ಹಗರಣ ಮುಚ್ಚಿಹಾಕಲು ಸಂಚು: ಕೇಜ್ರಿವಾಲ್ ಆರೋಪ

7

ಹಗರಣ ಮುಚ್ಚಿಹಾಕಲು ಸಂಚು: ಕೇಜ್ರಿವಾಲ್ ಆರೋಪ

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಅವರ ಪತ್ನಿ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಹಗರಣದ ತನಿಖೆಗೆ ಆದೇಶಿಸಿರುವ ಉತ್ತರ ಪ್ರದೇಶದ ಸರ್ಕಾರದ ಕ್ರಮವನ್ನು ಟೀಕಿಸಿದ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್, `ಸಚಿವರು ಮತ್ತು ಅಖಿಲೇಶ್-ಮುಲಾಯಂ ಸಿಂಗ್ ಜೋಡಿ ಒಬ್ಬರನ್ನೊಬ್ಬರು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ~ ಎಂದು ಸೋಮವಾರ ಹೊಸ ಆರೋಪ ಮಾಡಿದರು.ಖುರ್ಷಿದ್ ದಂಪತಿಯ ಸ್ವಯಂ ಸೇವಾ ಸಂಸ್ಥೆಯ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಇಲ್ಲಿನ ಸಂಸತ್ ಭವನದ ರಸ್ತೆಯಲ್ಲಿ ಭ್ರಷ್ಟಾಚಾರ ವಿರೋಧಿ ಸಂಸ್ಥೆ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.`ಹಗರಣ ನಡೆದ ಬಗ್ಗೆ ಸಾಕಷ್ಟು ದಾಖಲೆಗಳಿದ್ದರೂ, ಅದನ್ನು ಮತ್ತೆ ತನಿಖೆ ಮಾಡುವ ಅಗತ್ಯವೇನಿತ್ತು? ಯಾರು ಈ ತನಿಖೆ ನಡೆಸುತ್ತಾರೆ? ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಡೆಸುತ್ತಾರೆಯೇ? ಹಾಗಾದರೆ ಅವರ ತಂದೆ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ವಿಚಾರಣೆ ನಡೆಸಲು ಸರ್ಕಾರಿ ವಕೀಲರನ್ನು ಯಾರು ನೇಮಿಸುತ್ತಾರೆ? ಕೇಂದ್ರ ಕಾನೂನು ಸಚಿವರು ನೇಮಿಸುತ್ತಾರೆಯೇ?~ ಎಂದು ಕೇಜ್ರಿವಾಲ್ ಕಟಕಿಯಾಡಿದರು.`ಈ ಪ್ರಕರಣದಲ್ಲಿ ಸಲ್ಮಾನ್ ಖುರ್ಷಿದ್ ಅವರು ಮುಲಾಯಂ ಸಿಂಗ್ ಅವರನ್ನು ರಕ್ಷಿಸಿದರೆ, ಪುತ್ರ ಅಖಿಲೇಶ್ ಯಾದವ್ ಅವರು ಖುರ್ಷಿದ್ ಅವರನ್ನು ರಕ್ಷಿಸುತ್ತಾರೆ~ ಎಂದು ವ್ಯಂಗ್ಯವಾಡಿದರು.ಸಾಕ್ಷ್ಯ ಪ್ರದರ್ಶನ: ಖುರ್ಷಿದ್ ದಂಪತಿಯ ಝಾಕೀರ್ ಹುಸೇನ್ ಸ್ವಯಂ ಸೇವಾ ಸಂಸ್ಥೆ, ಅಂಗವಿಕಲರಿಗೆ ಸಾಧನಗಳನ್ನು ವಿತರಿಸಿರುವ ಪಟ್ಟಿಯಲ್ಲಿ  ಮಣಿಪುರದ ಪಂಕಜ್ ಕುಮಾರ್ ಎಂಬುವವರ ಹೆಸರಿದೆ. ಸರ್ಕಾರಕ್ಕೆ ನೀಡಿರುವ ದಾಖಲೆಯಲ್ಲಿ ಪಂಕಜ್‌ಗೆ `ಶ್ರವಣ ಸಾಧನ~ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಅವರಿಗೆ ಯಾವುದೇ ಉಪಕರಣಗಳನ್ನು ನೀಡಿಲ್ಲ ಎಂದ ಕೇಜ್ರಿವಾಲ್, ಇದೇ ಸಂದರ್ಭದಲ್ಲಿ ಪಂಕಜ್ ಕುಮಾರ್ ಅವರನ್ನು ಪರಿಚಯಿಸಿದರು.ಕೇಜ್ರಿವಾಲ್ ಅವರ ಮಾತನ್ನು ದೃಢಪಡಿಸಿದ ಪಂಕಜ್ ಕುಮಾರ್, `ನನಗೆ ಅಂಥ ಯಾವುದೇ ಉಪಕರಣ ತಲುಪಿಲ್ಲ. ಇಷ್ಟಕ್ಕೂ ನನಗೆ ಸಮಸ್ಯೆ ಇರುವುದು ಕಾಲಿನಲ್ಲೇ ಹೊರತು ಕಿವಿಯಲ್ಲಲ್ಲ~ ಎಂದು ಸ್ಪಷ್ಟಪಡಿಸಿದರು.`ಇಂಥ ನೇರ ಸಾಕ್ಷಿಗಳಿದ್ದರೂ ಕಾಂಗ್ರೆಸ್ ಪಕ್ಷ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ಸಮರ್ಥಿಸುತ್ತಿರುವುದು ಏಕೆ? ಪಕ್ಷಕ್ಕೂ ಈ ಪ್ರಕರಣಕ್ಕೂ ಇರುವ ಸಂಬಂಧವೇನು? ಪಕ್ಷದ ಈ ವರ್ತನೆ ಗಮನಿಸಿದರೆ, ಎಲ್ಲೋ ಒಂದು ಕಡೆ ಕಾಂಗ್ರೆಸ್ ಕೂಡ ಪ್ರಕರಣದಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ~ ಎಂದು ಕೇಜ್ರಿವಾಲ್ ಶಂಕೆ ವ್ಯಕ್ತಪಡಿಸಿದರು.ನಕಲಿ ಹೆಸರು: ಖುರ್ಷಿದ್, ತಮ್ಮ ಸ್ವಯಂ ಸೇವಾ ಸಂಸ್ಥೆ ಮೂಲಕ ವಿತರಿಸಿರುವ ಸಾಧನಗಳ ಫಲಾನುಭವಿಗಳ ಹೆಸರು ಕೇವಲ ಕಾಲ್ಪನಿಕವಷ್ಟೇ ಎಂದು ದೂರಿದ ಅವರು, ಇದಕ್ಕೆ ಸಂಬಂಧಿಸಿದಂತೆ ಖುರ್ಷಿದ್ ವಿರುದ್ಧದ ಅನೇಕ ಸಾಕ್ಷ್ಯಗಳನ್ನು ಪ್ರದರ್ಶಿಸಿದರು.`ಗಾಲಿಕುರ್ಚಿ, ಶ್ರವಣ ಸಾಧನ, ತ್ರಿಚಕ್ರ ಸೈಕಲ್‌ಗಳನ್ನು ನೀಡಿದ್ದೇವೆಂದು ಸ್ವಯಂ ಸೇವಾ ಸಂಸ್ಥೆ ಕೊಟ್ಟ ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಪತ್ತೆ ಹಚ್ಚಲು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕಾರ್ಯಕರ್ತರು ಪ್ರಯತ್ನಿಸಿದರು. ಆದರೆ ಆ ಹೆಸರುಗಳೆಲ್ಲ ನಕಲಿ~ ಎಂದು ಆರೋಪಿಸಿದರು.

 
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry