ಗುರುವಾರ , ಜನವರಿ 23, 2020
22 °C

ಹಗದೂರು ವಾರ್ಡ್: ಗ್ರಾಮಗಳಲ್ಲಿ ಕೊಳವೆ ಬಾವಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಹಗದೂರು ವಾರ್ಡ್ ವ್ಯಾಪ್ತಿಯ ವಿಜಯನಗರ, ನಲ್ಲೂರುಹಳ್ಳಿ, ವೈಟ್‌ಫೀಲ್ಡ್ ಹಾಗೂ ರಾಮಗೊಂಡನಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಬಿಬಿಎಂಪಿ ಸದಸ್ಯರು ತಮ್ಮ ಸದಸ್ಯತ್ವದ ಅನುದಾನದಲ್ಲಿ ಹೊಸದಾಗಿ ಪ್ರತಿ ಊರಿನಲ್ಲಿ ತಲಾ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ.ಈ ಬಗ್ಗೆ ಇತ್ತೀಚೆಗೆ `ಪ್ರಜಾವಾಣಿ~ `ಹಗದೂರು: ನೀರಿಗೆ ಅಭಾವ- ಜನರ ಕಿತ್ತಾಟ~ ಎಂಬ ಶೀರ್ಷಿಕೆಯಡಿ ಚಿತ್ರ ಸಮೇತ ವರದಿ ಪ್ರಕಟಿಸಿತ್ತು.ಹಗದೂರು ವಾರ್ಡ್‌ಗೆ ಸೇರಿದ ವಿವಿಧ ಊರುಗಳಲ್ಲಿ ತೀವ್ರ ನೀರಿನ ಸಮಸ್ಯೆಯಿರುವ ಬಗ್ಗೆ ಸ್ಥಳೀಯರು ಜಲಮಂಡಳಿ ಹಾಗೂ ಬಿಬಿಎಂಪಿಗೆ ದೂರು ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿರಲಿಲ್ಲ.ಆದರೆ, ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಕೂಡಲೇ ಹಗದೂರು ವಾರ್ಡ್‌ನ ಪಾಲಿಕೆ ಸದಸ್ಯ ಎಚ್.ಎ.ಶ್ರೀನಿವಾಸ್ ವಿಜಯನಗರ, ಗಾಂಧಿಪುರಂ, ನಲ್ಲೂರುಹಳ್ಳಿ, ರಾಮಗೊಂಡನಹಳ್ಳಿಯಲ್ಲಿ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಿದ್ದಾರೆ.ಈ ಕೊಳವೆಬಾವಿಗಳನ್ನು ತಮ್ಮ ಸದಸ್ಯತ್ವದ ಅನುದಾನದಲ್ಲಿಯೇ ಕೊರೆಸಲಾಗಿದೆ ಎಂದು  ತಿಳಿಸಿದ್ದಾರೆ. ಅಲ್ಲದೆ, ಖಾಲಿ ಬಿದ್ದಿರುವ ಕುಡಿಯುವ ನೀರಿನ ತೊಟ್ಟಿಗಳನ್ನು ಶುಚಿಗೊಳಿಸಿ ನೀರು ತುಂಬುವ ಕಾರ್ಯ ಕೂಡ ಪ್ರಗತಿಯಲ್ಲಿದೆ.

 

ನಲ್ಲೂರುಹಳ್ಳಿ ಗ್ರಾಮದಲ್ಲಿ ಒಟ್ಟು ಐದು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಪೈಪ್‌ಲೈನ್ ವ್ಯವಸ್ಥೆ ಸಹ ಕಲ್ಪಿಸಿಕೊಡಲಾಗುತ್ತಿದೆ ಎಂದೂ ಹೇಳಿದ್ದಾರೆ. ಕೊಳವೆಬಾವಿಗಳನ್ನು ಕೊರೆಸಿದ ಮೇಲೆ ತಕ್ಕಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿದಿದೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮೀಪತಿ ಹೇಳುತ್ತಾರೆ. 

ಪ್ರತಿಕ್ರಿಯಿಸಿ (+)