ಹಜ್ ಆಯ್ಕೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಚಾಲನೆ

7

ಹಜ್ ಆಯ್ಕೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಚಾಲನೆ

Published:
Updated:
ಹಜ್ ಆಯ್ಕೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಚಾಲನೆ

ಬೆಂಗಳೂರು: ಹಜ್‌ಗೆ ತೆರಳಲು ಸಹಾಯಧನ ಕೋರಿ ಈ ಬಾರಿ ರಾಜ್ಯದ 15,476 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 7,515 ಮಂದಿ ಮಹಿಳೆಯರು ಹಾಗೂ 7,961 ಮಂದಿ ಪುರುಷರು. 16 ಮಂದಿ ಪುಟ್ಟ ಮಕ್ಕಳೂ ಈ ಬಾರಿಯ ಹಜ್ ಯಾತ್ರೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದಾರೆ.ಹಜ್‌ಗೆ ತೆರಳುವ ಇಚ್ಛೆಯಿಂದ ಈಗಾಗಲೇ ಮೂರು ಬಾರಿ ಅರ್ಜಿ ಸಲ್ಲಿಸಿರುವವರು 406 ಮಂದಿ. 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ  ಆಕಾಂಕ್ಷಿಗಳ ಸಂಖ್ಯೆ ಈ ಬಾರಿ 784.ಮೂರು ಬಾರಿ ಅರ್ಜಿ ಸಲ್ಲಿಸಿಯೂ ಹಜ್‌ಗೆ ತೆರಳಲು ಸಾಧ್ಯವಾಗದವರು ಹಾಗೂ 70 ವರ್ಷ ಮೀರಿದವರಿಗೆ ಸರ್ಕಾರ ಆದ್ಯತೆಯ ಮೇರೆಗೆ ಹಜ್ ಯಾತ್ರೆಗೆ ಅವಕಾಶ ನೀಡುತ್ತದೆ. ಇವರ ಸಂಖ್ಯೆ ಒಟ್ಟು 1,190. ಇವರೂ ಒಳಗೊಂಡಂತೆ ಈ ಬಾರಿ ಒಟ್ಟು 5,332 ಮಂದಿ ಸರ್ಕಾರದ ಸಬ್ಸಿಡಿಯೊಂದಿಗೆ ಹಜ್‌ಗೆ ತೆರಳಲಿದ್ದಾರೆ.ಸಿಎಂ ಚಾಲನೆ: ಹಜ್ ಯಾತ್ರಿಗಳನ್ನು ಆನ್‌ಲೈನ್ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಧಾನಸೌಧದಲ್ಲಿ ಬುಧವಾರ ಚಾಲನೆ ನೀಡಿದರು.  `ಮುಸ್ಲಿಂ ಸಮುದಾಯದ ಎಲ್ಲ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಸರ್ಕಾರ ಮಾಡಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರನ್ನು ಹಜ್ ಯಾತ್ರೆಗೆ ಕಳುಹಿಸುವ ಇಚ್ಛೆಯೂ ಸರ್ಕಾರಕ್ಕೆ ಇದೆ. ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ~ ಎಂದು ಹೇಳಿದರು.ಆನ್‌ಲೈನ್ ವ್ಯವಸ್ಥೆ ಮೂಲಕ ಯಾತ್ರಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಯಾತ್ರೆಗೆ ತೆರಳಿದವರು, ಕರ್ನಾಟಕಕ್ಕೆ ಒಳಿತಾಗಲಿ ಎಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸಬೇಕು ಎಂದು ಮುಖ್ಯಮಂತ್ರಿಗಳು ಕೋರಿದರು.ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ನೀಡಲಾಗಿದ್ದ ಅನುದಾನ ಪೂರ್ಣಪ್ರಮಾಣದಲ್ಲಿ ವಿನಿಯೋಗವಾಗಿದೆ.ಅಲ್ಪಸಂಖ್ಯಾತರ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ 406 ಕೋಟಿ ರೂಪಾಯಿ  ಮೀಸಲಿಡಲಾಗಿದೆ. ಇದರಲ್ಲಿ ರೂ 100 ಕೋಟಿ ರೂಪಾಯಿ ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಖರ್ಚು ಮಾಡಲಾಗುತ್ತದೆ. 5.25 ಲಕ್ಷ ಮಂದಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂದರು.ಮುಂದಿನ ವರ್ಷದ ಯಾತ್ರೆ ವೇಳೆಗೆ `ಹಜ್ ಘರ್~ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ಹಜ್ ಯಾತ್ರೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನು ಮುಂದೆ ಅಲ್ಲಿಯೇ ಆಯೋಜಿಸುವಂತಾಗಲಿ ಎಂದರು.ವಿಧಾನ ಪರಿಷತ್ ಸದಸ್ಯ ಪ್ರೊ. ಮುಮ್ತಾಜ್ ಅಲಿ ಖಾನ್, ಭಾರತೀಯ ಹಜ್ ಸಮಿತಿಯ ಉಪಾಧ್ಯಕ್ಷ ಅಬೂಬಕರ್, ಬೆಂಗಳೂರು ಮೇಯರ್ ಡಿ. ವೆಂಕಟೇಶಮೂರ್ತಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry