ಹಚ್ಚೆ ಅಳಿಸುವ ಬಗೆ

7

ಹಚ್ಚೆ ಅಳಿಸುವ ಬಗೆ

Published:
Updated:

ಹಚ್ಚೆ... ಹುಚ್ಚುಖೋಡಿ ಮನಸ್ಸುಗಳನ್ನು ಫ್ಯಾಷನ್ ಆವರಿಸಿಕೊಂಡಾಗ ತಮ್ಮನ್ನು ತಾವು ಹೊಸದಾಗಿ ನಿರೂಪಿಸಿಕೊಳ್ಳುವ ಹಪಹಪಿ ಕಾಡುತ್ತದೆ. ವಾರಾಂತ್ಯ ವಿಹಾರದ ವೇಳೆ ಕಣ್ಣಿಗೆ ಬಿದ್ದ ವಿದೇಶಿ ಯುವಕ- ದೇಸಿ ಯುವತಿಯ ಜೋಡಿ ಗಮನ ಸೆಳೆದದ್ದು ಅವನ ತೋಳು ಮತ್ತು ಇವಳ ಕಟಿಯಲ್ಲಿನ ಅಷ್ಟಗಲದ ಹಚ್ಚೆಯಿಂದ! `ನನಗೂ ಬೇಕು~ ಎಂದು ಹಚ್ಚೆ ಪರಿಣತನಿಗೆ ಬೆನ್ನೊಡ್ಡಿ ಕುಳಿತೇ ಬಿಟ್ಟಳು ಇವಳು!

*

`ನನ್ನೆದೆಯ ಲಬ್‌ಡಬ್‌ನಲ್ಲೂ ನಿನ್ನ ಹೆಸರಿನದೇ ಪ್ರತಿಧ್ವನಿಯಿರಬೇಕು~ ಎಂದ ಆ ಪ್ರೇಮಿ ತನ್ನ ಬಲಗೈನಲ್ಲೇ ನಲ್ಲನ ಹೆಸರು ಕೊರೆಯಿಸಿಕೊಂಡಳು...

*

ಕೆಲ ತಿಂಗಳ ಹಿಂದೆ ವಾಹಿನಿಯೊಂದರಲ್ಲಿ ಪ್ರಸಾರವಾದ ಧಾರಾವಾಹಿ `ಮೂಕಾಂಬಿಕಾ~ದಲ್ಲಿ  ತನ್ನ ಪ್ರಿಯಕರನ ಹೆಸರನ್ನು ಭುಜದ ಮೇಲೆ ಬರೆಯಿಸಿಕೊಂಡ ರಾಜಕುಮಾರಿ ನೆರೆಯ ರಾಜನೊಂದಿಗೆ ತನ್ನ ಮದುವೆ ನಿಕ್ಕಿಯಾಗುತ್ತಲೇ ಧೂಪದ ತಟ್ಟೆಯಿಂದ ಆ ಭಾಗವನ್ನು ಸುಟ್ಟುಕೊಂಡು ಹಚ್ಚೆ ನೀಗಿಸಿಕೊಳ್ಳುತ್ತಾಳೆ!

*

ಬೇಕು ಅಂದಾಗ ಚುಚ್ಚಿಕೊಂಡು ಬೇಡವೆಂದಾಗ ಅಳಿಸಿಹಾಕುವಂತಹುದಲ್ಲ ಈ ಹಚ್ಚೆ. ಅಂದು ಅವಡುಗಚ್ಚಿ ಪ್ರಿಯಕರನ ಹೆಸರು ಕೊರೆಯಿಸಿಕೊಂಡವಳು ಬೇರೊಬ್ಬನೊಂದಿಗೆ ಅದೇ ಬಲಗೈಯೊಡ್ಡಿ ಸಪ್ತಪದಿ ತುಳಿಯುವುದಕ್ಕೂ ಮುನ್ನ ಹಳೆಯ ನೆನಪಿನೊಂದಿಗೆ ಆ ಹೆಸರನ್ನೂ ಒರೆಸಿಬಿಡಬೇಕಲ್ಲ? ಹೇಗೆ?

ಹೀಗೆ, ಹೇಗೆ ಹೇಗೆ ಎಂದು ಹಪಹಪಿಸುತ್ತಿರುವ ಹಚ್ಚೆ `ಹುಚ್ಚ~ರಿಗೆ ವರದಾನ `ಕ್ಯೂ ಲೇಸರ್ ಚಿಕಿತ್ಸೆ~.

ವಿದೇಶಗಳಲ್ಲಿ ಜನಪ್ರಿಯವಾಗಿರುವ ಕ್ಯೂ ಲೇಸರ್ ಚಿಕಿತ್ಸೆ ಬೆಂಗಳೂರಿನಲ್ಲಿಯೂ ಈಗ ಲಭ್ಯ. ಆದರೆ ಹೇಳಿಕೇಳಿ ಲೇಸರ್ ಚಿಕಿತ್ಸೆಯಿದು. ಹಾಗಾಗಿ ಅತ್ಯಂತ ಪರಿಣತಿಯಿರುವ ಚರ್ಮರೋಗ ತಜ್ಞರಲ್ಲೇ `ಕ್ಯೂ ಲೇಸರ್~ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಬಳಸುವ ಲೇಸರ್ ಯಂತ್ರೋಪಕರಣ ಬಹಳ ದುಬಾರಿಯೂ ಆಗಿರುವ ಕಾರಣ ನಗರದಲ್ಲಿ ಬೆರಳೆಣಿಕೆಯ ಚರ್ಮರೋಗ ತಜ್ಞರ ಬಳಿ ಈ ಚಿಕಿತ್ಸೆ ಲಭ್ಯ. ವಿಜಯನಗರದ ವೆಂಕಟ್ ಚರ್ಮಾಲಯದ ಡಾ.ವೆಂಕಟ್ರಾಮ್ ಮೈಸೂರು, ಕ್ಯೂ ಲೇಸರ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಏನಿದು ಕ್ಯೂ ಲೇಸರ್?

ಕ್ಯೂ ಸ್ವಿಚ್ಡ್ ಲೇಸರ್ ಟ್ರೀಟ್‌ಮೆಂಟ್ ಎಂಬುದು ಹಚ್ಚೆಯ ಕಲೆಯನ್ನು ಪೂರ್ಣಪ್ರಮಾಣದಲ್ಲಿ ಅಳಿಸಿಹಾಕುವ ಅತ್ಯಾಧುನಿಕ, ಲೇಸರ್ ಚಿಕಿತ್ಸೆ.

ಹಚ್ಚೆ ಹಾಕಿಸಿಕೊಳ್ಳುವಾಗ ಆದಂತೆ ಅದನ್ನು ಅಳಿಸುವಾಗಲೂ ನೋವು ಆಗುತ್ತದೆಯೇ?

ಈ ಹಿಂದೆ ಹಚ್ಚೆಯ ಕಲೆಯನ್ನು ಅಳಿಸಲು ಅನೇಕ ವಿಧಾನಗಳು ಚಾಲ್ತಿಯಲ್ಲಿದ್ದವು. ಶಸ್ತ್ರಚಿಕಿತ್ಸೆ ಮಾಡಿ ತೆಗೆದುಹಾಕುವುದು, ಡರ್ಮಬ್ರೇಷನ್, ರೇಡಿಯೊ ಫ್ರೀಕ್ವೆನ್ಸಿ ಮುಂತಾದವು ಹೆಚ್ಚು ಪ್ರಚಲಿತದಲ್ಲಿರುವ ವಿಧಾನಗಳು. ಆದರೆ `ಕ್ಯೂ ಲೇಸರ್~ ಸರಳ ಚಿಕಿತ್ಸೆ. ನೋವೂ ಇರುವುದಿಲ್ಲ.

ಲೇಸರ್ ಚಿಕಿತ್ಸೆಯ ಪ್ರಕ್ರಿಯೆ ಹೇಗಿರುತ್ತದೆ? ಹಚ್ಚೆಯ ಪ್ರಮಾಣದ ಮೇಲೆ ಅದು ಅವಲಂಬಿಸಿದೆಯೇ?

ಹಳೆಯ ವಿಧಾನಗಳಿಗೆ ತಿಂಗಳುಗಟ್ಟಲೆ ವೈದ್ಯರನ್ನು ಭೇಟಿಯಾಗುವ ಅನಿವಾರ್ಯತೆಯಿತ್ತು. ಆದರೆ ಕ್ಯೂ ಲೇಸರ್ ಒಂದೇ ದಿನದಲ್ಲಿ ಕೈಗೊಳ್ಳಬಹುದು. ಹಚ್ಚೆ ಎಷ್ಟು ದೊಡ್ಡದು ಎಂಬುದರ ಆಧಾರದಲ್ಲಿ ಚಿಕಿತ್ಸೆಯ ಅವಧಿ ನಿರ್ಣಯವಾಗುತ್ತದೆ.

ಕೆಲವರು ಹಣೆಯಲ್ಲಿ ಪ್ರತಿದಿನ ತಿಲಕವಿಟ್ಟುಕೊಳ್ಳುವ ಬದಲು ಶಾಶ್ವತವಾದ ಹಚ್ಚೆಯೇ ಇರಲಿ ಎಂದು ಕಪ್ಪು, ನೀಲಿ, ಹಸಿರು ಅಥವಾ ಕೆಂಪು ಬಣ್ಣದ ಹಚ್ಚೆ ಹಾಕಿಸಿಕೊಳ್ಳುವುದುಂಟು. ಇಷ್ಟು ಸಣ್ಣ ಹಚ್ಚೆ ಅಳಿಸಲು ಒಂದೇ ಸಿಟ್ಟಿಂಗ್ ಸಾಕಾಗುತ್ತದೆ.

ಇಡೀ ತೋಳು ಇಲ್ಲವೇ ಪೂರ್ತಿ ಬೆನ್ನನ್ನು ಹಚ್ಚೆಯಿಂದ ಅಲಂಕರಿಸಿಕೊಳ್ಳುವ ಹುಮ್ಮಸ್ಸು ಕೆಲವರದು. ಅದನ್ನು ಅಳಿಸುವುದು ಸ್ವಲ್ಪ ದೀರ್ಘಕಾಲದ ಪ್ರಕ್ರಿಯೆ. ಒಂದು ವಾರವಾದರೂ ಆದೀತು.ಆದರೆ ಕ್ಯೂ ಲೇಸರ್ ತುಂಬಾ ಸರಳ ಚಿಕಿತ್ಸೆ. ಒಂದೇ ದಿನದಲ್ಲಿ ನಾಲ್ಕಾರು ಸೆಷನ್ ತೆಗೆದುಕೊಳ್ಳುತ್ತೇವೆ. ಪ್ರತಿ ಸೆಷನ್‌ಗೂ ನಡುವೆ ತಲಾ 20 ನಿಮಿಷಗಳ ವಿರಾಮವಿರುತ್ತದೆ.

ಚಿಕಿತ್ಸೆಗೆ ಮಾನದಂಡಗಳೇನು?

ಸಾಮಾನ್ಯವಾಗಿ ಹಚ್ಚೆಗಳು ಹಸಿರು, ನೀಲಿ, ಕಪ್ಪು ಹಾಗೂ ಕೆಂಪು ಬಣ್ಣದಲ್ಲಿರುತ್ತವೆ. ಬಳಸುವ ಶಾಯಿಯ ಬಣ್ಣವೇ ಹಚ್ಚೆಯ ಬಣ್ಣ. ಇದರಲ್ಲಿ ಕಾರ್ಬನ್,  ಕ್ರೋಮಿಯಂ, ಕಬ್ಬಿಣದಂತಹ ಲೋಹಗಳನ್ನು ಬಳಸಲಾಗಿರುತ್ತದೆ. ಈ ಲೋಹಗಳ ಪ್ರಮಾಣ ಶಾಯಿಯ ಬಣ್ಣಕ್ಕೆ ಕಾರಣ.

ಹಸಿರು ಬಣ್ಣದ ಹಚ್ಚೆ ಅಳಿಸುವುದು ತುಂಬಾ ಸುಲಭ. ಕಪ್ಪು ಮತ್ತು ನೀಲಿ ಬಣ್ಣದವುಗಳನ್ನು ಅಳಿಸಲು ಹೆಚ್ಚು ಸೆಷನ್‌ಗಳು ಬೇಕಾಗುತ್ತದೆ. ಆದರೆ ಕೆಂಪು ಬಣ್ಣದವು ಚರ್ಮಕ್ಕೂ ಅಷ್ಟು ಸೂಕ್ತವಲ್ಲ. ತೆಗೆಯುವುದೂ ಕಷ್ಟ.

ಲೇಸರ್ ಯಂತ್ರ ದುಬಾರಿ ಎಂದಿರಿ. ಹಾಗಾಗಿ ಚಿಕಿತ್ಸೆಯೂ ದುಬಾರಿಯೇ?

ಹೌದು, ವಿದೇಶದಲ್ಲಷ್ಟೇ ಲಭ್ಯವಿದ್ದ ಈ ಚಿಕಿತ್ಸೆ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸಿಗುತ್ತಿದೆ. ಯಂತ್ರೋಪಕರಣ ಬಹಳ ದುಬಾರಿ. ಬಿಂದಿಯಷ್ಟು ಸಣ್ಣ ಹಚ್ಚೆ ತೆಗೆಯಲು ನಮ್ಮ ಚರ್ಮಾಲಯದಲ್ಲಿ 1,000 ರೂಪಾಯಿ ಶುಲ್ಕ ವಿಧಿಸುತ್ತೇವೆ. ಬೆನ್ನು ಪೂರ್ತಿಯಿರುವ ಹಚ್ಚೆ ತೆಗೆಯಲು ಶುಲ್ಕ 25 ಸಾವಿರಕ್ಕೂ ಹೆಚ್ಚಾಗುತ್ತದೆ. 

ಕ್ಯೂ ಲೇಸರ್ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ನಾವು ಆಗಾಗ ಉಚಿತ ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಲೇಸರ್ ಚಿಕಿತ್ಸೆಯನ್ನು ಅನನುಭವಿಗಳ ಕೈಯಲ್ಲಿ ಮಾಡಿಸಿಕೊಳ್ಳುವುದು ಅಪಾಯಕಾರಿ.

ಹಚ್ಚೆಯಿಂದ ಚರ್ಮಕ್ಕೆ ಯಾವ ಅಪಾಯವಿದೆ?

ಹಚ್ಚೆಯಿಂದ ಚರ್ಮದ ಕ್ಯಾನ್ಸರ್ ಬರುತ್ತದೆ ಎಂಬುದು ತಪ್ಪು ಅಭಿಪ್ರಾಯ. ಆದರೆ ಹಚ್ಚೆ ಶಾಯಿಯಲ್ಲಿ ಬಳಸುವ ರಾಸಾಯನಿಕ, ಲೋಹಗಳು ಕೆಲವರ ಚರ್ಮಕ್ಕೆ ಒಗ್ಗದೆ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry