ಸೋಮವಾರ, ಮಾರ್ಚ್ 8, 2021
22 °C

ಹಗಲೂ ಉರಿಯುವ ಬೀದಿದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗಲೂ ಉರಿಯುವ ಬೀದಿದೀಪ

ಗುಬ್ಬಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೀದಿದೀಪಗಳು ಹಗಲಿನಲ್ಲೂ ಉರಿಯುತ್ತಿವೆ. ಇದರಿಂದ ಗ್ರಾ.ಪಂ.ಗಳಿಗೆ ವಿದ್ಯುತ್‌ ಶುಲ್ಕದ ಹೊರೆ ಹೆಚ್ಚುತ್ತಿದೆ. ಬಲ್ಬ್‌ಗಳು ಶೀಘ್ರ ಹಾಳಾಗುತ್ತಿರುವುದರಿಂದ ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತಿದೆ.ತಾಲ್ಲೂಕಿನ ಕೆ.ಜಿ.ಟೆಂಪಲ್, ದೊಡ್ಡಕುನ್ನಾಲ, ಕೆ.ಅರಿವೇಸಂದ್ರ, ದೊಡ್ಡಗುಣಿ, ಮಾರಶೆಟ್ಟಿಹಳ್ಳಿ, ಜಿ.ಹೊಸಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಹಗಲು ಹೊತ್ತು ಬೀದಿ ದೀಪ ಉರಿಯುವುದು ಸಾಮಾನ್ಯ ಸಂಗತಿ ಎನಿಸಿದೆ.ಸಂಜೆ ಬೀದಿ ದೀಪದ ಸ್ವಿಚ್‌ ಆನ್ ಮಾಡಿ, ಮುಂಜಾನೆ ಆಫ್‌ ಮಾಡುವ ಪದ್ಧತಿಯನ್ನು ಗ್ರಾ.ಪಂ.ಗಳು ಅಳವಡಿಸಿಕೊಳ್ಳುತ್ತಿಲ್ಲ. ವಿದ್ಯುತ್ ಸಂಪರ್ಕ ಇದ್ದಾಗಲೆಲ್ಲಾ ದೀಪ ಉರಿಯುತ್ತಲೇ ಇರುತ್ತದೆ. ಇದೇ ಕಾರಣದಿಂದ ಕುನ್ನಾಲ ಗ್ರಾ.ಪಂ.ಗೆ ಪ್ರತಿ ತಿಂಗಳು ₹ 80 ಸಾವಿರ ವಿದ್ಯುತ್ ಶುಲ್ಕ ಬರುತ್ತಿದೆ. ₹ 3 ಲಕ್ಷ ವಿದ್ಯುತ್ ಬಿಲ್ ಬಾಕಿ ಇದೆ.‘ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 5 ವರ್ಷದಿಂದ ₹ 59 ಲಕ್ಷ ವಿದ್ಯುತ್ ಬಿಲ್ ಬಾಕಿ ಇದೆ. ಈ ಬಾರಿ ₹ 3 ಲಕ್ಷ ಪಾವತಿಸಿದ್ದೇವೆ. ಬೀದಿದೀಪಗಳು ಹಗಲು– ಇರುಳು ಬೆಳಗುವ ಕಾರಣ ಬಲ್ಬ್‌ಗಳೂ ಬಾಳಿಕೆ ಬರುತ್ತಿಲ್ಲ’ ಎಂದು ಸಮಸ್ಯೆ ಬಿಚ್ಚಿಡುತ್ತಾರೆ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾವೇದ್ ಪಾಷ.

ಬೀದಿದೀಪ ನಿರ್ವಹಣೆ, ವಿದ್ಯುತ್ ಬಿಲ್ ಪಾವತಿಗೆ ಪಂಚಾಯಿತಿಗಳು ಕಂದಾಯದ ಹಣ ಬಳಸಿಕೊಳ್ಳಬಹುದು. 13 ಅಥವಾ 14ನೇ ಹಣಕಾಸು ಯೋಜನೆಯ ಅನುದಾನದ ಹಣವನ್ನೂ ಬಳಸಲೂ ಅವಕಾಶ ಕೊಡಲಾಗಿದೆ. ಆದರೆ ವಿದ್ಯುತ್ ಉಳಿಸಲು ಅಧ್ಯಕ್ಷರು ಮತ್ತು ಸಿಬ್ಬಂದಿ ಗಮನ ಹರಿಸದ ಕಾರಣ ಬಾಕಿ ಪ್ರಮಾಣ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.ವಿದ್ಯುತ್ ಕಂಬದಲ್ಲಿ ಪ್ರತ್ಯೇಕ ತಂತಿ ಎಳೆದು ಒಂದೆಡೆ ಇರುವ ಸಾಲು ಬೀದಿ ದೀಪಗಳನ್ನು ನಂದಿಸುವ ವ್ಯವಸ್ಥೆ ತಕ್ಷಣ ಆಗಬೇಕು. ಹಗಲಿನಲ್ಲೂ ಬೀದಿದೀಪ ಬೆಳಗಿದರೆ ಸಂಬಂಧಿಸಿದ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸಿ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.‘ನಿತ್ಯ ಬೀದಿದೀಪ ಹಾಕೋದು– ಆರಿಸೋದು ಏಕೆ?’ ಎಂಬ ಸೋಮಾರಿತನದಿಂದ ಕೆಲವೆಡೆ ಥ್ರೂ ಕನೆಕ್ಷನ್ ಮಾಡಿದ್ದಾರೆ. ನಿರಂತರ ಜ್ಯೋತಿ ಯೋಜನೆ ಇರುವ ಸ್ಥಳಗಳಲ್ಲಿ ವಿದ್ಯುತ್ ತಂತಿಯಿಂದ ಲೈನ್ ಎಳೆದು ಬಲ್ಬ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಕಡಬ ಹೋಬಳಿ ವ್ಯಾಪ್ತಿಯ ಪಿಡಿಒ ಪ್ರತಿಕ್ರಿಯಿಸಿದರು.ಸಂಜೆ 7 ರಿಂದ ಬೆಳಿಗ್ಗೆ 5ರ ವರೆಗೆ ಮಾತ್ರ ವಿದ್ಯುತ್ ಬೀದಿದೀಪಗಳು ಬೆಳಗಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಬೀದಿ ದೀಪದ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾ.ಪಂ.ಗಳು ಹೊರಬೇಕು. ಬೆಸ್ಕಾಂ ಸಿಬ್ಬಂದಿ ಗ್ರಾ.ಪಂ. ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂಬ ಆಗ್ರಹ ಗ್ರಾಮೀಣ ಪ್ರದೇಶದಲ್ಲಿ ಕೇಳಿ ಬರುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.