`ಹಕ್ಕಿ ಚೆಲ್ಲಿದ ಬೀಜ' ವಾಸ್ತವಕ್ಕೆ ಕತೆಯ ಹೆಣಿಗೆ

7

`ಹಕ್ಕಿ ಚೆಲ್ಲಿದ ಬೀಜ' ವಾಸ್ತವಕ್ಕೆ ಕತೆಯ ಹೆಣಿಗೆ

Published:
Updated:
`ಹಕ್ಕಿ ಚೆಲ್ಲಿದ ಬೀಜ' ವಾಸ್ತವಕ್ಕೆ ಕತೆಯ ಹೆಣಿಗೆ

ಸಮುದ್ರ, ಮತ್ಸ್ಯೋದ್ಯಮ, ಭೂತ ಕೋಲ, ಯಕ್ಷಗಾನ, ವಿಶಿಷ್ಟ ಭಾಷಾ ಸೊಗಡನ್ನು ಹೊಂದಿರುವ ಕಡಲತೀರದಲ್ಲಿ ಕೋಮು ದಳ್ಳುರಿ ನುಸುಳಿ ಹಲವು ವರ್ಷಗಳೇ ಸಂದಿವೆ. ಜಾತಿ ಹಾಗೂ ಕೋಮು ಸೂಕ್ಷ್ಮಗಳು ಬದುಕಿನ ಭಾಗವೇ ಆಗಿಹೋಗಿವೆ. ವೈಚಾರಿಕತೆಯೆಂಬುದು ಕೇವಲ ಮಾತುಗಳಿಗೆ ಸೀಮಿತಗೊಂಡು ಕೃತಿಯಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯುವ ಪ್ರಸಂಗಗಳೇ ಹೆಚ್ಚಾಗಿವೆ. ಇನ್ನೂ ಹರೆಯದ ಅಮಲಿನಲ್ಲಿ ನಡೆಯುವ ತಪ್ಪುಗಳು ಹೆಣ್ಣಿನ ಜೀವನದಲ್ಲಿ ಮಾತ್ರ ಏಕೆ ಕಪ್ಪುಚುಕ್ಕೆಯಾಗಿ ಉಳಿಯುತ್ತವೆ? ಎಂಬ ಉತ್ತರವಿಲ್ಲದ ಪ್ರಶ್ನೆಗೆ ಅಭಿಮುಖವಾಗುತ್ತದೆ ಒಂದು ಅಸಹಾಯಕ ಹೆಣ್ಣಿನ ಕತೆ.



ಇವುಗಳ ಸುತ್ತ ಈ ನೆಲದ ಧರ್ಮ, ಜಾತಿ ಹಾಗೂ ಸಂಬಂಧ ಸೂಕ್ಷ್ಮಗಳನ್ನು ಪರಿಣಾಮಕಾರಿಯಾಗಿ ಹೆಣೆದಿರುವ ಸಿ.ಎನ್. ರಾಮಚಂದ್ರ ಅವರ `ಹಕ್ಕಿ ಚೆಲ್ಲಿದ ಬೀಜ' ಕೃತಿಯ ರಂಗರೂಪವನ್ನು ರಂಗಾಭರಣ ತಂಡದ ಕಲಾವಿದರು ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಿದರು.



ಮಂಗಳೂರು ಉಲ್ಲಾಳದ ಭಾರತಿ ಪುತ್ರನ್ ಎಂಬ, ಮೂವತ್ತೈದರ ಹರೆಯದ ಮೊಗವೀರ ಹೆಣ್ಣುಮಗಳು ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಶಂಕರ ಸುವರ್ಣ ಎಂಬಾತನನ್ನು ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಭೇಟಿಯಾಗುವ ಸನ್ನಿವೇಶದೊಂದಿಗೆ ನಾಟಕ ತೆರೆದುಕೊಳ್ಳುತ್ತದೆ. `ಈಕೆಯನ್ನು ಎಲ್ಲೋ ನೋಡಿದ್ದೇನೆ' ಎಂಬ ಚಡಪಡಿಕೆಯೊಂದಿಗೆ ಆಶ್ಚರ್ಯವ್ಯಕ್ತಪಡಿಸುವ ಸುವರ್ಣ ಹಳೆಯ ನೆನಪುಗಳಿಗೆ ಜಾರುತ್ತಾನೆ.



ಕಡಲ ಅಲೆಗಳಂತೆ ನೆನಪುಗಳೂ ಒಂದೇ ಸಮನೆ ಅಬ್ಬರಿಸುತ್ತವೆ. ಉಲ್ಲಾಳದ ದರ್ಗಾವೊಂದರ ಸಮೀಪವಿದ್ದ ಸರ್ಕಾರಿ ಶಾಲೆಯಲ್ಲಿ ಹಸಿರು-ಬಿಳಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಭಾರತಿ ಪುತ್ರನ್, ಬಸ್ ಕಂಡಕ್ಟರ್‌ನೊಂದಿಗೆ ಪ್ರೀತಿ, ಗರ್ಭಧಾರಣೆ, ಮದುವೆ.. ಹಾ! ಅವಳೇ ಇವಳು ಎಂಬ ನಿರ್ಧಾರಕ್ಕೆ ಬರುವಷ್ಟರಲ್ಲಿ ಸ್ವತಃ ಭಾರತಿ ಪುತ್ರನ್ ಹತ್ತಿರ ಬಂದು ಪರಿಚಯ ಮಾಡಿಕೊಳ್ಳುತ್ತಾಳೆ. ಭಾರತಿ ತನ್ನ ಜೀವನದಲ್ಲಿ ಯಾವ ಕಹಿ ಘಟನೆಗಳೂ ಸಂಭವಿಸಿಲ್ಲ ಎಂಬಂತೆ ಅವನನ್ನು ಮಾತನಾಡಿಸುತ್ತಾಳೆ. ಇದರಿಂದ ವಿಚಲಿತನಾಗುವ ಸುವರ್ಣ ಇವೆಲ್ಲವೂ ಊಹಾಪೋಹವಿರಬಹುದೆಂಬ ನಿರ್ಧಾರಕ್ಕೆ ಬರುತ್ತಾನೆ.



ಮಡಿಕೇರಿಯಲ್ಲಿ ಏನೋ ಕೆಲಸವಿದ್ದುದರಿಂದ ಸುವರ್ಣನ ವಸತಿನಿಲಯದಲ್ಲಿ ಉಳಿದುಕೊಳ್ಳುವ ಭಾರತಿ, ಅಲ್ಲಿದ್ದಷ್ಟೂ ತೋರುವ ಉತ್ತಮ ನಡವಳಿಕೆಯಿಂದ ಸಂಪೂರ್ಣ ಆಕರ್ಷಿತನಾಗುತ್ತಾನೆ. ಹಳೆಯ ವೃತ್ತಾಂತವೆಲ್ಲವನ್ನೂ ಕೇಳಲೇಬೇಕು ಎಂದುಕೊಂಡರೂ ಸರಿ ಎನಿಸುವುದಿಲ್ಲ, ಇದರಿಂದ ಮಾನಸಿಕ ಕ್ಲೇಶವೇ ಹೆಚ್ಚು ಎಂಬ ನಿರ್ಧಾರಕ್ಕೂ ಬರುತ್ತಾನೆ.



ರುಚಿಕಟ್ಟಾದ ಬಿರಿಯಾನಿ ತಯಾರಿಸಿದ  ಭಾರತಿಯನ್ನು ಹೊಗಳುವ ಸುವರ್ಣನಿಗೆ, `ಎಷ್ಟಾದರೂ ಮುಸಲ್ಮಾನ ಹೆಂಡತಿಯಲ್ಲವೇ?' ಎಂಬ ಉತ್ತರದ ಮೂಲಕ ತಾನೇ ಹಳೆಯ ನೆನಪುಗಳನ್ನು ಕೆದಕಲು ವೇದಿಕೆ ನಿರ್ಮಿಸುತ್ತಾಳೆ. ಮಾತ್ರವಲ್ಲ ಸ್ವತಃ ಹೇಳಿಕೊಳ್ಳುತ್ತಾಳೆ ಕೂಡಾ. ಸುವರ್ಣನ ಮನದಲ್ಲಿ ಆಗಷ್ಟೇ ಮೂಡಿದ ಅನುರಾಗವನ್ನು ಚಿವುಟಿಯೂ ಹಾಕುತ್ತಾಳೆ.



