ಹಗೆದಾಳ: ಚಿರತೆ ದಾಳಿ,3ಗಾಯ!

7

ಹಗೆದಾಳ: ಚಿರತೆ ದಾಳಿ,3ಗಾಯ!

Published:
Updated:

ಯಲಬುರ್ಗಾ: ತಾಲ್ಲೂಕಿನ ಹಗೆದಾಳ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದಾಳಿ ನಡೆಸಿ ಗಾಯಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಇದರಿಂದ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಕೂಡಾ ಈಗ ಭಯಭೀತರಾಗಿದ್ದಾರೆ.ಗ್ರಾಮದ ಮಂಜುನಾಥ ರಾಮಪ್ಪ ಮಡಿವಾಳರ, ಗಂಗಪ್ಪ ನೀಲಪ್ಪ ಮಡಿವಾಳರ ಹಾಗೂ ಯಮನೂರಪ್ಪ ಪುರ್ತಗೇರಿ ಇವರು ತಮ್ಮ ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಏಕಾಏಕೀ ಚಿರತೆ ದಾಳಿಯಲ್ಲಿ ಗಾಯಗೊಂಡಿದ್ದಾರೆ. ತಾಲ್ಲೂಕಿನ ಬಸಾಪೂರ ಗ್ರಾಮದ ಕಡೆಯಿಂದ ಬೆಳಿಗ್ಗೆ ಹಗೆದಾಳ ಕಡೆ ಬಂದಿದೆ ಎಂದು ಹೇಳಲಾಗುತ್ತಿರುವ ಈ ಚಿರತೆಯನ್ನು ಹಿಡಿಯಲು ಮಧ್ಯಾಹ್ನದಿಂದ ಗ್ರಾಮಸ್ಥರ ಹರಸಾಹಸಕ್ಕೆ ಕೊನೆಗೂ ಪ್ರಯೋಜನ ಸಿಗಲಿಲ್ಲ, ಕೆಕೇ, ಸಿಳ್ಳು ಹಾಕುತ್ತಿದ್ದಂತೆ ಹಳ್ಳದ ಸರುವಿನಗುಂಟಾ ಪರಾರಿಯಾಗಿದ್ದು ಕಂಡು ಬಂತು. ಮೊದಲಿಗೆ ಒಬ್ಬ ವ್ಯಕ್ತಿಯನ್ನು ಗಾಯಗೊಳಿಸಿದ್ದ ಚಿರತೆ ನಂತರ ಮತ್ತಿಬ್ಬರ ಮೇಲೆ ಎರಗಿ ಬೆನ್ನು ಹಾಗೂ ಸೊಂಟಕ್ಕೆ ಗಾಯಗೊಳಿಸಿದೆ.ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯಲಬುರ್ಗಾ ಠಾಣಾ ಅಧಿಕಾರಿಗಳು ಚಿರತೆ ಇರುವ ಕಡೆ ಹೋಗದಂತೆ ಜಾಗೃತಿವಹಿಸಿದ್ದರು. ನಂತರದಲ್ಲಿ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲಿಸಿ   ಬೋನ್ ಅಳವಡಿಸಿ ಚಿರತೆಯನ್ನು ಜೀವಂತ ಹಿಡಿಯುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ವಿವರಿಸುವಷ್ಟರಲ್ಲಿಯೇ ಮತ್ತೆ ಆ ಸ್ಥಳದಿಂದ ತುಮ್ಮರಗುದ್ದಿ, ಮಾರನಾಳ ಗ್ರಾಮದ ಕಡೆ ಓಡಿ ಹೋಗಿ ತಪ್ಪಿಸಿಕೊಂಡಿದ್ದು ಕಂಡು ಬಂತು.ಮಧ್ಯಾಹ್ನ12ಗಂಟೆ ಮುಂಚಿತವಾಗಿಯೇ ಗಾಯಗೊಳಿಸಿದ ಚಿರತೆಯ ಗ್ರಾಮದಲ್ಲಿ ಇರುವಿಕೆ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಅವರು ಸುಮಾರು 3ಗಂಟೆ ತಡವಾಗಿ ಆಗಮಿಸಿದ್ದಾರೆ. ಅಲ್ಲದೇ ಯಾವುದೇ ಸಾಮಗ್ರಿಗಳಿಲ್ಲದೇ ಹಾಜರಾಗಿದ್ದ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ನಿಮ್ಮನ್ನ ನೆಚ್ಚಿಕೊಂಡು ಕೂತ್ರೆ ದನಕರುಗಳ ಜೊತೆಗೆ ಮನುಷ್ಯರನ್ನು ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಕೈಯಲ್ಲಿ ಚಿರತೆ ಹಿಡಿಯಲು ಆಗದಿದ್ದರೆ ನಾವೇ ನೋಡ್ಕೋತ್ತೀವಿ, ಹಿಡಿಯದೇ ನಿರ್ಲಕ್ಷ್ಯತನ ಮಾಡಿದರೆ ಮತ್ತಷ್ಟು ಜೀವಹಾನಿ ಆಗುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಹೇಳಿದರು, ಭೇಟಿ: ಅರಣ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಾಗಿದ್ದರು. ತಹಸೀಲ್ದಾರ ಈ.ಡಿ. ಭೃಂಗಿ ಭೇಟಿ ನೀಡಿ ಚಿರತೆ ಸಿಗುವವರೆಗೂ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಒಬ್ಬಬ್ಬರಾಗಿ ತಿರುಗಾಡುವುದು ಮಾಡದೇ ಜಾಗೃತರಾಗಿ ಇರುವಂತೆ ಜನತೆಗೆ ಸಲಹೆ ನೀಡಿದರು.ಚಿಕಿತ್ಸೆ: ಚಿರತೆ ದಾಳಿಗೆ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಒಬ್ಬರಿಗೆ ಮಾತ್ರ ಹೆಚ್ಚಿನ ರೀತಿಯಲ್ಲಿ ಗಾಯವಾಗಿದ್ದರೆ, ಉಳಿದಂತೆ ಅಲ್ಪಸ್ವಲ್ಪ ಗಾಯವಾಗಿದ್ದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry