ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

7

ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

Published:
Updated:

ಬೀದರ್: ಜಿಲ್ಲೆಯಿಂದ ಹಜ್‌ಗೆ ತೆರಳಲಿರುವ 142 ಯಾತ್ರಾರ್ಥಿಗಳಿಗೆ ನಗರದ ಜಾಮಾ ಮಸೀದಿಯಲ್ಲಿ ಗುರುವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಸಕ ರಹೀಮ್‌ಖಾನ್ ಹಜ್ ಯಾತ್ರಾರ್ಥಿಗಳಿಗೆ ಹೈದರಾಬಾದ್ ಕರೆದೊಯ್ಯಲು ಐದು ಬಸ್‌ಗಳ ವ್ಯವಸ್ಥೆ ಮಾಡಿದ್ದರು. ಸ್ವತಃ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.ಬಹುತೇಕರು ಬಸ್‌ಗಳಲ್ಲಿ ಹೈದರಾಬಾದ್‌ಗೆ ತೆರಳಿದರೆ, ಇನ್ನೂ ಕೆಲವರು ಸ್ವಂತ ಕಾರುಗಳಲ್ಲಿ ಪ್ರಯಾಣ ಬೆಳೆಸಿದರು. ಹಜ್ ಯಾತ್ರಿಗಳ ಪ್ರಯಾಣಿಸುವ ಹಿನ್ನೆಲೆಯಲ್ಲಿ ಜಾಮಾ ಮಸೀದಿ ಬಳಿ ನೂರಾರು ಜನ ಜಮಾಯಿಸಿದ್ದರು. ಯಾತ್ರಿಗಳು, ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು, ಪ್ರಮುಖರು ಆಗಮಿಸಿದ್ದರು. ಹೀಗಾಗಿ ಮಸೀದಿ ಬಳಿ ಜನಜಾತ್ರೆ ಕಂಡು ಬಂದಿತು.ಯಾತ್ರಾರ್ಥಿಗಳು ತಮ್ಮ ಸಾಮಗ್ರಿಗಳೊಂದಿಗೆ ಆಗಮಿಸಿದ್ದರು. ನೆಂಟರು, ಸ್ನೇಹಿತರು ಹಾಗೂ ಹಿತೈಷಿಗಳು ಯಾತ್ರಾರ್ಥಿಗಳಿಗೆ ಅಪ್ಪಿಕೊಂಡು, ಕೈ ಕುಲುಕಿ ಶುಭವನ್ನು ಕೋರಿದರು. ಹಜ್ ಯಾತ್ರೆಯ ವೇಳೆ ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದರು.ಯಾತ್ರಾರ್ಥಿಗಳಲ್ಲಿ ವೃದ್ಧರು, ಮಹಿಳೆಯರೂ ಇದ್ದರು. ಹಜ್ ಯಾತ್ರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರ ಮುಖದಲ್ಲಿ ಸಾರ್ಥಕ್ಯದ ಭಾವ ಕಂಡು ಬಂದಿತು. ಈ ಬಾರಿ ಇಡೀ ಜಿಲ್ಲೆಯಿಂದ 282 ಮಂದಿ ಹಜ್‌ಗೆ ತೆರಳಲಿದ್ದು, ಈ ಪೈಕಿ ನಗರದ 142 ಮಂದಿ ನಿವಾಸಿಗಳು ಸೇರಿದ್ದಾರೆ.ಯಾತ್ರಿಗಳು ಹೈದರಾಬಾದ್‌ಗೆ ತೆರಳಿ ಅಲ್ಲಿ ಕೆಲಕಾಲ ಆಂಧ್ರಪ್ರದೇಶ ಹಜ್‌ಹೌಸ್‌ನಲ್ಲಿ ತಂಗಲಿದ್ದು, ಅಲ್ಲಿಂದ ಹಜ್‌ಗೆ ಹೊರಡಲಿದ್ದಾರೆ. ಇನ್ನೂ ಕೆಲ ಯಾತ್ರಿಗಳು ಶುಕ್ರವಾರ ಹಜ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ.

ಹಜ್ ಸಮಿತಿಯ ಪ್ರಮುಖ ಮನ್ಸೂರ್ ಖಾದ್ರಿ, ಮಾಜೀದ್ ಶಮೀಮ್, ಪ್ರಮುಖರಾದ ಮಹಮ್ಮದ್ ಫಹಿಮೊದ್ದೀನ್, ಎಂ.ಎಂ. ಜಬ್ಬಾರ್ ಇತರರು ಶುಭ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry