ಹಗರಣಗಳ ವಿಷವರ್ತುಲ

7
ಬಿಬಿಎಂಪಿ ಬೇಗುದಿ

ಹಗರಣಗಳ ವಿಷವರ್ತುಲ

Published:
Updated:

ಕೇಂದ್ರ ಹಾಗೂ ರಾಜ್ಯ ಸರ್ಕಾರ­ಗಳಿಗೆ ವಾರ್ಷಿಕ ರೂ 1.10 ಲಕ್ಷ ಕೋಟಿ­ಯಷ್ಟು ತೆರಿಗೆ ನೀಡುವ ಬೆಂಗ­­ಳೂರು ದೇಶದ ಶ್ರೀಮಂತ ನಗರಗಳಲ್ಲಿ ಒಂದು. ಆದರೆ, ಇಲ್ಲಿನ ಸ್ಥಳೀಯ ಆಡಳಿತದ ಹೊಣೆ ಹೊತ್ತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾತ್ರ ನಿತ್ಯದ ವೆಚ್ಚ­­­­ಗಳಿಗೂ ತನ್ನ ಆಸ್ತಿಗಳನ್ನು ಅಡವಿಟ್ಟು ಸಾಲದ ಮೂಲಕ ಹಣ ಹೊಂದಿ­ಸ­ಬೇಕಾ­ದಷ್ಟು ಬಡವಾಗಿದೆ.ಬಿಬಿಎಂಪಿಯ ಈ ದುಃಸ್ಥಿತಿಗೆ ಏನು ಕಾರಣ ಎಂದು ಹುಡುಕುತ್ತಾ ಹೊರ­ಟರೆ, ಹಗ­ರಣ­ಗಳ ಸರಮಾಲೆಯೇ ಬಿಚ್ಚಿ­ಕೊಳ್ಳು­ತ್ತದೆ. ಈ ಹಗರಣಗಳ ರಾಡಿ ನೀರಿ­ನಲ್ಲಿ ಮರಿ ಮೀನುಗಳಿವೆ, ತಿಮಿಂ­ಗಿಲ­­ಗಳೂ ಇವೆ. ಹಿಡಿಯಲು ಬೀಸಿದ ಬಲೆ­ಯನ್ನೇ ತುಂಡರಿಸಿ ಹೊರ­ಬರು­ವಷ್ಟು ಚಾಲಾಕಿತನ ಅವುಗಳಿಗೆ ಸಿದ್ಧಿಸಿದೆ.

2001ರಿಂದ 2010ರ ಅವಧಿಯಲ್ಲಿ ರಸ್ತೆಗೆ ಸಂಬಂಧಿಸಿದ ಕಾಮಗಾರಿ­ಗಳಿಗೆ ಬಿಬಿಎಂಪಿ ರೂ 10,782 ಕೋಟಿ ವ್ಯಯಿ­ಸಿದೆ. 9,923 ಕಾಮಗಾರಿ­ಗಳನ್ನು ಕೈಗೊಳ್ಳ­­ಲಾಗಿದೆ ಎಂದು ಕಡತಗಳು ‘ಕಥೆ’ ಹೇಳುತ್ತವೆ. ಪ್ರತಿ ಕಿ.ಮೀ. ರಸ್ತೆಗೆ ಒಂದು ಕೋಟಿ ವೆಚ್ಚ ಮಾಡಲಾಗಿದೆ ಎಂದು­ಕೊಂಡರೂ 10,782 ಕಿ.ಮೀ. ಉದ್ದದ ರಸ್ತೆ ನುಣುಪಾದ ಮೇಲ್ಮೈ­ಯಿಂದ ನಳನಳಿಸಬೇಕಿತ್ತು. ಆದರೆ, ನಗರದ ರಸ್ತೆಗಳು ಹಾಗೂ ಗುಂಡಿಗಳ ನಡುವಿನ ಆಪ್ತವಾದ ಸಹಬಾಳ್ವೆಯು ವರ್ಷಗಳು ಉರುಳಿದಂತೆ ಗಟ್ಟಿಯಾಗು­ತ್ತಲೇ ಹೊರಟಿದೆ.ವರ್ಷದ ಅವಧಿಯಲ್ಲಿ ಒಂದು ರಸ್ತೆಗೆ ಎಷ್ಟು ಸಲ ಟಾರು ಹಾಕಬಹುದು? ನೃಪ­ತುಂಗ ರಸ್ತೆಗೆ ಏಕಕಾಲಕ್ಕೆ ಮೂರು ಸಲ ಟಾರು ಹಾಕುವ ‘ಕಾಮಗಾರಿ’ ನಡೆಸಿದ ಶ್ರೇಯ ಬಿಬಿಎಂಪಿಯದು. ವಿಧಾನ­ಸೌಧದಿಂದ ಪಾಲಿಕೆ ಕಚೇರಿ ವರೆಗೆ, ಹಡ್ಸನ್‌ ವೃತ್ತದಿಂದ ಶಾಂತವೇರಿ ಗೋಪಾಲ­ಗೌಡ ವೃತ್ತದ­ವರೆಗೆ, ಹೈಕೋರ್ಟ್‌ ಮುಂಭಾಗದಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ... ಹೀಗೆ ಮೂರು ಬೇರೆ ಹೆಸರುಗಳಲ್ಲಿ ಕಾಮ­ಗಾರಿ ಸೃಷ್ಟಿಸಿ ಹಣ ಅಪವ್ಯಯ ಮಾಡ­ಲಾಗಿದೆ. ಈ ಕಾಮಗಾರಿಗಳಿಗೆ ಬಿಡುಗಡೆ­ಯಾದ ಮೊತ್ತ ತಲಾ ರೂ 48 ಲಕ್ಷ!ನಗರದ ಎಲ್ಲ ಪ್ರಮುಖ ರಸ್ತೆಗಳ ಅಭಿ­ವೃದ್ಧಿಗೆ ಇದೀಗ ರೂ 560 ಕೋಟಿ ಮೊತ್ತದ ಕಾಮಗಾರಿಗಳು ನಡೆದಿವೆ. ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆ­ದಾರರೇ ಒಂದು ವರ್ಷದವರೆಗೆ ಅದನ್ನು ನಿರ್ವ­ಹಣೆ ಮಾಡಬೇಕೆನ್ನುವುದು ನಿಯಮ. ಇತ್ತ ರಸ್ತೆಗಳಿಗೆ ಟಾರು ಹಾಕಲು ಗುತ್ತಿಗೆ ನೀಡಿದ ಬಿಬಿಎಂಪಿ, ಅತ್ತ ಅದೇ ರಸ್ತೆಗಳ ಗುಂಡಿಗಳಿಗೆ ತೇಪೆ ಹಾಕಲು ಅಮೆರಿಕ ರಸ್ತೆ ತಂತ್ರಜ್ಞಾನ ಮತ್ತು ಪರಿಹಾರ ಸಂಸ್ಥೆಗೆ ರೂ 18 ಕೋಟಿ ಮೊತ್ತದ ಗುತ್ತಿಗೆ ಕೊಟ್ಟಿದೆ.ಜಗತ್ತಿನ ಯಾವ ಭಾಗದಲ್ಲೂ ಒಮ್ಮೆ ಟಾರು ಹಾಕಿದ ರಸ್ತೆಗಳಿಗೆ ಮರು ವರ್ಷ ಮತ್ತೆ ಸಾರಾ­ಸಗಟಾಗಿ ಟಾರು ಹಾಕುವ ಸಂಪ್ರ­ದಾಯ ಇಲ್ಲ. ಐದು ವರ್ಷ­ಗಳಿ­ಗೊಮ್ಮೆ ರಸ್ತೆ ಅಭಿವೃದ್ಧಿ ಮಾಡುವುದು, ಪ್ರತಿ ವರ್ಷ ಅವುಗಳ ನಿರ್ವಹಣೆ ಮಾಡು­­ವುದು ರೂಢಿ. ಆದರೆ, ಬೆಂಗಳೂರಿನ ಹಲವು ರಸ್ತೆಗಳಿಗೆ ಪ್ರತಿ­­­ವರ್ಷವೂ ಟಾರು ಹಾಕಲಾಗುತ್ತದೆ. ಇದ­­ರಿಂದ ರಸ್ತೆ ಮೇಲಿನ ಪದರ­ಗಳು ಬೆಳೆ­­ಯುತ್ತಿವೆ, ಗುಂಡಿಗಳು ಆಳ­ವಾಗು­ತ್ತಿವೆ, ಕಳಪೆ ಕಾಮಗಾರಿಗಳಿಗೆ ಮಾಡಿದ ವೆಚ್ಚ­­ದಿಂದ ಸಾಲದ ಭಾರ ಹೆಚ್ಚುತ್ತಾ ಹೋಗುತ್ತಿದೆ.ದಾಸರಹಳ್ಳಿ ವಲಯದ ಹೆಗ್ಗನಹಳ್ಳಿ ವಿಭಾಗ­ದಲ್ಲಿ 2009–10ರಲ್ಲಿ ರಸ್ತೆ ಕಾಮ­­ಗಾರಿಯೊಂದು ನಡೆದಿದೆ. ಟೆಂಡರ್‌ ಫಾರಂ ಖರೀದಿಸದೇ ಇದ್ದ ಗುತ್ತಿಗೆ­ದಾರರ (ರಾಜರಾಜೇಶ್ವರಿ ಕನ್‌­ಸ್ಟ್ರಕ್ಷನ್‌) ಹೆಸರನ್ನು ಫಾರಂನಿಂದ ಹಿಡಿದು ಗುಣ­ಮಟ್ಟ ಪರೀಕ್ಷೆವರೆಗೆ ಎಲ್ಲ ಕಡತ­ಗಳಲ್ಲೂ ತಿದ್ದಿ ಸೇರಿಸಲಾಗಿದೆ. ತಾಂತ್ರಿಕ ದಾಖಲೆಗಳನ್ನು ಒದಗಿಸಲು ವಿಫಲ­ವಾದರೂ ಅಧಿಕಾರಿಗಳು ಅಕ್ರಮ­ವಾಗಿ ಆ ಸಂಸ್ಥೆಗೆ ಗುತ್ತಿಗೆ ವಹಿಸಿ­ಕೊಟ್ಟಿ­ದ್ದಾರೆ. ಲೆಕ್ಕ ಪರಿಶೀಲನಾ ವರದಿ­ಯಿಂದ ಈ ಹಗರಣ ಬಯಲಾಗಿದೆ. ತಪ್ಪಿತಸ್ಥರ ವಿರುದ್ಧ ಇದು­ವರೆಗೆ ಕ್ರಮ ಜರುಗಿಸಿಲ್ಲ. ಬಿಬಿಎಂಪಿ ವ್ಯವಹಾರಗಳ ಒಳ–ಹೊರಗುಗಳನ್ನು ಸಮಗ್ರವಾಗಿ ಬಲ್ಲ ಕೆಲ­ವರನ್ನು ಮಾತನಾಡಿಸುತ್ತಾ ಹೊರಟರೆ ‘ಹಳೇ ಕಲ್ಲು, ಹೊಸ ಬಿಲ್ಲಿ’ನ ಕಥೆಗಳು ಬಿಚ್ಚಿ­ಕೊಳ್ಳುತ್ತಾ ಸಾಗುತ್ತವೆ. ರಸ್ತೆ, ಚರಂಡಿ, ಪಾದಚಾರಿ ಮಾರ್ಗಗಳು ಭ್ರಷ್ಟರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ­­ಗಳಾಗಿವೆ. ರಸ್ತೆಯ ಈ ತುದಿ­ಯಿಂದ ಆ ತುದಿವರೆಗೆ ಒಂದು ‘ಜಾಬ್‌ ಕೋಡ್’ ಸಿಕ್ಕರೆ, ಅದೇ ರಸ್ತೆಯ ಆ ತುದಿ­ಯಿಂದ ಈ ತುದಿಗೆ ಮತ್ತೊಂದು ‘ಜಾಬ್‌ ಕೋಡ್‌’ ಸೃಷ್ಟಿಯಾಗುತ್ತದೆ. ಕಪ್ಪು ಬಣ್ಣ ಬಳಿಯುತ್ತಾ ಹೋದ­ರಾಯಿತು, ಕಾಮಗಾರಿ ಮುಗಿದಂತೆ. ಇಂತಹ ನಕಲಿ ಕಾಮಗಾರಿಗಳನ್ನು ತಪ್ಪಿಸಲು ‘ರಸ್ತೆ ಇತಿಹಾಸ’ ನಿರ್ವಹಣೆ ಮಾಡ­ಬೇಕು ಎಂಬ ಒತ್ತಾಯ ಹಲವು ವರ್ಷ­ಗಳಿಂದ ಇದೆ. ‘ಕೋಳಿ’ಯನ್ನು ಕೊಯ್ದು ‘ಚಿನ್ನದ ಮೊಟ್ಟೆ’ಗಳನ್ನು ಕಳೆದು­ಕೊಳ್ಳಲು ಯಾರೂ ಸಿದ್ಧರಿಲ್ಲ.2007–08ರ ಅವಧಿಯಲ್ಲಿ ಕೌನ್ಸಿಲ್‌ ಅಸ್ತಿತ್ವದಲ್ಲಿ ಇರಲಿಲ್ಲ. ಹೀಗಾಗಿ ಆಗ ಬಿಬಿಎಂಪಿ ಆಡಳಿತದ ಹೊಣೆ ಹೊತ್ತ­ವರು ಅಧಿಕಾರಿಗಳು. ಚುನಾವಣೆ ಘೋಷಣೆಗೆ ದಿನಗಣನೆ ನಡೆಯು­ತ್ತಿ­ದ್ದಾಗ ಹಗಲು–ರಾತ್ರಿಯೆನ್ನದೆ ಟೆಂಡರ್‌ ಪರಿ­­ಶೀಲಿಸಿದ ಅಧಿಕಾರಿಗಳು ಸುಮಾರು ರೂ 3,500 ಕೋಟಿ ಮೊತ್ತದ ಕಾಮ­ಗಾರಿ­ಗಳನ್ನು ಗುತ್ತಿಗೆಗೆ ನೀಡಿದರು. ಅದರಲ್ಲಿ ರೂ 1,539 ಕೋಟಿ ಮೊತ್ತದ ಕಾಮ­ಗಾರಿ­ಗಳು ಎಲ್ಲಿ ನಡೆದಿವೆ ಎನ್ನುವುದು ಹುಡು­ಕಿ­ದ­ರೂ ಪತ್ತೆ­ಯಾಗಲಿಲ್ಲ. ಈ ಹಗರಣದ ತನಿಖೆಗೆ ಬಿಎಂಟಿಎಫ್‌ ಮುಂದಾ­ಗುತ್ತಿ­ದ್ದಂತೆಯೇ ಅದರ ಕಚೇರಿಗೆ ಬೆಂಕಿ ಬಿದ್ದು, 153 ಕಡತಗಳೇ ನಾಪತ್ತೆಯಾದವು. ಆ ಅವ್ಯವಹಾರಗಳ ವಿಷಯವಾಗಿ ಸಿಐಡಿ ತನಿಖಾ ವರದಿ ಬರಬೇಕಿದೆ.ರಾಜರಾಜೇಶ್ವರಿನಗರ, ಮಲ್ಲೇಶ್ವರ ಮತ್ತು ಗಾಂಧಿನಗರ ಕ್ಷೇತ್ರಗಳ ಈ ಹಗ­ರಣ­ದಲ್ಲಿ ನೂರಾರು ಅಧಿಕಾರಿಗಳು ಭಾಗಿ­ಯಾದ ಶಂಕೆ ಇದೆ. ಬಿಬಿಎಂಪಿ ಸದಸ್ಯ ಎನ್‌.ಆರ್‌. ರಮೇಶ್‌ ಅವರು, ಹಿಂದಿದ್ದ ಒಬ್ಬ ಮುಖ್ಯ ಎಂಜಿನಿಯರ್‌ ಸೇರಿ­ದಂತೆ ಹಲವರ ವಿರುದ್ಧ ಲೋಕಾ­ಯುಕ್ತ ಮೆಟ್ಟಿಲೇರಲು ಸಿದ್ಧತೆ ನಡೆಸಿ­ದ್ದಾರೆ. ‘ಹಲವು ಕೋಟಿಗಳಿಗೆ ಬಾಳುವ 50ಕ್ಕೂ ಅಧಿಕ ಅಧಿಕಾರಿಗಳ ಪ್ರವರ ನನ್ನ ಬಳಿ ಇದೆ’ ಎಂದು ಅವರು ಹೇಳುತ್ತಾರೆ.ಬಿಬಿಎಂಪಿ ಅರ್ಥ ವ್ಯವಸ್ಥೆಯ ಹಡಗನ್ನು ಮುನ್ನಡೆಸುವ ‘ಸಾಧನ’ ಆಗ­ಬೇಕಿದ್ದ ಕಂದಾಯ ಇಲಾಖೆ, ಅದರ ಬದಲು ತೂತು ಕೊರೆಯುವ ಯಂತ್ರ­ವಾಗಿದೆ. ಕಂದಾಯ ವಸೂ­ಲಿ­­ಗಾ­ರರು, ಸಂಗ್ರಹವಾದ ತೆರಿಗೆ ಮೊತ್ತ­ವನ್ನು ಬಿಬಿಎಂಪಿ ಖಾತೆಗೆ ಜಮೆ ಮಾಡದೆ ವಂಚಿಸಿದ ಪ್ರಕರಣ ಹೇರೋ­ಹಳ್ಳಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅದೊಂದು ಉದಾಹರಣೆ ಮಾತ್ರ. ‘ಹೆಗ್ಗಣ’­ಗಳು ಪ್ರತಿ ವಾರ್ಡ್‌ ಕಚೇರಿ­ಯಲ್ಲೂ ಇವೆ. ಬಿಬಿಎಂಪಿ ಹೆಸರಿನಲ್ಲಿ 530 ಖಾತೆ­ಗಳಿದ್ದವು. ಎಲ್ಲಿ, ಏನು ವ್ಯವಹಾರ ನಡೆಯುತ್ತದೆ ಎನ್ನುವುದೇ ಗೊತ್ತಾ­ಗು­ವುದಿಲ್ಲ ಎನ್ನುವ ಆತಂಕ  ಎದು­­ರಾಗಿತ್ತು. ಅವುಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಬೇಕು ಎಂಬ ನಿರ್ದೇಶನವನ್ನು ರಾಜ್ಯ ಸರ್ಕಾರ ಈ ಹಿಂದೆಯೇ ನೀಡಿತ್ತು. ‘ಬಿಬಿಎಂಪಿ ಹೆಸರಿನಲ್ಲಿ ಈಗ ಎಷ್ಟು ಬ್ಯಾಂಕ್‌ ಖಾತೆಗಳಿವೆ’ ಎಂದು ಕೇಳಿದರೆ, ಮಾಹಿತಿ ನೀಡಲು ಹೆಚ್ಚುವರಿ ಆಯುಕ್ತ (ಸಂಪ­ನ್ಮೂಲ ಮತ್ತು ಹಣಕಾಸು) ಡಿ.ಕಿರಣ್‌ ನಿರಾಕರಿಸುತ್ತಾರೆ.ಕೋಟಿಗಟ್ಟಲೆ ತೆರಿಗೆ ತರುವ ಸಾವಿರಾರು ಕಟ್ಟಡಗಳು ನಗರದಲ್ಲಿ ಇದ್ದರೂ ಕಂದಾಯ ಇಲಾಖೆಗೆ ಅತ್ತ ನೋಡಲು ಪುರುಸೊತ್ತು ಇಲ್ಲ. ಜಯ­ನಗರದ ಶಾಪಿಂಗ್‌ ಸಂಕೀರ್ಣದ ಮಳಿಗೆ­ದಾರರೊಬ್ಬರು ರೂ 1.13 ಕೋಟಿ ಬಾಕಿ ಉಳಿಸಿಕೊಂಡು ಹತ್ತು ವರ್ಷಗಳೇ ಆಗಿವೆ. ಶಾಸಕ ಬಿ.ಎನ್‌. ವಿಜಯಕುಮಾರ್‌ ಹಲವು ವರ್ಷ­ಗಳಿಂದ ಬೆನ್ನುಬಿದ್ದಿದ್ದರೂ ಆ ಬಾಕಿ­ಯನ್ನು ವಸೂಲಿ ಮಾಡಿ­ಸುವಲ್ಲಿ ಇನ್ನೂ ಯಶಸ್ವಿ­ ಆಗಿಲ್ಲ. ಅಧಿಕಾರಿಗಳ ‘ಶಕ್ತಿ’ ಅಷ್ಟು ದೊಡ್ಡದಿದೆ.ಈ ಮಧ್ಯೆ ಬಿಬಿಎಂಪಿ ಮಾರುಕಟ್ಟೆಗಳ ಸಂಖ್ಯೆ 147ರಿಂದ 127ಕ್ಕೆ ಇಳಿದಿದೆ. ಪ್ರಮುಖ ತಾಣಗಳಲ್ಲಿ 6,132 ಮಳಿಗೆ­ಗಳನ್ನು ಹೊಂದಿದ್ದರೂ ರೂ 100, 200ರಂತೆ ಪುಡಿ­ಗಾಸಿಗೆ ಅವುಗಳನ್ನು ಲೀಸ್‌ಗೆ ನೀಡಲಾಗಿದೆ. ಲೀಸ್‌ ಪಡೆ­ದವರು ಮರು ಲೀಸ್‌ಗೆ ನೀಡಿ, ಬೆವರು ಸುರಿ­ಸದೆ ಪ್ರತಿ ತಿಂಗಳು ಲಕ್ಷಾಂತರ ದುಡ್ಡು ಎಣಿಸುತ್ತಿದ್ದಾರೆ. ಮಾರುಕಟ್ಟೆ–ಮಳಿಗೆಗಳ ನಿರ್ವಹಣೆಗೆ ಸಾಲದಷ್ಟೂ ಬಾಡಿಗೆ­ಯನ್ನು ಬಿಬಿಎಂಪಿ ಪಡೆ­ಯು­ತ್ತಿದೆ. ವೆಚ್ಚದ ಮೇಲೆ ವಿಪರೀತ ಆಸಕ್ತಿ, ವರಮಾನ ಗಳಿಕೆ ಕಡೆಗೆ ಕೆಟ್ಟ ನಿರಾಸಕ್ತಿ – ಇದು ಕಂದಾಯ ಇಲಾಖೆಯ ಧೋರಣೆ ಆಗಿಬಿಟ್ಟಿದೆ. ಬಿಬಿಎಂಪಿಗೆ ಸೇರಿದ್ದ ಸಾವಿರಾರು ಕೋಟಿ ಬೆಲೆಬಾಳುವ 394 ಆಸ್ತಿಗಳನ್ನು 99 ವರ್ಷ­ಗಳಷ್ಟು ಸುದೀರ್ಘ ಅವಧಿಗೆ ಗುತ್ತಿಗೆ ನೀಡಲಾಗಿದೆ. ಹಲವು ಆಸ್ತಿ­ಗ­ಳಿಂದ ಪ್ರತಿ ವರ್ಷ ಬರುತ್ತಿರುವ ಆದಾಯ ಎಷ್ಟು ಗೊತ್ತೆ? 50 ಪೈಸೆ, ರೂ 1, ರೂ 100! ಆ ಆಸ್ತಿಗಳನ್ನು ಗುತ್ತಿಗೆ ಪಡೆ­ದವರು ಕೋಟ್ಯಂತರ ಆದಾಯ ಬಾಚುತ್ತಿದ್ದಾರೆ.ಬಿಬಿಎಂಪಿಯಲ್ಲಿ ಮುಂದುವರಿದ ಕಾಮ­ಗಾರಿಗಳ ಸಂಖ್ಯೆಯೇ 13,­360­ರಷ್ಟಿದೆ. ಇದರಲ್ಲಿ ಬಹುತೇಕ ಕಾಮ­ಗಾರಿ­ಗಳು ಎಂದಿಗೂ ಮುಗಿಯುವುದಿಲ್ಲ. ಏಕೆಂದರೆ, ಭೌತಿಕವಾಗಿ ಅಂತಹ ಕೆಲಸ­ಗಳು ಅಸ್ತಿತ್ವದಲ್ಲೇ ಇರುವುದಿಲ್ಲ. ‘ಉಪಗ್ರಹದ ನೆರವಿನಿಂದ ಹುಡು­ಕಿಸಿ­ದರೂ ಈ ಕಾಮಗಾರಿಗಳು ಸಿಗುವುದು ಕಷ್ಟ’ ಎಂದು ಹಿಂದಿನ ಆಯುಕ್ತ ಸಿದ್ದಯ್ಯ ಕೌನ್ಸಿಲ್‌ ಸಭೆಯಲ್ಲೇ ಹೇಳಿದ್ದರು. ಬಜೆಟ್‌­ನಲ್ಲಿ ಮಾತ್ರ ಈ ಬಾಬ್ತಿಗೆ ಹಣ ವಿನಿ­ಯೋಗ ಆಗುತ್ತಲೇ ಇರುತ್ತದೆ. ಅಂತಹ ರೂ 522 ಕೋಟಿ ಮೊತ್ತದ ಅನ­ಗತ್ಯ ಕಾಮಗಾರಿಗಳಿಗೆ ಸಿದ್ದಯ್ಯ ತಡೆ ಒಡ್ಡಿ­ದ್ದರು. ಇತ್ತೀಚೆಗೆ ನಡೆದ ಕೌನ್ಸಿಲ್‌ ಸಭೆ­ಯಲ್ಲಿ ತಡೆಹಿಡಿದ ಕಾಮಗಾರಿ­ಗಳಿಗೆ ಮರು­ಚಾಲನೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.ಧನದಾಹಿಗಳ ನಾಲಿಗೆಗೆ ಕಸದ ರುಚಿಯೂ ಹಿತವಾಗಿದೆ. ನಗರದಲ್ಲಿ ನಿತ್ಯ ಉತ್ಪಾದನೆಯಾಗುವುದು ಸುಮಾರು 1,800 ಟನ್‌ ಕಸ ಮಾತ್ರ. ಆದರೆ, ಬಿಬಿಎಂಪಿ ಲೆಕ್ಕದಲ್ಲಿ ಅದರ ಭಾರ ದ್ವಿಗುಣವಾಗಿದೆ. ಹೊರ­ಹೋಗುವ ಕಸವನ್ನು ತೂಗುವಂತಹ ತೂಕದ ಸೇತುವೆಗಳನ್ನು ಹಾಕಲಾಗಿಲ್ಲ. ಕೊಟ್ಟಿದ್ದೇ ಲೆಕ್ಕ. ತ್ಯಾಜ್ಯ ನಿರ್ವಹಣೆಗಾಗಿ ದೆಹಲಿ ರೂ 137 ಕೋಟಿ, ಮುಂಬೈ ರೂ 191 ಕೋಟಿ, ಚೆನ್ನೈ ರೂ 119 ಕೋಟಿ ವಾರ್ಷಿ­ಕ­-­ವಾಗಿ ವೆಚ್ಚ ಮಾಡಿದರೆ, ನಮ್ಮ ಬೆಂಗ­ಳೂರಿಗೆ ರೂ 430 ಕೋಟಿ ಬೇಕು.ಅರಣ್ಯ ಇಲಾಖೆ ವಾರ್ಷಿಕ 50 ಲಕ್ಷ ಸಸಿಗಳನ್ನು ನೆಡುತ್ತಿದೆಯಂತೆ. ಋತು­ಮಾನಕ್ಕೆ ತಕ್ಕಂತೆ ನಡೆಯಬೇಕಾದ ಕಾಮ­ಗಾರಿ­ಗಳನ್ನು ಆ ಇಲಾಖೆ ವರ್ಷ­ದುದ್ದಕ್ಕೂ ನಡೆಸುತ್ತದೆ. ಪ್ರತಿ­ಯೊಂದು ವ್ಯವಹಾರದಲ್ಲೂ ಅಕ್ರಮದ ಗಬ್ಬು­ನಾತ ಹೊಡೆಯುತ್ತದೆ. ‘ಮೋಸ ಮಾಡಿ ಜಾಹೀರಾತು ಫಲಕಗಳನ್ನು ಹಾಕಿ­ದ್ದಾರೆ’ ಎಂದು ಆರೋಪಿಸಿ ವ್ಯಕ್ತಿ­ಯೊಬ್ಬರ ವಿರುದ್ಧ ಕ್ರಿಮಿನಲ್‌ ಮೊಕ­ದ್ದಮೆ ದಾಖಲಿಸುವ ಬಿಬಿಎಂಪಿಯೇ ಅದೇ ವ್ಯಕ್ತಿಗೆ ಹೊಸ ಜಾಹೀರಾತು ಫಲಕ­ಗಳನ್ನು ಹಾಕಲು ಗುತ್ತಿಗೆ ನೀಡುತ್ತದೆ.ಹಗರಣಗಳ ಎಲ್ಲ ನಡೆಗಳಲ್ಲಿ ಜನ­ಪ್ರತಿನಿಧಿಗಳ ಪಾತ್ರ ನೆರಳಿನಂತಿದೆ. ಕಡತ­ಗಳನ್ನು ಇಟ್ಟುಕೊಳ್ಳಲು ಯಾವುದೇ ಹಕ್ಕು ಇಲ್ಲದಿದ್ದರೂ ಹಲವು ಸದಸ್ಯರು ಅಕ್ರಮ­ವಾಗಿ ಬಿಬಿಎಂಪಿ ಕಡತಗಳನ್ನು ಮನೆ­ಯಲ್ಲಿ ಇಟ್ಟುಕೊಂಡಿದ್ದಾರೆ. ನೆಟ್ಟ­ಕಲ್ಲಪ್ಪ ವೃತ್ತದಲ್ಲಿ 1949ರಷ್ಟು ಹಿಂದೆಯೇ ನಿರ್ಮಿಸಲಾದ ಬಸ್‌ ತಂಗು­ದಾಣ ಇನ್ನೂ ಗಟ್ಟಿಮುಟ್ಟಾಗಿದೆ. ಅದರ ಅರ್ಧ­ದಷ್ಟೂ ವಯಸ್ಸಾಗಿರದ ಬಿಬಿಎಂಪಿ ಸಭಾಂ­ಗಣ ಕಟ್ಟಡ ಮಾತ್ರ ಮಳೆ­ಯಾದರೆ ಸಣ್ಣದಾಗಿ ಸೋರಲು ಆರಂಭಿ­ಸಿದೆ. ಆಗ ಡಿ.ವಿ. ಗುಂಡಪ್ಪ ಅವರಂತಹ ಮೇಧಾವಿ­­ಗಳು, ನಗರದ ಬಗ್ಗೆ ಅಪರಿ­ಮಿತ ಕಳಕಳಿ, ಪ್ರೀತಿ ಉಳ್ಳವರು ನಗರ­ಸಭೆ ಸದಸ್ಯರಾಗಿದ್ದರು. ಈಗ?ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry