ಹಗರಣ: ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ

7

ಹಗರಣ: ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ

Published:
Updated:

ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳ ಕಾಮಗಾರಿಗಳಲ್ಲಿನ ಹಗರಣ ಕುರಿತಂತೆ ಡಾಂಬರೀಕರಣ ಮಾತ್ರವಲ್ಲದೆ, ಎಲ್ಲ ಕಾಮಗಾರಿಗಳ ತನಿಖೆ ನಡೆಸುವಂತೆ ಸರ್ಕಾರ ಸಿಐಡಿಗೆ ಆದೇಶ ನೀಡಿದೆ.ಈ ಸಂಬಂಧ ರಾಜ್ಯ ಒಳಾಡಳಿತ ಇಲಾಖೆಯು ಫೆಬ್ರುವರಿ 1ರಂದು ಆದೇಶ ಹೊರಡಿಸಿದ್ದು, ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರ ಕಾರ್ಯಪಡೆಯು (ಬಿಎಂಟಿಎಫ್) ಈ ಹಿಂದೆ ದಾಖಲಿಸಿಕೊಂಡಿದ್ದ ಎಲ್ಲ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ.ಮೂರು ವಿಭಾಗಗಳಲ್ಲಿ ನಡೆದ ರೂ 1539 ಕೋಟಿ ಮೊತ್ತದ ಕಾಮಗಾರಿಗಳಲ್ಲಿನ ಅಕ್ರಮ ಕುರಿತು ಆಯುಕ್ತರ ತಾಂತ್ರಿಕ ಜಾಗೃತ ಕೋಶ (ಟಿವಿಸಿಸಿ) ನೀಡಿದ್ದ ಪ್ರಾಥಮಿಕ ತನಿಖೆ ಆಧರಿಸಿ ಬಿಎಂಟಿಎಫ್ ಪೊಲೀಸರು ನವೆಂಬರ್ 4ರಂದು ದೂರು ದಾಖಲಿಸಿಕೊಂಡಿದ್ದರು.ಆದರೆ, ಸರ್ಕಾರ ನ. 28ರಂದು ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿತ್ತು. ನಂತರ ಡಿಸೆಂಬರ್ 7ರಂದು ಪರಿಷ್ಕೃತ ಆದೇಶ ಹೊರಡಿಸಿದ ಸರ್ಕಾರ, ಹಗರಣಕ್ಕೆ ಸಂಬಂಧಪಟ್ಟಂತೆ ಡಾಂಬರೀಕರಣ ಕಾಮಗಾರಿಗಳನ್ನಷ್ಟೇ ತನಿಖೆ ನಡೆಸುವಂತೆ ಸೂಚನೆ ನೀಡಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.ಫೆ. 1ರಂದು ಮತ್ತೊಂದು ಆದೇಶ ಹೊರಡಿಸಿರುವ ಒಳಾಡಳಿತ ಇಲಾಖೆಯು ಡಾಂಬರೀಕರಣ ಮಾತ್ರವಲ್ಲದೆ, ಬಿಎಂಟಿಎಫ್ ಪೊಲೀಸರು ದಾಖಲಿಸಿಕೊಂಡ ಎಲ್ಲ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಇದರಿಂದ ಸಿಐಡಿ ತನಿಖೆ ಚುರುಕುಗೊಳ್ಳುವ ಲಕ್ಷಣ ಕಾಣುತ್ತಿದೆ.ಒಟ್ಟು 4710 ಕಡತಗಳು ಸಲ್ಲಿಕೆ:

ಬಿಬಿಎಂಪಿ ಬಹುಕೋಟಿ ಹಗರಣದ ತನಿಖೆ ಕೈಗೊಂಡಿರುವ ಸಿಐಡಿ ಪೊಲೀಸರಿಗೆ ಈವರೆಗೆ 4710 ಕಡತಗಳು ಮಾತ್ರ ಹಸ್ತಾಂತರವಾಗಿವೆ. ಆದರೆ ಇನ್ನುಳಿದ  ಕಡತಗಳು ಎಲ್ಲಿವೆ ಎಂಬುದು ನಿಗೂಢವಾಗಿಯೇ ಉಳಿದಿದೆ?

ಫೆ. 4ರಂದು ರಾತ್ರಿ ಸಿಐಡಿಗೆ ರವಾನಿಸಲಾದ ಕಡತಗಳಲ್ಲಿ ರಾಜರಾಜೇಶ್ವರಿನಗರ ವಿಭಾಗದ 818, ಮಲ್ಲೇಶ್ವರ ವಿಭಾಗದ 1271 ಕಡತಗಳು ಸೇರಿವೆ. 5ರಂದು ಗಾಂಧಿನಗರ ವಿಭಾಗದ 2142 ಕಡತಗಳನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಲಾಗಿದೆ.ಟಿವಿಸಿಸಿಯಿಂದ ಪಡೆದಿದ್ದ 153 ಕಡತಗಳನ್ನು ಬಿಎಂಟಿಎಫ್, ಈಗಾಗಲೇ ಸಿಐಡಿ ಪೊಲೀಸರಿಗೆ ನೀಡಿದೆ. ಪ್ರಕರಣದ ತನಿಖೆ ಕೈಗೊಂಡ ಸಿಐಡಿ ಪೊಲೀಸರು ಎಂಜಿನಿಯರ್ ವಿಭಾಗದಿಂದ 326 ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಮೂರು ವಿಭಾಗಗಳಲ್ಲಿ ನಡೆದ ರೂ 1,539 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಒಟ್ಟು 10,109 ರಸೀದಿ ಪುಸ್ತಕ (ಬಿ.ಆರ್) ದಾಖಲೆಗಳಿರಬೇಕು. ಈವರೆಗೆ ಸಿಐಡಿ ಪೊಲೀಸರಿಗೆ ಲಭ್ಯವಾಗಿರುವುದು 4710 ಕಡತಗಳು ಮಾತ್ರ. ಬಾಕಿ ಉಳಿದಿರುವ 5399 ಕಡತಗಳು ಎಲ್ಲಿವೆ ಎಂಬುದನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚಬೇಕಿದೆ.`ಪ್ರತಿಯೊಂದು ವಿಭಾಗದ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ದಾಖಲೆಗಳು ಆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಲೆಕ್ಕ ಅಧೀಕ್ಷಕರ ಬಳಿ ಇರುತ್ತದೆ. ಹಾಗಾಗಿ ಪ್ರಕರಣದ ಸಾಕ್ಷಿ ಎನಿಸಿರುವ ದಾಖಲೆಗಳ ಬಗ್ಗೆ ಮೂರು ವಿಭಾಗದ ಅಧಿಕಾರಿಗಳಿಂದಲೇ ಸಿಐಡಿ ಪೊಲೀಸರು ಮಾಹಿತಿ ಪಡೆಯಬೇಕು~ ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಕಾಮಗಾರಿಗೆ ಮುಂಗಡ ಹಣ ಬಿಡುಗಡೆ, ಕಂತುಗಳಲ್ಲಿ ಹಣ ಪಾವತಿಗೆ ಸಂಬಂಧಪಟ್ಟಂತೆ ಹಲವು ಬಿ.ಆರ್. ದಾಖಲೆಗಳಿರಬಹುದು. ಆದರೆ ಈ ಹಗರಣದಲ್ಲಿ ಅಂತಹ ಕಾಮಗಾರಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಕಡತಗಳ ಬಗ್ಗೆ ಅಧಿಕಾರಿಗಳಿಂದಲೇ ಸತ್ಯಾಂಶ ಬಹಿರಂಗವಾಗಬೇಕಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry