ಬುಧವಾರ, ನವೆಂಬರ್ 13, 2019
24 °C

ಹಟ್ಟಿ ಗಣಿ: ಚಿನ್ನ ಉತ್ಪಾದನೆ ಇಳಿಕೆ

Published:
Updated:

ಹಟ್ಟಿ ಚಿನ್ನದ ಗಣಿ: ಇಲ್ಲಿನ ಚಿನ್ನದ ಗಣಿ ಕಂಪೆನಿಯು 2012-13ನೇ ಸಾಲಿನಲ್ಲಿ 1,582.57 ಕೆ.ಜಿ. ಚಿನ್ನ ಉತ್ಪಾದಿಸಿದೆ.  ಇದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ 598 ಕೆ.ಜಿ. ಕಡಿಮೆ ಎಂದು ಕಂಪೆನಿಯ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಎ. ಆರ್. ವಾಲ್ಮೀಕಿ ತಿಳಿಸಿದ್ದಾರೆ.  ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರ್ಥಿಕ ಸಾಲಿನಲ್ಲಿ 5,99,090 ಮೆಟ್ರಿಕ್ ಟನ್ ಅದಿರನ್ನು ಸಂಸ್ಕರಿಸಿ ತೆಗೆಯಲಾದ ಚಿನ್ನದ ಪ್ರಮಾಣ ಇದಾಗಿದೆ. ಕಂಪೆನಿಯ ಕಾರ್ಪೊರೇಟ್ ವೆಚ್ಚ ತಿಂಗಳಿಗೆ 25 ಕೋಟಿ ಇದೆ. ಸರಾಸರಿ ಪ್ರತಿ ಗ್ರಾಂಗೆ 2,900ರಂತೆ ಚಿನ್ನ ಮಾರಾಟ ಮಾಡಲಾಗಿದೆ. ಇನ್ನೂ ಲೆಕ್ಕಪತ್ರ ಮುಗಿದಿಲ್ಲ. ಪೂರ್ಣಗೊಂಡ ನಂತರ ಕಂಪೆನಿ ಆರ್ಥಿಕ ವರ್ಷದಲ್ಲಿ ಎಷ್ಟು ಲಾಭ ಗಳಿಸಿದೆ ಎಂಬುದು ಮುಂದಿನ ವಾರ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು.`234 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಗಣಿಯ ಕಾಮಗಾರಿಯು ಆರಂಭಗೊಂಡಿದೆ. ಈಗಾಗಲೇ ಚೀನಾದಿಂದ ತಜ್ಞರ ತಂಡವೊಂದು ಹಟ್ಟಿಗೆ ಭೇಟಿ ನೀಡಿ ಗಣಿಯ ನಕಾಶೆ ತಯಾರಿಸಿ ಕಂಪೆನಿಗೆ ನೀಡಿದೆ. ನಮ್ಮ ಗಣಿ ತಜ್ಞರು ಹಾಗೂ ತಜ್ಞ ಸಂಸ್ಥೆಗಳಿಂದ ಅಭಿಪ್ರಾಯ ಪಡೆದು ಅನುಮೋದನೆ ನೀಡಲಾಗುವುದು. ಎಲ್ಲವೂ ಕ್ರಮಬದ್ಧವಾಗಿ ನಡೆದರೆ 3 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)