ಗುರುವಾರ , ಏಪ್ರಿಲ್ 22, 2021
30 °C

ಹಕ್ಕಿ ಹಾರುತಿದೆ ನೋಡಿದಿರಾ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಹಕ್ಕಿ ಹಾರುತಿದೆ ನೋಡಿದಿರಾ

ಕಂಪ್ಯೂಟರ್ ಪರದೆಯ ಮೇಲೆ ಕಣ್ನೆಟ್ಟು, ಬೆರಳುಗಳು ಕೀಬೋರ್ಡ್‌ನೊಂದಿಗೆ ಸ್ಪರ್ಧೆಗೆ ಇಳಿದಿರುತ್ತವೆ. ಕಿವಿಯೊಳಗೆ ನಮ್ಮದೇ ಕೀಬೋರ್ಡ್‌ನ ನಾದ, ಇಲ್ಲವೇ ಏಸಿಯ ಸದ್ದು. ಎಲ್‌ಇಡಿ ಲೈಟುಗಳ ಹೊನಲು ಬೆಳಕಿನಲ್ಲಿ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ.



ನಮಗಿಲ್ಲಿ ಗೊತ್ತಿರುವುದು ಎರಡೇ ಹೊತ್ತು. ಒಂದು ಸ್ವೈಪ್ ಇನ್ ಆಗುವುದು, ಇನ್ನೊಂದು ಔಟ್‌ಆಗುವುದು. ಇವುಗಳ ನಡುವೆ... ನಾವು... ಕಳೆದೇ ಹೋಗಿರುತ್ತೇವೆ.

ಯೂಸರ್‌ನೇಮ್ ಪಾಸ್‌ವರ್ಡುಗಳಲ್ಲಿ ಜಗತ್ತಿನೊಂದಿಗೆ ಕೊಂಡಿ ಬೆಸೆಯುವ ನಾವು ನಮ್ಮದೇ ನೆಲ, ಗಗನಗಳೊಂದಿಗೆ ಬೆಸುಗೆ ಕಳೆದುಕೊಂಡಿರುತ್ತೇವೆ.



ಆದರೂ ಕೆಲ ಕ್ಷಣಗಳ ಬಿಡುವು ಮಾಡಿಕೊಂಡು ಒಮ್ಮೆ ನಿಮ್ಮ ಕಟ್ಟಡದಿಂದಾಚೆ ಇಣುಕಿ..

ಪಾರಿವಾಳಗಳ ಹಿಂಡೊಂದು ದೇವರು ಇಟ್ಟ ರಂಗೋಲಿಯಂತೆ ಕಾಣುತ್ತದೆ. ಅರೆರೆ.. ನೋಡುವುದರಲ್ಲಿಯೇ ದಿಕ್ಕು ಬದಲಿಸುತ್ತವೆ. ಮೇಲಿನಿಂದ ವಾಲಿಕೊಂಡು, ಕಟ್ಟಡವೊಂದರ ಮೇಲೆ ವಿರಮಿಸತೊಡಗುತ್ತವೆ.



ತಿಳಿಬೂದು ಹಸಿರು ಬಣ್ಣದ ಕತ್ತಿನೊಂದಿಗೆ ಆಚೀಚೆ ಇಣುಕುತ್ತವೆ. ತಮ್ಮದೇ ಭಾಷೆಯಲ್ಲಿ ಗುಟರ್‌ಗುಂವ್ ಎಂದು ಮಾತಾಡುತ್ತಲೇ ಇರುತ್ತವೆ.



ಮತ್ತದೇ ನಾಯಕನ ಕರೆಗೆ ಓಗೊಟ್ಟಂತೆ ಒಂದೊಂದಾಗಿ ಹಾರಾಟ ಆರಂಭಿಸುತ್ತವೆ. ಎಂ.ಜಿ.ರಸ್ತೆಯ ಬಾರ್ಟನ್ ಸೆಂಟರ್‌ನ ಸುತ್ತಮುತ್ತ ನಡೆಯುತ್ತದೆ ಈ ಏರ್‌ಶೋ.

ಬೆಂಗಳೂರಿನಿಂದ ಏರ್‌ಶೋ ಬದಲಿಸಬೇಕು ಎಂಬ ವಾದ ವಿವಾದಗಳಿಗೆ ತೀರ್ಮಾನವೇ ಸಿಕ್ಕಿಲ್ಲ.

 

ಆದರೆ ಪ್ರತಿದಿನವೂ ನಡೆಯುವ ಈ ಏರ್‌ಶೋಗೆ ಯಾವ ಟಿಕೆಟ್ಟೂ ಬೇಕಿಲ್ಲ. ಚರ್ಚ್ ಸ್ಟ್ರೀಟ್‌ನಲ್ಲಿರುವ ಎತ್ತರದ ಕಟ್ಟಡದ ಮೇಲೆ ನಿಂತರೆ ಸಾಕು. ಟ್ರಿನಿಟಿ ಸರ್ಕಲ್ ರಸ್ತೆಯಲ್ಲಿರುವ ಕಪ್ಪು ಬಣ್ಣದ ಕಟ್ಟಡದ ಸುತ್ತಲೂ ಇಂಥ ಹಾರಾಟ ಕಂಡು ಬರುತ್ತದೆ.



ಎಂ.ಜಿ. ರಸ್ತೆಯನ್ನು ಹೊರತು ಪಡಿಸಿದರೆ ವಿಧಾನಸೌಧದ ಬಳಿ, ಕಬ್ಬನ್ ಪಾರ್ಕ್‌ನಲ್ಲಿ ಕುಳಿತರೆ ಹೈಕೋರ್ಟ್‌ನ ಬಳಿಯೂ ಕಂಡು ಬರುತ್ತವೆ. ಕತ್ತೆತ್ತಿ ಆಕಾಶವನ್ನು ದಿಟ್ಟಿಸುತ್ತ ಕುಳಿತಿರಿ. ಹಸಿರು ಮರಗಳ ನೋಟವನ್ನು ಸೀಳಿ, ಒಂದು ಕಡೆ ಈ ಹಕ್ಕಿವಿಂಡು ಕಂಡು ಬರುತ್ತದೆ. ಗ್ರಂಥಾಲಯದ ಬಳಿಯೂ ಹಕ್ಕಿಗಳ ಹಾರಾಟದ ಸೊಬಗನ್ನು ಸವಿಯಬಹುದು.

ತ್ರಿಕೋನಾಕಾರದಲ್ಲಿ, ಒಮ್ಮತದ ನಾಯಕನ ಹಿಂದೆ ಎಂಬಂತೆ ಹಾರಾಡುವ ಈ ಗುಂಪನ್ನು ನೋಡುವುದೇ ಒಂದು ಸಂತೋಷ ನೀಡುತ್ತದೆ. ಗಗನಮುಖಿಯಾಗಿ ಹಾರುವ ಈ ಹಕ್ಕಿಗುಂಪು ಇದ್ದಕ್ಕಿದ್ದಂತೆ ನೆಲದೆಡೆಗೆ ವಾಲುತ್ತದೆ. ಮತ್ತದೇ ಗಾಳಿಯಲ್ಲಿ ತೇಲುತ್ತ ಒಂದು ಸುತ್ತು ಹಾಕುತ್ತದೆ.



ಸುತ್ತು ಹಾಕುತ್ತಲೇ ತಮ್ಮಲ್ಲಿ ಎಲ್ಲರೂ ನಾಯಕರು ಎಂಬಂತೆ ಇನ್ನಾವುದೋ ಹಕ್ಕಿಯ ಇಷಾರೆಗೆ ಕಾಯುತ್ತಿರುವಂತೆ ಮತ್ತೊಂದೆಡೆ ವಾಲುತ್ತವೆ.

ನಿಧಾನವಾಗಿ ನದಿಯ ಹೊರಳಿನಂತೆ, ತಿರುತಿರುಗಿ, ನೆಲಕ್ಕಿಳಿದು ಮತ್ತೆ ಕಾಳುಗಳಿಗೆ, ಗುಟುಕಿಗಾಗಿ ಹುಡುಕುತ್ತವೆ.



ಹಕ್ಕಿ ಹಾರಾಟವನ್ನು ವೀಕ್ಷಿಸುವ ಈ ಕ್ಷಣಗಳಲ್ಲಿ ಮನಸು ಪ್ರಫುಲ್ಲಗೊಳ್ಳುತ್ತದೆ. ನಿಸರ್ಗದಲ್ಲಿನ ಈ ಹಾರಾಟ ಮನಸನ್ನು ಶಾಂತವಾಗಿಡುತ್ತದೆ. ಮನೆಯೊಳಗಣ ಅಕ್ವೇರಿಯಂನಲ್ಲಿರುವ ಮೀನಿನ ಚಲನೆಯೂ ಇಂಥದ್ದೇ ಸುಖವನ್ನು ನೀಡುವಂಥದ್ದು.



ಆದರೆ ನೆಲಮುಗಿಲಿನೊಂದಿಗೆ ಬೆಸೆಯುವ ಈ ಹಕ್ಕಿಗಳ ಹಾರಾಟ ಮಾತ್ರ ನಮ್ಮನ್ನೂ ನಿಸರ್ಗದೊಂದಿಗೆ ಬೆಸೆದಿಡುತ್ತದೆ. ಕೆಲವೇ ಕ್ಷಣಗಳಿಗಾದರೂ ಸರಿ. ಇನ್ನೊಮ್ಮೆ ಈ ರಸ್ತೆಗಳಿಗೆ ಬಂದರೆ ಬಿಡುವು ಮಾಡಿಕೊಂಡು ನೋಡಿ, ಹಕ್ಕಿ ಹಾರಾಟವನ್ನು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.