲು, ಮರಿಗಳನ್ನು ಬೆಚ್ಚಗಿಡಲು ಮತ್ತು ಪ್ರೌಢರಾಗುವವರೆಗೂ ಅವುಗಳನ್ನು ಶತ್ರುಗಳಿಂದ ಕಾಪಾಡಲು ಹಕ್ಕಿಗಳು ಗೂಡು ನಿರ್ಮಿಸುತ್ತವೆ.ಆದ್ದರಿಂದ ಪಕ್ಷಿಗಳು ಗೂಡು ಕಟ್ಟುವುದು ಸಂತಾನ ಕಾಲದಲ್ಲಿ ಮಾತ್ರ. ಮರಿಗಳು ಪೂರ್ಣ ಬೆಳೆದು ಸ್ವತಂತ್ರರಾದೊಡನೆ ತಂದೆ-ತಾಯಿ ಹಕ್ಕಿಗಳೂ ತಾವು ನಿರ್ಮಿಸಿದ ಗೂಡನ್ನು ತೊರೆಯುತ್ತವೆ. ಸ್ಪಷ್ಟವಾಗಿಯೇ ಹಕ್ಕಿಗಳ ಗೂಡು ವಯಸ್ಕ ಹಕ್ಕಿಗಳ ನಿವಾಸ ಅಲ್ಲ. ಅದು ಕೇವಲ ಶಿಶು ಪಾಲನೆಯ ನೆಲೆ.

2.ಎಲ್ಲ ಹಕ್ಕಿಗಳೂ ಗೂಡು ನಿರ್ಮಿಸುತ್ತವೆಯೇ?

ಖಂಡಿತ ಇಲ್ಲ. ಮೊಟ್ಟೆಯಿಂದ ಹೊರಬರುವಾಗಲೇ ಬೆಚ್ಚನೆಯ ಪುಕ್ಕದುಡುಗೆ ಪಡೆದಿರುವ ಪಕ್ಷಿ ಪ್ರಭೇದಗಳು (ಆಸ್ಟ್ರಿಚ್), ಗೂಡು ಕಟ್ಟುವುದು ಸಾಧ್ಯವೇ ಇಲ್ಲದ ನೆಲೆಗಳಲ್ಲಿ ಸಂತಾನ ವರ್ಧಿಸುವ ಹಕ್ಕಿಗಳು (ಪೆಂಗ್ವಿನ್) ಇಂಥ ಹಲವಾರು ಪ್ರಭೇದಗಳು ಗೂಡು ನಿರ್ಮಿಸುವುದಿಲ್ಲ. ಉಳಿದೆಲ್ಲ ಖಗ ಪ್ರಭೇದಗಳೂ ಅವುಗಳದೇ ವಿಶಿಷ್ಟ ರೂಪ ರೇಷೆಗಳ ಗೂಡುಗಳನ್ನು ಕಟ್ಟುತ್ತವೆ.

3. ಹಕ್ಕಿ ಗೂಡುಗಳಲ್ಲಿ ಭಿನ್ನ ಭಿನ್ನ ಬಗೆಗಳು ಏಕೆ?

 ಹಕ್ಕಿ ಗೂಡುಗಳಲ್ಲಿ ವಿಪರೀತ ವೈವಿಧ್ಯತೆ ಇದೆ. ಆಕಾರ, ಗಾತ್ರ, ನಿರ್ಮಾಣಕ್ಕೆ ಬಳಸುವ ವಸ್ತುಗಳು, ನಿರ್ಮಿಸುವ ನೆಲೆ, ನಿರ್ಮಾಣ ತಂತ್ರ ಇತ್ಯಾದಿ ಎಲ್ಲವೂ ಪ್ರಭೇದದಿಂದ ಪ್ರಭೇದಕ್ಕೆ ಭಿನ್ನ ಭಿನ್ನ ಹಾಗಾಗಿ ಹಕ್ಕಿ ಗೂಡುಗಳಲ್ಲಿ ಅತೀವ ವೈವಿಧ್ಯ. ಮೊಟ್ಟೆಗಳ ಸಂಖ್ಯೆ, ಗಾತ್ರ, ಪ್ರಬುದ್ಧ ಹಂತ ತಲುಪುವ ವೇಳೆಗೆ ಎಲ್ಲ ಮರಿಗಳ ಒಟ್ಟು ತೂಕ, ಅಗತ್ಯವಾದ ಸ್ಥಳಾವಕಾಶ, ಆಯಾ ಪರಿಸರದಲ್ಲಿನ ಬಿಸಿಲು-ಚಳಿ-ಮಳೆ-ಗಾಳಿ ಪರಿಸ್ಥಿತಿ, ಸಂಭವಿಸಬಹುದಾದ ಶತ್ರುಗಳ ದಾಳಿ....

 

ಇಂತಹ ಹೇರಳ ಅಂಶಗಳನ್ನೂ ಅವಲಂಬಿಸಿ ಹಕ್ಕಿ ಗೂಡುಗಳ ವಿನ್ಯಾಸ ಭಿನ್ನ ಭಿನ್ನವಾಗಿರುತ್ತವೆ (ಚಿತ್ರ 1, 2, 3, 6, 7 ರಲ್ಲಿ ಗಮನಿಸಿ). ಸರ್ಪಗಳಂತಹ ಪ್ರಬಲ ಭಾರೀ ಶತ್ರುಗಳನ್ನು ಎದುರಿಸಬೇಕಾಗುವ ಕುಬ್ಜ ದುರ್ಬಲ ಹಕ್ಕಿಗಳು ಅದಕ್ಕೇ ನೂರಾರು ಹಕ್ಕಿಗಳು ಒಟ್ಟಾಗಿ ನೂರಾರು ಕೊಠಡಿಗಳ `ಸಾಮೂಹಿಕ ಗೂಡ~ನ್ನೇ ನಿರ್ಮಿಸುತ್ತವೆ (ಚಿತ್ರ-5). ಈ ಎಲ್ಲ ಕಾರಣಗಳಿಂದ ಹಕ್ಕಿ ಗೂಡುಗಳದು ವಿಧ ವಿಧ, ವಿಪರೀತ ವೈವಿಧ್ಯ.4. ಪ್ರತಿ ಪ್ರಭೇದದ ಹಕ್ಕಿಯೂ ತನ್ನದೇ ವಿಶಿಷ್ಟ ಬಗೆಯ ಗೂಡಿನ ನಿರ್ಮಾಣ ತಂತ್ರವನ್ನು ಕಲಿಯುವುದು ಹೇಗೆ?


ವಿಸ್ಮಯ ಏನೆಂದರೆ ಯಾವ ಹಕ್ಕಿಯೂ ಗೂಡು ಕಟ್ಟುವ ಕಲೆಯನ್ನು ಇತರರಿಂದ ಕಲಿಯುವುದಿಲ್ಲ. ಪ್ರತಿ ಪ್ರಭೇದದ ಹಕ್ಕಿಗೂ ಅದರದ್ದೇ ವಿಶಿಷ್ಟ ಗೂಡು ನಿರ್ಮಾಣ ತಂತ್ರ ಸಂಪೂರ್ಣ ರಕ್ತಗತ ಎಂದರೆ ಅದು ಹುಟ್ಟರಿವಿನಿಂದಲೇ ಕರಗತವಾಗಿ ಬರುವ ದಿವ್ಯ ಪರಿಪೂರ್ಣ ಕುಶಲ ಕಲೆ.

5. ಗೂಡಿನ ನಿರ್ಮಾಣಕ್ಕೆ ಹಕ್ಕಿಗಳು ಬಳಸುವ ವಸ್ತುಗಳು ಯಾವುವು?

ಗೂಡಿನ ನಿರ್ಮಾಣಕ್ಕೆ ಹಕ್ಕಿಗಳು ಬಳಸುವ ವಸ್ತುಗಳೂ ಬಹುವಿಧ: “ಹುಲ್ಲುಗರಿ, ಸಸ್ಯನಾರುಗಳು, ಹತ್ತಿ, ಕೂದಲು, ಹಕ್ಕಿಪುಕ್ಕ.... ಹಾಗೆಲ್ಲ”. ಕಡ್ಡಿ ಚೂರುಗಳು, ಜೇಡಿಮಣ್ಣು, ತೆಳ್ಳನೆಯ ತಂತಿಗಳು ಇತ್ಯಾದಿ ವಸ್ತುಗಳೂ ಬಳಕೆಗೊಳ್ಳುತ್ತವೆ. ಆಶ್ಚರ್ಯ ಏನೆಂದರೆ ಕೇವಲ ಎಲೆಗಳನ್ನೇ ಹೆಣೆದು ಗೂಡು ನಿರ್ಮಿಸುವ, ಕೇವಲ ತಮ್ಮ ಜೊಲ್ಲನ್ನೇ ಮೆತ್ತಿ ಮೆತ್ತಿ ಗೂಡು ನಿರ್ಮಿಸುವ ಅತಿ ಅಚ್ಚರಿಯ ಖಗ ಪ್ರಭೇದಗಳೂ ಇವೆ.

6. ಗೂಡು ಕಟ್ಟಲು ಹಕ್ಕಿಗಳಿಗೆ ಬೇಕಾಗುವ ಅವಧಿ ಎಷ್ಟು?

ಗೂಡು ಕಟ್ಟಲು ಹಕ್ಕಿಗಳು ತೆಗೆದುಕೊಳ್ಳುವ ಅವಧಿ ಪ್ರಭೇದದಿಂದ ಪ್ರಭೇದಕ್ಕೆ ಬೇರೆ ಬೇರೆ. ಆ ಅವಧಿ ಪ್ರಮುಖವಾಗಿ ಗೂಡಿನ ಸಂಕೀರ್ಣತೆಯನ್ನು ಅವಲಂಬಿಸಿದೆ.ಉದಾಹರಣೆಗೆ ಮೂರು-ನಾಲ್ಕು ದಿನಗಳಲ್ಲಿ ಒಂದು ಜೋಡಿ ಗುಬ್ಬಚ್ಚಿಗಳು ತಮ್ಮ ಗೂಡಿನ ನಿರ್ಮಾಣವನ್ನು ಮುಗಿಸಿದರೆ ಒಂದು ಜೊತೆ ರಾಬಿನ್ ಹಕ್ಕಿಗಳಿಗೆ ಗೂಡು ಕಟ್ಟಲು ಇಪ್ಪತ್ತು ದಿನ ಬೇಕು. ಕೇವಲ ಕಡ್ಡಿ ಚೂರುಗಳನ್ನು ಒಟ್ಟು ಮಾಡುವ ಹಕ್ಕಿಗಳು ಒಂಟಿಯಾಗಿದ್ದೂ ಒಂದೇ ದಿನದಲ್ಲಿ ಗೂಡಿನ ನಿರ್ಮಾಣವನ್ನು ಮುಗಿಸಿದರೆ ಬಹುಪಾಲು ಎಲ್ಲ ಹಾಡುಗಾರ ಹಕ್ಕಿಗಳು ತಮ್ಮ ಸುಂದರ ಸಂಕೀರ್ಣ ಗೂಡುಗಳನ್ನು ಕಟ್ಟಲು ಸರಾಸರಿ ಎರಡು ವಾರ ತೆಗೆದುಕೊಳ್ಳುತ್ತವೆ. ನೂರಾರು ಹಕ್ಕಿಗಳು ಒಟ್ಟಾಗಿ ನಿರ್ಮಿಸುವ ಸಾಂಘಿಕ ಗೂಡುಗಳ ನಿರ್ಮಾಣ ಪೂರ್ಣಗೊಳ್ಳಲು ಒಂದೆರಡು ತಿಂಗಳುಗಳೇ ಬೇಕು.

7. ಖಗ ಜಗದ ಅತಿ ಸೋಜಿಗದ ಗೂಡು ಯಾವುದು?

  `ಕೇಪ್ ಪೆಂಡ್ಯುಲೈನ್ ಟಿಟ್~ ಎಂಬ ಹಕ್ಕಿಯ ಗೂಡಿನ ತಂತ್ರಜ್ಞತೆ ಇಡೀ ಖಗ ಜಗದಲ್ಲೇ ಅನನ್ಯ, ಅಸದೃಶ. ಅದರ ಗೂಡಿನ ವಿನ್ಯಾಸದ ಕೌಶಲ್ಯ, ಗೂಡಿನ ಬಳಕೆಯ ಪರಿ-ಎರಡನ್ನೂ ಚಿತ್ರ 9, 10, 11, 12 ರಲ್ಲಿ ಗಮನಿಸಿ.ಆಫ್ರಿಕದ ಈ ಪುಟ್ಟ ಹಕ್ಕಿ ಮುಳ್ಳು ತುಂಬಿದ ಅಕೇಶಿಯಾ ವೃಕ್ಷಗಳಲ್ಲಿ ಗೂಡು ಕಟ್ಟುತ್ತದೆ. ಇದರ ಗೂಡಲ್ಲಿ ಎರಡು ಕೊಠಡಿಗಳು. ಕೆಳಗಿನ ಕೋಣೆಗೆ ಸದಾ ತೆರೆದ ವಿಶಾಲ ಪ್ರವೇಶದ್ವಾರ. ಅದರ ಮೇಲ್ಬಾಗದ ಮತ್ತೊಂದು ಕೋಣೆಗೆ ಸದಾ ಮುಚ್ಚಿದ, ಗುರುತಿಸಲೇ ಆಗದ ಒಂದು ಸುಭದ್ರ ರಹಸ್ಯ ಬಾಗಿಲು. ಮೊಟ್ಟೆ-ಮರಿಗಳಿಗೆ ಈ ರಹಸ್ಯ ಕೊಠಡಿಯಲ್ಲಿ ನೆಲೆ.ಗೂಡಿಗೆ ಆಹಾರ ತರುವ ತಂದೆ-ತಾಯಿ ಹಕ್ಕಿ ಮೊದಲು ಎಲ್ಲರಿಗೂ ಕಾಣುವಂತೆ ತೆರೆದ ದ್ವಾರದ ಮೂಲಕ ಕೆಳಗಿನ ಖಾಲಿ ಕೋಣೆ ಹೊಕ್ಕು (ಚಿತ್ರ-9) ಹೊರಗೆ ಶತ್ರುಗಳು ಇದ್ದಾರೆಯೇ ಗಮನಿಸುತ್ತದೆ.ಹಾಗಿಲ್ಲದ್ದು ಖಚಿತವಾದೊಡನೆ ಹೊರಬಂದು (ಚಿತ್ರ-10) ಮೇಲಿನ ರಹಸ್ಯ ದ್ವಾರವನ್ನು ಕಾಲುಗಳಿಂದ ಜಗ್ಗಿ ತೆರೆದು (ಚಿತ್ರ-11) ಬೇಗ ಒಳಹೋಗುತ್ತದೆ. ಮರಿಗಳಿಗೆ ಗುಟುಕು ಕೊಟ್ಟು ನಂತರ ತಲೆಯನ್ನಷ್ಟೇ ಹೊರಹಾಕಿ (ಚಿತ್ರ-12) ಶತ್ರುಗಳಿಲ್ಲದ್ದನ್ನು ಖಾತ್ರಿಗೊಳಿಸಿಕೊಂಡು ಬೇಗ ಹೊರಬಂದು ರಹಸ್ಯ ಬಾಗಿಲನ್ನು ತಲೆಯಿಂದ ಗುದ್ದಿ ಗುದ್ದಿ ಭದ್ರವಾಗಿ ಮುಚ್ಚಿಬಿಡುತ್ತದೆ.ಮರಿಗಳನ್ನು ಹಿಡಿಯಲು ಬರುವ ಹಾಲಿನಂಥ ಬೇಟೆಗಾರರು ತೆರೆದ ಬಾಗಿಲಿನ ಮೂಲಕ ತಲೆ ಹಾಕುತ್ತವೆ. ಕೆಳಗಿನ ಕೋಣೆಯನ್ನಷ್ಟೇ ನೋಡಿ ಖಾಲಿ ಗೂಡೆಂದು ಭಾವಿಸಿ ಸುಮ್ಮನಾಗುತ್ತವೆ.ಎಂಥ ತಂತ್ರ! ಎಂಥ ವಿಸ್ಮಯ! ಅಲ್ಲವೇ?

 

 -

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.