ಒಂದೆಡೆ ವರ್ತಮಾನದ ಭಾರತಿಯ ತುಮುಲ, ಇನ್ನೊಂದೆಡೆ ಗತಿಸಿದ ನೆನಪುಗಳು ಒಟ್ಟಾಗಿಯೇ ತೆರೆಯ ಮೇಲೆ ಕಾಣಿಸುತ್ತದೆ. ಎಸ್ಸೆಸ್ಸೆಲ್ಸಿ ಓದುವಾಗಲೇ ಮುಸಲ್ಮಾನಿ ಬಸ್ ಕಂಡಕ್ಟರ್‌ನಲ್ಲಿ ಅನುರಕ್ತಳಾಗಿ, ಗರ್ಭ ಧರಿಸಿ, ಮಗುವೊಂದಕ್ಕೆ ತಾಯಿಯಾಗುವುದು, ಕೋಮು ಸಂಘರ್ಷವಾಗುವುದರಿಂದ ಕಂಡಕ್ಟರ್ ಓಡಿಹೋಗುವುದು, ಈ ನಡುವೆ ಅವಳನ್ನು ಅವಳ ಊರು ಉಲ್ಲಾಳದಿಂದಲೇ ಗಡೀಪಾರು ಮಾಡುವುದು, ಆತನಿಗೆ ಹುಟ್ಟಿದ ಗಂಡು ಮಗು ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಯ ದತ್ತು ಪುತ್ರನಾಗಿ ಬೆಳೆಯುವುದು- ಇವೆಲ್ಲವೂ ಅವಳ ಮಾತಲ್ಲೇ ಕತೆಯಾಗಿ ರಂಗದ ಮೇಲೆ ಮೂಡಿಬರುತ್ತದೆ. ಕೈಕೊಟ್ಟ ಪ್ರೇಮಿಯನ್ನು ಮರೆತು ಇತ್ತ ಗುಮಾಸ್ತೆ ಕೆಲಸ ನೀಡುವ ವಿಧುರ ಉದ್ಯಮಿಯನ್ನು ವರಿಸಿದರೂ ಅವಳ ದುರಾದೃಷ್ಟಕ್ಕೆ ಆತನೂ ಕೂಡ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗುತ್ತಾನೆ.



ಇಷ್ಟಾಗುವ ಹೊತ್ತಿಗೆ, ಅವಳಿಗೆ ಹೆರಿಗೆ ಮಾಡಿಸಿದ್ದ ತಿಂಗಳಾಯ ಆಸ್ಪತ್ರೆಯಲ್ಲಿ ನರ್ಸ್ ಮೇರಿಯಿಂದ ತನ್ನ ಮಗು ಸತ್ತಿಲ್ಲವೆಂಬುದು ತಿಳಿಯುತ್ತದೆ. ಮುಖ ಕಾಣದೇ ಇರುವ ಮಗುವಿನ ಹುಡುಕಾಟಕ್ಕೆ ತೊಡಗುತ್ತಾಳೆ. ಒಮ್ಮೆಯಾದರೂ ಅಮ್ಮನೆಂದು ಕರೆಸಿಕೊಳ್ಳಬೇಕೆಂಬ ಆಸೆ ತೀವ್ರವಾಗಿ ದತ್ತು ಪಡೆದ ಶಾಸ್ತ್ರಿ ದಂಪತಿಯನ್ನು ಕೊನೆಗೂ ಮಡಿಕೇರಿಯಲ್ಲಿ ಕಾಣುತ್ತಾಳೆ. ಆದರೆ, ಎಂಟು ವರ್ಷದ ನಂತರ ಬುದ್ಧಿಭ್ರಮಣೆಗೆ ಒಳಗಾದ ಮಗ ಹಾಸಿಗೆಯಲ್ಲಿ ಮಲಗಿರುವುದನ್ನು ಶಾಸ್ತ್ರಿ ದಂಪತಿ ತೋರಿಸುತ್ತಾರೆ. ಇದರಿಂದ ಆಘಾತಕ್ಕೆ ಒಳಗಾಗಿ, ಬಿಕ್ಕುತ್ತಾಳೆ ಭಾರತಿ. ಅಲ್ಲಿಗೆ ನಾಟಕ ಕೊನೆಗೊಳ್ಳುತ್ತದೆ.



`ಪ್ರಶ್ನೆಗೆ ಉತ್ತರ ಹುಡುಕಿದೆ ಎನ್ನುವಾಗಲೇ ಬದುಕಿನ ಪ್ರಶ್ನೆ ಪತ್ರಿಕೆಯೇ ಬದಲಾಗುತ್ತಿದೆ' ಎಂಬ ಚುರುಕು ಸಂಭಾಷಣೆಯು ಭಾರತಿಯ ಹುಡುಕಾಟ, ತೊಳಲಾಟ, ಭಾವಾಂತರಂಗದ ಅನ್ವೇಷಣೆಗಳ ಜತೆಯಲ್ಲಿ ಕಥಾ ಹಂದರವನ್ನು ತೆರೆದಿಡುತ್ತದೆ. ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅವರು ಸಂಭಾಷಣೆಗಳಿಗೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಪಾತ್ರದಷ್ಟೇ ಸಲೀಸಾಗಿ ಸಂಭಾಷಣೆಯಿಂದಲೂ ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ.



ಬುದ್ಧಿಭ್ರಮಣೆಗೆ ಒಳಗಾಗುವ ಭಾರತಿಯ ಮಗನ ಬಾಯಿಂದ ಹೊರ ಬೀಳುವ ಗಾಯಿತ್ರಿ ಮಂತ್ರವೂ ಶೋಕ ಗೀತೆಯಂತೆ ಅನುರಣಿಸುತ್ತದೆ. `ಯಾವ ನೋವಿಗೆ ಯಾರು ಕಾರಣ? ಯಾವ ರಾಗಕ್ಕೆ ಯಾವ ಭಾವವೂ...' ಕಿರಣ್ ಎಸ್.ವಿಪ್ರ ಅವರ ಹಾಡುಗಾರಿಕೆಯೂ ಮುದಗೊಳಿಸುತ್ತದೆ. ಅಸಹಾಯಕತೆ ಹಾಗೂ ಸಂಬಂಧಗಳ ಬಂಧದಿಂದ  ಹೊರಬರಲಾದೆ ತೊಳಲಾಡುವ ಭಾರತಿ ಪುತ್ರನ್ ರೀತಿಯ ಪಾತ್ರಕ್ಕೆ ಇನ್ನಷ್ಟು ಪ್ರಬುದ್ಧ ನಟರನ್ನು ಆಯ್ಕೆ ಮಾಡಬಹುದಿತ್ತು.



ಒಂದಾದ ಮೇಲೆ ಒಂದು ದೃಶ್ಯಗಳನ್ನು ಹೇರದೇ, ಕೃತಿಯಲ್ಲಿರುವ ಕಥಾಹಂದರಕ್ಕೂ ಧಕ್ಕೆ ಬಾರದಂತೆ ಒಂದಷ್ಟು ಪಾತ್ರಗಳು ತೆರೆಯ ಮೇಲೆ ಬಂದು ಮಾತಿನ ಮೂಲಕವೇ ದೃಶ್ಯವನ್ನು ಹೇಳುವ ತಂತ್ರವನ್ನು ನಿರ್ದೇಶಕರೂ ರಸವತ್ತಾಗಿ ಬಳಸಿಕೊಂಡಿದ್ದಾರೆ. ನಿರ್ದೇಶಕರ ಕಸುಬುದಾರಿಕೆ ಹಾಗೂ ಕಥಾಹಂದರವೇ ಈ ನಾಟಕದ ಒಟ್ಟು ಜೀವಾಳವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry