ಹಗರಣಗಳೇ ಬಿಜೆಪಿಗೆ ಮಾರಕ: ಮೂರ್ತಿ

7

ಹಗರಣಗಳೇ ಬಿಜೆಪಿಗೆ ಮಾರಕ: ಮೂರ್ತಿ

Published:
Updated:

ಚಿಕ್ಕಮಗಳೂರು:ಮಾಜಿ ಸಚಿವ ಹಾಲಪ್ಪ, ರೇಣುಕಾಚಾರ್ಯ ಹಗರಣಗಳು ಹಾಗೂ ಅಶ್ಲೀಲಚಿತ್ರ ವೀಕ್ಷಣೆ ಪ್ರಕರಣ ಬಿಜೆಪಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾರಕವಾಗಿ ಪರಿಣಮಿಸಲಿವೆ. ಕಾಂಗ್ರೆಸ್‌ಗೆ ಈ ಚುನಾವಣೆ ಆಶಾದಾಯಕವಾಗಿದ್ದು, ಬಿಜೆಪಿ ಮಣಿಸುವುದು ಖಚಿತ ಎಂದು ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರಿಗೆ ಮಾರಕವಾಗಿರುವ ಹುಲಿ ಸಂರಕ್ಷಣಾ ಯೋಜನೆ, ಹಳದಿ ಎಲೆರೋಗ, ಅಕ್ರಮ ಮರಳು ದಂಧೆ, ಬರ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳದಿರುವುದು, ಕರಡಗ, ಮಳಲೂರು ಏತನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿರುವ ವಿಷಯಗಳನ್ನು ಜನರ ಮುಂದಿಟ್ಟು, ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲೂ ನಮಗೆ ಪೂರಕ ವಾತಾವರಣ ಇದ್ದು, ಅತ್ಯಂತ ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.ಪಕ್ಷದ ಅಭ್ಯರ್ಥಿಯನ್ನು ಪ್ರಕಟಿಸುವುದು ಸ್ವಲ್ಪ ವಿಳಂಬವಾಗಿದೆ. ಜಯಪ್ರಕಾಶ ಹೆಗ್ಡೆ, ಬಿ.ಎಲ್.ಶಂಕರ್, ಡಿ.ಕೆ.ತಾರಾದೇವಿ, ವಿನಯ್‌ಕುಮಾರ ಸೊರಕೆ, ಬಿ.ಕೆ.ಹರಿಪ್ರಸಾದ್ ಅವರ ಹೆಸರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿವೆ. ಜನಪರ, ಜನಪ್ರಿಯವಿರುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ. ಹೈಕಮಾಂಡ್ ಪ್ರಕಟಿಸುವ ಅಭ್ಯರ್ಥಿಯನ್ನು ಒಮ್ಮತದಿಂದ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಸಲಹೆ ನೀಡಿರುವಂತೆ ಜಾತ್ಯತೀತ ಪಕ್ಷವೆಂದು ಗುರುತಿಸಿಕೊಳ್ಳುವವರು ಜಾತ್ಯತೀತ ಅಭ್ಯರ್ಥಿಯನ್ನು ಬೆಂಬಲಿಸಲು ಯೋಚಿಸಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಜತೆ ಮಾತುಕತೆ ನಡೆಸಿ, ಬೆಂಬಲ ಕೋರುವಂತೆ ಹೈಕಮಾಂಡ್ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚುನಾವಣೆ ಸಂದರ್ಭ ಹುಲಿ ಯೋಜನೆ ಹೆಸರಿನಲ್ಲಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವರಾಗಿದ್ದಾಗಲೇ ಭದ್ರಾ ಅಭಯಾರಣ್ಯ ಸ್ಥಳಾಂತರದ ಬಗ್ಗೆ ಇದೇ ಎಚ್.ಎಚ್.ದೇವರಾಜ್ ನೇತೃತ್ವದಲ್ಲಿ ನಿಯೋಗ ಹೋಗಿ ಮನವಿ ಸಲ್ಲಿಸಿದಾಗ ಸ್ಪಂದಿಸಿರಲಿಲ್ಲ ಎಂದು ದೂರಿದರು.ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ಖರೀದಿಸಿದ್ದಾರೆ ಎಂದು ದೇವರಾಜ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಿರ್ದಿಷ್ಟವಾಗಿ ಯಾರನ್ನು? ಎಷ್ಟಕ್ಕೆ? ಖರೀದಿಸಿದ್ದಾರೆನ್ನುವುದನ್ನು ಸ್ಪಷ್ಟಪಡಿಸಬೇಕು. ಶಾಸಕ ಸಿ.ಟಿ.ರವಿ ಗೆಲುವಿನಲ್ಲಿ ನನ್ನನ್ನು ಸೇರಿದಂತೆ ಯಾರ‌್ಯಾರ ಪಾತ್ರ ಎಷ್ಟೆಂಬುದು? ಬಹಿರಂಗ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.ಗುಜರಾತ್‌ನಲ್ಲಿ ನರೇಂದ್ರ ಮೋದಿ ಮಾಡಿದ್ದನ್ನೇ ಚಿಕ್ಕಮಗಳೂರಿನಲ್ಲಿ ಮಹೇಂದ್ರ ಕುಮಾರ್ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜೆಡಿಎಸ್‌ನದು ಹುಸಿ ಜಾತ್ಯತೀತ ಪಕ್ಷ ಎನ್ನುವುದು ಸಾಬೀತಾಗಿದೆ. ಮಹೇಂದ್ರ ಕುಮಾರ್ ಮೇಲಿನ ಎಲ್ಲ ಪ್ರಕರಣಗಳ ಶೀಘ್ರ ವಿಚಾರಣೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮೂರ್ತಿ ಆಗ್ರಹಿಸಿದರು.ಶಾಸಕ ಸಿ.ಟಿ.ರವಿ ಅವರ ಗ್ರಾಮವಾಸ್ತವ್ಯ ಟೀಕಿಸಿ, ತಮ್ಮ ಅಸ್ತಿತ್ವಕ್ಕೆ ಹೊಡೆತ ಬೀಳುವುದನ್ನು ಅರಿತು ಶಾಸಕರು ಈಗ ಗ್ರಾಮ ವಾಸ್ತವ್ಯದ ಕಪಟ ನಾಟಕ ಆಡುತ್ತಿದ್ದಾರೆ. ಮುಂದಿನ ಚುನಾವಣೆ ಬಗ್ಗೆ ಅವರಿಗೆ ಭಯ ಹುಟ್ಟಿದೆ ಎಂದು ವ್ಯಂಗ್ಯವಾಡಿದರು.ಪಕ್ಷದ ಜಿಲ್ಲಾ ವಕ್ತಾರ ಎ.ಎನ್.ಮಹೇಶ್, ಮುಖಂಡರಾದ ಡಾ.ವಿಜಯಕುಮಾರ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷ ಎಂ.ಮಲ್ಲೇಶ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry