ಹಗೆದಾಳ: ಚಿರತೆ-ಭಯದ ನೆರಳಲ್ಲಿ ಜನತೆ

7

ಹಗೆದಾಳ: ಚಿರತೆ-ಭಯದ ನೆರಳಲ್ಲಿ ಜನತೆ

Published:
Updated:
ಹಗೆದಾಳ: ಚಿರತೆ-ಭಯದ ನೆರಳಲ್ಲಿ ಜನತೆ

ಯಲಬುರ್ಗಾ: ತಾಲ್ಲೂಕಿನ ಹಗೆದಾಳ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ನಡೆಸಿದ ಪ್ರಯತ್ನಕ್ಕೆ ಶನಿವಾರವೂ ಕೈಗೂಡಲಿಲ್ಲ, ಶುಕ್ರವಾರ ಸಂಜೆ ಹೊತ್ತಿನಲ್ಲಿ ಹಗೆದಾಳದಿಂದ ಪರಾರಿಯಾಗಿದ್ದ ಚಿರತೆ ಎಲ್ಲಿಯೂ ಲಭ್ಯವಾಗದೇ ಇರುವ ಕಾರಣ ವಿವಿಧ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿ ಅವರನ್ನು ನಿದ್ದೆಗೆಡುವಂತೆ ಮಾಡಿದೆ.ಅರಣ್ಯ ಇಲಾಖೆಯವರು ಶುಕ್ರವಾರ ಲಭ್ಯವಿದ್ದ ಸ್ಥಳದಲ್ಲಿ ಒಂದು ಬೋನ್ ಇಟ್ಟು ಅದನ್ನು ಜೀವಂತ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಆದರೆ ಅಲ್ಲಿಯ ಗ್ರಾಮಸ್ಥರಿಗೆ ಮಾತ್ರ ಅದರ ಭೀತಿ ಮಾತ್ರ ಹೋಗುತ್ತಿಲ್ಲ, ಶುಕ್ರವಾರ ಮಧ್ಯಾಹ್ನ ಪೊದೆಯಲ್ಲಿ ಅವಿತು ಕುಳಿತಿದ್ದ ಚಿರತೆ ಒಮ್ಮಿಂದೊಮ್ಮಲೆ ಜಿಗಿದು ಗಾಯಗೊಳಿಸಿದಾಗಿನಿಂದ ಆ ಭಾಗದ ರೈತರು ತಮ್ಮ ತಮ್ಮ ಹೊಲ ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ರೈತರು ಹೊಲದಲ್ಲಿದ್ದ ತಮ್ಮ ಜಾನುವಾರುಗಳನ್ನು ಮನೆಗೆ ತಂದು ಕಟ್ಟಿಕೊಂಡಿದ್ದಾರೆ. ಹೀಗೆ ಅಲ್ಲಿಂದ ಹೋಗಿ ರಾತ್ರಿ ಮತ್ತೆ ಇದೇ ಪ್ರದೇಶಕ್ಕೆ ತಿರುಗಿ ಬಂದಿದೆ ಎಂಬ ಗಾಳಿ ಮಾತು ಹರಡಿದ್ದರ ಹಿನ್ನೆಲೆಯಲ್ಲಿ ಮತ್ತೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಅದೇ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು ಕಂಡು ಬಂತು.ಮಧ್ಯಾಹ್ನದ ಹೊತ್ತಿನವರೆಗೂ ಚಿರತೆಯ ಸುಳಿವು ಸಿಗದಿರುವ ಕಾರಣ ಹಳ್ಳದ ಸರುವಿನಲ್ಲಿ ಬೆಳೆದಿದ್ದ ಮುಳ್ಳಿನ ಕಂಟಿ ಹಾಗೂ ಪೊದೆಗಳಿಗೆ ಅಲ್ಲಿ ಸೇರಿದ್ದ ರೈತರು ಬೆಂಕಿ ಹಚ್ಚಿ ಅದನ್ನು ಓಡಿಸಲು ಮುಂದಾದರು. ಬೆಂಕಿಯಿಂದ ಸುಟ್ಟು ಹಳ್ಳವನ್ನೆಲ್ಲಾ ಜಾಲಾಡಿದರೂ ಚಿರತೆಯ ಸುಳಿವು ಸಿಗಲಿಲ್ಲ, ಹಾಗೆಯೇ ಪಕ್ಕದ ಮತ್ತೊಂದು ಹಳ್ಳದ ಸರುವಿನಲ್ಲಿ ರೈತರು ಚಿರತೆಯ ಶೋಧ ಕಾರ್ಯಕ್ಕೆ ಅಣಿಯಾದರು. ಅಲ್ಲಿಯೂ ಪೊದೆಗೆ ಬೆಂಕಿ ಹಚ್ಚಿ ಸ್ವಚ್ಚಗೊಳಿಸಲು ಕಾರ್ಯಪ್ರವೃತ್ತರಾದರು.ಅಂತೆ ಕಂತೆ: ಬೆಳಗಾಗುವಷ್ಟರಲ್ಲಿಯೇ ಮತ್ತೆ ಹಗೆದಾಳದಿಂದ ಬೇರೆ ಕಡೆ ಜಿಗಿದಿರುವ ಚಿರತೆ ಪಕ್ಕದ ಗ್ರಾಮ ಭೂನಕೊಪ್ಪ, ಮಾರನಾಳ ಕಡೆ ಹೋಗಿದೆ. ಅಲ್ಲಿ ಅವರ ತೋಟದ ಬಳಿ ಹಾದು ಹೋಗಿದೆ. ಇವರ ಹೊಲದಲ್ಲಿ ಹಾದು ಹೋಗಿದೆ, ಹಳ್ಳದಲ್ಲಿ ಮಲಗಿದೆ ಹೀಗೆ ಅಂತೆ ಕಂತೆಗಳ ಮಾತುಗಳೇ ಕೇಳಿಬರುತ್ತಿವೆ ಹೊರೆತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಆದರೆ ಅರಣ್ಯ ಇಲಾಖೆಯವರು ಮಾತ್ರ ಹಗೆದಾಳ ಗ್ರಾಮದಲ್ಲಿ ಗಾಯಗೊಳಿಸಿದ ಸ್ಥಳದಲ್ಲಿ ಚಿರತೆ ಹಿಡಿಯುವುದಕ್ಕಾಗಿ ಬೋನ್ ಇಟ್ಟಿದ್ದನ್ನು ಬಿಟ್ಟರೆ, ಚಿರತೆ ಹಿಡಿಯುವುದಕ್ಕಾಗಿ ಬೇರೆ ಯಾವುದೇ ವ್ಯವಸ್ಥೆಯಾಗಲಿ, ಅದರ ಇರುವಿಕೆಯ ಪತ್ತೆಗಾಗಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಕಂಡು ಬಂದಿಲ್ಲ,ಶುಕ್ರವಾರ ಮಧ್ಯಾಹ್ನಕ್ಕು ಮುನ್ನ ಅರಣ್ಯ ಇಲಾಖೆಯವರಿಗೆ ಚಿರತೆ ಪ್ರತ್ಯಕ್ಷವಾಗಿದ್ದರ ಸುದ್ದಿ ಮುಟ್ಟಿಸಿದ್ದರೂ ಸಕಾಲಕ್ಕೆ ಬರದೆ ಅದು ತಪ್ಪಿಸಿಕೊಂಡ ಮೇಲೆ ಸ್ಥಳಕ್ಕೆ ಹಾಜರಾಗಿದ್ದಾರೆ. ಅಲ್ಲದೇ ಅವಿತು ಕುಳಿತಾಗಲೂ ಕೂಡಾ ಅದನ್ನು ಹಿಡಿಯುವ ಪ್ರಯತ್ನ ಮಾಡದೇ ಜನರನ್ನು ಮನೆಗೆ ಕಳಿಸುವ ಕೆಲಸ ಮಾಡಿದರು. ಹೀಗೆ ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದಲೇ ಚಿರತೆ ತಪ್ಪಿಸಿಕೊಂಡಿದೆ. ಹೀಗೆ ತಪ್ಪಿಸಿಕೊಂಡ ಚಿರತೆ ಓಡಾಟದಿಂದ ಜನರಲ್ಲಿ ಭಯ ಹುಟ್ಟುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry