ಹಖಾನಿ ಜಾಲ ದಮನ: ಪಾಕ್‌ಗೆ ಅಮೆರಿಕ ತಪರಾಕಿ

7

ಹಖಾನಿ ಜಾಲ ದಮನ: ಪಾಕ್‌ಗೆ ಅಮೆರಿಕ ತಪರಾಕಿ

Published:
Updated:

ಇಸ್ಲಾಮಾಬಾದ್ (ಪಿಟಿಐ): `ಮನೆಯ ಅಂಗಳದಲ್ಲೇ ಹಾವುಗಳನ್ನು ಇಟ್ಟುಕೊಂಡು ನೆರೆಯವರತ್ತ ಬೆರಳು ತೋರಿಸುವ ಹಳೇ ಚಾಳಿಯನ್ನು ಇನ್ನು ಸಹಿಸಲು ಸಾಧ್ಯವಿಲ್ಲ~ ಇದು ಅಮೆರಿಕ ಪಾಕಿಸ್ತಾನಕ್ಕೆ ನೀಡಿರುವ ಕಟ್ಟುನಿಟ್ಟಿನ ಎಚ್ಚರಿಕೆ.

ದೇಶದಾದ್ಯಂತ ಬೇರುಬಿಟ್ಟಿರುವ ಹಖಾನಿ ಉಗ್ರರ ಜಾಲವನ್ನು ಬಗ್ಗುಬಡಿಯಲು ಪಾಕ್ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿ ಕಾರಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಆಫ್ಘಾನಿಸ್ತಾನದಲ್ಲಿ ದಾಳಿಗೆ ಕಾರಣವಾಗಿರುವ ಹಾಗೂ ಗಡಿಯಾಚೆ ಭಯೋತ್ಪಾದನೆ ಕೃತ್ಯ ನಡೆಸುತ್ತಿರುವ ಹಖಾನಿ ಜಾಲವನ್ನು ಸದೆ ಬಡಿಯಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು. ವಿಳಂಬ ಸಲ್ಲ ಎಂದು ತಾಕೀತು ಮಾಡಿದ್ದಾರೆ.

ಸದ್ಯ ಪಾಕಿಸ್ತಾನ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್, ಶುಕ್ರವಾರ ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹಖಾನಿ ಜಾಲವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಮೆರಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ಪಾಕಿಸ್ತಾನ ಸಹಿಸುವುದಿಲ್ಲ ಎಂದು ಪಾಕ್ ಪ್ರತಿರೋಧ ತೋರಿದರೂ, ಹಿಲರಿ  ಅವರು ಪಾಕ್ ನೆಲದಲ್ಲಿಯೇ ಇಂತಹ ಎಚ್ಚರಿಕೆ ನೀಡಿರುವುದು ಎರಡೂ ದೇಶಗಳ ನಡುವಿನ ಅಪನಂಬಿಕೆ ಮತ್ತು ಹಳಸುತ್ತಿರುವ ಸಂಬಂಧವನ್ನು ರುಜುವಾತು ಮಾಡಿದೆ.

`ಅಂಗಳದಲ್ಲಿರುವ ಹಾವುಗಳು ಮುಂದೊಂದು ದಿನ ಯಾರನ್ನು ಬೇಕಾದರೂ ಕಚ್ಚಬಲ್ಲವು~ ಎಂದು ಮಾರ್ಮಿಕವಾಗಿ ತಿವಿದ ಹಿಲರಿ, `ಹಖಾನಿ ಜಾಲವನ್ನು ಹತ್ತಿಕ್ಕಲು ಪಾಕಿಸ್ತಾನದಿಂದ ನಾವು ಖಚಿತ ಮತ್ತು ಸ್ಟಷ್ಟ ಕ್ರಮವನ್ನು ನಿರೀಕ್ಷಿಸುತ್ತೇವೆ. ಈ ನಿಟ್ಟಿನಲ್ಲಿ ಪಾಕ್ ಮೇಲೆ ಯಾವುದೇ ಒತ್ತಡ ಹೇರಲು ಸಿದ್ಧರಿದ್ದೇವೆ~ಎಂದು ದೃಢವಾಗಿ ಹೇಳಿದರು.

ಬಹಳ ಕಾಲದಿಂದ ಉಗ್ರರು ತಮ್ಮ ಚಟುವಟಿಕೆಗಳನ್ನು ಪಾಕ್ ನೆಲದಿಂದಲೇ ನಿರಾತಂಕವಾಗಿ ನಡೆಸುತ್ತಲೇ ಬಂದಿದ್ದಾರೆ. ಈಗ ಅವರನ್ನು ದಮನ ಮಾಡುವ ಕಾಲ ಎದುರಾಗಿದೆ. ಇನ್ನು ವಿಳಂಬ ನೀತಿ ಸಲ್ಲ. ಹಾಗಾಗಿ ಉಭಯ ರಾಷ್ಟ್ರಗಳೂ ಈ ನಿಟ್ಟಿನಲ್ಲಿ ಸಹಮತದಿಂದ ಕಾರ್ಯಾಚರಣೆ ನಡೆಸುವುದು ಅಗತ್ಯವಾಗಿದೆ ಎಂದರು.

`ನಮ್ಮ ಗುರಿ ಅಮಾಯಕ ನಾಗರಿಕರು ಅಲ್ಲ. ಬದಲಾಗಿ ಭಯೋತ್ಪಾದಕ ಕೃತ್ಯ ನಡೆಸುವ ಉಗ್ರರೇ ಆಗಿದ್ದು, ಪ್ರಮುಖವಾಗಿ ಹಖಾನಿ ಜಾಲವನ್ನು ನಿಯಂತ್ರಿಸಬೇಕಾಗಿದೆ~ ಎಂದರು.

ಅಮೆರಿಕ ಮಂಡಿಸಿದ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಹಿನಾ ರಬ್ಬಾನಿ ಖರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದೇಶದ ರಾಜಕೀಯ ಪಕ್ಷಗಳು ಸದ್ಯದಲ್ಲೇ ನಡೆಸಲಿರುವ ಮಹತ್ವದ ಸಭೆಯ ನಂತರ ಮುಂದಿನ ತಂತ್ರಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಸಿಐಎ ನಿರ್ದೇಶಕ ಡೇವಿಡ್ ಪೆಟ್ರೋಸ್, ಸೇನಾ ಜಂಟಿ ಮುಖ್ಯಸ್ಥ ಜನರಲ್ ಮಾರ್ಟಿನ್ ಡೆಂಪ್ಸೆ ಸೇರಿದಂತೆ ಅಮೆರಿಕದ ಉನ್ನತ ಮಟ್ಟದ ನಿಯೋಗದೊಂದಿಗೆ ಹಿಲರಿ ಕ್ಲಿಂಟನ್ ಗುರುವಾರ ಪಾಕ್‌ಗೆ ಆಗಮಿಸಿದ್ದಾರೆ.

`ಇರಾಕಿನ ಹಾಗೆ ನಮ್ಮನ್ನು ದಮನ ಮಾಡಲು ಸಾಧ್ಯವಿಲ್ಲ ನಮ್ಮ ಬಳಿ ಅಣ್ವಸ್ತ್ರವಿದೆ~ ಎಂದು ಐಎಸ್‌ಐ ಮುಖ್ಯಸ್ಥ ಕಯಾನಿಯವರು ಅಮೆರಿಕಕ್ಕೆ ಎಚ್ಚರಿಸಿದ ಬೆನ್ನ ಹಿಂದೆಯೇ ಹಿಲರಿ ಅವರ ಟೀಕಾ ಪ್ರಹಾರ ಬಂದಿರುವುದು ಪಾಕಿಸ್ತಾನದ ಬೆದರಿಕೆಗೆ ತಾನು ಜಗ್ಗುವುದಿಲ್ಲ ಎಂದು ಅಮೆರಿಕ ಹೇಳಿದಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry