ಹಜಾರೆ ಹೋರಾಟ ಕಾರ್ಪೊರೇಟ್ ಕಪಿಮುಷ್ಠಿಯಲ್ಲಿ

7

ಹಜಾರೆ ಹೋರಾಟ ಕಾರ್ಪೊರೇಟ್ ಕಪಿಮುಷ್ಠಿಯಲ್ಲಿ

Published:
Updated:
ಹಜಾರೆ ಹೋರಾಟ ಕಾರ್ಪೊರೇಟ್ ಕಪಿಮುಷ್ಠಿಯಲ್ಲಿ

ಬೆಂಗಳೂರು: `ಅಣ್ಣಾ ಹಜಾರೆ ನಿಲುವುಗಳು ಸಾತ್ವಿಕವಾಗಿದ್ದರೂ ಅವರ ಹೋರಾಟ ಕಾರ್ಪೊರೇಟ್ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿದೆ~ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.ಸಂಕ್ರಮಣ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಜೂನ್ 75 ಮಾರ್ಚ್ 77~ ಹಾಗೂ `26 ದಿನ 25 ರಾತ್ರಿ~ ತುರ್ತು ಪರಿಸ್ಥಿತಿಯ ದಿನಗಳನ್ನು ಮೆಲುಕು ಹಾಕುವ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟ ಅನೇಕ ಕಾರಣಗಳಿಂದ ಪ್ರಮುಖವಾದುದು. ಆದರೆ ಕಾರ್ಪೊರೇಟ್ ಹಿತಾಸಕ್ತಿಗಳು ಹೋರಾಟಕ್ಕೆ ಧನ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪ್ರಶ್ನೆಗಳು ಹುಟ್ಟುತ್ತವೆ~ ಎಂದರು.`ಪ್ರಧಾನ ಮಂತ್ರಿ, ನ್ಯಾಯಾಧೀಶರು ಸೇರಿದಂತೆ ಅನೇಕರನ್ನು ಲೋಕಪಾಲ್ ಮಸೂದೆ ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವನೆ ಇದೆ. ಆದರೆ ಇದರಿಂದ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಣೆ ಸಾಧ್ಯವಾಗುವುದಿಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮೂಲೆಗುಂಪಾಗುವ ಸಾಧ್ಯತೆ ಇದೆ~ ಎಂದು ಹೇಳಿದರು.ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಮಾತನಾಡುತ್ತಾ, `ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಜಯಪ್ರಕಾಶ್ ನಾರಾಯಣ ಅವರು ಇನ್ನೂ ಒಂದು ದಶಕ ಬದುಕಬೇಕಿತ್ತು. ಆಗ ದೇಶದ ಚಿತ್ರಣವೇ ಬದಲಾಗುತ್ತಿತ್ತು. ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಪರಿಹಾರ ದೊರೆತು ಯುವಕರಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತಿತ್ತು~ ಎಂದು ಹೇಳಿದರು.`ತುರ್ತು ಪರಿಸ್ಥಿತಿಯ ದಿನಗಳು ಕರಾಳವಾಗಿದ್ದವು. ಆದರೆ ಅದನ್ನು ನಾನು ಖುಷಿಯಿಂದಲೇ ಅನುಭವಿಸಿದೆ. ನಾಡಿನ ಅನೇಕ ಮುಖಂಡರು ಅಪಾಯದ ಸನ್ನಿವೇಶಗಳನ್ನು ಎದುರಿಸಿದರು. ಅದೆಲ್ಲವನ್ನೂ ನನ್ನ ಆತ್ಮಕಥೆಯಲ್ಲಿ ದಾಖಲಿಸುವೆ~ ಎಂದರು.`ತುರ್ತು ಪರಿಸ್ಥಿತಿ ನಂತರ ಇಂದಿರಾ ಗಾಂಧಿ ಅವರು ಚುನಾವಣೆಯನ್ನು ಘೋಷಿಸಿದರು. ವಿರೋಧದ ಅಲೆ ಇದ್ದರೂ ಅವರು ಚುನಾವಣೆ ಘೋಷಿಸಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತದೆ. ಕೊನೆಗೆ ಚುನಾವಣೆಯಲ್ಲಿ ಅವರು ಸೋಲನುಭವಿಸಬೇಕಾಯಿತು~ ಎಂದು ಮೆಲುಕು ಹಾಕಿದರು.ಕಾರ್ಯಕ್ರಮಕ್ಕೆ ಮುನ್ನ ಇತ್ತೀಚಿಗೆ ನಿಧನ ಹೊಂದಿದ ಸಮಾಜವಾದಿ ಚಿಂತಕ ನೀಲಗಂಗಯ್ಯ ಪೂಜಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರೊ.ಚಂದ್ರಶೇಖರ ಪಾಟೀಲ, ಶೂದ್ರ ಶ್ರೀನಿವಾಸ್, ಮಹಾಬಲೇಶ್ವರ ಕಾಟಹಳ್ಳಿ, ಎಸ್.ಶಿವಾನಂದ, ಬಿ.ರಾಜಣ್ಣ ತುರ್ತು ಪರಿಸ್ಥಿತಿಯ ಪ್ರಾತಿನಿಧಿಕ ಕವನಗಳನ್ನು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry